ಕನ್ನಡದ ಜನಪ್ರಿಯ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಇದು ಅವರ ಎರಡನೇ ಮಗುವಾಗಿದ್ದು, ತಾಯಿ ಮಗು ಇಬ್ಬರೂ ಕ್ಷೇಮ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.
ಸಿನಿ ಕನ್ನಡ.ಕಾಮ್ ಜೊತೆಗೆ ಮಾತನಾಡಿದ ರಿಷಬ್ ಶೆಟ್ಟಿ, ಪತ್ನಿ ಪ್ರಗತಿಗೆ ನಿನ್ನೆ ರಾತ್ರಿ ಹೆರಿಗೆ ನೋವು ಕಾಣಿಸಿದ್ದು ಆಗಲೇ ಕುಂದಾಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದರು. ಇಂದು, ಶುಕ್ರವಾರ ಬೆಳಿಗ್ಗೆ ಹೆರಿಗೆಯಾಗಿರುವುದಾಗಿ ತಿಳಿಸಿದ್ದಾರೆ.
ಐದು ವರ್ಷದ ಹಿಂದೆ ರಿಷಬ್, ಪ್ರಗತಿ ಶೆಟ್ಟಿಯ ಕೈ ಹಿಡಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಫೆಬ್ರವರಿ 9ರಂದು ಕುಂದಾಪುರದಲ್ಲೇ ವಿವಾಹವಾಗಿದ್ದರು. ಅಭಿಮಾನಿಯಾಗಿ ಬಂದ ಹುಡುಗಿಯನ್ನು ಅಭಿಮಾನದಿಂದ ವರಿಸಿ ಪತ್ನಿಯಾಗಿಸಿದ್ದರು. ಪ್ರಗತಿ ಶೆಟ್ಟಿ ಮುಂದೆ ರಿಷಬ್ ಚಿತ್ರಗಳ ವಸ್ತ್ರ ವಿನ್ಯಾಸಕಿಯಾಗಿ ಹೆಸರು ಮಾಡಿದರು. ಮೂರು ವರ್ಷಗಳ ಹಿಂದೆ ಏಪ್ರಿಲ್ 7ರಂದು ಈ ದಂಪತಿಗೆ ಗಂಡು ಮಗುವಾಗಿತ್ತು. ಅದೇ ವರ್ಷ ಮಕ್ಕಳ ದಿನಾಚರಣೆಯಂದು ಪುತ್ರನ ಹೆಸರು ರಣ್ವಿತ್ ಶೆಟ್ಟಿ ಎಂದು ರಿಷಬ್ ಘೋಷಿಸಿದ್ದರು. ಇದೀಗ ಎರಡನೇ ಮಗುವೂ ಜನಿಸಿದೆ.
ಮೊದಲು ನಟನಾಗಿ ಸಣ್ಣಪುಟ್ಟ ಪಾತ್ರಗಳಲ್ಲಿ ಗುರುತಿಸಿಕೊಂಡ ರಿಷಬ್ ಶೆಟ್ಟಿ, ನಿರ್ದೇಶಕರಾಗಿ ಹೆಸರು ಮಾಡಿದ್ದು ಕಿರಿಕ್ ಪಾರ್ಟಿ ಸಿನಿಮಾದ ಮೂಲಕ. ಸರ್ಕಾರಿ ಹಿಪ್ರಾಶಾಲೆ ಕಾಸರಗೋಡು ಬಳಿಕ ಜನಪ್ರಿಯ ನಿರ್ದೇಶಕರಾದರು. ಬೆಲ್ ಬಾಟಂ ಸಿನಿಮಾ ಇವರನ್ನು ಸ್ಟಾರ್ ನಾಯಕನನ್ನಾಗಿಯೂ ಮಾಡಿತು. ಸದಾ ಏನಾದರೊಂದು ಕ್ರಿಯಾತ್ಮಕ ಕಾರ್ಯದಲ್ಲಿ ತೊಡಗಿರುವ ರಿಷಬ್ ಅವರು ಕಾಂತಾರ ಸಿನಿಮಾ ಶೂಟಿಂಗ್ ಗಾಗಿ ಕುಂದಾಪುರದಲ್ಲಿದ್ದಾರೆ.