ಮಾಸ್ ಎಂಟರ್ಟೇನರ್ ಕೆಜಿಎಫ್ ಚಿತ್ರದ ಸಂಭಾಷಣೆಕಾರ ರಾಘವ್ ವಿನಯ್ ಶಿವಗಂಗೆ ಅವರು ನಿರ್ದೇಶಿಸಿ, ಅದೇ ಕಾರಣದಿಂದ ಬಹು ನಿರೀಕ್ಷಿತವಾಗಿ ಮೂಡಿಬರುತ್ತಿರುವ ಚಿತ್ರ ಟಾಮ್ ಆ್ಯಂಡ್ ಜೆರ್ರಿ.
ಚಿತ್ರದಲ್ಲಿ ನಾಯಕ ಮತ್ತು ನಾಯಕಿ ಜತೆಯಾಗಿದ್ದರು ಕೂಡ ಸದಾ ಜಗಳವಾಡುತ್ತಿರುತ್ತಾರೆ ಹಾಗಾಗಿ ಚಿತ್ರಕ್ಕೆ ಟಾಮ್ ಆ್ಯಂಡ್ ಜೆರ್ರಿ ಎಂದು ಹೆಸರಿಡಲಾಗಿದೆ. ಹೆಚ್ಚಿನ ದೃಶ್ಯಗಳುರಿಯಲಿಸ್ಟಿಕ್ ಆಗಿವೆ. ಐದು ಹಾಡುಗಳಿವೆ. ಆದರೆ ಯಾವುದೇ ಡ್ಯಾನ್ಸ್ ನಂಬರ್ ಗಳಿಲ್ಲ. ಎಲ್ಲವೂ ಕತೆಯೊಂದಿಗೇ ಸಾಗುತ್ತದೆ ಎಂದು ನಿರ್ದೇಶಕರು ವಿವರಿಸಿದರು. ಅವರು ತಮ್ಮ ಅನುಭವದ ಬಗ್ಗೆ ಹೇಳುತ್ತಾ,ರಂಗಾಯಣದಿಂದ ಚಿತ್ರರಂಗಕ್ಕೆ ಬಂದೆ. ‘ಶ್ರಾವಣಿ ಸುಬ್ರಮಣ್ಯ’ ಚಿತ್ರದ ಮೂಲಕ ಅಸಿಸ್ಟೆಂಟ್ ಆಗಿ ಬಂದೆ. ಈ ಚಿತ್ರದ ಬಗ್ಗೆ ತುಂಬ ನಿರೀಕ್ಷೆಗಳಿವೆ ಎಂದರು. ಚಿತ್ರದಲ್ಲಿ’ನಾಳೆಯ ಬಿರಿಯಾನಿ ಪ್ಲ್ಯಾನಲ್ಲಿ ಇವತ್ತಿನ ಚಿತ್ರಾನ್ನನ ದೂರ ಮಾಡಬೇಡಿ’ ಎನ್ನುವ ಸಂದೇಶ ನೀಡಲು ಪ್ರಯತ್ನಿಸುವುದಾಗಿ ರಾಘವ್ ವಿನಯ್ ಶಿವಗಂಗೆ ಹೇಳಿದರು.
ಚಿತ್ರದ ನಾಯಕ ನಿಶ್ಚಿತ್ ಈ ಹಿಂದೆ ‘ಗಂಟುಮೂಟೆ’ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದರು. ತಮಗೆ ಪ್ರೇಮಕ್ಕಿಂತ ಹೊಡೆದಾಟದ ಸನ್ನಿವೇಶಗಳು ಇಷ್ಟ. ಚಿತ್ರದಲ್ಲಿ ಅಂಥ ಅವಕಾಶ ದೊರಕಿರುವುದು ಖುಷಿಯಾಗಿದೆ ಎಂದು ನಿಶ್ಚಿತ್ ಹೇಳಿದರು.ನಾಯಕಿ ಚೈತ್ರಾ ರಾವ್ ತಮಗೆ ಜೆರ್ರಿಲುಕ್ ಸಿಕ್ಕಿರುವುದು ಖುಷಿಯಾಗಿದೆ ಎಂದರು. ಚಿತ್ರದಲ್ಲಿ ಸಂಪತ್ ಒಂದು ಪ್ರಧಾನ ಪಾತ್ರದಲ್ಲಿ ನಟಿಸಲಿದ್ದು ತಮಗೆ ಪಾತ್ರದ ಬಗ್ಗೆ ಯಾವುದೇ ವಿವರ ನೀಡಿಲ್ಲ ಎಂದರು.
ಚಿತ್ರಕ್ಕೆ ಲಯ ಕೋಕಿಲ ಅವರ ಪುತ್ರ ಮ್ಯಾಥ್ಯೂಸ್ ಮನು ಸಂಗೀತ ನಿರ್ದೇಶಕ. ತಾವು ಚಿತ್ರದ ಕತೆ ಕೇಳದೆ ಒಪ್ಪಿಕೊಂಡೆ. ನಿರ್ದೇಶಕರು ನನ್ನ ಆತ್ಮೀಯರು. ರಘುಶಾಸ್ತ್ರಿ, ಪ್ರವೀಣ್ ಭಟ್, ಅರುಣ್ ಪ್ರಸಾದ್ ಮತ್ತು ನಾನು ಈ ಚಿತ್ರಕ್ಕೆ ಹಾಡುಗಳನ್ನು ಬರೆದಿದ್ದೇವೆ. ಚಿತ್ರದ ಹಿನ್ನೆಲೆ ಸಂಗೀತಕ್ಕಾಗಿ ತುಂಬ ಕೆಲಸ ಮಾಡಲಿದ್ದೇನೆ ಎಂದು ಅವರು ಹೇಳಿದರು.
ಕೆಜಿಎಫ್ ನ ಎರಡನೇ ಯೂನಿಟ್ ಛಾಯಾಗ್ರಾಹಕರಾಗಿ ಕೆಲಸ ಮಾಡಿರುವ ಸಂಕೇತ್ ಚಿತ್ರದ ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ಸಾಹಸ ನಿರ್ದೇಶಕ ಅರ್ಜುನ್ ರಾಜ್ ಚಿತ್ರದ ಕಾರ್ಯಕಾರಿ ನಿರ್ಮಾಪಕ ವಿನಯಚಂದ್ರ ಕೋಟೇಶ್ವರದ ಕಾಲೇಜ್ ನಲ್ಲಿ ಉಪನ್ಯಾಸಕರಾಗಿ ವೃತ್ತಿಯಲ್ಲಿದ್ದವರು. ಗುಜರಾತ್ ನಲ್ಲಿ ವೃತ್ತಿಯಲ್ಲಿರುವ ರಾಜು ಶೇರಿಗಾರ್ ಚಿತ್ರವನ್ನು ನಿರ್ಮಿಸಿದ್ದು ಅವರು ಕೂಡ ಮೂಲತಃ ಕುಂದಾಪುರ ನಿವಾಸಿಯಾಗಿದ್ದಾರೆ. ಚಿತ್ರದಲ್ಲಿ ಜೈಜಗದೀಶ್, ತಾರಾ ಅನುರಾಧ, ರಂಗಾಯಣ ರಘು, ರಾಕ್ಲೈನ್ ಸುಧಾಕರ್, ಪದ್ಮಜಾ ರಾವ್, ಕಡ್ಡಿಪುಡಿ ಚಂದ್ರು ಮೊದಲಾದವರ ತಾರಾಗಣ ಇರಲಿದೆ.