ಅಮೃತಾಂಜನ್ ಶಾರ್ಟ್ ಮೂವಿ ಎಲ್ಲರಿಗೂ ನೆನಪಿರಬಹುದು. ನಕ್ಕು ನಕ್ಕು ಖುಷಿಯಾಗಿದ್ದರು. ಇದೀಗ ಅದೇ ತಂಡ ಸಿನಿಮಾವೊಂದನ್ನು ಮಾಡಿದೆ. ಚಿತ್ರಕ್ಕೆ ಅಮೃತಾ ಅಂಜನ್ ಎಂದು ಹೆಸರಿಟ್ಟಿರುವ ಬಗ್ಗೆ ನಿರ್ದೇಶಕ ಜ್ಯೋತಿ ರಾವ್ ಮೋಹಿತ್ ಅನುಭವವನ್ನು ಹಂಚಿಕೊಂಡಿದ್ದಾರೆ. “ಅಮೃತಾಂಜನ್ ಶಾರ್ಟ್ ಮೂವಿಗೂ ಈ ಅಮೃತಾ ಅಂಜನ್ ಸಿನಿಮಾಗೂ ಬಹಳ ವ್ಯತ್ಯಾಸವಿದೆ. ನಾನು ಇದಕ್ಕೂ ಮೊದಲು ಸೋಡಾಬುಡ್ಡಿ ಎಂಬ ಸಿನಿಮಾ ಮಾಡಿದ್ದೆ. ಅದು ಸೋತು ಹೋಯ್ತು. ಆಮೇಲೆ ಕೆಲಸ ಇಲ್ಲದೆ ಇದ್ದಾಗ ಒಂದು ಶಾರ್ಟ್ ಮೂವಿ ಮಾಡಿದ್ದೆ, ಅದೇ ಅಮೃತಾಂಜನ್. ಇತಿಹಾಸದ ಥರನೇ ಆಗೋಯ್ತು. ಆಮೇಲೆ ಏನಾದ್ರು ಮಾಡ್ಬೇಕು ಅಂತ ಯೋಚ್ನೆ ಮಾಡ್ತಾ ಇದ್ದಾಗ ಅಮೃತಾಂಜನ್ ಸಿನಿಮಾವನ್ನೇ ಬಿಗ್ ಸ್ಕ್ರೀನ್ ಗೆ ಮಾಡೋಣ ಅಂತ ನಿರ್ಧಾರ ಮಾಡಿದೆವು. ಸಿನಿಮಾ ಫಾರ್ಮೆಟ್ ಗೆ ಏನೆಲ್ಲಾ ಬೇಕೋ ಅದೆಲ್ಲವನ್ನು ಮಾಡಿದ್ದೇವೆ” ಅಂತಾರೆ ಜ್ಯೋತಿರಾವ್ ಮೋಹಿತ್.
ಈ ಸಿನಿಮಾದ ಮೇಲೂ 100% ನಿರೀಕ್ಷೆಯನ್ನ ಇಟ್ಟುಕೊಳ್ಳಬಹುದು. ಎಷ್ಟು ಡೀಪ್ ಆಗಿ ವರ್ಕ್ ಮಾಡಿದ್ದೇವೆ, ಅಂದ್ರೆ ಒಂದು ವರ್ಷ ಕೂತು ಕಥೆ ಬರೆದಿದ್ದೇವೆ. 3 ತಿಂಗಳು ರಿಹರ್ಸಲ್ ಮಾಡಿದ್ದೇವೆ. ಅದೇ ತಂಡವೇ ಸೇರಿ ವರ್ಕ್ ಮಾಡಿದ್ದೇವೆ. ಸಿನಿಮಾ ನೋಡುವಾಗ ಮನಸಾರೆ 40-45 ಸಲ ನಾವೇ ನಕ್ಕಿದ್ದೇವೆ. ಪ್ರತಿ ಸೀನ್ ನಲ್ಲೂ ನಗುವಿಗೆ ಪ್ರಾಮುಖ್ಯತೆ ನೀಡಿದ್ದೇವೆ. ಶಾರ್ಟ್ ಫಿಲ್ಮ್ ನಲ್ಲಿ ಏನು ಹೊಸವಿಷಯ ಕೊಟ್ಟಿದೇವೋ, ಇಲ್ಲಿಯೂ ಒಂದಷ್ಟು ಹೊಸ ವಿಷಯಗಳನ್ನ ಜನರಿಗೆ ಕೊಟ್ಟಿದ್ದೀವೆ. ನಾನು ಕುಡಿಯೋದು ಬಿಟ್ಟರೆ ನೀನು ಮೇಕಪ್ ಹಾಕೋದು ಬಿಡ್ತೀಯ? ಎನ್ನುವ ಡೈಲಾಗ್ ಮಾತ್ರ ಇಲ್ಲಿಯೂ ತೆಗೆದುಕೊಂಡಿದ್ದೇವೆ. ಅದರ ಹೊರತಾಗಿ ಕಥೆ ಎಳೆ ತುಂಬಾನೇ ಹೊಸದಾಗಿದೆ. ಪ್ರತಿಯೊಬ್ಬ ತಂದೆ – ತಾಯಿಯೂ ಮಕ್ಕಳಿಗೆ ಈ ಥರ ಮಾಡ್ಬೇಕು ಅಂದ್ಕೊಳ್ತಾರೆ” ಎನ್ನುವ ಮೋಹಿತ್ ಚಿತ್ರದ ಬಗ್ಗೆ ಭಾರೀ ನಿರೀಕ್ಷೆಯನ್ನೇ ಇಟ್ಟುಕೊಂಡಿದ್ದಾರೆ.

ಕಿರುಚಿತ್ರದ ಮೂಲಕ ಹೆಸರಾಗಿರುವ ಈ ಚಿತ್ರತಂಡಕ್ಕೆ ಅದೇ ಒಂದು ಸಮಸ್ಯೆಯಾಗಿಯೂ ಕಾಡಿದೆ. ನಿರ್ದೇಶಕರೇ ಹೇಳುವಂತೆ, ” ನಾವು ಸಿನಿಮಾ ಮಾಡೋಕೆ ಹೊರಟಾಗ ನೀವು ಶಾರ್ಟ್ ಫಿಲ್ಮ್ ಮೇಕರ್ಸ್ ಅಂದ್ರು, ಶಾರ್ಟ್ ಫಿಲ್ಮ್ ಮಾಡಿದಂಗೆ ಮಾಡಿದ್ರೆ ಯಾರು ಸಿನಿಮಾ ನೋಡಲ್ಲ. ಮೊಬೈಲ್ ನೋಡೋ ವೀವರ್ಸ್ ಥಿಯೇಟರ್ ಗೆ ಬರಲ್ಲ, ಇದು ವರ್ಕೌಟ್ ಆಗಲ್ಲ.. ಹೀಗೆ ಸಾಕಷ್ಟು ಚಾಲೆಂಜಸ್ ಬಂತು. ನಾರ್ಮಲ್ ಆಗಿ ಏನೋ ಹೊಸದಾಗಿ ಮಾಡುತ್ತೇವೆ ಅಂದಾಗ ಈ ರೀತಿಯ ಮಾತುಗಳು ಸರ್ವೇ ಸಾಮಾನ್ಯ. ಸೆನ್ಸಾರ್ ಆಗಿದೆ. ಕರೆಕ್ಷನ್ ಇದ್ರೆ ಒಳಗೆ ಕರೆದು ಹೇಳ್ತಾರೆ. ಆದರೆ ಅವರೇ ಬಂದು, ಕೈ ಕುಲುಕಿ ತುಂಬಾ ಚೆನ್ನಾಗ್ ಮಾಡಿದ್ದೀಯಾ ಸಿನಿಮಾನ ಅಂತ ಹೇಳಿದ್ದಾರೆ. ಅದೊಂದು ಈಗ ಪ್ಲಸ್ ಪಾಯಿಂಟ್. ಫ್ಯಾಮಿಲಿ ಆಡಿಯನ್ಸ್ ಆಗಿರಬಹುದು, ಯೂಥ್ಸ್ ಆಗಿರಬಹುದು ಯಾರಿಗೂ ಬೋರ್ ಹೊಡೆಸಲ್ಲ. ಇದೊಂದು ಟ್ರೆಸ್ ಬಸ್ಟರ್ ಥರ ಇರುತ್ತೆ. ಲೈಫ್ ನಲ್ಲಿ ನಿಮಗೇನಾದರೂ ಬೇಜಾರಾಗಿದ್ರೆ ನಮ್ಮ ಸಿನಿಮಾಗೆ ಬನ್ನಿ ಮನಸಾರೆ ನಕ್ಕು ಹೋಗ್ತೀರಾ ಅನ್ನೋ ಭರವಸೆ ನೀಡ್ತೇವೆ ಎಂದು ಜ್ಯೋತಿರಾವ್ ನಂಬಿಕೆಯಿಂದ ಹೇಳುತ್ತಾರೆ.
ಈ ಸಿನಿಮಾದಲ್ಲಿ ಮಾಂಟೇಜಸ್ ಸಾಂಗ್ಸ್ ಇದೆ. 80% ಕಾಮಿಡಿ ಇದ್ರೆ 15% ಎಮೋಷನ್ಸ್ ಇದೆ. ಅಪ್ಪ ಮಗನ ಬಗ್ಗೆ ದೊಡ್ಡ ಎಮೋಷನ್ಸ್ ಇದೆ. ಕಥೆಗೆ ಏನ್ ಬೇಕೋ ಆ ರೀತಿ ಸಾಂಗ್ಸ್ ತಗೊಂಡ್ ಹೋಗಿದ್ದೇವೆ. ಬೆಂಗಳೂರು, ಮಂಗಳೂರು, ಉಡುಪಿ ಭಾಗದಲ್ಲಿ ಶೂಟ್ ಮಾಡಲಾಗಿದೆ. ಸದ್ಯ ಸಿನಿಮಾ ರಿಲೀಸ್ ಗೆ ತಯಾರಾಗಿದೆ.
