
ಲವ್ ಮಾಕ್ಟೇಲ್ ನಿಗದಿತ ಪ್ರದೇಶಗಳಲ್ಲಿ ಮಾತ್ರ ಪ್ರಚಾರ ಪಡೆದಿತ್ತು. ಬೆಂಗಳೂರು, ಮೈಸೂರು,ಶಿವಮೊಗ್ಗ ದಾವಣಗೆರೆ ಮತ್ತು ಒಂದಷ್ಟು ತುಮಕೂರಿನಲ್ಲಿ ಮಾತ್ರ ಒಳ್ಳೆಯ ಪ್ರತಿಕ್ರಿಯೆ ಕೊಟ್ಟಿತ್ತು. ಆದರೆ ಆ ಚಿತ್ರ ಆನಂತರ ಒಟಿಟಿ ಮೂಲಕ ಸೆಳೆದಿರುವ ಪರಿ ಅದ್ಭುತವಾದದ್ದು. ಹಾಗಾಗಿಯೇ ಪ್ರಸ್ತುತ ಲವ್ ಮಾಕ್ಟೇಲ್ 2ಗೆ ಅಂತಾರಾಜ್ಯ, ಅಂತರ್ದೇಶೀಯ ಮಟ್ಟದಲ್ಲಿ ಬೇಡಿಕೆ ಸೃಷ್ಟಿಯಾಗಿದೆ ಎಂದರು ಚಿತ್ರದ ನಾಯಕ ಕೃಷ್ಣ. ಅವರು ಚಿತ್ರದ ಸಕ್ಸಸ್ ಮೀಟ್ ಸಂದರ್ಭದಲ್ಲಿ ಮಾತನಾಡುತ್ತಿದ್ದರು.
ಉತ್ತರ ಕರ್ನಾಟಕದಿಂದ ಮೈಸೂರು ತನಕ ಅದರಲ್ಲೂ ತೆಲುಗು, ತಮಿಳು ಸೆಂಟರ್ ಎನ್ನುವ ಪ್ರದೇಶಗಳಲ್ಲಿಯೂ ಕನ್ನಡ ಸಿನಿಮಾ ನೋಡಲು ಜನ ಬರುತ್ತಿರೋದು ಖುಷಿಯಾಗಿದೆ ಎಂದ ಕೃಷ್ಣ, ಬಿಡುಗಡೆಯ ಬಳಿಕ ಪ್ರಚಾರವೇ ಮಾಡಬೇಕಾಗಿ ಬಂದಿಲ್ಲ ಎಂದರು. ಚಿತ್ರದ ಡಬ್ಬಿಂಗ್ ರೈಟ್ಸ್ ಕೊಡುವುದಕ್ಕಿಂತಲೂ, ರಿಮೇಕ್ ರೈಟ್ಸ್ ಕೊಡುವುದರಲ್ಲಿ ಹೆಚ್ಚು ಆಸಕ್ತಿ ಇದೆ ಎಂದರು ಕೃಷ್ಣ. ಅದಕ್ಕೆ ಕಾರಣ ತಾವು ಚಿತ್ರರಂಗಕ್ಕೆ ಬಂದಾಗ ಪರಭಾಷಾ ಚಿತ್ರಗಳ ಸಿಡಿ ಕೊಟ್ಟು ರಿಮೇಕ್ ಚಿತ್ರಕ್ಕೆ ತಯಾರಾಗುವಂತೆ ಹೇಳಲಾಗ್ತಿತ್ತು. ಈಗ ಬೇರೆ ಭಾಷೆಯವರು ಕೂಡ ಕನ್ನಡ ಸಿನಿಮಾ ನೋಡಿ ಅಲ್ಲಿ ರಿಮೇಕ್ ಮಾಡುವಂತಾಗಲಿ ಎನ್ನುವ ಸ್ವೀಟ್ ರಿವೇಂಜ್ ಇರುವುದಾಗಿ ತಿಳಿಸಿದರು. ಲವ್ ಮಾಕ್ಟೇಲ್ ತೆಲುಗು ರಿಮೇಕ್ ಪೂರ್ತಿಯಾಗಿದೆ, ತಮಿಳು, ಮರಾಠಿ, ಬಂಗಾಲಿ,ಹಿಂದಿಯಲ್ಲಿ ಬೇಡಿಕೆ ಬಂದಿದೆ. ಭಾಗ ಎರಡರ ರಿಮೇಕ್ ಹಕ್ಕಿಗೂ ಹೀಗೆಯೇ ಡಿಮ್ಯಾಂಡ್ ಸೃಷ್ಟಿಯಾಗೋ ಭರವಸೆ ಇದೆ ಎಂದರು. ಸಿನಿಮಾ ಒಂದೇ ವಾರದಲ್ಲಿ ಏಳುಕೋಟಿ ಗಳಿಸಿರುವ ಬಗ್ಗೆ ಅವರು ಹೇಳಿಕೊಂಡರು.
ನಿರೀಕ್ಷೆಯ ಸಿನಿಮಾಗಳು ಬಿಡುಗಡೆಯ ಮೂರು ದಿನಗಳು ಉತ್ತಮ ಪ್ರದರ್ಶನ ಕಾಣುವುದು ಸಹಜ. ಅದರಲ್ಲಿಯೂ ನಮ್ಮ ಸಿನಿಮಾವನ್ನು ಭಾನುವಾರಕ್ಕಿಂತ ಹೆಚ್ಚು ಜನ ಸೋಮವಾರ ನೋಡಿದ್ದಾರೆ. ಸೋಮವಾರ ರಜಾದಿನ ಇಲ್ಲವಾದರೂ ಪ್ರೇಮಿಗಳು ವ್ಯಾಲಂಟೇನ್ ದಿನಕ್ಕೆ ಇದೇ ಚಿತ್ರ ನೋಡುವ ತೀರ್ಮಾನ ಮಾಡಿಕೊಂಡಿದ್ದರು ಎಂದು ನಿರ್ಮಾಪಕಿ ಮಿಲನಾ ನಾಗರಾಜ್ ಖುಷಿ ವ್ಯಕ್ತಪಡಿಸಿದರು. ಮೊದಲ ದಿನವೇ ಮುಂಬೈ, ಪೂನಾದಲ್ಲಿಯೂ ಹೌಸ್ ಫುಲ್ ಪ್ರದರ್ಶನ ಕಂಡಿದೆ. ನಾಯಕ, ನಿರ್ದೇಶಕ ಕೃಷ್ಣ ಅವರ ತಂದೆ ಚಿತ್ರದ ಹಂಚಿಕೆದಾರರಾಗಿಯೂ ತಮ್ಮ ಅನುಭವ ಹಂಚಿಕೊಂಡರು. ಸಂಗೀತ ನಿರ್ದೇಶಕ ನಕುಲ್ ಅಭ್ಯಂಕರ್ ಸೀಕ್ವೆಲ್ ಬಗ್ಗೆ ಎಲ್ಲೆಡೆ ಮೆಚ್ಚುಗೆ ದೊರಕಿರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಚಿತ್ರತಂಡದ ಪ್ರಮುಖರು ಉಪಸ್ಥಿತರಿದ್ದರು.