ಚಿತ್ರ : ಗ್ರೇ ಗೇಮ್ಸ್
ನಿರ್ದೇಶನ : ಗಂಗಾಧರ ಸಾಲಿಮಠ
ನಿರ್ಮಾಣ : ಆನಂದ್ ಮುಗುದ್
ತಾರಾಗಣ : ವಿಜಯ ರಾಘವೇಂದ್ರ, ಭಾವನಾ ರಾವ್ ಮತ್ತಿತರರು.
ಆನ್ಲೈನ್ ವಿಡಿಯೋ ಗೇಮ್ ಸುತ್ತ ನಡೆಯುವ ಒಂದು ಸಸ್ಪೆನ್ಸ್ ಥ್ರಿಲ್ಲರ್ ಕತೆಯೇ ಗ್ರೇ ಗೇಮ್ಸ್. ನಿರ್ದೇಶಕರು ಚಿತ್ರವನ್ನು ಕೌಟುಂಬಿಕ ಸನ್ನಿವೇಶಗಳೊಂದಿಗೆ ಕಂಡು ನಿರೂಪಿಸಿದ್ದಾರೆ.
ಆನ್ಲೈನ್ ನಲ್ಲಿ ಗೇಮ್ಸ್ ಆಡಿ ಅದರಲ್ಲೇ ತಲ್ಲೀನನಾಗಿರುವ ಹುಡುಗ ಅಭಿ. ಈ ಹುಡುಗನಿಗೆ ಮಾನಸಿಕ ಅಸ್ವಸ್ಥತೆ ಇದೆ ಎಂದು ಮನಗಂಡು ತಂದೆ ತಾಯಿ ಮನೋವೈದ್ಯರ ಬಳಿಗೆ ಕರೆದೊಯ್ಯುತ್ತಾರೆ. ಯಾವ ವೈದ್ಯರ ಚಿಕಿತ್ಸೆಗೂ ದಕ್ಕದ ಅಭಿಗೆ ರಾಮ್ ಎನ್ನುವ ಡಾಕ್ಟರ್ ಆತ್ಮೀಯರಾಗುತ್ತಾರೆ. ಮನೋವೈದ್ಯ ರಾಮ್
ಅಭಿಯನ್ನು ಸುಧಾರಿಸುವ ಜತೆಗೆ ಆತನಿಗೆ ಸಂಬಂಧಿಸಿದ ಕೊಲೆ ಪ್ರಕರಣವೊಂದರ ಅಪರಾಧಿಯನ್ನು ಪತ್ತೆ ಮಾಡುತ್ತಾನೆ. ಈ ಪತ್ತೆಯ ರೀತಿಯೇ ಚಿತ್ರದ ಪ್ರಮುಖ ಸಾರ.
ಚಿತ್ರದ ಆರಂಭವೇ ಅಭಿ ಮತ್ತು ಜೂಲಿ ಎನ್ನುವ ಯುವ ಜೋಡಿಯ ಪರಿಚಯದೊಂದಿಗೆ ಶುರುವಾಗುತ್ತದೆ. ವಿಶೇಷ ಏನೆಂದರೆ ಈ ಪಾತ್ರಧಾರಿಗಳು ವಿಜಯರಾಘವೇಂದ್ರ ಮತ್ತು ಕಂಗನಾ ರನಾವತ್ ರನ್ನು ಹೋಲುತ್ತಾರೆ. ಅಭಿ ಪಾತ್ರಧಾರಿ ಜಯ್ ವಾಸ್ತವದಲ್ಲಿ ವಿಜಯರಾಘವೇಂದ್ರ ಅವರ ಸಹೋದರಿಯ ಪುತ್ರ. ಹೀಗಾಗಿ ಹೋಲಿಕೆ ಸಹಜ. ಈತ ತನ್ನ ನಟನೆಯ ಮೂಲಕ, ತಾನು ಕಲಾವಿದರ ಕುಟುಂಬದ ಕುಡಿ ಎಂದು ಸಾಬೀತು ಮಾಡಿದ್ದಾನೆ. ಜೂಲಿಯಾಗಿ ಇಶಿತಾ ಕೂಡ ಅಭಿನಯಕ್ಕೆ ಅವಕಾಶ ಇರುವ ಪಾತ್ರದಲ್ಲೇ ಕಾಣಿಸಿಕೊಂಡಿದ್ದಾರೆ.
ವಿಜಯರಾಘವೇಂದ್ರ ಚಿತ್ರದಿಂದ ಚಿತ್ರಕ್ಕೆ ಉತ್ತಮ ಆಯ್ಕೆಗಳನ್ನು ಮಾಡುತ್ತಿದ್ದಾರೆ. ಡಾ. ರಾಮ್ ಪಾತ್ರದ ಎರಡೂ ಶೇಡ್ ಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಸೈಬರ್ ಕ್ರೈಮ್ ವಿಭಾಗದ ಇನ್ ಚಾರ್ಜ್ ವಹಿಸುವ ಎಸಿಪಿ ಕಲ್ಪನಾ ಪಾತ್ರದಲ್ಲಿ ಭಾವನಾ ರಾವ್ ರೀ ಎಂಟ್ರಿ ನೀಡಿದ್ದಾರೆ. ಪೊಲೀಸ್ ಅಧಿಕಾರಿಯ ಠಾಕು ಠೀಕುತನವನ್ನು ತಮ್ಮ ದೇಹ ಭಾಷೆಯಲ್ಲೇ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಭಿಯ ತಂದೆ, ತಾಯಿಯಾಗಿ ರವಿಭಟ್ ಮತ್ತು ಅಪರ್ಣಾ ವಸ್ತಾರೆ ನಟಿಸಿದ್ದಾರೆ. ಅಪರೂಪದಲ್ಲಿ ಕಾಣಿಸಿಕೊಂಡಿರುವ ಅಪರ್ಣಾ ಕೂಡ ಕಥೆಗೆ ತಿರುವು ನೀಡುವಂಥ ಪಾತ್ರವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಆನ್ಲೈನ್ ಗೇಮ್ ಖಳ ರೆಡ್ ಹಂಟರ್ ಪಾತ್ರಧಾರಿ ಬೆನ್ಸನ್ ಚಾಕೊ ಎನ್ನುವ ಯುವ ಪ್ರತಿಭೆಯನ್ನು ಪರಿಚಯಿಸಲಾಗಿದೆ. ಸಿನಿಮಾ ಪರದೆಗೆ ಅಪರೂಪವೆನಿಸುವ ಹಾಗೂ ಹೊಸದಾಗಿ ಕಾಣಿಸುವ ಹಲವರನ್ನು ಆಯ್ಕೆ ಮಾಡಿರುವಙ ನಿರ್ದೇಶಕ ಗಂಗಾಧರ ಸಾಲಿಮಠ ಹೊಸ ಮಾದರಿ ಚಿತ್ರದೊಳಗೆ ನಮ್ಮನ್ನು ಕರೆದೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಥಾ ನಾಯಕ ರಾಮ್ ಫ್ಲ್ಯಾಶ್ ಬ್ಯಾಕ್ ಕತೆಯಲ್ಲಿ ಬಂದು ಹೋಗುವ ಶ್ರುತಿ ಪ್ರಕಾಶ್ ಅವರದ್ದು ಸಿನಿಮಾ ನಟಿಯ ಪಾತ್ರ. ಈ ಚಿತ್ರದ ಚಿತ್ರಕತೆ, ನಿರೂಪಣೆ, ಕಲರಿಂಗ್ ಎಲ್ಲವೂ ಹೊಸ ಮಾದರಿಯಲ್ಲಿದೆ. ಅಂತ್ಯದಲ್ಲಿ ಅಪರ್ಣಾ ನಿರ್ವಹಿಸಿರುವ ಪಾತ್ರಕ್ಕೆ ಫ್ಲ್ಯಾಶ್ ಬ್ಯಾಕ್ ವಿವರಣೆಯ ಅಗತ್ಯವಿರಲಿಲ್ಲ ಅನಿಸುತ್ತದೆ. ಉಳಿದಂತೆ ಗ್ರೇ ಗೇಮ್ಸ್ ಒಂದು ಆಕರ್ಷಕ ಆಟ.