ಕನ್ನಡ ಚಿತ್ರರಂಗದಲ್ಲಿ ನಟನೆಯ ಮೂಲಕ ತನ್ನದೇ ಸ್ಥಾನ ಪಡೆದಿರುವ ನಟಿ ಮಮತಾ ರಾಹುತ್. ಪುಣ್ಯಾತ್ಗಿತ್ತೀರು, ಬಿಂದಾಸ್ ಗೂಗ್ಲಿ ಮೂಲಕ ಪ್ರೇಕ್ಷಕರ ಗಮನ ಸೆಳೆದ ಈಕೆ ತೆಲುಗು ಸಿನಿಮಾಗಳಲ್ಲಿಯೂ ನಟಿಸಿದವರು. ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮುಗಿಸಿಕೊಂಡ ಮಮತಾ ಸದ್ಯದಲ್ಲಿಯೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.
ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಕುಟುಂಬ ಸಮೇತ ವಾಸವಿರುವ ಮಮತಾಗೆ ಜೋಡಿಯಾಗುತ್ತಿರುವುದು ಮಂಗಳೂರು ಕರಾವಳಿಯ ಹುಡುಗ ಡಾ. ಸುರೇಶ್ ಕೋಟ್ಯಾನ್. ವೃತ್ತಿಯಲ್ಲಿ ಸೈಕಿಯಾಟ್ರಿಸ್ಟ್ ಆಗಿರುವ ಸುರೇಶ್, ಕರ್ನಾಟಕ ಹೆಲ್ತ್ ಪ್ರಮೋಶನ್ ಟ್ರಸ್ಟ್ ನಲ್ಲಿ ಡೆಪ್ಯುಟಿ ಡೈರೆಕ್ಟರ್ ಕೂಡ ಹೌದು. ಮಾತ್ರವಲ್ಲ ಸಿನಿಮಾರಂಗದಲ್ಲಿ ಕೂಡ ಗುರುತಿಸಿಕೊಂಡವರು.
ಮೂಲತಃ ಮಂಗಳೂರಿನ ಮುಲ್ಕಿ ನಿವಾಸಿ ಸುರೇಶ್ ಕೋಟ್ಯಾನ್, ಪ್ರಸ್ತುತ ವಾಸವಿರುವುದು ಬೆಂಗಳೂರಿನ ಬಸವೇಶ್ವರ ನಗರದಲ್ಲೇ. ತುಳು, ಕನ್ನಡ ಸಿನಿಮಾಗಳ ನಿರ್ಮಾಣ, ನಿರ್ದೇಶನ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿರುವ ಅನುಭವಿ. ಒಂದೇ ಕಡೆ ಮನೆ ಇರುವುದರಿಂದ ಎರಡೂ ಕುಟುಂಬಗಳಲ್ಲಿ ಆತ್ಮೀಯತೆ ಇತ್ತು. ಸಿನಿಮಾರಂಗದಲ್ಲಿರುವ ಸಮಾನ ಆಸಕ್ತಿ ಸ್ನೇಹ ಮೂಡಲು ಕಾರಣವಾಗಿತ್ತು. ಎರಡೂ ಫ್ಯಾಮಿಲಿಗಳು ಜೊತೆ, ಜೊತೆಯಾಗಿ ದೇವಸ್ಥಾನಗಳಿಗೆ ಪ್ರವಾಸ ಹೋಗುತ್ತಿದ್ದರು. ಮದುವೆ ಸಮಾರಂಭಗಳಲ್ಲಿ ಭಾಗಿಯಾಗುತ್ತಿದ್ದರು. ಇದೀಗ ಈ ಕುಟುಂಬಗಳ ನಡುವೆಯೇ ಮದುವೆ ನಡೆಯುತ್ತಿದೆ. ಮುಂದಿನ ತಿಂಗಳು ಅಂದರೆ ಮೇ 10ರಂದು ಮಮತಾ ಮತ್ತು ಸುರೇಶ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಹೊಸಜೋಡಿಗೆ ಹಾರ್ದಿಕ ಶುಭಾಶಯಗಳು.