ನಾಡಿನೆಲ್ಲೆಡೆ ಇಂದು ರಮಜಾನ್ ಹಬ್ಬದ ಸಂಭ್ರಮ. ಇದರ ನಡುವೆ ‘ವಾರ್ತಾಭಾರತಿ’ ದೈನಿಕದ ಡಿಜಿಟಲ್ ಮಾಧ್ಯಮದಲ್ಲಿ ಬಿಡುಗಡೆಯಾದ ಕಿರುಚಿತ್ರವೊಂದು ವ್ಯಾಪಕವಾಗಿ ಗಮನ ಸೆಳೆಯುತ್ತಿದೆ. ‘ಇಫ್ತಾರ್’ ಹೆಸರಿನ ಕಿರುಚಿತ್ರ ಸಾರುತ್ತಿರುವ ಸೌಹಾರ್ದ ಸಂದೇಶಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ.
ರಮಜಾನ್ ಉಪವಾಸದ ಒಂದು ಸಂಜೆ ಬೆಂಗಳೂರಿನ ಬೀದಿಯೊಂದರಲ್ಲಿ ನಡೆಯುವ ಘಟನೆಯೇ ಚಿತ್ರದ ವಸ್ತು. ಇಬ್ಬರು ಮಹಿಳೆಯರ ನಡುವೆ ನಡೆಯುವ ಅದೊಂದು ಘಟನೆ ಎರಡು ಜೀವಗಳಿಗೆ ಮಾತ್ರ ಮೀಸಲಾಗಿದ್ದಲ್ಲ. ಎರಡು ಸಮುದಾಯಗಳ ಲಕ್ಷಾಂತರ ಹೃದಯಗಳಿಗೆ ಸಂಬಂಧಿಸಿದೆ. ಇದನ್ನು ಕಿರುಚಿತ್ರವೇ ತನ್ನ ವ್ಯೂವ್ಸ್ ಮೂಲಕ ಸಾಬೀತು ಮಾಡಿದೆ.
ಹತ್ತು ನಿಮಿಷಗಳ ಈ ಕಿರುಚಿತ್ರದಲ್ಲಿ ಒತ್ತು ನೀಡಲಾಗಿರುವುದು ಮಾನವೀಯ ಸಂಬಂಧಗಳಿಗೆ. ಮನುಷ್ಯ ದೇವರ ಮೇಲಿನ ನಂಬಿಕೆಯ ಜೊತೆಗೆ ಮಾನವೀಯ ಮೌಲ್ಯಗಳನ್ನು ಉಳಿಸಿಕೊಂಡಿದ್ದರೆ ಸಾಕು. ಉಳಿದಿದ್ದೆಲ್ಲವೂ ತಾನಾಗಿಯೇ ಬಳಿ ಬರುತ್ತದೆ ಎನ್ನುವುದು ಚಿತ್ರದ ತಾತ್ಪರ್ಯ. ಈ ಸಂದೇಶವನ್ನು ಕೆಲವೇ ದೃಶ್ಯಗಳಲ್ಲಿ ಕಟ್ಟಿಕೊಡಲು ಸಾಧ್ಯವಾಗಿರುವುದು ನಿರ್ದೇಶಕ ಇಬ್ರಾಹೀಂ ಬಾತಿಶ್ ಗೆಲವು.
ಮಂಗಳೂರು ಕರಾವಳಿಯ ಕಲ್ಲಡ್ಕ ಕೋಮು ಗಲಭೆಗೆ ಹೆಸರು. ಆದರೆ ಅಲ್ಲೇ ಪಕ್ಕದ ಗೋಳ್ತಮಜಲು ನಿವಾಸಿ ಇಬ್ರಾಹೀಂ ಬಾತಿಶ್ ಸಮಾಜದ ಸೌಹಾರ್ದಕ್ಕೆ ಪ್ರಯತ್ನಿಸುತ್ತಿರುವ ಅಪರೂಪದ ಪತ್ರಕರ್ತ. ವಾರ್ತಾಭಾರತಿ ದೈನಿಕದಲ್ಲಿ ಉಪ ಸಂಪಾದಕನಾಗಿ, ಬಳಿಕ ಅದರದೇ ವೆಬ್ ಸೈಟ್ ನಲ್ಲಿ ಚೀಫ್ ಸಬ್ ಎಡಿಟರ್, ಈಗ ವಿಡಿಯೋ ವಿಭಾಗದಲ್ಲಿ ಚೀಫ್ ಸಬ್ ಎಡಿಟರ್ ಆಗಿ ವೃತ್ತಿ ನಿರತರು. ನಿರೂಪಕ, ಸ್ಕ್ರಿಪ್ಟ್ ರೈಟರ್, ಸಂಕಲನಕಾರನಾಗಿಯೂ ಗುರುತಿಸಿಕೊಂಡಿರುವ ಬಾತಿಶ್ ‘ಇಫ್ತಾರ್’ಗೆ ಕತೆ, ಚಿತ್ರಕತೆ, ಸಂಭಾಷಣೆ ಬರೆಯುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ.
ಆರಂಭದಿಂದಲೂ ಸಿನಿಮಾರಂಗದ ಬಗ್ಗೆ ಅಪಾರ ಪ್ರೀತಿ ಇರುವ ಬಾತಿಶ್, ನಿರ್ದೇಶಿಸಿರುವ ಎರಡನೇ ಕಿರುಚಿತ್ರ ಇದು. ಮೊದಲ ಕಿರುಚಿತ್ರ ನಾನೂ ಗೌರಿ ಕಳೆದ ವರ್ಷ ಬಿಡುಗಡೆಯಾಗಿತ್ತು.
ಕಿರುಚಿತ್ರದ ಛಾಯಾಗ್ರಾಹಕ ಆಝಾದ್ ಕಂಡಿಗ ಕೂಡ ವಾರ್ತಾಭಾರತಿಯದ್ದೇ ಕೊಡುಗೆ. ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಕಡೇಶಿವಾಲಯ ಗ್ರಾಮದ ಕಂಡಿಗ ನಿವಾಸಿ. ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಪದವಿ. ವಾರ್ತಾಭಾರತಿ ಡಿಜಿಟಲ್ ಮಾಧ್ಯಮದಲ್ಲಿ ವಿಡಿಯೋ ವರದಿಗಾರರಾಗಿ ಕಳೆದ 5ವರ್ಷಗಳಿಂದ ವೃತ್ತಿ ನಿರತರು. ಛಾಯಾಗ್ರಹಣ, ಸ್ಕ್ರಿಪ್ಟ್ ರೈಟಿಂಗ್ ಕೂಡ ಮಾಡಬಲ್ಲರು. ಪ್ರಸ್ತುತ ಛಾಯಾಗ್ರಾಹಕ, ನಿರೂಪಕ, ಸಂಕಲನಕಾರನಾಗಿ ಕೆಲಸ ಮಾಡುತ್ತಿದ್ದಾರೆ.
ಕಿರುಚಿತ್ರದ ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ, ಮಹಿಳೆಯರಿಬ್ಬರೂ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇಬ್ಬರು ಕೂಡ ರಂಗಭೂಮಿ ಕಲಾವಿದರಾಗಿ ಹೆಸರು ಮಾಡಿದ್ದಾರೆ ಎನ್ನುವುದೇ ಅದಕ್ಕೆ ಕಾರಣ ಇರಬಹುದು. ‘ಸಮುದಾಯ’ ರಂಗ ತಂಡದ ಕಾರ್ಯದರ್ಶಿಯಾಗಿರುವ ಕಾವ್ಯಾ ಅಚ್ಯುತ್, ಇಲ್ಲಿ ಹಣಕ್ಕಾಗಿ ಕಷ್ಟ ಪಡುವ ಮಹಿಳೆಯ ಪಾತ್ರ ನಿರ್ವಹಿಸಿದ್ದಾರೆ. ಮೂಲತಃ ಮಂಗಳೂರಿನವರಾದ ಕಾವ್ಯಾ ಅಚ್ಯುತ್ ಪ್ರಸ್ತುತ ಬೆಂಗಳೂರು ನಿವಾಸಿ. ಕ್ಯಾಬ್ ಗಾಗಿ ಕಾದು ಕುಳಿತ ಮಹಿಳೆಯಾಗಿ ಲವನಿಕಾ ವಸಂತ್ ಅಭಿನಯಿಸಿದ್ದಾರೆ. ಅವರು ಕೂಡ ‘ಸಮುದಾಯ’ದ ನಟಿ. ರಂಗತಂಡದ ಖಜಾಂಚಿ.
ಯಾವ ನಿರ್ದೇಶಕರ ಬಳಿಯಲ್ಲೂ ಸಹಾಯಕನಾಗಿ ಕೆಲಸ ಮಾಡಿರದ ಬಾತಿಶ್ ‘ಇಫ್ತಾರ್’ ಮೂಲಕ ತಮ್ಮೊಳಗಿರುವ ಪ್ರತಿಭೆ ಎಂಥದ್ದು ಎನ್ನುವುದನ್ನು ಅನಾವರಣಗೊಳಿಸಿದ್ದಾರೆ. ಗುರುರಾಜ್ ದೇಸಾಯಿ ಮತ್ತು ನಲ್ಮೆ ಟಿಕೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಡಬ್ಬಿಂಗ್ ಇಂಜಿನಿಯರ್ ಆಗಿ ರವಿಕುಮಾರ್ ಚೌಕ್ರಿ ಕಾರ್ಯನಿರ್ವಹಿಸಿದ್ದಾರೆ. ಬೆಂಗಳೂರಿನ ಜೇಮ್ ಸ್ಟುಡಿಯೋದಲ್ಲಿ ಡಬ್ಬಿಂಗ್ ಕೆಲಸಗಳನ್ನು ನಡೆಸಲಾಗಿದೆ. ಅನುಪಮಾ ಜಿಎಸ್ ಸಬ್ ಟೈಟಲ್ ರಚಿಸಿದ್ದಾರೆ. ಅಶ್ರಫ್ ಶಿರ್ಲಾಲ್ ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಕಿರುಚಿತ್ರದ ಪ್ರೊಡಕ್ಷನ್ ಮ್ಯಾನೇಜರ್ ಅಶ್ರಫ್ ಕೊಡ್ಲಿಪೇಟೆ. ಅಲಕ್ಷಿಸಬಹುದಾದ ಒಂದೆರಡು ತಾಂತ್ರಿಕ ಕೊರತೆಗಳ ಹೊರತಾಗಿ ಇಫ್ತಾರ್ ವೀಕ್ಷಕರಿಗೆ ಸಂತೃಪ್ತಿ ನೀಡುವುದರಲ್ಲಿ ಸಂದೇಹವಿಲ್ಲ.