
ಕಣ್ಣಪ್ಪ ಚಿತ್ರದ ವಸ್ತು ಕನ್ನಡದಲ್ಲಿ ಡಾ.ರಾಜ್ ಕುಮಾರ್ ಪ್ರಥಮ ಚಿತ್ರ ಎಂದೇ ಗುರುತಿಸಲಾದ ಬೇಡರ ಕಣ್ಣಪ್ಪ ಚಿತ್ರದ್ದಾಗಿದೆ. ಬೇಡರ ಕಣ್ಣಪ್ಪ ಚಿತ್ರ ಮಾತ್ರವಲ್ಲ, ಚಿತ್ರದ ಹಾಡು “ಶಿವಪ್ಪ ಕಾಯೋ ತಂದೇ..” ಇಂದಿಗೂ ಜನಪ್ರಿಯ. ಹೀಗಾಗಿಯೇ ಹೊಸದೊಂದು ಕಣ್ಣಪ್ಪ ಸಿನಿಮಾ ಬಂದಾಗ ಕನ್ನಡಿಗರ ಮನಗೆಲ್ಲುವುದು ಸವಾಲಿನ ವಿಚಾರ. ಇದೇ ವಿಚಾರವನ್ನು ಚಿತ್ರದ ನಿರ್ಮಾಪಕ ಹಾಗೂ ತೆಲುಗಿನ ಖ್ಯಾತ ನಟ ಮೋಹನ್ ಬಾಬು ಅವರಲ್ಲಿ ಪ್ರಸ್ತಾಪಿಸಿದಾಗ ಸಿಕ್ಕ ಉತ್ತರ ಅಭೂತಪೂರ್ವವಾಗಿತ್ತು.
ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ..!
ಡಾ.ರಾಜ್ ಅವರು ಆ ಕಾಲಘಟ್ಟದ ಅದ್ಭುತ ನಟರು. ಅವರ ನಟನೆಯನ್ನು, ಚಿತ್ರವನ್ನು ಇಂದಿನ ಹುಡುಗರ ಸಿನಿಮಾದ ಜೊತೆ ಹೋಲಿಸುವ ಪ್ರಶ್ನೆಯೇ ಇಲ್ಲ. ಹಾಡಾಗಲೀ , ಚಿತ್ರವಾಗಲೀ ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ ಅಂದರು.
ಚಿತ್ರದಲ್ಲಿ ಪ್ರಧಾನ ಪಾತ್ರವನ್ನು ವಿಷ್ಣುಮಂಚು ನಿಭಾಯಿಸಿದ್ದಾರೆ. ವಿಷ್ಣುವಿನ ತಂದೆ, ಟಾಲಿವುಡ್ ನ ಖ್ಯಾತ ನಟ ಮೋಹನ್ ಬಾಬು ಒಂದು ವಿಶೇಷ ಪಾತ್ರ ಮಾಡಿದ್ದಾರೆ. ಚಿತ್ರದ ನಿರ್ಮಾಪಕರೂ ಆಗಿರುವ ಮೋಹನ್ ಬಾಬು ಮಾತನಾಡಿ, “ಅಣ್ಣಾವ್ರು ಬೇಡರ ಕಣ್ಣಪ್ಪದ ತೆಲುಗು ರಿಮೇಕ್ ನಲ್ಲೂ ನಟಿಸಿದ್ದರು. ಸಿನಿಮಾ ತೆಲುಗಿನಲ್ಲಿ ಸಿಲ್ವರ್ ಜುಬಿಲಿ ಕೂಡ ಆಗಿತ್ತು” ಎಂದರು.

ತಮ್ಮ ಮತ್ತು ಕರ್ನಾಟಕದ ಕಲಾ ಸಂಬಂಧ ಡಾ.ರಾಜ್ ಕುಮಾರ್ ಅವರ ಪರಿಚಯದೊಂದಿಗೆ ಶುರುವಾಯಿತು ಎಂದ ಮೋಹನ್ ಬಾಬು ಬಳಿಕ ಅಂಬರೀಷ್ ಮತ್ತು ವಿಷ್ಣುವರ್ಧನ್ ತನಗೆ ಆತ್ಮೀಯರಾಗಿದ್ದನ್ನು ಹಾಗೂ ವಿಷ್ಣು ತನ್ನನ್ನು ಜಾಕ್ ಫ್ರುಟ್ ಅಂತ ಕರೆಯುತ್ತಿದ್ದುದನ್ನು ನೆನಪಿಸಿಕೊಂಡರು. ಅದೇ ರೀತಿ ತಮ್ಮೊಂದಿಗೆ ವೇದಿಕೆ ಹಂಚಿಕೊಂಡ ರಾಕ್ಲೈನ್ ವೆಂಕಟೇಶ್ ಅವರು ಅಂಬರೀಶ್ ಮೂಲಕ ತಮಗೆ ಪರಿಚಯವಾದಂಥ ತಮ್ಮ ಎಂದರು.
ಅತಿಥಿಯಾಗಿ ಆಗಮಿಸಿದ್ದ ಸುಮಲತಾ ಮಾತನಾಡಿ, ಮೋಹನ್ ಬಾಬು ಅವರು ಅಂಬರೀಶ್ ಸ್ನೇಹಿತ ಅನ್ನೋದು ಎಲ್ಲರಿಗೂ ಗೊತ್ತು. ಅವರ ಸ್ನೇಹಿತರು ಸೇರಿದಾಗ ಹಬ್ಬದ ವಾತಾವರಣ ಇತ್ತು. ಇವರಿಬ್ಬರು ಜತೆ ಸೇರಿದಾಗ ಜಗಳ ನಡೆಯುತ್ತಿರುವ ಹಾಗೆ ಇರುತ್ತಿತ್ತು. ಆದರೆ ಅದು ಆತ್ಮೀಯತೆ ಅಷ್ಟೇ. ನಾನು ಮೋಹನ್ ಬಾಬು ಅವರಿಗೆ 14 ಚಿತ್ರಗಳಲ್ಲಿ ಜೋಡಿಯಾಗಿದ್ದೀನಿ. ಅದಕ್ಕಿಂತ ಇವರ ಸ್ನೇಹವಲಯದಲ್ಲಿ ಸೇರಿದಾಗ ಸಿಕ್ಕ ಖುಷಿ ದೊಡ್ಡದು” ಎಂದರು.
ವಿಷ್ಣುವರ್ಧನ್ ಪ್ರೀತಿಗೆ ಮಗನಿಗೂ ವಿಷ್ಣು ಹೆಸರು!
ವಿಷ್ಣುವರ್ಧನ್ ಓರ್ವ ಸ್ನೇಹಿತರಾಗಿ ಮೋಹನ್ ಬಾಬು ಅವರ ಮೇಲೆ ತುಂಬಾನೇ ಪ್ರಭಾವ ಬೀರಿದ್ದರು. ಈ ಬಗ್ಗೆ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರು ಮಾತನಾಡುತ್ತಾ, ಅದಕ್ಕೆ ಒಂದು ಸಾಕ್ಷಿಯನ್ನು ನೀಡಿದರು. “ವಿಷ್ಣು ಮೇಲಿನ ಪ್ರೀತಿಯಿಂದಲೇ ತಮ್ಮ ಮಗನಿಗೆ ವಿಷ್ಣು ಎಂದು ಹೆಸರಿಟ್ಟಿದ್ದಾರೆ” ಅಂದರು.

ರಾಕ್ಲೈನ್ ವೆಂಕಟೇಶ್ ಮಾತನಾಡಿ, ಕಾಟೇರ ಚಿತ್ರದ ಮುಹೂರ್ತ, ಚಿತ್ರೀಕರಣ ರವಿಶಂಕರ ಆಶ್ರಮದಲ್ಲಾಗುತ್ತೆ ಅಂತ ನಾನು ಅಂದ್ಕೊಂಡಿರಲಿಲ್ಲ. ಇದೀಗ ಅದೇ ಜಾಗದಲ್ಲಿ ಕಣ್ಣಪ್ಪ ಆಡಿಯೋ ಲಾಂಚ್ ಮಾಡುವ ಅವಕಾಶ ದೊರಕಿದ್ದು ಭಾಗ್ಯ ಎಂದರು.
ಕಣ್ಣಪ್ಪ ಚಿತ್ರಕ್ಕೆ ಕೇರಳದ ಖ್ಯಾತ ಸಂಗೀತಜ್ಞ ಸ್ಟೀಫನ್ ದೇವಸಿ ಸಂಗೀತ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಅವರು, ಚಿತ್ರದ ಬಗ್ಗೆ ಸಹಜ ನಿರೀಕ್ಷೆಗಳಿರುವುದಾಗಿ ಹೇಳಿದರು. ವಿಜಯ್ ಪ್ರಕಾಶ್ ಚಿತ್ರದ ಪ್ರಮುಖ ಹಾಡಿಗೆ ಕಂಠವಾಗಿದ್ದಾರೆ.