ಚಕ್ರವರ್ತಿ ಚಂದ್ರಚೂಡ್ ಯಾರಿಗೆ ಗೊತ್ತಿಲ್ಲ ಹೇಳಿ? ಪತ್ರಕರ್ತರಾಗಿ, ಸಮಾಜ ಸೇವಕರಾಗಿ, ಕತೆಗಾರರಾಗಿ , ಗೀತರಚನೆಕಾರರಾಗಿ ಮಾತ್ರವಲ್ಲ ಆಕಾಶದ ಕೆಳಗಿನ ವಿಚಾರಗಳನ್ನೆಲ್ಲ ತಿಳಿದುಕೊಂಡು ವಾರ್ತಾ ವಾಹಿನಿಗಳ ಚರ್ಚೆಗಳ ಮೂಲಕವೂ ಗುರುತಿಸಿಕೊಂಡವರು. ಇವೆಲ್ಲದರ ಜತೆಗೆ ಇತ್ತೀಚೆಗೆ ಸಿನಿಮಾ ಕಲಾವಿದರಾಗಿ, ನಿರ್ದೇಶಕರಾಗಿಯೂ ಹೆಜ್ಜೆ ಇಡುತ್ತಿರುವ ಅವರಿಗೆ ನಿರ್ದೇಶನ ವಿಭಾಗದಲ್ಲಿ ಜೀವಮಾನ ಸಾಧನೆಗೆ ಸನ್ಮಾನ ನಡೆಸಿದರೆ ಹೇಗಿರುತ್ತದೆ?! ಬಹುಶಃ ಕೇಳಿಕೊಂಡು ಸನ್ಮಾನ ಮಾಡಿಸಿಕೊಳ್ಳುವವರಿಗೆ ಖುಷಿಯಾಗಿ ಬಿಡಬಹುದು. ಆದರೆ ಚಂದ್ರಚೂಡ್ ರಂಥ ಸೂಕ್ಷ್ಮ ಮನಸಿನ ವ್ಯಕ್ತಿ ಅದನ್ನು ಸಾರಾಸಗಟಾಗಿ ನಿರಾಕರಿಸಿದ್ದಾರೆ. ಹಾಗಂತ, ಅದನ್ನು ಹೇಳಿಕೊಳ್ಳಲು ಅವರ ಬಳಿ ಕಾರ್ಯಕ್ರಮ ಆಯೋಜಿಸಿದವರ ನಂಬರ್ ಕೂಡ ಇಲ್ಲ. ಹಾಗಾಗಿ ಆಹ್ವಾನ ಪತ್ರಿಕೆಯ ಚಿತ್ರವನ್ನೇ ಸಾಮಾಜಿಕ ಜಾಲತಾಣದಲ್ಲಿ ಹಾಕಿ ತಾವು ಈ ಸನ್ಮಾನಕ್ಕೆ ಅರ್ಹನಲ್ಲ ಎಂದು ಬರೆದುಕೊಂಡಿದ್ದಾರೆ.
ನಡೆದಿದ್ದೇನು?
ನಾನು ನನ್ ಜಾನು ಚಿತ್ರ ತಂಡದವರು ತಮ್ಮ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಿದ್ದಾರೆ. ಆ ನಿಟ್ಟಿನಲ್ಲಿ ಅದೇ ವೇದಿಕೆಯ ಮೇಲೆ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕರಿಗೆ ಜೀವಮಾನ ಸಾಧನೆಗೆ ಸನ್ಮಾನ ಮಾಡಲು ಮುಂದಾಗಿದ್ದಾರೆ. ಸಾಧಕರ ಪಟ್ಟಿಯಲ್ಲಿ ರಾಜ್ ಚಿತ್ರಗಳ ನಿರ್ದೇಶಕ ಜೋಡಿ ದೊರೆ ಭಗವಾನ್ ಖ್ಯಾತಿಯ ಭಗವಾನ್, ಸಿರಿವಂತನಾದರೂ ಹಾಡಿನ ರಚನೆಯಿಂದಲೇ ಮನೆಮಾತಾದ ಸಿ.ವಿ ಶಿವಶಂಕರ್, ಹಿರಿಯ ನಿರ್ದೇಶಕರಾದ ಭಾರ್ಗವ, ಜೋಸೈಮನ್, ನಾಗಣ್ಣ, ಓಂ ಸಾಯಿ ಪ್ರಕಾಶ್ ಮೊದಲಾದವರ ಪಟ್ಟಿಯಲ್ಲಿ ಚಂದ್ರಚೂಡ್ ಹೆಸರನ್ನು ಕೂಡ ಸೇರಿಸಲಾಗಿದೆ. ವಿಚಿತ್ರ ಏನೆಂದರೆ ಚಂದ್ರಚೂಡ್ ಅವರ ವಯಸ್ಸಿನಷ್ಟು ವರ್ಷ ಅವರಿಗೆಲ್ಲ ವೃತ್ತಿ ಕ್ಷೇತ್ರದಲ್ಲಿನ ಅನುಭವಗಳಿವೆ. ಹಾಗಾಗಿ ಅವರೊಂದಿಗೆ ಕುಳ್ಳಿರಿಸಿ ತಮ್ಮನ್ನು ಸನ್ಮಾನಿಸಿದರೆ ಅದು ಅವರಿಗೆ ಮಾಡುವ ಅವಮಾನ ಎನ್ನುವುದನ್ನು ಖುದ್ದು ಚಂದ್ರಚೂಡ್ ಅರ್ಥ ಮಾಡಿಕೊಂಡಿದ್ದಾರೆ. ಮಾತ್ರವಲ್ಲ, ಸಿನಿಮಾ ನಿರ್ದೇಶನಕ್ಕೆ ಸಂಬಂಧಿಸಿದಂತೆ ಚಂದ್ರಚೂಡ್ ಇನ್ನೂ ಅಂಬೆಗಾಲಿಡುತ್ತಿರುವ ಮಗು. ಹಾಗಾಗಿ ಹಿರಿಯ ನಿರ್ದೇಶಕರೊಂದಿಗೆ ಜೀವಮಾನ ಸಾಧನೆಯ ಸನ್ಮಾನಕ್ಕೆ ನಯವಾಗಿಯೇ ನಿರಾಕರಿಸಿದ್ದಾರೆ. ವಿಚಿತ್ರ ಏನೆಂದರೆ ನಾಳೆ ನಡೆಯಲಿರುವ ಸಮಾರಂಭಕ್ಕೆ ಈಗಲೂ ಆಯೋಜಕರು ನೇರವಾಗಿ ಚಂದ್ರಚೂಡ್ ಅವರನ್ನು ಆಹ್ವಾನಿಸಿಲ್ಲ. ಹಾಗಂತ ಅವರು ತಪ್ಪಾಗಿ ಚಂದ್ರಚೂಡ್ ಅವರ ಹೆಸರನ್ನು ಪತ್ರಿಕೆಯಲ್ಲಿ ಅಚ್ಚು ಹಾಕಿದ ಹಾಗೆಯೂ ಇಲ್ಲ! ಯಾಕೆಂದರೆ, ಅವರ ಫೊಟೋ ಸಮೇತ ಹೆಸರು ಹಾಕಿದ್ದಾರೆ! ಹಾಗಾಗಿಯೇ ಕುತೂಹಲ ನಿವಾರಣೆಗಾಗಿ ತಾವು ಈ ಕಾರ್ಯಕ್ರಮದಲ್ಲಿ ಪ್ರೇಕ್ಷಕನಾಗಿ ಪಾಲ್ಗೊಳ್ಳಲಿರುವುದಾಗಿ ಚಂದ್ರಚೂಡ್ ಹೇಳಿಕೊಂಡಿದ್ದಾರೆ. ‘ಮೇಲೊಬ್ಬ ಮಾಯಾವಿ’ ಎನ್ನುವ ಸಿನಿಮಾಗೆ ಚಿತ್ರಕತೆ ಬರೆದಿರುವ ಅವರಿಗೆ ನಿಜಕ್ಕೂ ಮೇಲೊಬ್ಬ ಮಾಯಾವಿ ಆಟ ಆಡಿದ್ದಾನೆ ಎನ್ನುವ ಸಂದೇಹ ಮೂಡಿದ್ದರೆ ಅಚ್ಚರಿಯಿಲ್ಲ.
ಒಟ್ಟಿನಲ್ಲಿ ಸನ್ಮಾನ ನಿರಾಕರಿಸುವ ಮೂಲಕವೇ ಸನ್ಮಾನಿತ ಸ್ಥಾನ ಸೇರಿಕೊಳ್ಳುವ ಅಪರೂಪದ ವ್ಯಕ್ತಿಯಾಗಿ ಚಕ್ರವರ್ತಿ ಚಂದ್ರಚೂಡ್ ಗುರುತಿಸಿಕೊಂಡಿರುವುದು ಸತ್ಯ.