
ನಾಗವಲ್ಲಿ ಎನ್ನುವ ಹೆಸರು ಕೇಳಿದರೆ ಆಪ್ತಮಿತ್ರ ಸಿನಿಮಾ ನೆನಪಾಗಲೇಬೇಕು. ಆಪ್ತಮಿತ್ರ ಎಂದಮೇಲೆ ಸಾಹಸ ಸಿಂಹ ವಿಷ್ಣುವರ್ಧನ್, ರಮೇಶ್ ಅರವಿಂದ್ , ನಾಗವಲ್ಲಿ ಸೌಂದರ್ಯ, ಅವಿನಾಶ್ ಮತ್ತು ಈ ಪಾತ್ರಗಳ ಜೊತೆಯಲ್ಲೇ ನೆನಪಾಗುವುದು ನಾಗವಲ್ಲಿ ಸೇರಿದ್ದ ಕಟ್ಟಡ. ಈಗ ಅದೇ ಕಟ್ಟಡದ ಹೆಸರಿಟ್ಟುಕೊಂಡು ತೆರೆಗೆ ಸಿದ್ಧವಾಗಿರುವ ಚಿತ್ರವೇ ನಾಗವಲ್ಲಿ ಬಂಗಲೆ.
ಕವಿ ರಾಜೇಶ್ ನಿರ್ದೇಶನದ ನಾಗವಲ್ಲಿ ಬಂಗಲೆಗೂ ಆಪ್ತಮಿತ್ರ ಚಿತ್ರಕ್ಕೂ ಯಾವುದೇ ನೇರವಾದ ಸಂಬಂಧ ಇಲ್ಲ. ಆದರೆ ಬಂಗಲೆಯ ಬಗೆಗಿನ ಕುತೂಹಲಕ್ಕೆ ಉತ್ತರ ನೀಡುವಂಥ ಹಾರರ್ ಸಿನಿಮಾ ಇದು. ನವ ನಟ ಯಶ್ ನಾಯಕರಾಗಿ ಮತ್ತು ತೇಜಸ್ವಿನಿ ನಾಯಕಿಯಾಗಿ ನಟಿಸಿರುವ ಸಿನಿಮಾ ಇದು.
ನಾಗವಲ್ಲಿ ಬಂಗಲೆ ಚಿತ್ರದಲ್ಲಿ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಈ ಆರು ಗುಣಗಳನ್ನು ಪ್ರತಿನಿಧಿಸುವ ಆರು ಮುಖ್ಯಪಾತ್ರಗಳಿರುತ್ತದೆ. ಆರು ಜನ ಹುಡುಗಿಯರು ಈ ಆರು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಆರು ಪಾತ್ರಗಳು ನಾಗವಲ್ಲಿ ಬಂಗಲೆ ಪ್ರವೇಶಿಸಿದಾಗ ಏನೆಲ್ಲಾ ಆಗುತ್ತದೆ ಎನ್ನುವುದೇ ಚಿತ್ರದ ಕಥಾ ಹಂದರ ಎಂದು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಜೆ.ಎಂ.ಪ್ರಹ್ಲಾದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಜೆ.ಎಂ.ಪ್ರಹ್ಲಾದ್ ಅವರು ಹೇಳಿದ ಕಥೆ ಕೇಳಿ ಮೆಚ್ಚಿದ ನೆ.ಲ ಮಹೇಶ್ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಕಥೆ ಕೇಳಿದ ಕೇವಲ ಐದೇ ದಿನಗಳಲ್ಲಿ ಚಿತ್ರೀಕರಣ ಆರಂಭವಾಯಿತು. ಇದು ಹಾರಾರ್ ಚಿತ್ರವಾದರೂ, ಕೊನೆಯಲ್ಲಿ ದೆವ್ವ ಭೂತಗಳು ಇಲ್ಲ. ಇದೆಲ್ಲಾ ನಮ್ಮ ಮನಸ್ಸಿನ ಭ್ರಮೆ ಎಂಬ ವಿಷಯವನ್ನು ಹೇಳಿದ್ದೇವೆ ಎನ್ನುತ್ತಾರೆ ನಿರ್ದೇಶಕ ಕವಿ ರಾಜೇಶ್.

ಹಂಸ ವಿಷನ್ಸ್ ಲಾಂಛನದಲ್ಲಿ ನೆ.ಲ ಮಹೇಶ್ ಹಾಗೂ ನೇವಿ ಮಂಜು ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ನೆ.ಲ.ನರೇಂದ್ರ ಬಾಬು, ನೇವಿ ಮಂಜು ಹಾಗೂ ಅನೇಕ ನೂತನ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಫೆಬ್ರವರಿ 28 ರಂದು ಚಿತ್ರವನ್ನು ತೆರೆಗೆ ತರುತ್ತೇವೆ ಎಂದು ನಿರ್ಮಾಪಕ ನೆ.ಲ.ಮಹೇಶ್ ಹೇಳಿದ್ದಾರೆ. ಸುದ್ದಿಗೋಷ್ಠಿಗೆ ಅತಿಥಿಗಳಾಗಿ ಆಗಮಿಸಿದ ಶಾಸಕ ಕೆ ಗೋಪಾಲಯ್ಯ ಮತ್ತು ಲಹರಿ ಸಂಸ್ಥೆಯ ವೇಲು ಚಿತ್ರದ ಟೀಸರ್ ಹಾಗೂ ಪೋಸ್ಟರ್ ಲಾಂಚ್ ಮಾಡಿ ಶುಭ ಹಾರೈಸಿದ್ದಾರೆ.
ನಾಗವಲ್ಲಿ ಪಾತ್ರಧಾರಿ ತೇಜಸ್ವಿನಿ, ಚಿತ್ರದಲ್ಲಿ ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಸಿಮ್ರಾನ್, ಮಾನಸ, ರೂಪಶ್ರೀ, ಸುಷ್ಮ, ರಂಜಿತ, ಶ್ವೇತ, ನಾಯಕ ಯಶ್ ಹಾಗೂ ನೃತ್ಯ ನಿರ್ದೇಶಕ ತ್ರಿಭುವನ್ ಮುಂತಾದವರು ಚಿತ್ರದ ಕುರಿತು ಮಾಹಿತಿ ನೀಡಿದರು.
