
ಅನುರಾಧ ಭಟ್ ಕನ್ನಡ ಚಿತ್ರರಂಗದ ಶ್ರೇಷ್ಠ ಗಾಯಕಿಯಾಗಿ ಹೆಸರು ಪಡೆದವರು. ಸಿನಿಮಾ ಗೀತೆಗಳಲ್ಲಿ ನವ ಭಾವಗಳಿಗೂ ಜೀವ ತುಂಬಬಲ್ಲ ಈ ಪ್ರತಿಭಾವಂತೆ ಇದೀಗ ಭಕ್ತಿರಸದಿಂದ ಮನಸೂರೆ ಮಾಡುತ್ತಿದ್ದಾರೆ. ಇದಕ್ಕೆ ಕಾರಣವಾಗಿದ್ದು ಶಂಕರ ಹೆಸರಲ್ಲಿ ಬಿಡುಗಡೆಗೊಂಡ ಭಕ್ತಿಗೀತೆ.
ಶಿವರಾತ್ರಿಯಂದು ಶಿವನೊಲುಮೆ ಪಡೆಯಲು ಜಾಗರಣೆ ಮಾಡುತ್ತಾರೆ. ಇಂಥದೊಂದು ಜಾಗರಣೆಗೆ ಪಕ್ಕಾ ಹೊಂದಿಕೊಳ್ಳುವ ಹಾಡನ್ನು ಗಾಯಕಿ ಅನುರಾಧಾ ಭಟ್ ಹೊರತಂದಿದ್ದಾರೆ. ಶಂಕರ ಎನ್ನುವ ಈ ವಿಡಿಯೋ ಗೀತೆಯಲ್ಲಿ ಎಲ್ಲ ಭಕ್ತಿರಸಗಳೂ ತುಂಬಿಕೊಂಡಿವೆ. ಅನುರಾಧ ಭಟ್ ಯೂಟ್ಯೂಬ್ ವಾಹಿನಿಯಲ್ಲಿ ಲಭ್ಯವಿದೆ.
ಮಹಾಶಿವನ ಶ್ಲೋಕಕ್ಕೆ ಸಂಗೀತ ನೀಡಿ, ಆಕರ್ಷಕ ಹಾಡಾಗಿ ಬದಲಾಯಿಸಿದ ಕೀರ್ತಿ ವೀಣಾ ವಾರುಣಿಯವರಿಗೆ ಸಲ್ಲುತ್ತದೆ. ಇವರು ಸಂಗೀತ ಸಂಯೋಜಿಸಿರುವುದು ಮಾತ್ರವಲ್ಲದೆ,ಖುದ್ದಾಗಿ ವೀಣೆಯನ್ನೂ ನುಡಿಸಿದ್ದಾರೆ. ವಿಡಿಯೋ ಆಲ್ಬಮ್ ನಲ್ಲಿ ವೀಣಾಪಾಣಿಯಾಗಿಯೂ ಕಾಣಿಸಿದ್ದಾರೆ.
ಸಿನಿಕನ್ನಡ.ಕಾಮ್ ಜತೆ ಈ ಹಾಡಿನ ಬಗ್ಗೆ ಮಾತನಾಡಿದ ಅನುರಾಧ ಭಟ್, ಇದು ಹಲವು ಮಂದಿಯ ಅವಿರತ ಶ್ರಮದ ಫಲ ಎಂದಿದ್ದಾರೆ. ಒಟ್ಟು ತಂಡದ ಪ್ರಯತ್ನದಿಂದಾಗಿ ಇಷ್ಟು ಚೆನ್ನಾಗಿ ಮೂಡಿ ಬರಲು ಸಾಧ್ಯವಾಗಿದೆ ಎಂದಿದ್ದಾರೆ.
ಶಿವನ ಶ್ಲೋಕವನ್ನೇ ತಮ್ಮ ಕಂಠದ ಮೂಲಕ ಸುಶ್ರಾವ್ಯ ಗೀತೆಯಾಗಿ ಅನುರಾಧಾ ಭಟ್ ಬದಲಾಯಿಸಿದ್ದಾರೆ. ಶಂಕರ ಶಿವಶಂಕರ ಶಿವ ಶಂಕರಾ ಶಂಭೋ ಎನ್ನುವ ಪಲ್ಲವಿಯಿರುವ ಈ ಶಿವಭಜನೆ ಆಲಿಸುವಾಗ ಭಕ್ತಿಯಿಂದ ರೋಮಾಂಚನ ಉಂಟಾಗುತ್ತದೆ. ಹಾಡಿನ ಕೊನೆಯಲ್ಲಂತೂ ಅನುರಾಧಾ ಕೊನೆಯಲ್ಲಿ ಅಮೋಘವಾಗಿ ರಾಗಾಲಾಪನೆ ಮಾಡಿದ್ದಾರೆ. ಒಟ್ಟು ಆಲ್ಬಮ್ ನಲ್ಲಿ ಅನುರಾಧಾ ಮತ್ತು ತಂಡದ ಅಭಿನಯವನ್ನು ಹೃದ್ಯವಾಗಿಸುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ.
ಈ ಆಲ್ಬಮ್ ನಿರ್ದೇಶಿಸಿ, ಛಾಯಾಗ್ರಹಣ ಮತ್ತು ಸಂಕಲನದ ಮೇಲುಸ್ತುವಾರಿ ವಹಿಸಿರುವ ಗಿರಿಧರ್ ದಿವಾನ್ ಇದೇ ಕಾರಣಕ್ಕೆ ಪ್ರಶಂಸಾರ್ಹರಾಗುತ್ತಾರೆ.