ಬಾಲಿವುಡ್ ಗಾಯಕ ಕುಮಾರ್ ಸಾನು ಕನ್ನಡದಲ್ಲೂ ಜನಪ್ರಿಯರು. 1992ರಲ್ಲಿ ‘ಹೊಸ ಕಳ್ಳ ಹಳೇ ಕುಳ್ಳ’ ಚಿತ್ರದ ಮೂಲಕ ‘ಅಮ್ಮ ನನ್ನ ನೋಡಮ್ಮಾ..’ ಗೀತೆ ಹಾಡಿ ಕರುನಾಡಿಗೆ ಪ್ರವೇಶಿಸಿದರು. ಆದರೆ ಸಿನಿಮಾರಂಗಕ್ಕೆ ಕಾಲಿಡುವ ಮೊದಲೇ ಈ ಗಾಯಕ ತಾನು ಬೆಂಗಳೂರಲ್ಲಿದ್ದ ಸತ್ಯವನ್ನು ಇಲ್ಲೊಂದೆಡೆ ಹೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿಗೆ ಭೇಟಿ ನೀಡಿದ್ದಾಗ ‘ಹಲೋ ಹಿಂದು’ ಯೂಟ್ಯೂಬ್ ವಾಹಿನಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಸಾನು ಈ ವ ವಿಚಾರ ಬಿಚ್ಚಿಟ್ಟಿದ್ದಾರೆ. ಅದರ ಆಯ್ದ ಭಾಗವನ್ನು ಸಿನಿಕನ್ನಡ ನಿಮಗೆ ಇಲ್ಲಿ ಬರಹರೂಪದಲ್ಲಿ ನೀಡಿದೆ.
ನಿಮ್ಮ ಮತ್ತು ಕರ್ನಾಟಕದ ಸಂಬಂಧದ ಬಗ್ಗೆ ಹೇಳಿ
ನಾನು ಕುಮಾರ್ ಸಾನು ಆಗುವ ಮೊದಲೇ ಬೆಂಗಳೂರಲ್ಲಿದ್ದೆ. ಎಂಜಿ ರೋಡ್ ನಲ್ಲಿ ‘ಫೋರ್ ಸೀಸನ್ ಮತ್ತು ಮಲ್ಲಿಗೆ’ ಹೆಸರಿನ ರೆಸ್ಟೊರೆಂಟ್ ಇತ್ತು. ಮೇಲ್ಗಡೆ ಫೋರ್ ಸೀಸನ್ ಆದರೆ ಕೆಳಗಡೆ ಮಲ್ಲಿಗೆಯ ಮ್ಯೂಸಿಕ್ ಬ್ಯಾಂಡ್ ನಲ್ಲಿ ನಾನು ಹಾಡುತ್ತಿದ್ದೆ. ಸುಮಾರು 8 ತಿಂಗಳು ಅಲ್ಲೇ ಇದ್ದೆ ನಾನು. ಅಲ್ಲಿ ಇಂಗ್ಲಿಷ್ ಮತ್ತು ಹಿಂದಿ ಬ್ಯಾಂಡ್ ಗಳಿದ್ದವು. ಮಹಾತ್ಮಗಾಂಧಿ ರಸ್ತೆಯಲ್ಲೇ ನಾನು ತುಂಬ ಕಾಲ ಇದ್ದೆ. ಬ್ಯಾಂಡ್ ನಲ್ಲಿ ಹಾಡಬೇಕಾದರೆ ನನ್ನ ಹೆಸರ ಸಾನು ಭಟ್ಟಾರ್ ಜೀ ಎಂದಷ್ಟೇ ಇತ್ತು.
ಬೆಂಗಳೂರು, ಇಲ್ಲಿನ ಆಹಾರದ ಬಗ್ಗೆ ಎಲ್ಲ ಏನು ಹೇಳುತ್ತೀರಿ?
ನಾನು ತಿಂಡಿ ಪ್ರಿಯ. ಬೆಂಗಳೂರಲ್ಲಿ ವಿಭಿನ್ನವಾದ ದೋಸೆ ತಿಂದ ನೆನಪಿದೆ. ಹೆಸರು ನೆನಪಿಲ್ಲ. ಕರ್ನಾಟಕವು ಪ್ರಮುಖವಾಗಿ ಐತಿಹಾಸಿಕವಾಗಿ ಮತ್ತು ಧಾರ್ಮಿಕವಾಗಿ ತುಂಬಾನೇ ದೊಡ್ಡ ಸ್ಥಾನ ಪಡೆದಿದೆ. ನನಗೆ ಇಷ್ಟವಾದ ರಾಜ್ಯ. ಆದರೆ ನಾನು ಇಲ್ಲಿ ಹೆಚ್ಚು ಸುತ್ತಾಡಿಲ್ಲ. ದಕ್ಷಿಣ ಭಾರತದಲ್ಲಿ ತಿರುಪತಿ, ಕೇರಳದಲ್ಲಿ ಕೊಚ್ಚಿಗೆ ಹೋಗಿ ಹೌಸ್ ಬೋಟ್ ನಲ್ಲಿ ಪ್ರಯಾಣಿಸಿದ್ದೇನೆ.
ಬೆಂಗಳೂರಿನಲ್ಲಿ ನೀವು ಕನ್ನಡ ಹಾಡುಗಳನ್ನು ಹಾಡುತ್ತೀರ?
ಬೆಂಗಳೂರಿನಲ್ಲಿ ಎಲ್ಲ ಮಾದರಿಯ ಹಾಡುಗಳಿಗೆ ಶ್ರೋತೃಗಳಿದ್ದಾರೆ. ನಾನು 90ರ ದಶಕದ ಗಾಯಕ. ಆದರೂ ನನ್ನ ಹಾಡಿಗೆ ಇಂದಿಗೂ ಇಲ್ಲಿ ಅಭಿಮಾನಿಗಳಿದ್ದಾರೆ.ಬೆಂಗಳೂರು ಕಾಸ್ಮೋಪಾಲಿಟನ್ ಸಿಟಿ. ಇಲ್ಲಿ ಬಹುಭಾಷೆಯ ಜನರಿದ್ದಾರೆ. ಮುಂಬೈನಲ್ಲಿಯೂ ಅಷ್ಟೇ. ಬೆಂಗಳೂರಿಗರೂ ಇದ್ದಾರೆ. ಬಂಗಾಳಿಗಳೂ ಇದ್ದಾರೆ. ಇತ್ತೀಚೆಗೆ ಮಹಾನಗರಗಳೆಲ್ಲ ಕಾಸ್ಮೋಪಾಲಿಟನ್ ಆಗ್ತಿವೆ. ಇದರಿಂದಾಗಿ ಇಲ್ಲೆಲ್ಲ ಒಂದೇ ಭಾಷೆಯ ಹಾಡು ಹಾಡುವುದು ತಪ್ಪಾಗುತ್ತದೆ. ಯಾಕೆಂದರೆ ಇಲ್ಲಿ ಎಲ್ಲ ಭಾಷೆಯ ಮಂದಿಯೂ ಇರುತ್ತಾರೆ. ನಾನಂತೂ 24 ಭಾಷೆಗಳಲ್ಲಿ ಹಾಡಿದವನು. ನನ್ನನ್ನು ಇದುವರೆಗಿನ ಹಿಟ್ ಹಾಡುಗಳಿಗಾಗಿ ಕರೆಸುತ್ತಾರೆ. ನಾವಿಲ್ಲಿ ನಮ್ಮ ಗಾನ ಕಲೆ ತೋರಿಸಲು ಬಂದಿಲ್ಲ. ನಾವು ಬರುವುದು ನನ್ನ ಹಿಟ್ ಗಳನ್ನು ಕೇಳಿ ನನ್ನನ್ನು ಕರೆಸಿ ನೇರವಾಗಿ ನನ್ನ ಕಂಠದಿಂದ ಕೇಳಲು ಕರೆಸಿರುತ್ತಾರೆ. ಅದಕ್ಕಾಗಿ ಬಂದಿರುತ್ತೇನೆ. ಅದು ಖಂಡಿತವಾಗಿ ಹಿಂದಿಯಲ್ಲೇ ಇರಬೇಕು.
ದಕ್ಷಿಣದಲ್ಲಿರುವ ನಿಮ್ಮ ಅಭಿಮಾನಿಗಳಿಗೆ ಏನು ಹೇಳಲು ಬಯಸುತ್ತೀರಿ?
ನಾನು ದಕ್ಷಿಣ ಭಾರತದ ಸಂಗೀತವನ್ನು ಪ್ರೀತಿಸುತ್ತೇನೆ. ನಾನೆಷ್ಟು ತೆಲುಗು, ಕನ್ನಡ, ಮಲಯಾಳಂ, ತಮಿಳು ಗೀತೆಗಳನ್ನು ಹಾಡಿದ್ದೇನೆ ಎನ್ನುವುದು ನಿಮಗೂ ಗೊತ್ತು. ನಾನು ಬಾಲಿವುಡ್ ಸಿನಿಮಾಗಳನ್ನು ನೋಡುವುದಿಲ್ಲ. ಯಾಕೆಂದರೆ ಇತ್ತೀಚೆಗೆ ದಕ್ಷಿಣ ಭಾರತೀಯ ಸಿನಿಮಾಗಳಲ್ಲಿ ಸಿಗುವಂಥದ್ದು ಅಲ್ಲಿ ಸಿಗುವುದಿಲ್ಲ. ಕಥೆ , ಸಂಗೀತ, ನೃತ್ಯ ನಿರ್ದೇಶನ ಮುಖ್ಯವಾಗಿ ಕಥೆ, ನಿರ್ದೇಶನ ಅದ್ಭುತವಾಗಿರುತ್ತದೆ. ನಾಯಕರೂ ಚೆನ್ನಾಗಿದ್ದಾರೆ.
ನನ್ನ ಟಿವಿಯಲ್ಲಿ ಸೌತ್ ಇಂಡಿಯನ್ ಸಿನಿಮಾಗಳು ಹಿಂದಿಗೆ ಡಬ್ ಆಗಿರುವುದನ್ನು ನೋಡುತ್ತಿರುತ್ತೇನೆ.
ಕನ್ನಡದಲ್ಲಿ ಕಾಂತಾರ, ಕೆಜಿಎಫ್ ನೋಡಿದ್ದೇನೆ. ದಕ್ಷಿಣ ಭಾರತದ ಸ್ಟಾರ್ ನಟರು ಡೌನ್ ಟು ಅರ್ಥ್ ಆಗಿರುತ್ತಾರೆ. ಪ್ರಭಾಸ್ ಭೇಟಿಯಾದಾಗ ನನಗೆ ಇದು ನೇರವಾದ ಅನುಭವ ಆಗಿದೆ.
ನಾಲ್ಕು ದಶಕದಿಂದ ಹಾಡುತ್ತಿರುವ ನೀವು ಕಂಠಕ್ಕಾಗಿ ಏನು ಮಾಡುತ್ತೀರಿ?
ನಾನು ನನ್ನ ಕಂಠಕ್ಕಾಗಿ ಏನನ್ನೂ ಮಾಡುವುದಿಲ್ಲ. ಕೂಲ್ ಡ್ರಿಂಕ್ಸ್ ಕುಡಿಯುತ್ತೇನೆ. ಎಲ್ಲಾನೂ ತಿಂತೇನೆ.! ಅದೆಲ್ಲ ನನಗೆ ಸಮಸ್ಯೆ ಆಗಿಲ್ಲ. ನನ್ನ ಪ್ರಕಾರ ನಾವು ಗಂಟಲನ್ನು ರಕ್ಷಿಸಲು ತುಂಬ ಪಥ್ಯ ಮಾಡಿದರೆ ಅದು ಕೂಡ ನಮ್ಮನ್ನು ಹೆಚ್ಚು ಸತಾಯಿಸುತ್ತದೆ. ಗಂಟಲನ್ನು ಹಾಗೆಯೇ ಪ್ರಕೃತಿಗೆ ಬಿಟ್ಟು ಬಿಡಬೇಕು. ಎಲ್ಲ ರೀತಿಯ ವಾತಾವರಣಕ್ಕೆ ಹೊಂದಿಸಿಕೊಂಡು ಅಭ್ಯಾಸ ಮಾಡಬೇಕು. ಬಹುಶಃ ಹೆಚ್ಚಿನ ಮಂದಿಗೆ ಇದು ಸಾಧ್ಯವಾಗಬಹುದು. ಆದರೆ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದು ಆರೋಗ್ಯಕ್ಕೆ ಮುಖ್ಯವಾಗುತ್ತದೆ. ಉಳಿದಂತೆ ನನಗೆ ಮದ್ಯಪಾನ, ಧೂಮಪಾನದ ಅಭ್ಯಾಸ ಇಲ್ಲ. ಹೆಚ್ಚು ಕಾಲ ಬದುಕಬೇಕು ಅಂತ ಏನಿಲ್ಲ.ಇರುವಷ್ಟು ಕಾಲ ಆರೋಗ್ಯದಿಂದ ಬದುಕುವುದು ಮುಖ್ಯ. ಹಾಡುವ ಮೊದಲು ಪ್ರ್ಯಾಕ್ಟೀಸ್ ಅಂತೂ ಮಾಡಬೇಕಾಗುತ್ತದೆ. ಉಳಿದಂತೆ ಯಾವ ವಿಶೇಷ ಕಾಳಜಿಯ ಅಗತ್ಯವೂ ಇಲ್ಲ. ನೀವೂ ಮಾಡಬೇಡಿ!
ಅಲ್ಕಾ ಯಾಗ್ನಿಕ್, ಉದಿತ್ ನಾರಾಯಣ್ ಜತೆಗಿನ ನಿಮ್ಮ ಕಾಂಬಿನೇಶನ್ ರಹಸ್ಯವೇನು?
ಅಲ್ಕಾ ಮತ್ತು ಉದಿತ್ ನಾರಾಯಣ್ ನನಗಿಂತ ಮೊದಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ಇದರಲ್ಲಿ ಕಾಂಬಿನೇಶನ್ ಅಂತ ಏನೂ ಇಲ್ಲ. ಒಂದೇ ಕಾಲಘಟ್ಟದಲ್ಲಿ ಹೆಚ್ಚು ಜನಪ್ರಿಯರಾಗಿದ್ದು ನಿಜ. ಈಗ ರಿಯಾಲಿಟಿ ಶೋಗಳಲ್ಲೂ ಜತೆಯಾಗಿ ಕಾಣಿಸುತ್ತೇವೆ. ನಾವು ಪರಸ್ಪರ ತಮಾಷೆ ಮಾಡಿಕೊಳ್ಳುವುದು ಕೂಡ ರಿಯಾಲಿಟಿ ಶೋ ಪ್ರೇಕ್ಷಕರಿಗಾಗಿಯೇ ಹೊರತು ನೈಜ ಭೇಟಿಯಲ್ಲಿ ಅಂಥ ತಮಾಷೆಗಳು ಇರುವುದಿಲ್ಲ. ಆದರೆ ನಾವು ಆತ್ಮೀಯರಂತೂ ಹೌದು.

