
ಕಲಾ ಗಂಗೋತ್ರಿ ರಂಗತಂಡ 50 ರಂಗ ವರ್ಷಗಳ ಸಂಭ್ರಮದಲ್ಲಿದೆ. ಅದರ ಸುವರ್ಣ ಸಂಭ್ರಮದ ನೆನಪಿಗಾಗಿ ಹಲವಾರು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 2022 ರಿಂದ 2023 ರವರೆಗೆ ನಡೆಸುವ ರಂಗ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಮತ್ತು ಸುದ್ದಿಗೋಷ್ಠಿ ಮಲ್ಲೇಶ್ವರದಲ್ಲಿ ನೆರವೇರಿತು.
ನಿರಂತರವಾಗಿ ಚಟುವಟಿಕೆಯಿಂದ ಇರುವುದೇ ‘ಕಲಾ ಗಂಗೋತ್ರಿ’ ತಂಡದ ಯಶಸ್ವಿಗೆ ಕಾರಣ. ಸುಮಾರು 300ಕ್ಕೂ ಹೆಚ್ಚು ಜನ ಕಲಾವಿದರು ಈ ಪಯಣದಲ್ಲಿ ಜೊತೆಯಾಗಿ ನಡೆದಿದ್ದಾರೆ. ರಂಗ ಪ್ರಯೋಗಗಳಲ್ಲಿ ಭಾಗಿಯಾಗಿದ್ದಾರೆ. ಸುಮಾರು 130 ಕ್ಕೂ ಹೆಚ್ಚು ನಾಟಕ ಪ್ರಯೋಗಗಳು ನಡೆದಿವೆ. ಪ್ರತಿ ವರ್ಷ ಒಂದೆರಡು ಹೊಸ ನಾಟಕಗಳ ಸಿದ್ಧತೆ ಮತ್ತು ಪ್ರದರ್ಶನವಾಗಿವೆ. ಅದರ ಜೊತೆಗೆ ಹಿಂದೆ ಪ್ರದರ್ಶಿಸಿದ ನಾಟಕಗಳ ಮರು ಪ್ರದರ್ಶನವೂ ನಡೆದಿವೆ. ಸುಮಾರು 10 ವರ್ಷಗಳಿಂದೀಚೆಗೆ ಪ್ರತಿ ವರ್ಷ 60 ರಿಂದ 70 ಪ್ರದರ್ಶನಗಳಾಗಿವೆ. ಈ ಎಲ್ಲ ಮಾಹಿತಿಗಳನ್ನು ಸುದ್ದಿಗೋಷ್ಠಿಯಲ್ಲಿ ಹಂಚಿಕೊಳ್ಳಲಾಯಿತು.
‘ಕಲಾ ಗಂಗೋತ್ರಿ – 50’ರ ಲಾಂಛನ ಮತ್ತು ಎಲ್ಲಾ ಕಾರ್ಯ ಚಟುವಟಿಕೆ ಮತ್ತು ಪ್ರದರ್ಶನಗಳಿಗೆ ಚಾಲನೆಯನ್ನು ಕನ್ನಡ ರಂಗಭೂಮಿಯ ಹಿರಿಯ ಸಂಘಟಕರಾದ ಶ್ರೀನಿವಾಸ್ ಜಿ ಕಪ್ಪಣ್ಣ ಮಾಡಿದರು.

ರಂಗ ಶಂಕರದಲ್ಲಿ 5 ದಿನಗಳ ನಾಟಕೋತ್ಸವ
- ಡಿಸೆಂಬರ್ 29 ರಂದು ‘ಗುಳ್ಳೆನರಿ’ ನಾಟಕ ಪ್ರದರ್ಶನವಿದೆ. ಅದರ ರಚನೆ ಮತ್ತು ನಿರ್ದೇಶನ ಶ್ರೀನಿವಾಸ ಪ್ರಭು ಅವರದ್ದು. ಹಾಗೆಯೇ ಅಂದು ಸಂಜೆ 6 ಗಂಟೆಗೆ 5 ನಾಟಕಗಳನ್ನು ಒಳಗೊಂಡ 2 ಕೃತಿಗಳ ಬಿಡುಗಡೆ – ಈ ಎಲ್ಲ 5 ನಾಟಕಗಳ ರಚನೆಯೂ ಕೆ ವಿ ಶ್ರೀನಿವಾಸಪ್ರಭು ಅವರದ್ದಾಗಿರುತ್ತದೆ. ಪ್ರದರ್ಶನದ ಸಮಯ ಸಂಜೆ 07.30 ಆಗಿರುತ್ತದೆ.
- ಡಿಸೆಂಬರ್ 30 ರಂದು ಮತ್ತೊಂದು ರಾಜಕೀಯದ ಹೊಸ ನಾಟಕ ‘ಮತ್ತೆ ಮುಖ್ಯಮಂತ್ರಿ’ಯ ಪ್ರದರ್ಶನವಿದ್ದು ಕೆ ವೈ ನಾರಾಯಣಸ್ವಾಮಿ ರಚಿಸಿರುವ ಈ ನಾಟಕದ ನಿರ್ದೇಶನ ಡಾ.ಬಿ.ವಿ.ರಾಜಾರಾಂ ಅವರದ್ದು. ಪ್ರಧಾನ ಪಾತ್ರದಲ್ಲಿ ಡಾ.ಮುಖ್ಯಮಂತ್ರಿ ಚಂದ್ರು ನಟಿಸಲಿದ್ದಾರೆ. ಪ್ರದರ್ಶನ ಸಮಯ ಸಂಜೆ 7.30 ಆಗಿರುತ್ತದೆ.
- ಡಿಸೆಂಬರ್ 31 ರಂದು ಜನಪ್ರಿಯ ರಾಜಕೀಯ ನಾಟಕ ‘ಮುಖ್ಯಮಂತ್ರಿ’ ಪ್ರದರ್ಶನವಿದೆ. ಕಳೆದ 42 ವರ್ಷಗಳಿಂದ ಪ್ರದರ್ಶನ ಕಾಣುತ್ತಿರುವ ಈ ನಾಟಕದ ಕನ್ನಡ ಅನುವಾದ ಟಿ ಎಸ್ ಲೋಹಿತಾಶ್ವರದ್ದು. ನಿರ್ದೇಶಕ ಬಿ ವಿ ರಾಜಾರಾಂ. ಈ ನಾಟಕವು ಇದುವರೆಗೆ 750ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. ಈ ಎಲ್ಲಾ ಪ್ರದರ್ಶನಗಳಲ್ಲೂ ಮುಖ್ಯ ಪಾತ್ರದಲ್ಲಿ ಡಾ.ಮುಖ್ಯಮಂತ್ರಿ ಚಂದ್ರು ಅವರು ಅಭಿನಯಿಸಿದ್ದಾರೆ. ಪ್ರದರ್ಶನ ಸಮಯ ಸಂಜೆ 7.30.
- ಜನವರಿ 1 ರಂದು ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ಪುರಸ್ಕೃತ ಡಾ. ಎಸ್ ಎಲ್ ಭೈರಪ್ಪನವರ ಕಾದಂಬರಿ ಆಧಾರಿತ ನಾಟಕ ‘ಮಂದ್ರ’ದ (ರಂಗರೂಪ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ) ಪ್ರದರ್ಶನ. ನಿರ್ದೇಶಕ ಡಾ. ಬಿ.ವಿ.ರಾಜಾರಾಂ. ಹಿಂದೂಸ್ಥಾನಿ ಸಂಗೀತಗಾರನೊಬ್ಬನ ಆರೋಹಣ, ಅವರೋಹಣ ಬಿಂಬಿಸುವ ನಾಟಕ ಇದು. ಪ್ರದರ್ಶನ ಸಮಯ ಮಧ್ಯಾಹ್ನ 3.30
- ಅದೇ ದಿನ ಸಂಜೆ ಖ್ಯಾತ ಕವಿ, ಕುಟುಂಬ ಪ್ರೀತಿಯ ಕವಿ, ದಾಂಪತ್ಯ ವಾತ್ಸಲ್ಯ ಕವಿ ಎನ್ನುವ ಬಿರುದಾಂಕಿತ ಕೆ ಎಸ್ ನರಸಿಂಹಸ್ವಾಮಿಯವರ ಕವನಗಳ ಆಧಾರಿತ ನಾಟಕ ‘ಮೈಸೂರು ಮಲ್ಲಿಗೆ’ ಪ್ರದರ್ಶನಗೊಳ್ಳಲಿದೆ. ಗೀತೆಗಳ ಆಯ್ಕೆ ಮತ್ತು ಮೂಲಹಂದರ – ಡಾ.ಹೆಚ್ ಎಸ್ ವೆಂಕಟೇಶ ಮೂರ್ತಿಯವರದ್ದು. ರಂಗರೂಪ – ರಾಜೇಂದ್ರ ಕಾರಂತ. ನಿರ್ದೇಶನ ಡಾ.ಬಿ.ವಿ.ರಾಜಾರಾಂ. ಸುಮಾರು 15 ವರ್ಷಗಳಿಂದ 330 ಪ್ರದರ್ಶನ ಕಂಡಿರುವ ಜನಪ್ರಿಯ ನಾಟಕ ಇದು. ಪ್ರದರ್ಶನ ಸಮಯ ಸಂಜೆ 7.30
- ಜನವರಿ 2 ರಂದು ಡಾ.ಕೋಟ ಶಿವರಾಮ ಕಾರಂತರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಾದಂಬರಿ ಆಧಾರಿತ ನಾಟಕ ‘ಮೂಕಜ್ಜಿಯ ಕನಸುಗಳು’ ಪ್ರದರ್ಶನಗೊಳ್ಳಲಿದೆ. ಕೃತಿಯ ರಂಗರೂಪ ಎಸ್ ರಾಮಮೂರ್ತಿ, ನಿರ್ದೇಶನ ಡಾ. ಬಿ ವಿ ರಾಜಾರಾಂ ಅವರದ್ದು. ಎನ್ ಮಂಗಳ ಮೂಕಜ್ಜಿಯಾಗಿ, ಸಿದ್ಧಾರ್ಥ್ ಭಟ್ ಸುಬ್ಬರಾಯನಾಗಿ ಅಭಿನಯಿಸಲಿದ್ದಾರೆ. 2 ಪ್ರದರ್ಶನಗಳಿರುತ್ತವೆ. ಸಮಯ ಸಂಜೆ 07.30
ಇದರ ಜೊತೆಗೆ ‘ಕಲಾ ಗಂಗೋತ್ರಿ ಯೂಟ್ಯೂಬ್ ಚಾನಲ್’ ಚಾಲನೆಗೊಳ್ಳಲಿದ್ದು, ಹಿಂದೆ ಪ್ರದರ್ಶನಗೊಂಡ ನಾಟಕಗಳ ತುಣುಕುಗಳು, ಕಲಾವಿದರ ಸಂದರ್ಶನಗಳು, ಮಾತು ಕಥೆ, ರಂಗ ಗೀತೆಗಳಗೊಂಡ ಕಾರ್ಯಕ್ರಮ ಎಲ್ಲರ ವೀಕ್ಷಣೆಗಾಗಿ ಸಿದ್ಧಗೊಳ್ಳುತ್ತಿದೆ. ಕಲಾಗಂಗೋತ್ರಿಯ ಈ 50 ವರ್ಷದ ರಂಗ ಪಯಣವನ್ನು ಜನರಿಗೆ ತಿಳಿಸುವುದು ಮತ್ತು ದಾಖಲಿಸುವುದು ಇದರ ಉದ್ದೇಶವಾಗಿದೆ.
ವಿಶೇಷ ಪ್ರದರ್ಶನ: ಇದೇ ಡಿಸೆಂಬರ್ 27 ರಂದು ಭಾನುವಾರ ರವೀಂದ್ರ ಕಲಾಕ್ಷೇತ್ರ ಸಂಜೆ 7 ಗಂಟೆಗೆ ಮುಖ್ಯಮಂತ್ರಿ ನಾಟಕದ ‘ಸಹಾಯಾರ್ಥ ಪ್ರದರ್ಶನ’ ನೆರವೇರಲಿದೆ. ರವೀಂದ್ರ ಕಲಾಕ್ಷೇತ್ರದ ನಿವೃತ್ತ ದಿನಗೂಲಿ ಕೆಲಸಗಾರ ಪಾರ್ಕ್ ಶ್ರೀನಿವಾಸ್ ರವರ ವೈದ್ಯಕೀಯ ವೆಚ್ಚದ ಸಲುವಾಗಿ ಕೆಲವು ರಂಗತಂಡಗಳು ಹಾಗೂ ಕಲಾವಿದರ ಸಹಕಾರದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.