ಲವ್ ಮಾಕ್ಟೈಲ್: ಮೊದಲ ಟಿಕೆಟ್ ಖರೀದಿಸಲಿರುವ ಕಿಚ್ಚ ಸುದೀಪ್

ಡಾರ್ಲಿಂಗ್ ಕೃಷ್ಣ ವಾಪಾಸಾಗಿದ್ದಾರೆ. ಅವರ ಚಿತ್ರದ ಹೆಸರು ಲವ್ ಮಾಕ್ಟೈಲ್. ಚಿತ್ರದ ಟ್ರೇಲರ್ ಗೆ ತಮ್ಮ ಧ್ವನಿ ನೀಡುವ ಮೂಲಕ ಮನ ಸೆಳೆದ ಕಿಚ್ಚ ಸುದೀಪ್ ಅವರು ಗುರುವಾರ ಚಿತ್ರದ ಆಡಿಯೋ ಬಿಡುಗಡೆಯನ್ನ ನೆರವೇರಿಸಿದ್ದು, ಅದೇ ವೇಳೆ ಸಿನಿಮಾ ತೆರೆಕಂಡಾಗ ಮೊದಲ ಟಿಕೆಟ್ ತಾವೇ ಖರೀದಿಸುವ ಭರವಸೆಯನ್ನು ಕೂಡ ನೀಡಿದ್ದಾರೆ.

ಯಾರಾದರೂ ಒಬ್ಬ ವ್ಯಕ್ತಿಗೆ ನಾವು ಕನೆಕ್ಟ್ ಆದರೆ ಅವರನ್ನು ಭೇಟಿಯಾಗಲು ನೂರು ಕಿಮೀ ಇದ್ದರೂ ಹತ್ತೇ ನಿಮಿಷದಲ್ಲಿ ತಲುಪಬಹುದು. ಕೃಷ್ಣ ಅವರು ನನಗೆ ಕ್ರಿಕೆಟ್ ಟೈಮಲ್ಲಿ ಹೆಚ್ಚು ಪರಿಚಯವಾದವರು.  ಅವರು ‘ಹುಚ್ಚ 2’ ಸಿನಿಮಾ ಮಾಡಿದಾಗಲೂ ನನ್ನನ್ನು ಭೇಟಿಯಾಗಿದ್ದರು. ಅವರು ನಿಜವಾಗಿಯೂ ಹುಚ್ಚನ ಹಂತ ತಲುಪಿದ್ದರು. ಯಾಕೆಂದರೆ ಅವರ ಪ್ರಾಮಾಣಿಕ ಪ್ರಯತ್ನಗಳಿಗೆ ಸಿಗಬೇಕಾದ ಗೆಲುವು ಸಿಕ್ಕಿಲ್ಲ. ಆದರೆ ಒಳ್ಳೆಯವರಿಗೆ ಖಂಡಿತವಾಗಿ ಒಂದು ದಿನ ಒಳ್ಳೆಯದಾಗುತ್ತದೆ. ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಈ ಸಿನಿಮಾ ನೋಡಿ ನಿಮ್ಮ ತಂದೆಯೇ ಎಮೋಶನಲ್ ಆಗಬಹುದು. ಅಂಥ ದೃಶ್ಯಗಳಿವೆ. ಚಿತ್ರದ ಮೊದಲ ಟಿಕೆಟ್ ನಾನೇ ಕೊಳ್ಳುತ್ತೇನೆ ಎಂದು ಸುದೀಪ್ ಹೇಳಿದರು.

ರಘು ದೀಕ್ಷಿತ್ ಅವರು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, `ಕಂದ ಐ ಲವ್ಯು..’ ಎನ್ನುವ ಗೀತೆ ಈಗಾಗಲೇ ಯೂ ಟ್ಯೂಬ್ ನಲ್ಲಿ ಜನಪ್ರಿಯವಾಗಿರುವುದಕ್ಕೆ ತುಂಬ ಖುಷಿಯಾಗಿದೆ. ಅದಕ್ಕೆ ರಾಘವೇಂದ್ರ ಕಾಮತ್ ಅವರ ರಚನೆಯೂ ಕಾರಣ. ಅದರಲ್ಲಿ ಕೂಡ ಕಿಚ್ಚ ಸುದೀಪ್ ಅವರು ಕಾರ್ಯಕ್ರಮಕ್ಕೆ ಆಗಮಿಸಿ ಪ್ರೋತ್ಸಾಹ ನೀಡಿರುವುದಕ್ಕೆ ಕೋಟಿ ವಂದನೆಗಳು ಎಂದು ಚಿತ್ರದ ನಾಯಕ, ನಿರ್ದೇಶಕ ಮತ್ತು ನಿರ್ಮಾಪಕರಾದ ಕೃಷ್ಣ ಈ ಸಂದರ್ಭದಲ್ಲಿ ಹೇಳಿದರು.

ಪ್ರೇಮದ ಚಿತ್ರವಾದರೂ, ಚಿತ್ರದಲ್ಲಿ ಮುಜುಗರವಾಗುವಂಥ ಸನ್ನಿವೇಶಗಳು ಯಾವುದೂ ಇಲ್ಲ. ಹಲವು ಹಣ್ಣುಗಳ ಮಿಶ್ರಣದಂತೆ ಇಲ್ಲಿ ಹಲವು ಹೃದಯಗಳ ಮಿಶ್ರಣವಿದೆ. ಅದಕ್ಕಾಗಿ ಚಿತ್ರಕ್ಕೆ ಮಾಕ್ಟೈಲ್ ಎಂದು ಹೆಸರಿಟ್ಟಿದ್ದೇವೆ ಎಂದು ಕೃಷ್ಣ ಹೇಳಿದರು. ಚಿತ್ರದಲ್ಲಿ ನಾಯಕಿಯಾಗಿ ಅಮೃತಾ ಅಯ್ಯಂಗಾರ್ ನಟಿಸಿದ್ದಾರೆ. ಅವರು ಈಗಾಗಲೇ `ಪಾಪ್ ಕಾರ್ನ್ ಮಂಕಿ ಟೈಗರ್’  ಸಿನಿಮಾದಲ್ಲಿ ನಟಿಸಿದ್ದು ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇರಿಸಿರುವುದಾಗಿ ಹೇಳಿದ್ದಾರೆ. ಇದರಲ್ಲಿ ತ್ರಿಕೋನ ಪ್ರೇಮಕತೆಯಿದೆ. ಮೊದಲನೇ ಬಾರಿಯಾದರೂ, ಕೃಷ್ಣ ಮತ್ತು ಮಿಲನಾ ನಾಗರಾಜ್ ತುಂಬ ಚೆನ್ನಾಗಿ ನಿರ್ಮಾಣ ನಿರ್ವಹಣೆ ಮಾಡಿದ್ದಾರೆ ಎಂದು ಅಮೃತಾ ಅಯ್ಯಂಗಾರ್ ಕೊಂಡಾಡಿದರು. 

ಚಿತ್ರದ ಸಂಕಲನ ಮತ್ತು ಛಾಯಾಗ್ರಹಣವನ್ನು ಶ್ರೀ  ಮೈಂಡ್ಸ್ ನಿರ್ವಹಿಸಿದ್ದಾರೆ. ತಿಂಗಳಾಂತ್ಯಕ್ಕೆ ಚಿತ್ರವನ್ನು ತೆರೆಗೆ ತರುವ ಯೋಜನೆ ಹಾಕಲಾಗಿದೆ.

Recommended For You

Leave a Reply

error: Content is protected !!