ನಟ ಮೋಹನ್ ಜುನೇಜ ಇನ್ನಿಲ್ಲ

ಕನ್ನಡದ ಜನಪ್ರಿಯ ಹಾಸ್ಯನಟ ಮೋಹನ್ ಜುನೇಜ(54)ನಿಧನರಾಗಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಜುನೇಜ ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ.

ನಟ ಮೋಹನ್ ಜುನೇಜ ಇಂದು ಶನಿವಾರ ಬೆಳಿಗ್ಗೆ 6.15ಕ್ಕೆ ನಿಧನರಾಗಿದ್ದಾಗಿ ಕಿರಿಯ ಪುತ್ರ ಅಕ್ಷಯ್ ಸಿನಿಕನ್ನಡ.ಕಾಮ್ ಗೆ ಮಾಹಿತಿ ನೀಡಿದ್ದಾರೆ. ನಿನ್ನೆ ರಾತ್ರಿ ವಿಪರೀತ ನೋವಿನಿಂದ ಚಿಕ್ಕಬಾಣಾವರದ ಸಪ್ತಗಿರಿ ಆಸ್ಪತ್ರೆಗೆ ದಾಖಲಾಗಿದ್ದ ಮೋಹನ್ ಜುನೇಜ ಅವರು ಕರುಳಿನ‌ ತೊಂದರೆಗೆ ಸಿಲುಕಿದ್ದರು. ಅನಾರೋಗ್ಯದ ಸ್ಥಿತಿ ಅಂತಿಮಹಂತ ತಲುಪಿದ್ದ ಕಾರಣ ವೈದ್ಯರ ಕೈಮೀರಿತ್ತು ಎನ್ನಲಾಗಿದೆ.

ಎಂಬತ್ತರ ದಶಕದಿಂದಲೇ ಕನ್ನಡ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕರಾಗಿ ತೊಡಗಿಸಿಕೊಂಡವರು ಮೋಹನ್ ಜುನೇಜ. ಸಣ್ಣಪುಟ್ಟ ಪಾತ್ರಗಳಿಂದ ಆರಂಭಿಸಿ ಇದುವರೆಗೆ ಸುಮಾರು 500ರಷ್ಟು‌ ಚಿತ್ರಗಳಲ್ಲಿ ನಟಿಸಿದ ಕೀರ್ತಿ ಇವರದು. ‘ವಾಲ್ ಪೋಸ್ಟರ್’ ಎನ್ನುವ ಪ್ರಶಸ್ತಿ ವಿಜೇತ ಚಿತ್ರದ ಮೂಲಕ ನಟನೆ ಆರಂಭಿಸಿದ ಮೋಹನ್ ಅವರು ‘ವಠಾರ’ ಧಾರಾವಾಹಿಯ ಮೂಲ ಎಲ್ಲರಿಂದ ಗುರುತಿಸುವಂತಾದರು.
`ಚೆಲ್ಲಾಟ’ ಚಿತ್ರದ ಮದುಮಗನ ಪಾತ್ರ ಇವರಿಗೆ ತುಂಬಾ ಪ್ರಸಿದ್ಧಿ ತಂದುಕೊಟ್ಟಿತ್ತು. ಇತ್ತೀಚೆಗಷ್ಟೇ ತೆರೆಕಂಡು ಸದ್ದು ಮಾಡಿದ ಜೇಮ್ಸ್, ಕೆಜಿಎಫ್ ಚಿತ್ರಗಳಲ್ಲೂ ಮೋಹನ್ ಇದ್ದರು. ಉಪೇಂದ್ರ ನಟನೆಯ ‘ಕಬ್ಜ’ದಲ್ಲಿಯೂ ಒಂದು ಪಾತ್ರ ಮಾಡುತ್ತಿದ್ದು, ಚಿತ್ರೀಕರಣ ಮುಂದುವರಿದಿತ್ತು.

ಮೋಹನ್ ತಮ್ಮ ಪತ್ನಿ ಕುಸುಮಾ ಮತ್ತು ಇಬ್ಬರು ಮಕ್ಕಳಾದ ಅಕ್ಷಯ್ (22)ಮತ್ತು ಅಶ್ವಿನ್ (26) ಅವರನ್ನು ಅಗಲಿದ್ದಾರೆ. ಅಕ್ಷಯ್ ವೃತ್ತಿಪರ ಛಾಯಾಗ್ರಹಣದಲ್ಲಿ ಆಸಕ್ತ. ಅಶ್ವಿನ್ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಲು ಪ್ರಯತ್ನಿಸಿ ವಿಫಲರಾಗಿ ಖಾಸಗಿ ವೃತ್ತಿಗೆ ಮೊರೆಹೋಗಿದ್ದಾರೆ.

Recommended For You

Leave a Reply

error: Content is protected !!