ದಕ್ಷಿಣ ಕನ್ನಡ ಕರಾವಳಿಗೆ ಕಾಲಿಟ್ಟು ಭೂತಕೋಲ ನೋಡಿದವರಿಗೆ ಮುಂದೆ ಒಂದು ಖಚಿತ. ಭೂತಕೋಲ ನಾವೇ ನೀಡಬೇಕು. ಅಥವಾ ಮುಂದಿನ ಬಾರಿಯ ಕೋಲ ನಾವೂ ನೋಡಬೇಕು. ಈ ಆಸೆ ತಳೆದವರ ಹೊಸಾದಾಗಿ ಸೇರಿಕೊಂಡವರು ಜನಪ್ರಿಯ ತಾರೆ ಶ್ರುತಿ ಕೃಷ್ಣ.
‘ಕರಿಹೈದ ಕರಿ ಅಜ್ಜ’ ಚಿತ್ರದಲ್ಲಿ ತುಳುನಾಡಿನ ದೈವ ಕೊರಗಜ್ಜನ ಕತೆ ಹೇಳುತ್ತಿರುವುದು ಎಲ್ಲರಿಗೂ ತಿಳಿದಿರುವ ಸತ್ಯ. ಚಿತ್ರದಲ್ಲಿ ಶ್ರುತಿ ಕೊರಗಜ್ಜನ ಸಾಕುತಾಯಿ ಬೈರಕ್ಕ ಬೈದೆತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಶ್ರುತಿಯವರ ಮಾತಿನಲ್ಲೇ ಹೇಳುವುದಾದರೆ “ಈ ಪಾತ್ರಕ್ಕೆ ನನ್ನ ಚಿತ್ರ ಬದುಕಿನಲ್ಲಿ ತುಂಬ ವಿಶೇಷ ಸ್ಥಾನ ಸಿಗುತ್ತೆ. ಬಹುಶಃ ಪೂರ್ವ ಜನ್ಮದ ಪುಣ್ಯದಿಂದ ದೊರಕಿರುವ ಪಾತ್ರ ಎಂದರೆ ಇದೇ ಎಂದುಕೊಂಡಿದ್ದೇನೆ. ವಿಶೇಷ ಏನೆಂದರೆ ಕೊರಗಜ್ಜನ ಸಿನಿಮಾದಲ್ಲಿ ಈ ಹಿಂದೆಯೂ ನಾಲ್ಕಾರು ಮಂದಿ ಬಂದು ಕತೆ ಹೇಳಿ ಪಾತ್ರವನ್ನು ನೀಡುವುದಾಗಿ ಹೇಳಿದ್ದರು. ಆದರೆ ಆ ಪ್ರಾಜೆಕ್ಟ್ ಯಾವುದೂ ಮುಂದುವರಿಯಲೇ ಇಲ್ಲ. ಆದರೆ ದೈವಕೃಪೆ ಎನ್ನುವಂತೆ ಈಗ ಎಲ್ಲವೂ ಕೈಗೂಡಿ ಬಂದಿದೆ. ಬಗೆದಷ್ಟು ಹೊಸ ಕತೆ ಹೇಳುವ ದೈವದ ಕತೆ ಹೇಳುವ ನಿರ್ದೇಶಕರ ಧೈರ್ಯಕ್ಕೆ ಅಭಿನಂದನೆ ಹೇಳಲೇಬೇಕು. ನಿರ್ಮಾಪಕರು ಈ ಚಿತ್ರಕ್ಕೆ ಹಣದ ಖರ್ಚಿನ ಲೆಕ್ಕ ಹಾಕಿ ಮಾಡಿಲ್ಲ. ಇದಕ್ಕೊಂದು ಉದಾಹರಣೆ ಕೋಲ ನಡೆಸಿರುವುದು. ಚಿತ್ರ ಶುರುವಾಗುವ ಮೊದಲೇ ಕೋಲದ ಮೂಲಕ ದೈವದ ಒಪ್ಪಿಗೆ ಪಡೆಯಲಾಗಿತ್ತು. ನಾನು ತಂಡಕ್ಕೆ ಪಾತ್ರಧಾರಿಯಾಗಿ ಆ ಬಳಿಕ ಸೇರಿಕೊಂಡಿದ್ದೇನೆ. ಹಾಗಾಗಿ ನನಗೆ ಕೋಲ ನೋಡುವ ಅವಕಾಶ ಸಿಗಲಿಲ್ಲ. ಚಿತ್ರೀಕರಣ ಮುಗಿದ ಬಳಿಕ ದೈವಕ್ಕೆ ಧನ್ಯವಾದ ತಿಳಿಸುವ ರೀತಿಯಲ್ಲಿ ಒಂದು ಕೋಲ ನಡೆಸಬೇಕು ಎಂದು ನಾನು ಚಿತ್ರ ತಂಡದ ಜೊತೆಗೆ ಹೇಳಿದ್ದೆ. ಕಾರಣ ಈ ಸಂದರ್ಭದಲ್ಲಾದರೂ ಜೊತೆಗೆ ಭಾಗಿಯಾಗುವುದು ನನ್ನ ಉದ್ದೇಶವಾಗಿತ್ತು. ಆದರೆ ನನ್ನ ಈ ಕೋರಿಕೆಯನ್ನು ಗಂಭೀರವಾಗಿ ಪರಿಗಣಿಸಿದ ನಿರ್ಮಾಪಕರು ಚಿತ್ರ ಮುಗಿದ ಬಳಿಕ ಭೂತಕೋಲ ನಡೆಸಿದ್ದಾರೆ. ನಾನು ಇದರಲ್ಲಿ ಪಾಲ್ಗೊಂಡಿದ್ದೇನೆ. ತುಂಬ ಸಂತೃಪ್ತಿ ಪಡೆದಿದ್ದೇನೆ” ಎಂದರು.
ನಿರ್ದೇಶಕರು ರವಿವರ್ಮ ಚಿತ್ರ ಬರೆದಂತೆ ಪ್ರತಿಯೊಂದು ಕಲಾವಿದರನ್ನು ಪಾತ್ರವಾಗಿ ತೋರಿಸಿದ್ದಾರೆ. ಸುಧೀರ್ ಅತ್ತಾವರ್ ಅವರ ಅಧ್ಯಯನದ ಶ್ರಮ ನಿಜಕ್ಕೂ ಮೆಚ್ಚುವಂಥದ್ದು. ಅದೇ ರೀತಿ ನಮ್ಮಿಂದಲೂ ಕೆಲಸ ತೆಗೆದಿದ್ದಾರೆ. ನಾನು ಚಿತ್ರರಂಗಕ್ಕೆ ಬಂದು 32 ವರ್ಷವಾಯ್ತು. ನನ್ನ ಇಷ್ಟು ವರ್ಷಗಳ ಅನುಭವದಲ್ಲಿ ಮೊದಲ ಬಾರಿಗೆ ಇಷ್ಟು ಹೆಚ್ಚು ನೈಟ್ ಶೂಟ್ನಲ್ಲಿ ಭಾಗಿಯಾಗಿದ್ದೇನೆ. ಅದರಲ್ಲೂ ಒಂದು ದಿನವಂತೂ ರಾತ್ರಿ 8 ಗಂಟೆಯಿಂದ ಮರುದಿನ11ಗಂಟೆಯ ತನಕ ಚಿತ್ರೀಕರಣ ನಡೆಸಿದ್ದಾರೆ! ಇಲ್ಲಿ ನನ್ನ ಪಾತ್ರ ಎರಡು ಶೇಡ್ ನಲ್ಲಿ ಬರುತ್ತೆ. ದತ್ತು ಮಗನಾದರೂ ಮಗನ ಮೇಲೆ ಅಪಾರ ಪ್ರೀತಿ ಇರುವ ತಾಯಿಯ ಪಾತ್ರ ನನ್ನದು. ದೈವತ್ವದ ಗುಣ ಇದ್ದಂಥ ತನಿಯ. ಕಾಂತಾರೆ ಎಂದು ಕೂಡ. ಕರೆಯಿತ್ತಾರೆ. ಮಂಗಳೂರು ಕರಾವಳಿ ಪ್ರಾಂತ್ಯದ ಕಲಾವಿದರು ಕೂಡ ನಟಿಸಿದ್ದಾರೆ. ದೈವದ ಕತೆ ಇದ್ದ ಕಾಂತಾರ ಸಿನಿಮಾ ಮಾತ್ರ ಗೆದ್ದಿರುವುದಲ್ಲ; ತನ್ನ ಜೊತೆಗೆ ಇಡೀ ಕನ್ನಡ ಚಿತ್ರರಂಗವನ್ನು ಗೆಲ್ಲಿಸಿದೆ. ಅದೇ ರೀತಿ ನಿಜವಾದ ದೈವದ ಕತೆ ಇರುವ ಈ ಸಿನಿಮಾ ಕೂಡ ಕನ್ನಡ ಚಿತ್ರರಂಗವನ್ನು ಮತ್ತಷ್ಟು ಎತ್ತರಕ್ಕೆ ಒಯ್ಯುವ ನಿರೀಕ್ಷೆ ಇದೆ ಎಂದಿದ್ದಾರೆ ಶ್ರುತಿ.