ಹಿರಿಯ ನಟ ಲಕ್ಷ್ಮಣ್ (74) ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ಮುಂಜಾನೆ ಎದೆ ನೋವಿನಿಂದ ಬಳಲುತ್ತಿದ್ದ ಲಕ್ಷ್ಮಣ್ ಅವರನ್ನು ನಾಗರಬಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ಖಳನಟನಾಗಿರುವ ಲಕ್ಷ್ಮಣ್ ಇದುವರೆಗೆ ಸುಮಾರು 250ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಹುಟ್ಟಿದ್ದು ಬೆಂಗಳೂರಿನಲ್ಲೇ. ಮಾತೃಭಾಷೆ ಮರಾಠಿ. ತಂದೆ ಸೈನ್ಯಲ್ಲಿದ್ದರು. ಎಂಟು ಜನ ಮಕ್ಕಳಲ್ಲಿ ಕಿರಿಯವರು ಲಕ್ಷ್ಮಣ್. ಅಣ್ಣ ಪೊಲೀಸ್ ಅಧಿಕಾರಿಯಾಗಿದ್ದರು. ಓದಿದ್ದು ಎಸ್ಎಸ್ಎಲ್ಸಿ ಮಾತ್ರ. ಆರಂಭದಲ್ಲಿ ಕಾರ್ಖಾನೆಯಲ್ಲಿ ವೃತ್ತಿಯಲ್ಲಿದ್ದರು. ಬಳಿಕ ಸೈನ್ಯಕ್ಕೆ ಆಯ್ಕೆಯಾಗಿದ್ದರು. ಆದರೆ ತಾಯಿ ಒಪ್ಪದ ಕಾರಣ, ಊರಲ್ಲೇ ಬೇರೆ ಕೆಲಸ ಮಾಡಲು ಮುಂದಾದರು.
1971ರಿಂದ ಮೆಕಾನಿಕ್ ಆಗಿ ವೃತ್ತಿಯಲ್ಲಿದ್ದರು. ಆಗಿನ ಕಾಲದಲ್ಲೇ ಜಿಮ್ ಮಾಡಿ ಬಾಡಿ ಮೆಯ್ನ್ಟೇನ್ ಮಾಡುತ್ತಿದ್ದರು. ಫ್ಯಾಕ್ಟರಿಯಲ್ಲಿ ಕುಸ್ತಿಪಟುವಾಗಿದ್ದರು. ಬಿಎಲ್ ಫ್ಯಾಕ್ಟರಿಯಲ್ಲಿ ನಾಟಕ ಮಾಡುವಾಗ ಒಂದು ಪಾತ್ರ ಮಾಡಿದ್ದರು. ಮಾಡಿದ ಮೊದಲ ಪಾತ್ರಕ್ಕೇನೇ ಶ್ರೇಷ್ಠ ನಟ ಪ್ರಶಸ್ತಿಯೂ ದೊರಕಿತ್ತು. ಬಿಡುವಾದಾಗಲೆಲ್ಲ ರವೀಂದ್ರ ಕಲಾಕ್ಷೇತ್ರಕ್ಕೆ ನಾಟಕ ನೋಡಲು ಹೋಗುತ್ತಿದ್ದರು. ಲಕ್ಷ್ಮಣ್ ಮಂಜುಳಾ ನಾಯಕಿಯಾಗಿದ್ದ ‘ಉಷಾ ಸ್ವಯಂವರ’ ಎನ್ನುವ ಚಿತ್ರದಲ್ಲಿ ನಾಯಕರಾಗಿ ಎಂಟ್ರಿಯಾಗಿದ್ದರು. ಆದರೆ ಸಿನಿಮಾ ಒಂದು ವರ್ಷ ತಡವಾಗಿ ತೆರೆಗೆ ಬಂದಿತ್ತು. ‘ಅಂತ’ ಚಿತ್ರದಲ್ಲಿ ಅಂಬರೀಷ್ ಜೊತೆಗೆ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಲಕ್ಷ್ಮಣ್ ಹಿರಿಯ ನಿರ್ದೇಶಕ ಡಿ ರಾಜೇಂದ್ರಬಾಬು ಅವರಿಗೆ ಫೇವರಿಟ್ ನಟರಾಗಿದ್ದರು.
ಕರುಳಿನ ಕೂಗು ಚಿತ್ರದ ಪಾತ್ರವನ್ನು ಯಾರಿಂದಲೂ ಮರೆಯಲಾಗದು. ರವಿಚಂದ್ರನ್ ನಟಿಸಿ, ನಿರ್ದೇಶಿಸಿದ ಮಲ್ಲ, ವಿಷ್ಣುವರ್ಧನ್ ಜೊತೆಗೆ ನಟಿಸಿದ ಸೂರ್ಯವಂಶ ಚಿತ್ರಗಳಲ್ಲಿ ಜನಪ್ರಿಯ ಪಾತ್ರಗಳನ್ನು ನಿಭಾಯಿಸಿದ್ದಾರೆ. ಚಕ್ರವ್ಯೂಹ ಸಿನಿಮಾದ ಮೂಲಕ ರವಿಚಂದ್ರನ್ ಜೊತೆಗೆ ಸ್ನೇಹವಾಗಿತ್ತು. ಆ ಸ್ನೇಹ ಕೊನೆಯವರೆಗೂ ಇತ್ತು. ಕಳೆದ ವರ್ಷ ಬಿಡುಗಡೆಯಾದ ರವಿಬೋಪಣ್ಣ ಚಿತ್ರದಲ್ಲಿ ರವಿಚಂದ್ರನ್ ಸ್ನೇಹಿತನ ಪಾತ್ರವನ್ನು ನಿಭಾಯಿಸಿದ್ದರು.
ಲಕ್ಷ್ಮಣ್ ಸೋದರ ಮಾವನ ಮಗಳನ್ನೇ ಮದುವೆಯಾಗಿದ್ದರು. ಪತ್ನಿ ಮತ್ತು ಮೂವರು ಮಕ್ಕಳಿರುವ ಕುಟುಂಬ. ಮಗ ಭರತ್ ನೌಕಾದಳದಲ್ಲಿ ಮೇಜರ್ ಆಗಿದ್ದಾರೆ. ಮಗಳ ಪತಿ ಕೂಡ ಮೇಜರ್. ಲಕ್ಷ್ಮಣ್ ನಿಧನದ ವಿಚಾರ ತಿಳಿದು ದೆಹಲಿಯಿಂದ ಹಿರಿಯ ಪುತ್ರ ಭರತ್ ಹೊರಟಿದ್ದಾರೆ. ಪುತ್ರಿ ಮಮತಾ ವಿವಾಹಿತರಾಗಿ ಪೂನಾದಲ್ಲಿನೆಲೆಸಿದ್ದಾರೆ. ಲಕ್ಷ್ಮಣ್ ಪತ್ನಿ ಕೂಡ ಪುತ್ರಿಯ ಜೊತೆಗಿದ್ದಾರೆ. ಇವರೆಲ್ಲರ ಆಗಮನದ ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಗುವುದು. ಎಂದು ಕಿರಿಯ ಪುತ್ರ ರಾಘವೇಂದ್ರ ಸಿನಿಕನ್ನಡಕ್ಕೆ ಮಾಹಿತಿ ನೀಡಿದ್ದಾರೆ. ಇವರು ಬೆಂಗಳೂರಿನ ಮಾನ್ಯತಾ ಡೆವಲಪರ್ಸ್ ನಲ್ಲಿ ವೃತ್ತಿನಿರತರು.