ಸೂಚನೆಯೇ ನೀಡದೆ ಕೇಂದ್ರ ಸರ್ಕಾರವು ಘೋಷಿಸಿದ ಲಾಕ್‌ಡೌನ್ ಏನೆಲ್ಲ ಪರಿಣಾಮ ಮಾಡಿತ್ತು? ಮುಖ್ಯವಾಗಿ ವಲಸೆ ಕಾರ್ಮಿಕರಿಗೆ ಎದುರಾದ ಕಷ್ಟಗಳೇನು ಎನ್ನುವುದನ್ನು ಪರದೆಗೆ ಇಳಿಸಿರುವ ಚಿತ್ರವೇ ಫೊಟೋ. ಈ ವಾರ ತೆರೆಕಾಣುತ್ತಿರುವ ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪ್ರಕಾಶ್ ರಾಜ್ ಹಾಗೂ ನಿರ್ದೇಶಕ ಉತ್ಸವ ಉತ್ಸಾಹದಿಂದ ಮಾತು ಹಂಚಿಕೊಂಡಿದ್ದಾರೆ.
ಮುಖ್ಯವಾಗಿ ಫೊಟೊ ಸಿನಿಮಾ ಎಲ್ಲಾ ಮಲ್ಟಿಪ್ಲೆಕ್ಸ್ ನಲ್ಲಿ ಬಿಡುಗಡೆಯಾಗಲಿದೆ. ಸಿಂಗಲ್ ಥಿಯೇಟರ್ ನಲ್ಲಿ ಇರಲ್ಲ. ಆದರೆ ಸಾಮಾನ್ಯವರ್ಗಕ್ಕೂ ಪ್ರವೇಶ ಸುಲಭವಾಗುವ ಮಾದರಿಯಲ್ಲಿ ಟಿಕೆಟ್ ದರವನ್ನು 150ಕ್ಕೆ ಸೀಮಿತಗೊಳಿಸಿದ್ದೇವೆ ಎಂದಿದ್ದಾರೆ ಪ್ರಕಾಶ್ ರಾಜ್. ಮಾತ್ರವಲ್ಲ ಮಾರ್ಚ್ 22ರ ನಂತರ ಉತ್ತರ ಕರ್ನಾಟಕದ ಸಿಂಗಲ್ ಥಿಯೇಟರ್ ನಲ್ಲಿಯೂ ಚಿತ್ರ ಬಿಡುಗಡೆಯಾಗಲಿದೆ.
ಹೊಸಬರ ತಂಡದ ಫೊಟೊ ಚಿತ್ರಕ್ಕೆ ಪ್ರಕಾಶ್ ರಾಜ್ ಎಂಟ್ರಿಯಾಗಿರುವುದು, ಎಲ್ಲರಿಗೂ ಹೊಸ ಹುರುಪನ್ನು ತಂದುಕೊಟ್ಟಿದೆ. ” ಇದೊಂದು ಒಳ್ಳೆಯ ಕಂಟೆಂಟ್ ಇರುವ ಸಿನಿಮಾ. ಇಂಥ ಚಿತ್ರಕ್ಕೆ ಸಾಥ್ ನೀಡುವ ಮನಸ್ಥಿತಿ ನನಗೆ ಇದೆ ಎಂದು ಚಿತ್ರತಂಡಕ್ಕೆ ಅನಿಸಿದೆಯಲ್ಲ? ಅಂಥದೊಂದು ಇಮೇಜ್ ಗಳಿಸಿದ್ದೇನೆ ಎನ್ನುವುದಕ್ಕೆ ನನಗೆ
ಹೆಮ್ಮೆ ಇದೆ ಎಂದರು ಪ್ರಕಾಶ್ ರಾಜ್.
“ಸಿನಿಮಾ ಮುಗಿದಾಗ ನೀಡುವ ಅನುಭವ ವಿವರಿಸಲು ಪದಗಳಿಲ್ಲ. ಚಿತ್ರ ನೋಡಿ ಮುಗಿಸಿದ ಸುಮಾರು ಹೊತ್ತು ನನಗೆ ಮಾತೇ ಬಂದಿರಲಿಲ್ಲ” ಎಂದು ತಮ್ಮ ಅನುಭವ ಹೇಳಿದ್ದಾರೆ ಪ್ರಕಾಶ್ ರಾಜ್. “ನನ್ನ ನಿಲುವುಗಳಿಂದಾಗಿ ಚಿತ್ರದ ಬಗ್ಗೆ ರಾಜಕೀಯ ಕಲ್ಪನೆ ಮೂಡಬಹುದು. ಆದರೆ ಈ ಸಿನಿಮಾ ಶುರುವಾಗಿದ್ದು ನನ್ನಿಂದ ಅಲ್ಲ.
ಹಾಗಾಗಿ ಇಲ್ಲಿ ರಾಜಕೀಯ ದುರುದ್ದೇಶಗಳಿಲ್ಲ. ಮಾತ್ರವಲ್ಲ, ಇದು ರಾಜಕೀಯ ಉದ್ದೇಶದಿಂದ ಮಾಡಿದ ಸಿನಿಮಾ ಅಲ್ಲ ” ಎಂದು ಪ್ರಕಾಶ್ ರಾಜ್ ಸ್ಪಷ್ಟವಾಗಿ ಹೇಳಿದ್ದಾರೆ.
ಫೊಟೊ ಚಿತ್ರಕ್ಕೆ ಸ್ಫೂರ್ತಿಯಾದ ಘಟನೆ ನಡೆದ ಹಳ್ಳಿಯಲ್ಲಿ, ಅಲ್ಲಿನ ಮಂದಿಯೊಂದಿಗೆ ಸೇರಿ, ಇಡೀ ಚಿತ್ರ
ತಂಡದ ಜೊತೆ ಸಿನಿಮಾ ನೋಡಬೇಕು ಎನ್ನುವ ಯೋಜನೆಯೂ ಪ್ರಕಾಶ್ ರಾಜ್ ಗೆ ಇದೆ.
ನಿರ್ದೇಶಕ ಉತ್ಸವ್ ಮಾತನಾಡಿ, ಫೋಟೋ ಸಿನಿಮಾ ರಿಲೀಸ್ ಮಾಡುವುದು ಹೇಗೆ ಎಂಬ ಪ್ರಶ್ನೆ ಇತ್ತು. ಪ್ರಕಾಶ್ ಸರ್ ಬಂದಿದ್ದು ನಮಗೆ ದೊಡ್ಡ ಶಕ್ತಿಯಂತಾಗಿದೆ ಎಂದಿದ್ದಾರೆ.
ಮಹಾದೇವ ಹಡಪದ್, ಜಹಾಂಗೀರ್, ಸಂಧ್ಯಾ ಅರಕೆರೆ, ಮತ್ತು ವೀರೇಶ್ ಗೊನ್ವಾರ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ದಿನೇಶ್ ದಿವಾಕರನ್ ಛಾಯಾಗ್ರಹಣ, ರವಿ ಹಿರೇಮಠ್ ಶಬ್ದ ವಿನ್ಯಾಸ, ಶಿವರಾಜ್ ಮೆಹೂ ಸಂಕಲನ ಮಾಡಿದ್ದಾರೆ.