ದಿವ್ಯಾ ಉರುಡುಗ ಈಗ ಲೇಡಿ ಸೂಪರ್ ಸ್ಟಾರ್!

ಬಿಗ್ ಬಾಸ್ ತನಕದ ದಿವ್ಯಾ ಉರುಡುಗ ಒಂದು ಲೆಕ್ಕ ಆದ್ರೆ, ಬಿಗ್ ಬಾಸ್ ಸ್ಪರ್ಧೆಯ ಬಳಿಕದ ದಿವ್ಯಾ ಏರಿದ ಎತ್ತರವೇ ದೊಡ್ಡ ಮಟ್ಟದ್ದು. ಹುಲಿರಾಯದಂಥ ಚಿತ್ರಗಳಲ್ಲಿ ತಣ್ಣನೆ ಬಂದು ಹೋದ ಸುಂದರಿಯೊಳಗಿನ ನೈಜ ಪ್ರತಿಭೆ, ಮುಗ್ದತೆ ಎಲ್ಲವೂ ಅನಾವರಣವಾಗಿದ್ದು ಬಿಗ್​ಬಾಸ್ ರಿಯಾಲಿಟಿ ಶೋನಲ್ಲೇ. ಈಗಾಗಲೇ ಸಿನಿಮಾ, ಸೀರಿಯಲ್, ರಿಯಾಲಿಟಿ ಶೋಗಳಲ್ಲಿ ನಟಿಸಿರುವ ದಿವ್ಯಾ, ಇದೀಗ ಧಾರಾವಾಹಿ ಮೂಲಕ ರೀ ಎಂಟ್ರಿ ಕೊಡುತ್ತಿದ್ದಾರೆ. ಕಲರ್ಸ್ ಕನ್ನಡದಲ್ಲಿ ನಿಮಗಾಗಿಯೇ ತಯಾರಾಗ್ತಿರುವ ಈ ಧಾರಾವಾಹಿಯ ಹೆಸರು ‘ನಿನಗಾಗಿ’.

ಸಾಮಾನ್ಯವಾಗಿ ಎಲ್ಲ ಧಾರಾವಾಹಿಗಳನ್ನು ಸಿನಿಮಾ ಮಟ್ಟದಲ್ಲಿ ಚಿತ್ರಿಸುತ್ತಿದ್ದೇವೆ ಎನ್ನುವ ಮಾತು ಕೇಳುತ್ತಿರುತ್ತೇವೆ. ಆದರೆ ನಿನಗಾಗಿ ಧಾರಾವಾಹಿ ಸಿನಿಮಾ ಹಿನ್ನೆಲೆಯದ್ದೇ ಕತೆ ಹೊಂದಿದೆ. ಹೀಗಾಗಿ ಸಹಜವಾಗಿಯೇ ಸಿನಿಮಾದಂತೆಯೇ ಚಿತ್ರೀಕರಿಸಲಾಗ್ತಿದೆ. ಸೂಪರ್​ಸ್ಟಾರ್ ರಚ್ಚುವಾಗಿ ದಿವ್ಯಾ ಉರುಡುಗ ನಟಿಸಿದ್ದಾರೆ. ಇಲ್ಲಿ ದಿವ್ಯಾಗೆ ಜೋಡಿಯಾಗಿ ‘ಅರಗಿಣಿ’ ಧಾರಾವಾಹಿ ಖ್ಯಾತಿಯ ಋತ್ವಿಕ್ ಮಠದ್ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಇವರಿಬ್ಬರು ಜೋಡಿಯಾಗಿ ಪಾಲ್ಗೊಂಡ ದೃಶ್ಯಗಳ ಚಿತ್ರೀಕರಣ ಇನ್ನೂ ಶುರುವಾಗಿಲ್ಲ. ಅಲ್ಲಿಗೆ ಈ ಜೋಡಿ ಸೇರುವಿಕೆಯೇ ಧಾರಾವಾಹಿಯ ಹೈಲೈಟ್ ಎಂದು ಹೇಳಬಹುದು.

ದಿವ್ಯಾ ಉರುಡುಗ ನಿರ್ವಹಿಸಿರುವ ರಚ್ಚು ಪಾತ್ರಕ್ಕೆ ಎಲ್ಲವೂ ಮುದ್ದಿನ ಅಮ್ಮನೇ ಮಾರ್ಗದರ್ಶಿ. ಮಗಳು ತನ್ನ ಬದುಕೇ ನಿನಗಾಗಿ ಎನ್ನುವಂತೆ ಬೆಳೆದಿರುತ್ತಾಳೆ. ರಿತ್ವಿಕ್ ಪಾತ್ರ ಪುಟ್ಟ ಕಂದ ಕೃಷ್ಣಳಿಗಾಗಿಯೇ ತನ್ನ ಬದುಕು ಎನ್ನುವಂತೆ ಜೀವನ ನಡೆಸುತ್ತಿರುತ್ತಾನೆ. ಹೀಗಾಗಿ ನಿನಗಾಗಿ ಎನ್ನುವುದರಲ್ಲಿ ಸಾಕಷ್ಟು ಅರ್ಥವಿದೆ ಎನ್ನುವುದು ತಂಡದ ಅನಿಸಿಕೆ. ದಿವ್ಯಾ ಉರುಡುಗ, ನಾಯಕ ಮತ್ತು ಮಗು ಈ ಮೂವರಿಗೂ ಪ್ರಧಾನ ಪಾತ್ರ ಇರುವುದರಿಂದ ಇದಕ್ಕೆ ನಿನಗಾಗಿ ಎಂದು ಹೆಸರಿಡಲಾಗಿದೆ ಎನ್ನುತ್ತಾರೆ ನಿರ್ದೇಶಕ ಸಂಪೃಥ್ವಿ. ಇವರು ಈ ಹಿಂದೆ, ನಮ್ಮನೆ ಯುವರಾಣಿಯಂಥ ಯಶಸ್ವಿ ಧಾರಾವಾಹಿಗಳನ್ನು ಕೊಟ್ಟಂಥ ನಿರ್ದೇಶಕ.

ಸಿನಿಕನ್ನಡದ ಜತೆ ತಮ್ಮ ನಟನೆಯ ಅನುಭವ ಹಂಚಿಕೊಂಡ ದಿವ್ಯಾ, ಕೇರಳದ ಕುಮಿಳಿ ಎನ್ನುವ ಜಾಗದಲ್ಲಿ ಆನೆ ಬೆನ್ನೇರಿ ನಟಿಸಿದ್ದು ಅಪೂರ್ವವಾಗಿತ್ತು ಎಂದಿದ್ದಾರೆ. ಈ ಧಾರಾವಾಹಿಯಲ್ಲಿ ಹಾಡೊಂದಕ್ಕೆ ಕುಣಿಯುವ ಸಂದರ್ಭ ಇತ್ತು. ಆಗ ಜಾರಿ ನೀರಿಗೆ ಬಿದ್ದಿದ್ದಾಗಿ ದಿವ್ಯಾ ಹೇಳಿದ್ದಾರೆ. ಆದರೆ ಅಪಾಯವೇನೂ ಆಗಿಲ್ಲ. ಫುಡ್ ಟ್ರಕ್ ನಡೆಸುವ ಪಾತ್ರವನ್ನು ರಿತ್ವಿಕ್ ಮಠದ್ ನಿಭಾಯಿಸಿದ್ದು, ಟ್ರಕ್ ಕೂಡ ಧಾರಾವಾಹಿಯ ಒಂದು ಜೀವಂತ ಪಾತ್ರದಂತೆ ಮುಂದುವರಿಯಲಿದೆ ಎಂದಿದ್ದಾರೆ. ಇದೇ ಸೋಮವಾರ ಮೇ 27ರಿಂದ ಕಲರ್ಸ್ ಕನ್ನಡದಲ್ಲಿ ರಾತ್ರಿ 8 ಗಂಟೆಗೆ ಪ್ರಸಾರವಾಗಲಿರುವ ಈ ಧಾರಾವಾಹಿ, ದಿವ್ಯಾ ಉರುಡುಗರನ್ನು ನಿಜಕ್ಕೂ ಲೇಡಿ ಸೂಪರ್​ಸ್ಟಾರ್ ಮಾಡಬಹುದು ಎಂದು ನಿರೀಕ್ಷಿಸಲಾಗ್ತಿದೆ.

Recommended For You

Leave a Reply

error: Content is protected !!