
ಮೇಘ ಎನ್ನುವ ಹೆಸರು ಕನ್ನಡ ಚಿತ್ರರಂಗದ ಹಲವು ನಟಿಯರಿಗಿದೆ. ಆದರೆ ಇವರ್ಯಾರ ಹೆಸರಲ್ಲೂ ಇರದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ ಮೇಘಶ್ರೀ ತೀರ್ಥಹಳ್ಳಿ. ಮೊದಲ ಕನ್ನಡ ‘ಕ್ವೀನ್ಸ್ ಬೌಲಿಂಗ್ ಟೂರ್ನಮೆಂಟ್’ ನಲ್ಲಿ ಮೇಘಶ್ರೀ ನಾಯಕತ್ವದ ತಂಡ ಕಪ್ ಗೆದ್ದಿದೆ.
ಮಾರ್ಚ್ 14ರಂದು ಶುಕ್ರವಾರ ಕನ್ನಡ ಚಿತ್ರರಂಗದ ಮೊದಲ ‘ಸೆಲೆಬ್ರಿಟಿ ಮಹಿಳಾ’ ಬೌಲಿಂಗ್ ಪಂದ್ಯಾವಳಿ’ ನಡೆದಿತ್ತು. ‘ಕ್ವೀನ್ಸ್ ಬೌಲಿಂಗ್ ಟೂರ್ನಮೆಂಟ್’ ಹೆಸರಲ್ಲಿ ಬೆಂಗಳೂರಿನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ನಿಜಕ್ಕೂ ಕ್ವೀನ್ಸ್ ಆಗಿಯೇ ಮೆರೆದಿದ್ದು ಮೇಘ ಶ್ರೀ ನೇತೃತ್ವ ವಹಿಸಿಕೊಂಡಿರುವ ಎಸ್ ಎಮ್ ಕ್ವೀನ್ಸ್ ತಂಡ.

ಗೆಲುವಿನ ಖುಷಿಯಲ್ಲಿ ‘ಸಿನಿ ಕನ್ನಡ’ದ ಜೊತೆ ಮಾತನಾಡಿದ ಮೇಘ ಶ್ರೀ, “ಇದು ತಂಡದ ಗೆಲವು. ಯಾಕೆಂದರೆ ಇಲ್ಲಿ ಪ್ರತಿಯೊಬ್ಬರ ಪರಿಶ್ರಮ ನಮ್ಮನ್ನು ಯಶಸ್ಸಿನತ್ತ ಕೊಂಡೊಯ್ದಿದೆ. ನಾವು ಗೆಲ್ಲಬಹುದೆಂದು ಯಾರೂ ಊಹಿಸಿರಲಿಲ್ಲ. ಸ್ಪರ್ಧೆಯಿಂದ ಸ್ಫರ್ಧೆಗೆ ಸ್ಕೋರ್ ಮಾಡ್ತಾ ಹೋಗಿದ್ದೇವೆ. ಒಂದೇ ದಿನ 5 ಮ್ಯಾಚ್ ಗಳಲ್ಲಿ ಮೂರನ್ನು ಬ್ಯಾಕ್ ಟು ಬ್ಯಾಕ್ ಆಡಬೇಕಾಗಿ ಬಂದಿತ್ತು. ಆದರೆ ಯಾರೊಬ್ಬರ ಎನರ್ಜಿ ಕೂಡ ಕಡಿಮೆಯಾಗಿಲ್ಲ. ಕೊನೆಗೂ ಮೊದಲ ಸೀಸನ್ ಕಪ್ ಸ್ವಂತವಾಗಿಸಿದ ದಾಖಲೆ ನಮ್ಮ ತಂಡದ ಹೆಸರಿಗೆ ಸೇರಿರುವುದು ಖುಷಿಯಾಗಿದೆ” ಎಂದಿದ್ದಾರೆ.
ತೀರ್ಥಹಳ್ಳಿ ಮೂಲದ ಸುಕೇಶ್ ಎಸ್ ಎಮ್ ಕ್ವೀನ್ಸ್ ತಂಡದ ಮಾಲಕರು. ಮೇಘಶ್ರೀ ನಾಯಕತ್ವ ವಹಿಸಿದ ಈ ತಂಡದಲ್ಲಿ ನವನಟಿಯರಾದ ರಾಧಿಕಾ, ಖುಷಿ, ಅಮೃತಾ, ರೂಪಾಲಿ, ರಾಜೇಶ್ವರಿ, ಫರೀನ್ ಮತ್ತು ಸ್ನೇಹ ಸದಸ್ಯೆಯರಾಗಿದ್ದರು. ತಂಡ ಗಳಿಸಿರುವ 791 ಮೊತ್ತದ ಅಂಕೆಯನ್ನು ಯಾವ ತಂಡವೂ ಸಮೀಪಿಸಿಲ್ಲ ಎನ್ನುವುದು ಮತ್ತೊಂದು ದಾಖಲೆ. ಅದ್ವಿತಿ ಶೆಟ್ಟಿ ನೇತೃತ್ವದ ತಂಡ ರನ್ನರ್ ಅಪ್ ಆಗಿ ಗುರುತಿಸಿಕೊಂಡಿದೆ.