ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಹೊಸ ಚಿತ್ರ ‘ಪಿನಾಕ’ದ ಟೀಸರ್ ರಿಲೀಸಾಗಿದೆ. ‘ಮುಂಗಾರು ಮಳೆ’ಯ ಮೂಲಕ ಸ್ಟಾರ್ ನಟನಾದ ಗಣೇಶ್, ಈ ಬಾರಿ ಮಳೆಯಿಂದ ದೂರಾಗಿ ಬೆಂಕಿಯೊಂದಿಗೆ ಪ್ರತ್ಯಕ್ಷವಾಗಿದ್ದಾರೆ. ಪಿನಾಕ ಅಂದರೆ ಶಿವನ ಆಯುಧ ಎನ್ನುವ ಅರ್ಥ ಇದೆ. ಸೌಮ್ಯ ಸ್ವಭಾವದ ಗಣೇಶ ಇಲ್ಲಿ ರುದ್ರ ಭಯಾನಕನಾಗುವ ಪ್ರಯತ್ನ ಮಾಡಿದ್ದಾರೆ.
ಟೀಸರ್ ನೋಡಿದವರಿಗೆ ಇದೊಂದು ಭಯಾನಕ ಹಿನ್ನೆಲೆ ಇರಿಸಿಕೊಂಡು ತಯಾರಾಗುತ್ತಿರುವ ಚಿತ್ರ ಎನ್ನುವ ಸೂಚನೆ ಸಿಗುತ್ತದೆ. ಗಣೇಶ್ ಮುಖವನ್ನು ಕೂಡ ವಿಕಾರವಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಆದರೂ ಟೀಸರ್ ನೋಡಿದವರಲ್ಲಿ ಹೆಚ್ಚಿನವರು ಈ ಪಾತ್ರ ಗಣೇಶ್ಗೆ ಒಪ್ಪುತ್ತಿಲ್ಲ ಎಂದೇ ಅಭಿಪ್ರಾಯ ಹೇಳುತ್ತಿದ್ದಾರೆ. ಆದರೆ ಪಾತ್ರದ ಹಿನ್ನೆಲೆಯ ಬಗ್ಗೆ ಇನ್ನೂ ವಿವರ ನೀಡಿರದ ಕಾರಣ ನಿರೀಕ್ಷೆ ಹಾಗೆಯೇ ಉಳಿದುಕೊಂಡಿದೆ. ಮುಖ್ಯವಾಗಿ ಗಣೇಶ್ ಹೀಗೆ ಅಘೋರಿಯಂತೆ ಕಾಣಿಸಿರುವುದರ ಹಿನ್ನೆಲೆ ಕೂಡ ಚಿತ್ರದಲ್ಲಿರಬಹುದಾ? ಗಣೇಶ್ ಹಿಂದಿನ ಇಮೇಜ್ ಕೂಡ ಫ್ಲ್ಯಾಶ್ ಬ್ಯಾಕ್ ನಲ್ಲಿ ಬರಬಹುದಾ ಎನ್ನುವ ಕುತೂಹಲ ಸೃಷ್ಟಿಯಾಗಿದೆ.
ಟೀಸರ್ ರಿಲೀಸ್ ಕಾರ್ಯಕ್ರಮದಲ್ಲಿ ಮಾಧ್ಯಮದ ಜತೆ ಮಾತನಾಡಿದ ಗಣೇಶ್ ಮಾತುಗಳು ಕೂಡ ಚಿತ್ರದ ಬಗ್ಗೆ ಇನ್ನಷ್ಟು ಭರವಸೆ ಮೂಡಿಸುವಂತೆ ಮಾಡಿದೆ. ‘‘‘ಹುಡುಗಾಟ’ ಚಿತ್ರದಿಂದ ನಾನು ಧನಂಜಯ ಅವರನ್ನು ಬಲ್ಲೆ. ಇದೀಗ ಧನಂಜಯ್ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ನಿರ್ದೇಶಕ ಧನಂಜಯ, ನಿರ್ಮಾಪಕರ ಸಹೋದರಿ ವಿಜಯ ಹಾಗೂ ಅವರ ತಂಡದವರು ಕಳೆದ ಒಂದು ವರ್ಷದಿಂದ ಅಡ್ವೆಂಚರ್, ಥ್ರಿಲ್ಲರ್ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿರುವ ಒಂದೊಳ್ಳೆ ಕತೆ ಮಾಡಿದ್ದಾರೆ. ನಾನು ಚಿತ್ರರಂಗಕ್ಕೆ ವಿಲನ್ ಪಾತ್ರದ ಮೂಲಕ ಪ್ರವೇಶ ನೀಡಿದ್ದೆ. ‘ಮುಂಗಾರು ಮಳೆ’ ಬಳಿಕ ನನ್ನನ್ನು ರೊಮ್ಯಾಂಟಿಕ್ ಹೀರೋ ಆಗಿಯೇ ನೋಡಲು ಅಭಿಮಾನಿಗಳು ಬಯಸಿದರು. ಈ ಚಿತ್ರದಿಂದ ನನ್ನ ಹಿಂದಿನ ಜಾನರ್ ಬದಲಿಸಿಕೊಂಡಿದ್ದೇನೆ. ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಈ ಚಿತ್ರ ಬರಲಿದೆ ಎಂದಿದ್ದಾರೆ ಗಣೇಶ್.
ನಿರ್ದೇಶಕ ಬಿ ಧನಂಜಯ್ ಮಾತನಾಡಿ, ಚಿಕ್ಕವಯಸ್ಸಿನಲ್ಲೇ ಚಿತ್ರರಂಗಕ್ಕೆ ಬಂದ ನಾನು, ಅಸಿಸ್ಟೆಂಟ್ ಡ್ಯಾನ್ಸ್ ಮಾಸ್ಟರ್ ಆಗಿ ಹತ್ತುಸಾವಿರಕ್ಕೂ ಅಧಿಕ ಹಾಡುಗಳಿಗೆ ಹಾಗೂ ಸ್ವತಂತ್ರ ನೃತ್ಯ ನಿರ್ದೇಶಕನಾಗಿ 500 ಕ್ಕೂ ಅಧಿಕ ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. ನಿರ್ದೇಶಕನಾಗಿ ಇದು ಮೊದಲ ಚಿತ್ರ. ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಾಣ ಮಾಡುತ್ತಿದೆ. ಈ ಸಂಸ್ಥೆಯ 49ನೇ ಪ್ರಾಜೆಕ್ಟ್ ಇದಾಗಿದೆ. ಪಿರಿಯಾಡಿಕ್ ಡ್ರಾಮಾ ಹಿನ್ನೆಲೆಯಲ್ಲಿ ಮಾಟ ಮಂತ್ರದ ಎಳೆಯ ಮೂಲಕ ಪ್ರೇಕ್ಷಕನ ಮುಂದೆ ಹೊಸ ಥರದ ಕಥೆಯನ್ನು ತಂದಿಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದಿದ್ದಾರೆ. ನಿರ್ಮಾಪಕಿ ವಂದನ, ನಿರ್ದೇಶಕರೊಂದಿಗೆ ಕಥೆ ಬರೆದಿರುವ ವಿಜಯ, ಸಂಭಾಷಣೆ ಬರೆದಿರುವ ರಘು ನಿಡುವಳ್ಳಿ ಮುಂತಾದ ಚಿತ್ರತಂಡದ ಸದಸ್ಯರು ಸುದ್ದಿಗೋಷ್ಠಿಯಲ್ಲಿದ್ದರು. ಫೆಬ್ರವರಿಯಲ್ಲಿ ಚಿತ್ರೀಕರಣ ಶುರುವಾಗಲಿದೆ.
ಕನ್ನಡದಲ್ಲಿ ‘ಅಧ್ಯಕ್ಷ ಇನ್ ಅಮೇರಿಕಾ’ ಹಾಗೂ ‘ಆದ್ಯ’ ಚಿತ್ರಗಳನ್ನು ನಿರ್ಮಿಸಿರುವ ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಾಣದ 49 ನೇ ಚಿತ್ರ ಇದು. ನಿರ್ಮಾಪಕ ವಿಶ್ವ ಪ್ರಸಾದ್ ಟಿ.ಜಿ.ವಿಶ್ವಪ್ರಸಾದ್, ತಮ್ಮ ಈ ಸಂಸ್ಥೆ ಈ ವರ್ಷ
ಶ್ರೀಮುರಳಿ, ಶಿವರಾಜಕುಮಾರ್, ಧ್ರುವಸರ್ಜಾ ಅವರ ಸಿನಿಮಾಗಳ ನಿರ್ಮಾಣಕ್ಕೂ ಸಿದ್ಧತೆ ನಡೆಸಿದೆ ಎಂದಿದ್ದಾರೆ.