ಮಮತಾ ರಾಹುತ್ ಮಾಂಗಲ್ಯ ಬಂಧನ

ಕನ್ನಡದ ಯುವ ನಟಿ ಮಮತಾ ರಾಹುತ್ ಹಸೆಮಣೆಯೇರಿದ್ದಾರೆ. ಮೂಲತಃ ಮಂಗಳೂರು ಕರಾವಳಿಯವರಾದ ಚಿತ್ರ ನಿರ್ಮಾಪಕ ಸುರೇಶ್ ಕೋಟ್ಯಾನ್ ಅವರೊಂದಿಗೆ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಬೆಂಗಳೂರು ಬಿಇಎಂಎಲ್ ಲೇಔಟ್ ನ ಹುತ್ತದ ವೆಂಕಟರಮಣಸ್ವಾಮಿ ದೇವಸ್ಥಾನದ ರಸ್ತೆಯಲ್ಲಿರುವ ಶ್ರೀಗಣಪತಿ ದೇವಸ್ಥಾನದ ಕಲ್ಯಾಣ ಮಂಟಪ ಮದುವೆಗೆ ಸಾಕ್ಷಿಯಾಯಿತು. ಬಂಧು, ಬಳಗದವರ ಸಮ್ಮುಖದಲ್ಲಿ ವಧೂವರರು ಧಾರ್ಮಿಕ ವಿಧಿವಿಧಾನಗಳೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಚಿತ್ರರಂಗದ ಮಂದಿಯೂ ಹಾಜರಿದ್ದು ನವಜೋಡಿಗೆ ಶುಭಹಾರೈಸಿದರು.

‘ಪುಣ್ಯಾತ್ಗಿತ್ತೀರು’, ‘ಬಿಂದಾಸ್ ಗೂಗ್ಲಿ’ ಸಿನಿಮಾಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ಮಮತಾ ರಾಹುತ್, ತೆಲುಗು ಸಿನಿಮಾಗಳಲ್ಲಿಯೂ ನಟಿಸಿದವರು.
ಮಮತಾ ಮನೆಯಲ್ಲಿ ಸೋಮವಾರದಿಂದಲೇ ವಿವಾಹಪೂರ್ವ ಕಾರ್ಯಕ್ರಮಗಳ ಸಂಭ್ರಮವಿತ್ತು. ನಿಶ್ಚಿತಾರ್ಥ, ಅರಿಶಿನ ಶಾಸ್ತ್ರ, ಬಳೆಶಾಸ್ತ್ರಗಳ ಬಳಿಕ ಮಂಗಳವಾರ ಸಂಜೆ ನಡೆದ ಆರತಕ್ಷತೆಯಲ್ಲಿಯೂ ಆಪ್ತವರ್ಗದ ಸಡಗರವಿತ್ತು.

ತಾರೆಯರ ಕಲರವ

ಯುವನಟರಾದ ಧರ್ಮಕೀರ್ತಿ, ನಟ ನಿರೂಪಕ ಧನಂಜಯ್, ನಟ ನಿರ್ದೇಶಕ ವಿಕ್ಟರಿ ವಾಸು, ನಟಿಯರಾದ ಭೂಮಿಕಾ, ಅರ್ಚನಾ ಸಿಂಗ್, ಶ್ರುತಿರಾಜ್, ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೋಟೂರು, ಸೋನು ಪಾಟೀಲ್, ಮೊದಲಾದವರು ಆಗಮಿಸಿ ಅಭಿನಂದಿಸಿದರು. ಹಿರಿಯ ನಿರ್ದೇಶಕರಾದ ಸುಧಾಕರ ಬನ್ನಂಜೆ, ಚಿತ್ರ ಸಾಹಿತಿ ಕಶಿ ಮೋಹನ್ ಕುಮಾರ್ ಕುಟುಂಬ ಸಮೇತ ಬಂದು ಶುಭಹಾರೈಸಿದರು.

ಮಮತಾ ಪತಿ ಸುರೇಶ್ ಕೋಟ್ಯಾನ್ ನಿರ್ಮಾಪಕ ಮಾತ್ರವಲ್ಲ ವೃತ್ತಿಯಲ್ಲಿ ಸೈಕಿಯಾಟ್ರಿಸ್ಟ್. ಮೂಲತಃ ಮಂಗಳೂರಿನ ಮುಲ್ಕಿ ನಿವಾಸಿ ಸುರೇಶ್ ಕೋಟ್ಯಾನ್, ಪ್ರಸ್ತುತ ವಾಸವಿರುವುದು ಬೆಂಗಳೂರಿನ ಬಸವೇಶ್ವರ ನಗರದಲ್ಲೇ. ತುಳು, ಕನ್ನಡ ಸಿನಿಮಾಗಳ ನಿರ್ಮಾಣ, ನಿರ್ದೇಶನ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿರುವ ಅನುಭವಿ. ಒಂದೇ ಕಡೆ ಮನೆ ಇರುವುದರಿಂದ ಎರಡೂ ಕುಟುಂಬಗಳಲ್ಲಿ ಆತ್ಮೀಯತೆ ಇತ್ತು. ಸಿನಿಮಾರಂಗದಲ್ಲಿರುವ ಸಮಾನ ಆಸಕ್ತಿ ಸ್ನೇಹ ಮೂಡಲು, ಪ್ರೇಮವಾಗಲು ಕಾರಣವಾಗಿತ್ತು.

Recommended For You

Leave a Reply

error: Content is protected !!