ಬಹುಶಃ.. ಇಂಥದೊಂದು ವರ್ಷ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲು. ಕೊವಿಡ್ ಬಾಧಿತ ವರ್ಷದಲ್ಲಿ ಸಾವು ನಮಗ್ಯಾರಿಗೂ ಹೊಸದೇನಲ್ಲ. ಪ್ರತಿಯೊಂದು ಮನೆಯನ್ನೂ ಸಾವು ನೇವರಿಸಿಕೊಂಡೇ ಹೋಯ್ತು ಅಂದ್ರೆ ಅತಿಶಯೋಕ್ತಿಯಲ್ಲ. ಆದ್ರೆ ಎಂಥಾ ಸಂದರ್ಭದಲ್ಲೂ ಮನರಂಜನೆಯ ಮಾಯೆಯನ್ನೇ ಆಸ್ತ್ರವಾಗಿಸಿದಂಥ ಚಿತ್ರರಂಗದಲ್ಲಿ ಈ ಬಾರಿ ಮೂಡಿದ್ದು ಮಾತ್ರ ಸೂತಕದ ಛಾಯೆ.
ಕನ್ನಡ ಚಿತ್ರರಂಗದಿಂದ ನಮ್ಮನ್ನು ಅಗಲಿದ್ದು ಒಂದಿಬ್ಬರೇನಲ್ಲ ಬರೋಬ್ಬರಿ ಹದಿನೆಂಟು ಮಂದಿ ಪ್ರಮುಖ ಕಲಾವಿದರೇ ಅಚಾನಕ್ಕಾಗಿ ನಮ್ಮಿಂದ ದೂರಾಗಿದ್ದಾರೆ. ಸಂಚಾರಿ ವಿಜಯ್, ಪುನೀತ್ ರಾಜ್ ಕುಮಾರ್ ಅಂಥ ಯುವನಟರು ಕೂಡ ಆ ಪಟ್ಟಿಯಲ್ಲಿದ್ದಾರೆನ್ನುವುದು ಕೆಲವೇ ತಿಂಗಳುಗಳ ಮೊದಲು ಯಾರಿಂದಲೂ ಊಹಿಸಲಾಗದ ವಿಚಾರ. ಆದರೆ ಅಂಥದೊಂದು ದುರಂತ ನಡೆದಿರೋದು ಮಾತ್ರ ಸತ್ಯ.
ಅಮರವಾದ ಅಪ್ಪು ನೆನಪು
ಸಾವು ಎಲ್ಲರಿಗೂ ಒಂದೇ. ಆದರೆ ಪುನೀತ್ ರಾಜ್ ಕುಮಾರ್ ಅವರ ಸಾವಿನ ಹಾಗೆ ಕನ್ನಡಿಗರನ್ನು ಕಾಡಿದ ಮತ್ತೊಂದು ಸಾವು ಇರಲೇ ಇಲ್ಲ ಎನ್ನಬಹುದು. ಅದಕ್ಕೆ ಮುಖ್ಯ ಕಾರಣ ಕಲಾವಿದರಾಗಿ ಅವರು ಜನರನ್ನು ತಲುಪಿದ ಪರಿ ಹಾಗಿತ್ತು. ಬಾಲನಟನಾಗಿ ಮಾಸ್ಟರ್ ಲೋಹಿತ್ ಅನ್ನೋ ಹೆಸರಲ್ಲಿ ಚಿತ್ರರಂಗಕ್ಕೆ ಬಂದ ಪುನೀತ್ ಬೆಳವಣಿಗೆಯ ಪ್ರತಿ ಹಂತವನ್ನು ಮನೆ ಮಗುವಿನಂತೆ ಕಂಡವರು ಕನ್ನಡದ ಜನ.
ಪುನೀತ್ ನಾಯಕನಾಗಿ ಬಂದಾಗಲೂ ಅಷ್ಟೇ. ಅವರಿಗೆ ಇಪ್ಪತ್ತಾರಷ್ಟೇ ತುಂಬಿತ್ತು. ಒಂದು ಕಾಲೇಜ್ ಲವ್ ಸ್ಟೋರಿಯ ಮೂಲಕ ಬಂದ ಯುವ ನಾಯಕನಾದರೂ ಫ್ಯಾಮಿಲಿ ಸೆಂಟಿಮೆಂಟ್ ಇರೋ ಗಟ್ಟಿ ಕತೆಯ ಚಿತ್ರಗಳಿಂದ ಪ್ರೇಕ್ಷಕರ ಹೃದಯದಲ್ಲಿ ಭದ್ರ ನೆಲೆ ಕಂಡುಕೊಂಡರು. ವಿಪರ್ಯಾಸ ಏನಂದರೆ ಅಂಥ ವ್ಯಕ್ತಿಗೆ ಖುದ್ದು ಹೃದಯವೇ ಕೈಕೊಡಬಹುದೆನ್ನೋ ಕಲ್ಪನೆ ಯಾರಿಗೂ ಕೂಡ ಇರಲಿಲ್ಲ. ಅಕ್ಟೋಬರ್ 29ರಂದು ಎದೆನೋವಿನಿಂದಾಗಿ ವಿಕ್ರಮ್ ಆಸ್ಪತ್ರೆಗೆ ಹೋದ ಅವರ ಆ ಪ್ರಯಾಣವೇ ಅಂತಿಮ ಪಯಣವಾಗಿತ್ತು.
ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಪುನೀತ್ ಪಾರ್ಥಿವ ಶರೀರವನ್ನು ಇರಿಸಿದಾಗ ಮೂರು ದಿನಗಳ ಅಂತಿಮ ದರ್ಶನಕ್ಕೆ ಅಲ್ಲಿ ಸೇರಿದ್ದು ಬರೋಬ್ಬರಿ 30ಲಕ್ಷದಷ್ಟು ಜನರು. ಒಬ್ಬ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೆ ಅಷ್ಟೊಂದು ಜನ ಸೇರಿದ್ದು ದಾಖಲೆಯಾಗಿಯೇ ಉಳಿಯಿತು. ಕಂಠೀರವ ಸ್ಟುಡಿಯೋದ ಆವರಣದೊಳಗೆ ಡಾ. ರಾಜ್ ಕುಮಾರ್ ಮತ್ತು ಪಾರ್ವತಮ್ಮ ಸಮಾಧಿಯ ಪಕ್ಕದಲ್ಲೇ ಪುನೀತ್ ಅಂತಿಮ ಸಂಸ್ಕಾರ ನಡೆದಾಗ ಮೌನವಾಗಿದ್ದು ಕನ್ನಡಿಗರ ಮನ ಮಾತ್ರವಲ್ಲ.. ಕನ್ನಡ ಚಿತ್ರರಂಗದ ಪ್ರಬಲ ಧ್ವನಿ ಕೂಡ ಹೌದು..
ಮಿಂಚಿ ಹೋದ ಸಂಚಾರಿ ವಿಜಯ್
ಪುನೀತ್ ಅವರ ಸಾವಿನಷ್ಟೇ ಅನ್ಯಾಯವಾಗಿ ಕಾಡಿದ ಮತ್ತೊಂದು ಸಾವು ನಟ ಸಂಚಾರಿ ವಿಜಯ್ ಅವರದ್ದು. ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಕನ್ನಡದ ಪ್ರತಿಭಾವಂತ ನಟನಾಗಿ ದೇಶ ಮಟ್ಟದಲ್ಲಿ ಗುರುತಿಸಿಕೊಂಡವರು. ನಾನು ಅವಳಲ್ಲ ಅವನು ಚಿತ್ರದ ನಟನೆಯ ಮೂಲಕ ತೃತೀಯ ಲಿಂಗಿಗಳ ಮನದ ನೋವಿಗೆ ಕನ್ನಡಿಯಾದವರು. ಚಿತ್ರರಂಗಕ್ಕೆ ಬಂದು ಇನ್ನೂ ದಶಕ ಕೂಡ ಪೂರ್ತಿಯಾಗಿರಲಿಲ್ಲ. ಅಷ್ಟರಲ್ಲೇ ಅವರಿಗೆ ಕಾಲನ ಕರೆ ಬಂದಿದ್ದು ಮಾತ್ರ ವಿಚಿತ್ರ.
ಸಂಚಾರಿ ವಿಜಯ್ ಅವರಿಗೆ ಪ್ರಶಸ್ತಿಯೇನೋ ಆರಂಭದಲ್ಲೇ ಬಂತು ಅನ್ನೋದು ಬಿಟ್ಟರೆ ಅವರ ಪಯಣ ಬಲುವೇಗದ್ದೇನೂ ಆಗಿರಲಿಲ್ಲ. ಹಂತ ಹಂತವಾಗಿ ಸ್ಟಾರ್ ಪಟ್ಟವೇರಬಲ್ಲಂಥ ಚಿತ್ರಗಳಲ್ಲಿ ನಟಿಸುತ್ತಿದ್ದರು. ಪ್ರಶಸ್ತಿ ವಿಜೇತ ನಟ ಅನ್ನೋ ಕಾರಣಕ್ಕೆ ಹೊಸ ಚಿತ್ರ ತಂಡಗಳಿಂದ ಅತಿಥಿಯಾಗಿ ಆಹ್ವಾನ ಬಂದಾಗಲೆಲ್ಲ ನಿರಾಕರಿಸದೇ ಹೋಗಿ ಒಳ್ಳೆಯ ಮಾತನಾಡಿ ಬರುತ್ತಿದ್ದಂಥ ಸೌಮ್ಯ ಸ್ವಭಾವದ ವ್ಯಕ್ತಿ. ಸಾಮಾಜಿಕ ಕಳಕಳಿಯ ವಿಚಾರದಲ್ಲಂತೂ ಸೇವೆಗೆ ಸದಾ ಸಿದ್ಧರಾಗಿರುತ್ತಿದ್ರು. ಅವರ ನಿಧನದ ಬಳಿಕ ತೆರೆಕಂಡ ಪುಕ್ಸಟ್ಟೆ ಲೈಫು ಅನ್ನೋ ಚಿತ್ರ ಪಾತ್ರಗಳ ಆಯ್ಕೆಯಲ್ಲಿ ಅವರೆಷ್ಟು ಮಾಗಿದ್ದಾರೆ ಅಂತ ತೋರಿಸ್ತಿತ್ತು.
ಕೊರೊನಾ ಹೆಚ್ಚಾಗಿದ್ದ ಸಂದರ್ಭದಲ್ಲಿ ಚಿತ್ರೀಕರಣ ನಡೆಯುತ್ತಿರಲಿಲ್ಲ. ಆದರೆ ಕೊರೊನಾ ಸೋಂಕಿಗೊಳಗಾದವರಿಗೆ ಸಹಾಯ ಹಸ್ತ ಚಾಚುವ ವಿಚಾರದಲ್ಲಿ ವಿಜಯ್ ತೊಡಗಿಸಿಕೊಂಡಿದ್ದರು. ಆ ಒಡಾಟದ ನಡುವೆಯೇ ಈ ಪ್ರತಿಭಾವಂತ ನಟ. ಬೈಕ್ ಅಪಘಾತದಿಂದ ನಡುರಸ್ತೆಯಲ್ಲೇ ರಕ್ತದ ಮಡುವಾಗಿದ್ದರು. ಬಹು ನಿರೀಕ್ಷೆಯ ಚಿತ್ರವಾದ ತಲೆದಂಡ ಬಿಡುಗಡೆಗೂ ಮೊದಲೇ. ರಸ್ತೆ ಅಪಘಾತದಲ್ಲಿ ತಲೆದಂಡ ನೀಡುವಂತಾಗಿದ್ದು ಮಾತ್ರ ನಿಜಕ್ಕೂ ದುರಂತ.
ಇವರಿಬ್ಬರ ಹೊರತಾಗಿ ಹಿರಿ ವಯಸ್ಸಿನ ಒಂದಷ್ಟು ಮಹಾ ಕಲಾವಿದರು, ನಿರ್ಮಾಪಕರು ಕೂಡ ನಮ್ಮನ್ನು ಅಗಲಿದ್ದಾರೆ. ಇತಿಹಾಸದಲ್ಲಿ ಸದಾ ಜೀವಂತ ಇರುವಂಥ ನೂರಾರು ಪಾತ್ರಗಳಿಗೆ ಜೀವ ತುಂಬಿದ ಈ ಎಲ್ಲ ತಾರೆಯರು ನಮ್ಮನ್ನು ಅನಿರೀಕ್ಷಿತವಾಗಿ ಅಗಲಿದ್ದರೂ ಬಾನಲ್ಲಿ ತಾರೆಗಳಾಗಿ ಅಮರರಾಗಿದ್ದಾರೆ ಎಂದೇ ನಮ್ಮ ನಂಬಿಕೆ.