ಚಿತ್ರದಲ್ಲಿ ನಾಯಕ ಮತ್ತು ನಾಯಕಿ ಜತೆಯಾಗಿದ್ದರು ಕೂಡ ಸದಾ ಜಗಳವಾಡುತ್ತಿರುತ್ತಾರೆ ಹಾಗಾಗಿ ಚಿತ್ರಕ್ಕೆ ಟಾಮ್ ಆ್ಯಂಡ್ ಜೆರ್ರಿ ಎಂದು ಹೆಸರಿಡಲಾಗಿದೆ ಎಂದಿದ್ದರು ನಿರ್ದೇಶಕ ವಿನಯ್. ಅದು ಅವರು ಚಿತ್ರದ ಮೊದಲ ಸುದ್ದಿಗೋಷ್ಠಿಯಲ್ಲಿ ಹೇಳಿದ ಮಾತಾಗಿತ್ತು. ಇಂದು ಬಿಡುಗಡೆಯಾದ ಚಿತ್ರದ ಟ್ರೇಲರ್ ಅದೇ ಅಂಶವನ್ನು ಎತ್ತಿ ತೋರಿಸುವಂತಿದೆ.
‘ಕೆಜಿಎಫ್’ ಚಿತ್ರದ ಮೂಲಕ ಸಂಭಾಷಣೆಕಾರರಾಗಿ ಗುರುತಿಸಿಕೊಂಡ ರಾಘವ್ ವಿನಯ್ ಶಿವಗಂಗೆ ಅವರು ನಿರ್ದೇಶಿಸಿ, ಅದೇ ಕಾರಣದಿಂದ ಬಹು ನಿರೀಕ್ಷಿತವಾಗಿ ಮೂಡಿಬರುತ್ತಿರುವ ಚಿತ್ರ ಟಾಮ್ ಆ್ಯಂಡ್ ಜೆರ್ರಿ. ಚಿತ್ರದ ಟ್ರೇಲರ್ ಬಿಡುಗಡೆ ಮತ್ತು ಸುದ್ದಿಗೋಷ್ಠಿ ಶನಿವಾರ ಮಲ್ಲೇಶ್ವರದ ರೇಣುಕಾಂಬ ಸ್ಟುಡಿಯೋದಲ್ಲಿ ನೆರವೇರಿತು.
ನಿರ್ಮಾಪಕ ರಾಜು ಶೇರಿಗಾರ್ ಮಾತನಾಡಿ, “ಸಿನಿಮಾದಲ್ಲಿ ಫೈಟ್ಸ್, ಕಾಮಿಡಿ ಸೇರಿದಂತೆ ತಾಯಿ ಮಗನ ಸೆಂಟಿಮೆಂಟ್ ದೃಶ್ಯಗಳು ಇವೆ. ‘ಮಾರ್ಸ್’ ಸುರೇಶ್ ಅವರ ಮೂಲಕ 150ರಷ್ಟು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವ ಯೋಜನೆ ಹಾಕಲಾಗಿದೆ. ಬಜೆಟ್ ಬಗ್ಗೆ ಯೋಚನೆ ಮಾಡಿಲ್ಲ. ಯಾಕೆಂದರೆ, ನಾನು ಹೊಸಬರನ್ನು ಬೆಳೆಸಲು ಈ ಚಿತ್ರ ಮಾಡಿದ್ದೇನೆ” ಎಂದರು.
ಬಳಿಕ ಮಾತನಾಡಿದ ನಿರ್ದೇಶಕ ವಿನಯ್ ಶಿವಗಂಗೆ “ಸಾಧ್ಯವಾದಷ್ಟು ಹೊಸ ಕಲಾವಿದರು ಮತ್ತು ತಂತ್ರಜ್ಞರನ್ನು ಬಳಸಿದ್ದೇನೆ. ಚರ್ವಿತ ಚರ್ವಣ ರೀತಿಯಲ್ಲಿ ಚಿತ್ರ ಮಾಡಿಲ್ಲ” ಎಂದರು. ಮ್ಯಾಥ್ಯೂಸ್ ಮನು ಸಂಗೀತದಲ್ಲಿ ಈಗಾಗಲೇ ಜನಪ್ರಿಯವಾದ ‘ಹಾಯಾಗಿದೇ..’ ಹಾಡು ಒಂದೇ ಚಿತ್ರದ ಪ್ರಮುಖ ಅಂಶವಲ್ಲ. ಟಾಮ್ ಆಂಡ್ ಜೆರ್ರಿಗೆ ಸಂಬಂಧಿಸಿದ ಸಾಕಷ್ಟು ವಿಷಯಗಳು ಚಿತ್ರದಲ್ಲಿವೆ. ಹಾಗಾಗಿ ಟ್ರೇಲರಲ್ಲಿ ಪುನಃ ಆ ಹಾಡನ್ನು ಬಳಸಿಲ್ಲ” ಎನ್ನುವ ಸ್ಪಷ್ಟನೆಯನ್ನು ಪತ್ರಕರ್ತರ ಪ್ರಶ್ನೆಗೆ ಉತ್ತರವಾಗಿ ನೀಡಿದರು.
ಅಂದಹಾಗೆ ಕೆಜಿಎಫ್ ಪಾತ್ರದಿಂದಲೇ ಸುದ್ದಿಯಾಗಿದ್ದ ಸಂಪತ್ ಕುಮಾರ್ ಅವರು ಕೂಡ ಚಿತ್ರದಲ್ಲಿ ಒಬ್ಬ ಹುಚ್ಚನ ಪಾತ್ರ ಮಾಡಿದ್ದಾರೆ. ಅವರು ಟಾಮ್ ಆಂಡ್ ಜೆರ್ರಿ ಪಾತ್ರಗಳ ನಡುವೆ ಬಂದು ದಿಢೀರನೆ ಆಡುವ ಮಾತುಗಳು ಅವರಿಗೆ ಹೊಸತೊಂದು ಅನುಭವದ ಸಾಕ್ಷಾತ್ಕಾರ ಮಾಡಿಸುವುದಾಗಿ ನಿರ್ದೇಶಕರು ಹೇಳುತ್ತಾರೆ. ಚಿತ್ರದ ನಾಯಕ ನಿಶ್ಚಿತ್ ಈ ಹಿಂದೆ ‘ಗಂಟುಮೂಟೆ’ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದರು. ಇದೀಗ ಟಾಮ್ ಆಂಡ್ ಜೆರ್ರಿ ಚಿತ್ರದಲ್ಲಿ ಹೊಸರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ಚೈತ್ರಾ ರಾವ್ ತಮಗೆ ದೊರಕಿರುವ ಪಾತ್ರದ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಗೂ ಮೊದಲು ನಮ್ಮನ್ನು ಅಗಲಿದ ನಟ, ನಿರ್ಮಾಪಕ ಪುನೀತ್ ರಾಜ್‍ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಖಳ ನಟ ಗುಣಶೇಖರ್ ಮಾತನಾಡುತ್ತಾ, ತಮಗೆ ಪುನೀತ್ ರಾಜ್ ಕುಮಾರ್ ಅವರೊಡನೆ ಪರದೆ ಹಂಚಿಕೊಳ್ಳಬೇಕೆಂದು ಆಸೆ ಇತ್ತು. ಈ ಚಿತ್ರದ ಟ್ರೇಲರ್ ಬಿಡುಗಡೆಗೆ ಪುನೀತ್ ರಾಜ್ ಕುಮಾರ್ ಅವರಲ್ಲಿ ಮಾತನಾಡಿದ್ದೆವು. ಒಪ್ಪಿಕೊಂಡಿದ್ದರು. ಇನ್ನೇನು ಅವರೊಂದಿಗೆ ವೇದಿಕೆಯನ್ನಾದರೂ ಹಂಚಿಕೊಳ್ಳಬಹುದು ಎಂದುಕೊಂಡಿದ್ದೆ. ಆ ಅದೃಷ್ಟವೂ ಸಿಗಲಿಲ್ಲ ” ಎಂದು ಕಣ್ಣೀರಾದರು.
ಛಾಯಾಗ್ರಾಹಕರಾಗಿ ಕೆಲಸ ಮಾಡಿರುವ ಸಂಕೇತ್, ಟ್ರೇಲರ್ ಗೆ ಸಂಗೀತ ನೀಡಿರುವ ವಿಠ್ಠಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೈಜಗದೀಶ್, ತಾರಾ ಅನುರಾಧ, ರಂಗಾಯಣ ರಘು, ರಾಕ್ಲೈನ್ ಸುಧಾಕರ್, ಪದ್ಮಜಾ ರಾವ್, ಕಡ್ಡಿಪುಡಿ ಚಂದ್ರು ಮೊದಲಾದವರ ತಾರಾಗಣ ಚಿತ್ರದಲ್ಲಿದೆ.