ಚಿತ್ರ: o2
ನಿರ್ದೇಶನ: ರಾಘವ ನಾಯಕ್, ಪ್ರಶಾಂತ್
ನಿರ್ಮಾಣ: PRK
ತಾರಾಗಣ: ಪ್ರವೀಣ್ ತೇಜ್, ಆಶಿಕಾ ರಂಗನಾಥ್
ಹೃದಯ ಬಡಿತ ನಿಂತ ಬಳಿಕ ಮನುಷ್ಯನನ್ನು ಮತ್ತೆ ಬದುಕಿಸಲು ಸಾಧ್ಯವೇ? ಈ ಪ್ರಯೋಗದಲ್ಲಿ ತೊಡಗಿಕೊಂಡ ಯುವ ವೈದ್ಯೆಯ ವೈಯಕ್ತಿಕ ಬದುಕಿನಲ್ಲಿ ನಡೆಯುವ ವಿಚಿತ್ರ ಘಟನೆ ಏನು? ಇದೇ ಈ ಚಿತ್ರದ ಜೀವಾಳ.
ಡಾ.ಶ್ರದ್ಧಾ ಪ್ರತಿಭಾನ್ವಿತ ವೈದ್ಯೆ. ಬಾಲ್ಯದಲ್ಲೇ ರಾಷ್ಟ್ರಪತಿಗಳಿಂದ ಪದಕ ಪಡೆದವಳು. ಈಕೆ ಹೃದಯ ಬಡಿತ ನಿಂತ ಬಳಿಕ ಮೆದುಳಿಗೆ ಆಕ್ಸಿಜನ್ ನೀಡಿ ಸಕ್ರಿಯಗೊಳಿಸಿ ಮತ್ತೆ ಜೀವ ತುಂಬುವ ಪ್ರಯೋಗ ನಡೆಸುತ್ತಾರೆ. ವಿದೇಶಗಳಲ್ಲಿ ಇಂಥ ಪ್ರಯೋಗ ನಡೆಯುತ್ತಿರುವ ಬಗ್ಗೆ ಚಿತ್ರದೊಳಗೆಯೇ ನಿರ್ದೇಶಕರು ಮಾಹಿತಿ ನೀಡುತ್ತಾರೆ. ಕಥಾ ನಾಯಕಿ ಶ್ರದ್ಧಾ ಕೂಡ ಮೊಲಗಳ ಮೇಲೆ ಪ್ರಯೋಗ ನಡೆಸಿ ಯಶಸ್ವಿಯಾಗುತ್ತಾರೆ. ಮನುಷ್ಯರ ಮೇಲೆ ಪ್ರಯೋಗ ನಡೆಸುವ ಹಂತಕ್ಕೆ ಬಂದಾಗ ವಿದೇಶದಿಂದ ಬರುವ ಯುವ ವೈದ್ಯ ದೇವ್ ಜತೆಯಾಗುತ್ತಾರೆ. ಇದೇ ಸಂದರ್ಭದಲ್ಲಿ ಓಶೋ ಹೆಸರಿನ RJ ಕೂಡ ಡಾಕ್ಟರ್ ಶ್ರದ್ಧಾಗೆ ಆಪ್ತರಾಗುತ್ತಾರೆ.
ಮನುಷ್ಯ ಅದೆಷ್ಟೇ ದೊಡ್ಡ ಪ್ರಯೋಗ ನಡೆಸಿದರೂ ಅಲ್ಲೊಂದು ಕಾಣದ ಕೈ ಆಟ ಇದ್ದೇ ಇರುತ್ತದೆ. ಇದನ್ನು ವಿಜ್ಞಾನ ಎನ್ನಿ, ಅಥವಾ ಅತೀಂದ್ರಿಯ ಶಕ್ತಿ ಎಂದೇ ಹೇಳಿ. ಈ ಕತೆಯಲ್ಲೂ ಅಂಥದೇ ಒಂದು ಶಕ್ತಿ ಮನುಷ್ಯರನ್ನೇ ಇಟ್ಟುಕೊಂಡು ಪ್ರಯೋಗ ನಡೆಸುತ್ತದೆ. ಹಾಗಂತ ಇಲ್ಲಿ ಮಂತ್ರವಾದ, ಸ್ವಾಮೀಜಿ ಮೊದಲಾದವುಗಳ ಎಂಟ್ರಿ ಆಗುವುದಿಲ್ಲ. ಆ ಶಕ್ತಿ ಏನು ಎನ್ನುವ ಕುತೂಹಲವನ್ನು ಉಳಿಸಿಕೊಂಡೇ ಚಿತ್ರ ಕೊನೆಯಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿ ಪ್ರಯೋಗ ಮಾತ್ರವಲ್ಲ ಬೊಗಸೆ ಪ್ರೀತಿಯೂ ಇದೆ.
ಆರಂಭದ ಹತ್ತು ನಿಮಿಷ ಚಿತ್ರ ನಮ್ಮೊಳಗೆ ಸೇರಲು ತಡಕಾಡುತ್ತದೆ. ಆನಂತರ ನಾವೇ ಚಿತ್ರದೊಳಗೆ ಸೇರುವಂತೆ ಕಾಡುತ್ತದೆ. ಪ್ರಯೋಗ ನಡೆಸುವ ಯುವ ವೈದ್ಯೆಯಾಗಿ ಆಶಿಕಾ ಆಪ್ತವಾಗುತ್ತಾರೆ. ಚಿತ್ರ ಮುಗಿಯುವ ಹೊತ್ತಿಗೆ ಆಶಿಕಾ ಒಬ್ಬ ಡಾಕ್ಟರ್ ಆಗಿಯೇ ಪ್ರೇಕ್ಷಕರ ಮನದೊಳಗೆ ಪ್ರತಿಷ್ಠಾಪಿಸಲ್ಪಡುತ್ತಾರೆ. ವೈದ್ಯ ದೇವ್ ಆಗಿ ಪ್ರವೀಣ್ ತೇಜ್ ಪಾತ್ರಕ್ಕೆ ಹೆಚ್ಚು ಗಮನ ಸೆಳೆಯುವ ಸಂದರ್ಭಗಳಿಲ್ಲ. ಆದರೆ ಪಾತ್ರಕ್ಕೆ ತಕ್ಕಂತೆ ನಟಿಸಿ ಮನಗೆಲ್ಲುತ್ತಾರೆ. RJ ಓಶೋವಾಗಿ ನಿರ್ದೇಶಕರಲ್ಲೋರ್ವರಾದ ರಾಘವ ನಾಯಕ್ ನಟಿಸಿದ್ದಾರೆ. ಇವರ ಕಂಠ RJಗೆ ಹೇಳಿ ಮಾಡಿಸಿದಂತಿದೆ. ನಟನೆಯಲ್ಲೂ ಸೈ ಎಂದು ತೋರಿಸಿದ್ದಾರೆ.
ಪೋಷಕ ಪಾತ್ರಗಳಲ್ಲಿ ಪ್ರಕಾಶ್ ಬೆಳವಾಡಿ ನಿರ್ವಹಿಸಿರುವ ಮೃತ್ಯುಂಜಯ್ ಎನ್ನುವ ವೈದ್ಯರ ಪಾತ್ರ ಚಿತ್ರಕ್ಕೆ ಹೊಸ ಹುರುಪು ತುಂಬುತ್ತದೆ. ಡಾ.ವೆಂಕಿ ಪಾತ್ರದಲ್ಲಿ ನವನಟ ಪುನೀತ್ ಅವರ ಕಾಮಿಡಿ ಟೈಮಿಂಗ್ಸ್ ವರ್ಕೌಟ್ ಆಗಿದೆ. RJ ಸಿರಿ ಕೂಡ ಒಬ್ಬ ವೈದ್ಯೆಯಾಗಿ ನಟಿಸಿದ್ದಾರೆ.
ಛಾಯಾಗ್ರಹಣ, ಸಂಕಲನ, ಹಿನ್ನೆಲೆ ಸಂಗೀತ ಎಲ್ಲವೂ ಮನಮೋಹಕ. ಕತೆಗೆ, ಸಂದರ್ಭಕ್ಕೆ ತಕ್ಕಂತೆ ದೃಶ್ಯಗಳನ್ನು ಕಟ್ಟಿಕೊಟ್ಟಿರುವ ರೀತಿ ಆಕರ್ಷಕವಾಗಿದೆ.
ಕೊನೆಯದಾಗಿ ಈ ಕತೆಯಲ್ಲಿ ಒಂದು ಆತ್ಮವಿದೆ. ಇಲ್ಲಿ ಕತೆ, ಚಿತ್ರ ಮಾಡಿದವರ ಆತ್ಮಕತೆಯ ಭಾಗವಿದೆ. ಕನ್ನಡದ ಪ್ರೇಕ್ಷಕರಿಗೆ ಈ ಕತೆಯಲ್ಲಿ ಸಿನಿಮಾ ಮಾಡಲು ಬಯಸಿದ ಪವರ್ ಸ್ಟಾರ್ ಅವರ ಆತ್ಮೀಯತೆ ಇದೆ.