ಇದು ಇಬ್ಬರು ರೌಡಿಗಳ ಕತೆ. ಆದರೆ ‘ಗರುಡ ಗಮನ ವೃಷಭ ವಾಹನ’ ಚಿತ್ರದ ಮೇಕಿಂಗ್ ಸಿನಿಮಾವನ್ನು ನಮ್ಮೆಲ್ಲರದ್ದಾಗಿಸಿದೆ.
ಮೊದಲ ದೃಶ್ಯದ ಮೂಲಕವೇ ಚಿತ್ರವು ಪ್ರೇಕ್ಷಕರನ್ನು ಮೈಮರೆಯುವಂತೆ ಮಾಡುತ್ತದೆ. ನಟನಾಗಿ, ನಿರ್ದೇಶಕನಾಗಿ ರಾಜ್ ಬಿ ಶೆಟ್ಟಿ ಮತ್ತೊಮ್ಮೆ ದೊಡ್ಡಮಟ್ಟದಲ್ಲಿ ಗೆದ್ದಿದ್ದಾರೆ. ಛಾಯಾಗ್ರಹಣ, ಹಿನ್ನೆಲೆ ಸಂಗೀತ, ಸಂಕಲನ, ಪ್ರತಿಯೊಂದು ಪಾತ್ರಗಳ ಆಯ್ಕೆ, ಅವರ ನಟನೆ ಎಲ್ಲವೂ ಚಿತ್ರಕ್ಕೆ ಪೂರಕ. ಆರಂಭದಿಂದ ಹುಟ್ಟಿದ ಆಸಕ್ತಿಯಿಂದಾಗಿ ಮಧ್ಯಂತರದ ಬಳಿಕದ ಕತೆ ಒಂದಷ್ಟು ನಿಧಾನಗತಿ ಪಡೆದಂತೆ ಅನಿಸುತ್ತದೆ. ಜೊತೆಗೆ ‘ಬೇವರ್ಸಿ’ ಎನ್ನುವ ಬೈಗುಳ ಅತಿಯಾಯಿತೆನ್ನುವಂತೆ ಕಾಡುತ್ತದೆ. ದೃಶ್ಯಗಳಲ್ಲಿ ರಕ್ತಪಾತದ ವೈಭವೀಕರಣ ಇಲ್ಲವಾದರೂ ಕಲ್ಪನೆಯೇ ಭಯ ಮೂಡಿಸುವಂಥ ಸನ್ನಿವೇಶ ಮೊದಲಾದವುಗಳಿಂದಾಗಿ ಚಿತ್ರ ‘ಎ’ ಸರ್ಟಿಫಿಕೆಟ್ ಪಡೆದಿದೆ. ರೌಡಿಸಂ ಸಿನಿಮಾ ಎಂದ ಮೇಲೆ ಇವೆಲ್ಲವೂ ಸಹಜ. ಆದರೆ ಕನ್ನಡಕ್ಕೆ ಸಹಜವಲ್ಲದ ಸಂಗತಿ ಒಂದಿದೆ! ಅದು ಸಂದೇಶವನ್ನು ಮಾತು, ಹಾಡುಗಳಿಂದ ಹೇಳಿಸದೇ ಸನ್ನಿವೇಶದ ಮೂಲಕವೇ ಮನದಟ್ಟು ಮಾಡಿಸುವ ದೃಶ್ಯಗಳಿವೆ. ಒಟ್ಟಿನಲ್ಲಿ ಸಿನಿಮಾ ಪ್ರಿಯರು ನೋಡಲೇಬೇಕಾದ ಚಿತ್ರ ಎಂದು ಸಿನಿಕನ್ನಡ ಶಿಫಾರಸು ಮಾಡುತ್ತದೆ.