ಇದು ಸಿನಿಮಾ ಪಾತ್ರದ ಸಂಗತಿ ಅಲ್ಲವೇ ಅಲ್ಲ. ನಿಜಕ್ಕೂ ಹಿರಿಯ ನಟಿ ಭವ್ಯಾ ಅವರಿಗೆ ಪ್ರಾಂಶುಪಾಲರ ಸ್ಥಾನ ನೀಡಲಾಗಿದೆ. ಅದು ಸಾಧ್ಯವಾಗಿದ್ದು ‘ಫ್ಲೆಮಿಂಗೋ ಸೆಲೆಬ್ರಿಟೀಸ್ ವಲ್ಡ್ ಪ್ರೈವೇಟ್ ಲಿಮಿಟೆಡ್’ ಎನ್ನುವ ಸಂಸ್ಥೆಯ ಫಿಲ್ಮ್ ಇನ್ಸ್ಟಿಟ್ಯೂಷನ್ ಮೂಲಕ.
ನಟನೆ, ನಿರ್ದೇಶನ, ನಿರೂಪಣೆಯ ತರಬೇತಿಗಳನ್ನು ನೀಡುವ ಸಿನಿಮಾ ಶಿಕ್ಷಣ ಸಂಸ್ಥೆಗಳಿಗೆ ಬೆಂಗಳೂರಲ್ಲಿ ಕೊರತೆಗಳಿಲ್ಲ. ಆದರೆ ಇತ್ತೀಚೆಗೆ ಹಲವಾರು ಸಂಸ್ಥೆಗಳು ಚಿಗುರಿಕೊಂಡಷ್ಟೇ ವೇಗದಲ್ಲಿ ಕಮರಿ ಹೋದ ಉದಾಹರಣೆಗಳಿವೆ. ಆದರೆ ಸತತ ಏಳು ವರ್ಷಗಳಿಂದ ಯಶಸ್ವಿಯಾಗಿ ಸಾಗಿ ಬರುತ್ತಿರುವ ಸಂಸ್ಥೆ , ಫ್ಲೆಮಿಂಗೋ ಆಗಿದ್ದು ಅದರ ಪ್ರಾಂಶುಪಾಲೆಯ ಸ್ಥಾನ ಸ್ವೀಕರಿಸಲು ಖುಷಿಯಿದೆ ಎಂದು ಭವ್ಯಾ ಅವರು ಹೇಳಿದರು. ಸಂಸ್ಥೆ ಇದರ ಸಂಸ್ಥಾಪಕರಾದ ಧವನ್ ಸೋಹ ಮೂಲಕ ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ. ಅದೆಲ್ಲವೂ ಯಶಸ್ವಿಯಾಗಿ ಕಾರ್ಯಗತವಾಗಲು ತಮ್ಮ ಕಡೆಯಿಂದ ಬೇಕಾಗಿರುವಂಥ ಸಲಹೆ, ಸೂಚನೆಗಳನ್ನು ನೀಡಲು ತಾವು ಬದ್ಧವಾಗಿರುವುದಾಗಿ ಭವ್ಯಾ ಅವರು ಈ ಸಂದರ್ಭದಲ್ಲಿ ಹೇಳಿದರು.
ಫ್ಲೆಮಿಂಗೋ ಸಂಸ್ಥೆಯ ಪ್ರಥಮ ಪಾಂಶುಪಾಲರಾಗಿದ್ದಿದ್ದು ಸಂಕೇತ್ ಕಾಶಿಯವರು. ಅವರ ನಿಧನದ ಬಳಿಕ ಆ ಸ್ಥಾನವನ್ನು ತುಂಬಿದವರು ನಟಿ ರೇಖಾದಾಸ್. ಅವರಿಬ್ಬರ ಬಳಿಕ ನೂತನ ಪ್ರಾಂಶುಪಾಲರಾಗಿ ಆಗಮಿಸಿರುವ ಭವ್ಯಾ ಅವರಿಗೆ ಆದರದ ಸ್ವಾಗತ ಕೋರುವುದಾಗಿ ಧವನ್ ಸೋಹಾ ಹೇಳಿದರು. ಇದುವರೆಗೆ ಈ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿರುವಂಥ ಡಾ. ಸರಿಗಮ ವಿಜಿ, ನಟಿ ಸಾರಿಕಾ ರಾಜೇ ಅರಸ್ ಮೊದಲಾದವರ ಸೇವೆಗಳನ್ನು ಧವನ್ ಈ ಸಂದರ್ಭದಲ್ಲಿ ನೆನಪಿಸಿಕೊಂಡರು.
ಸಂಸ್ಥೆಯು ಕಳೆದ ಐದು ವರ್ಷಗಳಿಂದ ಚಿತ್ರರಂಗದ ಸಾಧಕರನ್ನು ಗುರುತಿಸಿ, ಫ್ಲೆಮಿಂಗೋ ಸಾಧಕ ಪ್ರಶಸ್ತಿಯನ್ನು ನೀಡುತ್ತಿದ್ದು, ಈ ಬಾರಿಯ ವಿತರಣೆ ಕೂಡ ಇದೇ ಸಂದರ್ಭದಲ್ಲಿ ಮಾಡಲಾಯಿತು. ನಟಿ ಭವ್ಯಾ ಸೇರಿದಂತೆ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಬಂದಿದ್ದ ನಟ, ನಿರ್ದೇಶಕ ಹಾಗೂ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿರುವ ಅಭಿಜಿತ್, ಸುಚೇಂದ್ರ ಪ್ರಸಾದ್, ನಟಿ ಅಭಿನಯ ಮೊದಲಾದ ಗಣ್ಯರಿಗೆ ಫ್ಲೆಮಿಂಗೋ ಸಾಧಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಬಳಿಕ ಅತಿಥಿಗಳು ಫ್ಲೆಮಿಂಗೋ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ಫ್ಲೆಮಿಂಗೋ ಎನ್ನುವ ಪದಕ್ಕೆ ಕಲರ್ ಫುಲ್ ಎನ್ನುವ ಅರ್ಥವಿದೆ ಎಂದು ಹೇಳುತ್ತಾ ಯುವನಟ, ನಿರೂಪಕ ಧನಂಜಯ್ ಕಾರ್ಯಕ್ರಮವನ್ನು ಕಲರ್ ಫುಲ್ ಆಗಿಯೇ ನಡೆಸಿಕೊಟ್ಟರು.