
ಕರ್ನಾಟಕದ ಹೆಮ್ಮೆಯ ರಂಗ ತಂಡ ‘ರಂಗ ಸೌರಭ’ ರಾಜಧಾನಿ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಅಂತರ ಕಾಲೇಜು ರಂಗ ಸ್ಪರ್ಧೆಯನ್ನು ಏರ್ಪಡಿಸಿದೆ. ಫೆಬ್ರವರಿ 18 ರಿಂದ ಮಾರ್ಚ್ 1ರ ವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಈ ಸ್ಪರ್ಧೆ ಆಯೋಜಿತಗೊಂಡಿದ್ದು, ಹಿರಿಯ ಚಿತ್ರನಟ ಅನಂತ್ನಾಗ್ ಉದ್ಘಾಟನೆ ನಡೆಸಲಿದ್ದಾರೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಸಂಸ ರಂಗಮಂದಿರಲ್ಲಿ 10ದಿನಗಳ ಕಾಲ ರಂಗ ತಂಡಗಳ ಸ್ಪರ್ಧೆ ನೆರವೇರಲಿದೆ. ಪದೇ ಫೆಬ್ರವರಿ 18ರಂದು ಮಂಗಳವಾರ ಸಂಜೆ 5.30ಕ್ಕೆ ಉದ್ಘಾಟನಾ ಸಮಾರಂಭ ನೆರವೇರಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ.ಕೆವಿ ನಾಗರಾಜಮೂರ್ತಿ ವಹಿಸಲಿದ್ದು, ಅತಿಥಿಗಳಾಗಿ ಕರ್ನಾಟಕ ನಾಟಕ ಅಕಾಡೆಮಿ ರಿಜಿಸ್ಟ್ರಾರ್ ನಿರ್ಮಲಾ ಮಠಪತಿ ಮತ್ತು ಖ್ಯಾತ ಕಲಾನಿರ್ದೇಶಕ ಶಶಿಧರ ಅಡಪ ಪಾಲ್ಗೊಳ್ಳಲಿದ್ದಾರೆ. ಜನಪದ ಗಾಯನದೊಂದಿಗೆ ಅಧಿಕೃತ ಕಾರ್ಯಕ್ರಮ ಶುರುವಾಗಲಿದೆ.
ರಂಗೋತ್ಸವ ಮತ್ತು ಸ್ಪರ್ಧೆಯ ವಿವರ
ಫೆಬ್ರವರಿ 21ರಿಂದ ನಿತ್ಯವೂ ರಾಜ್ಯದ ವಿವಿಧ ಕಾಲೇಜ್ಗಳಿಂದ ಒಂದೂವರೆ ಗಂಟೆಗಳ ಮಿನಿಮಮ್ ಮೂರು ನಾಟಕಗಳ ಪ್ರದರ್ಶನ ನಡೆಯಲಿವೆ. 21ರಂದು ಶುಕ್ರವಾರ 9ಗಂಟೆಗೆ ಶುರುವಾಗುವ ಸ್ಪರ್ಧೆಯಲ್ಲಿ ಪ್ರಥಮ ನಾಟಕ ದರ್ಶನಂ. ಬಳಿಕ ನಾಗಮಂಡಲ ಮತ್ತು ಮೂರನೆಯದಾಗಿ ಸೀತಾಪರ್ವ ಪ್ರದರ್ಶನಗೊಳ್ಳಲಿದೆ. ಇದೇ ದಿನ ಬೆಳಿಗ್ಗೆ 10ರಿಂದ ಪ್ರಬಂಧ ಸ್ಪರ್ಧೆ ಮತ್ತು ಚರ್ಚಾ ಸ್ಪರ್ಧೆಯೂ ಆಯೋಜನೆಗೊಳಿಸಲಾಗಿದೆ. 22ರಂದು ಶನಿವಾರ ಬೆಳಿಗ್ಗೆ ಚಿತ್ರಕಲಾ ಸ್ಪರ್ಧೆ ಮತ್ತು 23ರಂದು ಭಾನುವಾರ ಸಂಜೆ 5ಗಂಟೆಗೆ ಜಾನಪದ ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
24ರಂದು ಸೋಮವಾರ ಮಧ್ಯಮ ವ್ಯಾಯೋಗ, ಸಾಲುಮರಗಳ ತಾಯಿ ತಿಮ್ಮಕ್ಕ ಮತ್ತು ಯಯಾತಿ ನಾಟಕಗಳ ಸ್ಪರ್ಧಾ ಪ್ರದರ್ಶನ ನಡೆಯಲಿವೆ. ಇದೇ ದಿನ ಶಾಸ್ತ್ರೀಯ ವಾದ್ಯ ಮತ್ತು ಶಾಸ್ತ್ರೀಯ ನೃತ್ಯ ಸ್ಪರ್ಧೆಯ ನೆರವೇರಲಿದೆ.
25ರಂದು ಮಂಗಳವಾರ ಮದರ್ ಕರೇಜ್, ವಸಂತ ಯಾಮಿನಿ ಸ್ವಪ್ನ ಚಮತ್ಕಾರ, ಮಂಟೇಸ್ವಾಮಿ ಕಥಾಪ್ರಸಂಗ ಮತ್ತು ವಿಶ್ವಂ ಎನ್ನುವ ನಾಲ್ಕು ನಾಟಕಗಳು ಪ್ರದರ್ಶನವಾಗಲಿವೆ. ಇದೇ ದಿನ ಸುಗಮ ಸಂಗೀತ ಗಾಯನ ಮತ್ತು ಏಕಪಾತ್ರಾಭಿನಯ ಸ್ಪರ್ಧೆಯೂ ನೆರವೇರಲಿದೆ.
26ರಂದು ಬುಧವಾರ ತೈಮೂನ ಆಫ್ ಅಥೆನ್ಸ್, ಆಧೇ ಅಧೂರೇ ಮತ್ತು ಮದುವೆ ಹೆಣ್ಣು ಎನ್ನುವ ನಾಟಕಗಳು ಸ್ಪರ್ಧಿಸಲಿವೆ. ಈ ದಿನ ಬೆಳಿಗ್ಗೆ 10ರಿಂದ ರಂಗ ರಸಪ್ರಶ್ನಾವಳಿ ಮತ್ತು ರಂಗಗೀತೆ ದೃಶ್ಯಾವಳಿ ಕೂಡ ನೆರವೇರಲಿದೆ. 28ರಂದು ಶುಕ್ರವಾರ ಶಾಂತಿ ಬ್ರಿಗೇಡ್, ಕಥಾಖಂಡ ಮತ್ತು ಟ್ವೆಲ್ತ್ ನೈಟ್ ನಾಟಕಗಳ ಪ್ರದರ್ಶನವಾಗಲಿವೆ. ಮಾರ್ಚ್ 1ರಂದು ಶನಿವಾರ ಸಂಜೆ 5ಗಂಟೆಗೆ ಈ ಎಲ್ಲ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪ್ರಧಾನ ನಡೆಯಲಿದೆ.
