ನಿರ್ದೇಶಕ ಸುಧೀರ್ ಅತ್ತಾವರ ನಿರ್ದೇಶನದಲ್ಲಿ ಚಿತ್ರೀಕರಣವಾಗಿರುವ ಸಿನಿಮಾ ಕರಿ ಹೈದ ಕರಿ ಅಜ್ಜ. ಇದೀಗ ಚಿತ್ರೀಕರಣ ಪೂರ್ತಿಯಾಗಿದೆ. ಆದರೆ ಶೂಟಿಂಗ್ ವೇಳೆ ಸ್ಥಳೀಯ ಸಂಘಟನೆಯ ಹೆಸರು ಹೇಳಿಕೊಂಡು ಬಂದ ತಂಡವೊಂದು ಚಿತ್ರೀಕರಣ ತಡೆದು ನಿಲ್ಲಿಸಿತ್ತು ಎಂದು ಅಂತಾರಾಷ್ಟ್ರೀಯ ನೃತ್ಯಪಟು ಸಂದೀಪ್ ಸೋಪರ್ಕರ್ ಹೇಳಿದ್ದಾರೆ.
ಮಂಗಳೂರು ಹೊರವಲಯದ ಸೋಮೇಶ್ವರದಲ್ಲಿ ಚಿತ್ರೀಕರಣ ನಡೆದಿತ್ತು. ಸಂದೀಪ್ ಸೋಪರ್ಕರ್ ಗುಳಿಗನ ಪಾತ್ರ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಹಿಂದೂ ಸಂಘಟನೆ ಹೆಸರು ಹೇಳಿ ಬಂದ ಯುವಕರ ತಂಡ ಚಿತ್ರೀಕರಣ ನಡೆಸದಂತೆ ಬೆದರಿಸಿದೆ. ಈ ಬೆದರಿಕೆ ಯಾವ ಮಟ್ಟಕ್ಕೆ ಇತ್ತೆಂದರೆ ಕಲಾವಿದರು ಕೂಡ ಹೆದರಿಕೊಂಡರು. ಬೌನ್ಸರ್ಸ್ ಇಟ್ಟುಕೊಂಡು ಶೂಟ್ ಮಾಡೋಣ ಎಂದು ಯೋಜನೆ ಹಾಕಿದಾಗ, ಬೌನ್ಸರ್ಸ್ ಕೂಡ ಭಯಪಟ್ಟು ಹೋದರು. ಕಾರಣ, ಬಂದವರು ಕೈ ಮಾಡುವುದಾಗಿ ಬೆದರಿಸಿದ್ದರು. ಕಲಾವಿದರು ಕೋಣೆ ಸೇರಿಕೊಂಡರು. ಎರಡು ದಿನಗಳಕಾಲ ಚಿತ್ರೀಕರಣ ನಿಂತಿತು. ಮತ್ತೆ ಚಲಾವಣೆಯಾಗಿದ್ದು ಮಾತ್ರ, ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಪೊಲೀಸ್ ಭದ್ರತೆ ಒದಗಿಸಿದಾಗ.
ಧಾರ್ಮಿಕ ಗುತ್ತಿಗೆದಾರರ ಕಾಟ!
ಸಂದೀಪ್ ಸೊಪರ್ಕರ್ ಅವರು ಉತ್ತರ ಭಾರತೀಯ ಕಲಾವಿದ. ಅವರ ಅಜ್ಜಿ ಮೂಲತಃ ಮಂಗಳೂರಿನವರು. ಆದರೆ ಹುಟ್ಟಿ ಬೆಳೆದಿದ್ದು ಭೋಪಾಲ್ ನಲ್ಲಿ . ಹಾಗಾಗಿ ತುಳು, ಕನ್ನಡ ಗೊತ್ತಿಲ್ಲ. ಕರ್ನಾಟಕದ ಸಂಸ್ಕೃತಿ ಬಗ್ಗೆ ಅರಿವಿಲ್ಲ. ನೃತ್ಯ ಸಂಸ್ಕೃತಿ ಚೆನ್ನಾಗಿ ಗೊತ್ತು. ಪಾಶ್ಚಾತ್ಯ ನೃತ್ಯದ ಜೊತೆಗೆ ಶಿವತಾಂಡವವನ್ನೂ ನಿರ್ವಹಿಸಿ ಹೆಸರು ಮಾಡಿದವರು. ಕಲಾವಿದರಿಗೆ ವಿದೇಶದಲ್ಲಿ ಸಿಗುವ ಮಹಾ ಮರ್ಯಾದೆಯನ್ನು ಅರಿತವರು. ಬ್ರಿಟನ್ ರಾಣಿ ಎಲಿಜಬೆತ್, ರಾಜಕುಮಾರ ಚಾರ್ಲ್ಸ್ ಕೈಗಳಿಂದ ಪ್ರಶಂಸಾ ಪತ್ರ ಪಡೆದವರು. ಆದರೆ ಇವರ ಮುಂದೆ ಮರ್ಯಾದೆ ರಹಿತ ವರ್ತನೆ ಏನು ಎಂದು ತೋರಿಸುವಲ್ಲಿ ಸೋಮೇಶ್ವರದ ಸ್ಥಳೀಯರು ಸಂಘಟನೆಯೊಂದು ಯಶಸ್ವಿಯಾದರು.
ಸಂದೀಪ್ ಸೊಪರ್ಕರ್ ಅವರಿಗೆ ಇದು ಯಾವ ಸಂಘಟನೆ ಎನ್ನುವ ಮಾಹಿತಿ ಇರಲಿಲ್ಲ. ಆದರೆ ದೇಶದೊಳಗೆ ಇಂಥ ಅರಾಜಕತೆ ಇದೆ ಎನ್ನುವುದನ್ನು ಮೊದಲ ಬಾರಿ ಅವರಿಗೆ ಅರ್ಥವಾಗುವಂತಾಗಿತ್ತು. ಯಾಕೆಂದರೆ ಇಲ್ಲಿ ದೇವರ ಯಾವುದೇ ಅಶ್ಲೀಲ ನೃತ್ಯ ಪ್ರದರ್ಶನಗಳೇನೂ ಇರಲಿಲ್ಲ. ಚಿತ್ರ ತಂಡ ಕೂಡ ತಡೆಯಲು ಬಂದವರ ಬಗ್ಗೆ ಮಾಹಿತಿ ನೀಡಲು ಬಯಸದೇ ಹೋದಾಗ ಉಳ್ಳಾಲ ಪೊಲೀಸರನ್ನು ವಿಚಾರಿಸಲಾಯಿತು. ಸಿನಿಕನ್ನಡಕ್ಕೆ ಸಿಕ್ಕ ಮಾಹಿತಿಯ ಪ್ರಕಾರ, ಬಂದಿದ್ದ ಸ್ಥಳೀಯರಲ್ಲಿ ವಿಶ್ವ ಹಿಂದೂ ಪರಿಷತ್ ನವರೂ ಇದ್ದರು. “ಗುಳಿಗ ಮತ್ತು ಕೊರಗಜ್ಜನ ವೇಷಭೂಷಣಗಳು ಹಾಗೆ ಇರುವುದಿಲ್ಲ. ಮಾತ್ರವಲ್ಲ ರುದ್ರಪಾದೆ(ರುದ್ರ ಬಂಡೆ)ಯ ಮೇಲೆ ಯಾರೂ ಏರುವಂತಿಲ್ಲ” ಎನ್ನುವ ಎರಡು ಅಸಮಾಧಾನಗಳಿಂದಾಗಿ ಅವರು ಚಿತ್ರೀಕರಣಕ್ಕೆ ತಡೆ ಮಾಡಿದ್ದರು. ಇವೆರಡಕ್ಕೂ ನಿರ್ದೇಶಕರು ಸಮಜಾಯಿಷಿ ನೀಡಿದ ಬಳಿಕ ಚಿತ್ರೀಕರಣ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.