ನಾನು ಮತ್ತು ಕಿನ್ನಾಳ್ ರಾಜ್ ಹನ್ನೊಂದು ವರ್ಷಗಳ ಹಿಂದೆಯೇ ಸ್ನೇಹಿತರು ಎಂದರು ನಿರ್ದೇಶಕ ಎಸ್ ಮಹೇಶ್ ಕುಮಾರ್. ‘ಅಯೋಗ್ಯ’ ಚಿತ್ರದ ಮೂಲಕ ಸೂಪರ್ ಹಿಟ್ ನೀಡಿರುವ ಮಹೇಶ್ ಪ್ರಸ್ತುತ ಶ್ರೀಮುರಳಿ ನಾಯಕತ್ವದ ‘ಮದಗಜ’ನನ್ನು ಮೆರೆಸುವ ಸಿದ್ಧತೆಯಲ್ಲಿದ್ದಾರೆ. ಅದರ ಮಧ್ಯದಲ್ಲಿ ಹಳೆಯ ಸ್ನೇಹಿತ ಕಿನ್ನಾಳ್ ರಾಜ್ ನಿರ್ದೇಶನದ ಹೊಸ ಚಿತ್ರ ‘ಹಿಟ್ಲರ್’ನ ಟ್ರೇಲರ್ ಬಿಡುಗಡೆ ಮಾಡಿ ಶುಭಕೋರಿದ್ದಾರೆ.
“ಯೋಗರಾಜ್ ಭಟ್ ಅವರ ನಿರ್ದೇಶನದ ‘ಪರಮಪದ’ ಧಾರಾವಾಹಿಯಲ್ಲಿ ನಾವಿಬ್ಬರೂ ಜ್ಯೂನಿಯರ್ ಆರ್ಟಿಸ್ಟ್ ಆಗಿದ್ದವರು. ನಾನು ಆನಂತರ ಅವರಿಗೆ ಅಸಿಸ್ಟೆಂಟ್ ಆದೆ. ಕಿನ್ನಾಳ್ ರಾಜ್ ಆಮೇಲೆ ಈ ಕ್ಷೇತ್ರವನ್ನೇ ಬಿಟ್ಟು ಹೋಗಿದ್ದವರು ಕೆಜಿಎಫ್ ಚಿತ್ರದಲ್ಲಿ ‘ಗರ್ಭದಿ ನನ್ನಿರಿಸಿ..’ ಹಾಡಿನ ಮೂಲಕ ದೊಡ್ಡಮಟ್ಟದ ರೀ ಎಂಟ್ರಿ ನೀಡಿದ್ದಾರೆ. ಮೊದಲ ಸಿನಿಮಾ ಆಕ್ಷನ್ ಮಾಡಲು ಗಟ್ಸ್ ಬೇಕು. ಅದು ಅವರಲ್ಲಿದೆ. ‘ಹಿಟ್ಲರ್’ ಎನ್ನುವ ಶೀರ್ಷಿಕೆಯೇ ಕ್ಯಾಚಿಯಾಗಿದೆ” ಎಂದು ಸ್ನೇಹಿತನನ್ನು ಹೊಗಳಿದ ಮಹೇಶ್ ಕುಮಾರ್ ಟ್ರೇಲರ್ ನಲ್ಲಿನ ಕೆಲವು ಆಕರ್ಷಕ ಅಂಶಗಳ ಬಗ್ಗೆ ಪ್ರಸ್ತಾಪಿಸಿ ಚಿತ್ರಕ್ಕೆ ಶುಭ ಕೋರಿದರು.
ಹಿಟ್ಲರ್ ಒಂದು ಭೂಗತ ಲೋಕದ ಚಿತ್ರದಂತೆ ಕಂಡರೂ ರಕ್ತಪಾತ ಹೆಚ್ಚು ಇಲ್ಲ. ಕೌಟುಂಬಿಕ ಚಿತ್ರ ಎನ್ನಬಹುದು. ಆದರೆ ಸೆನ್ಸಾರ್ ಮಂಡಳಿ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್ ನೀಡಿ ಅನ್ಯಾಯ ಮಾಡಿದೆ. ಇದಕ್ಕಿಂತ ಹೆಚ್ಚಿನ ಕ್ರೈಮ್ ತುಂಬಿದ ಸ್ಟಾರ್ ಸಿನಿಮಾಗಳಿಗೆ ಯು ಎ ನೀಡಿರುವ ಉದಾಹರಣೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು ನಿರ್ದೇಶಕ ಕಿನ್ನಾಳ್ ರಾಜ್. ಸಂಗೀತ ನಿರ್ದೇಶಕ ಆಕಾಶ್ ಪರ್ವ ವಿಜಯ ಪ್ರಕಾಶ್ ಅವರ ಬಳಿ ಇದ್ದವರು. ಲವ್ ಸಾಂಗ್, ಲವ್ ಫೆಯಿಲ್ಯೂರ್, ಮಾಸ್ ಮತ್ತು ಜೊತೆಗೆ ಅಣ್ಣ ತಂಗಿ ಸೆಂಟಿಮೆಂಟ್ ಹಾಡು ಹೀಗೆ ವೈವಿಧ್ಯಮಯ ಭಾವದ ಹಾಡುಗಳಿಗೆ ಸಂಗೀತ ನೀಡುವ ಅವಕಾಶ ತಮಗೆ ಲಭಿಸಿದ್ದಾಗಿ ಅವರು ಹೇಳಿಕೊಂಡರು.
ಚಿತ್ರದ ನಾಯಕ ಲೋಹಿತ್ ಹೆಚ್ಚು ಮಾತನಾಡಲು ಬಯಸಲಿಲ್ಲ. ಆದರೆ “ಚಿತ್ರದಲ್ಲಿ ವಿಜಯ್ ಚೆಂಡೂರು ಮತ್ತು ಅವರ ತಾಯಿ ಪಾತ್ರವನ್ನು ಹೊರತು ಪಡಿಸಿ ಎಲ್ಲವೂ ಖಳ ಪಾತ್ರಗಳೇ” ಎಂದು ಹೇಳಿ ಅಚ್ಚರಿ ಮೂಡಿಸಿದರು.
ಚಿತ್ರ ಆರಂಭವಾದ ಇಪ್ಪತ್ತು ನಿಮಿಷಗಳ ಬಳಿಕ ನಾಯಕನ ಪ್ರವೇಶವಾಗುತ್ತದೆ. ಆತ ವಾಸ್ತವದಲ್ಲಿ ಒಬ್ಬ ಮುಗ್ದನಾಗಿರುತ್ತಾನೆ. ಆದರೆ ಮಾಡದ ಕೊಲೆಯಲ್ಲಿ ಸಿಕ್ಕಿಕೊಂಡು ಹೊರಬರಲು ಪೇಚಾಡುವುದೇ ಚಿತ್ರದ ಪ್ರಮುಖ ಸನ್ನಿವೇಶ ಎಂದರು.
ಪರದೆಯ ಮೇಲೆ ಕಡಿಮೆ ಕಾಲಾವಧಿಯಲ್ಲಿ ಕಾಣಿಸುವ ಪಾತ್ರವಾದರೂ ಚಿತ್ರ ಪೂರ್ತಿ ಆವರಿಸುವಂಥ ಪಾತ್ರ ನನ್ನದು ಎನ್ನುವುದು ನಟ ವಿಜಯ್ ಚೆಂಡೂರು ಅವರ ಮಾತು. ಚಿತ್ರದ ಕತೆ ಹುಡುಗ ಹುಡುಗಿಯ ಪ್ರೀತಿಗೆ ಸೀಮಿತವಾಗದೇ ಅಣ್ಣ ತಂಗಿ ಸೇರಿದಂತೆ ಕೌಟುಂಬಿಕ ಸಂಬಂಧದ ಎಳೆ ಇದೆ.
ಹತ್ತೇ ನಿಮಿಷದಲ್ಲಿ ನಿರ್ದೇಶಕರು ಹೇಳಿದ ಕತೆ ನನಗೆ ಚಿತ್ರದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿತು ಎಂದು ಅವರು ಹೇಳಿದರು. “ಕತೆ ಕೇಳಿದಾಗ ‘ಓಂ’ ಸಿನಿಮಾ ನೆನಪಾಗಿತ್ತು. ಅದರಲ್ಲಿದ್ದಂಥವೇ ಹೊಡೆದಾಟಗಳಿವೆ. ಹೆಚ್ಚೇನೂ ಇಲ್ಲ ಎನ್ನುವುದು” ಫೈಟ್ ಮಾಸ್ಟರ್ ಚಂದ್ರು ಬಂಡೆಯವರ ಮಾತು. ನಟ ವೈಭವ್ ನಾಗರಾಜ್ ತಾವು ಚಿತ್ರದಲ್ಲಿ ಖಳನಟನ ಪಾತ್ರ ಮಾಡಿರುವುದಾಗಿ ಹೇಳಿದರು.
ಚಿತ್ರದ ನಾಯಕಿ ಸಸ್ಯ, ನಿರ್ಮಾಪಕಿ ಮಮತಾ ಲೋಹಿತ್, ಖಳ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿರುವ ಗಣೇಶ್ ರಾವ್ ಕೇಸರ್ಕರ್, ವಿತರಕ ಆಟೊ ರಾಜ, ಉದ್ಯಮಿ ಚಂದ್ರಮೋಹನ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅತಿಥಿಯಾಗಿ ಆಗಮಿಸಿದ ನಿರ್ದೇಶಕ ಮಹೇಶ್ ಕುಮಾರ್ ಅವರಿಗೆ ಶಾಲು ಹೊದೆಸಿ ಸನ್ಮಾನಿಸಲಾಯಿತು. ಸುದ್ದಿಗೋಷ್ಠಿಗೂ ಮೊದಲು ಚಿತ್ರತಂಡ ಇತ್ತೀಚೆಗೆ ನಮ್ಮನ್ನು ಅಗಲಿದ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿತು. ಚಿತ್ರ ಇದೇ ವಾರ ತೆರೆಗೆ ಬರಲಿದೆ.