ಪುನೀತ್ ರಾಜ್ ಕುಮಾರ್ ಅವರ ನಿಧನದ ಬಳಿಕ ರಾಜ್ಯ ರಾಜಧಾನಿಯಿಂದ ಹಿಡಿದು ರಾಷ್ಟ್ರ ರಾಜಧಾನಿಯವರೆಗೆ ಪುನೀತ್ ಭಾವಚಿತ್ರಗಳ ಮೆರವಣಿಗೆ ನಡೆದಿತ್ತು. ಇಂಥ ಸಂದರ್ಭದಲ್ಲಿ ಸ್ವತಃ ಪುನೀತ್ ಅವರೇ ಬ್ರಾಂಡ್ಅಂಬಾಸಡರ್ ಆಗಿದ್ದಂಥ ಕೆಎಂಎಫ್ ನಂದಿನಿಯಲ್ಲಿ ಅವರಿಲ್ಲ ಎಂದರೆ ಹೇಗೆ? ಖಂಡಿತ ಇದ್ದಾರೆ. ಆದರೆ ಭಾವಚಿತ್ರ ಮಾಡಿದ್ದು ನಾವಲ್ಲ ಎಂದಿದೆ ನಂದಿನಿಯ ಅಧಿಕೃತ ವರ್ಗ.
ಕಳೆದ ಕೆಲವು ದಿನಗಳಿಂದ ನಂದಿನ ಹಾಲಿನ ಪ್ಯಾಕ್ ಮೇಲೆ ಪುನೀತ್ ಭಾವಚಿತ್ರ ಇರುವ ಫೊಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಯಾರೋ ನಂದಿನಿಯವರು ಇದು ಪುನೀತ್ ಅವರ ನೆನಪಿನಲ್ಲಿ ಹೊರತಂದಿರುವ ಪ್ಯಾಕೆಟ್ ಎಂದು ಸುದ್ದಿ ಮಾಡಿದ್ದರು. ಅಭಿಮಾನಿಗಳಿಂದ ಇಂಥ ಪ್ಯಾಕೆಟ್ಗಾಗಿ ಡಿಮಾಂಡ್ ಹೆಚ್ಚಿದೆ ಎಂದು ಅಂಗಡಿಯವರು ಸಂಸ್ಥೆಗೆ ಸಂಬಂಧಿಸಿದ ಮಂದಿಗೆ ಹೇಳಿದಾಗಲೇ ನಿಜ ಅಂಶ ಹೊರಗೆ ಬಿದ್ದಿದೆ. ಅಂದಹಾಗೆ ನಂದಿನಿಯವರು ಇಂಥ ಪ್ಯಾಕೆಟ್ ಗಳನ್ನು ಇದುವರೆಗೂ ಮುದ್ರಿಸಿಲ್ಲ! ಯಾರೋ ಅಭಿಮಾನಿಯ ಕಲ್ಪನೆಗೆ ಚಿತ್ರದ ಮೂಲಕ ಸಿಕ್ಕ ಸಾಕಾರ ರೂಪ ಇಂಥದೊಂದು ಗೊಂದಲಕ್ಕೆ ಕಾರಣವಾಗಿತ್ತು.
ಘಟನೆಯ ಬಗ್ಗೆ ಸ್ಪಷ್ಟೀಕರಣ ನೀಡಿರುವ ಕೆಎಂಎಫ್ ಸಂಸ್ಥೆ ಯಾರೋ ಅಭಿಮಾನಿಗಳ ಕೃತ್ಯ ಇದು. ಸದ್ಯಕ್ಕೆ ಕೆಎಂಎಫ್ ಕಡೆಯಿಂದ ಅಂಥ ಯಾವುದೇ ತೀರ್ಮಾನ ಮಾಡಿಲ್ಲ ಎಂದು ಹೇಳಿದೆ. ಅಂದಹಾಗೆ ಕರ್ನಾಟಕ ನಂದಿನಿ ಮತ್ತು ಪುನೀತ್ ಸಂಬಂಧ ಡಾ.ರಾಜ್ ಕುಮಾರ್ ಕಾಲದಿಂದಲೇ ಆರಂಭವಾಗಿತ್ತು. ಕರ್ನಾಟಕದ ರೈತಾಪಿವರ್ಗವನ್ನು ಬೆಂಬಲಿಸುವ ಸಲುವಾಗಿ ಡಾ.ಆರಾಜ್ ಕುಮಾರ್ ಅವರು ನಂದಿನಿ ಹಾಲಿನ ಉತ್ಪನ್ನಗಳಿಗೆ ಉಚಿತವಾಗಿ ರಾಯಾಭಾರಿಯಾಗಲು ಮುಂದಾಗಿದ್ದರು. ರಾಜ್ ಕಾಲಾನಂತರ ಈ ಜವಾಬ್ದಾರಿಯನ್ನು ಪುನೀತ್ ರಾಜ್ ಕುಮಾರ್ ವಹಿಸಿಕೊಂಡಿದ್ದರು.