ಜನ್ಮದಿನದಂದೇ ಕ್ಷಮೆಯಾಚಿಸಿದ ದುನಿಯಾ ವಿಜಯ್

ದುನಿಯಾ ವಿಜಯ್ ಅವರು ಹಲವಾರು ಬಾರಿ ಆರೋಪಗಳಿಗೆ ಒಳಗಾಗಿದ್ದಾರೆ. ಆದರೆ ಆವಾಗೆಲ್ಲ ತಮ್ಮ ನಿರಪರಾಧ ಸಾಬೀತು ಪಡಿಸಲು ಅವರು ಪ್ರಯತ್ನಿಸಿರುವುದನ್ನು ನೆನಪಿಸಬಹುದು. ಆದರೆ ಈ ಬಾರಿ ಮುಲಾಜೇ ಇಲ್ಲದೆ ಕ್ಷಮೆ ಯಾಚಿಸಿದ್ದಾರೆ. ಹಾಗಂತ ಅವರು ಮಾಡಿರುವುದು ಮಹಾಪರಾಧವೇನಲ್ಲ. ಕೇಕ್ ಕಟ್ ಮಾಡಿರುವುದು! ಬರ್ತ್ ಡೇಯಂದು ಕೇಕ್ ಕಟ್ ಮಾಡದೇ ಬೇರೇನು ಕಟ್ ಮಾಡಬೇಕಿತ್ತು ಎಂದು ನೀವು ಕೇಳಬಹುದು. ಅವರು ಕೇಕ್ ಕತ್ತರಿಸಿದ್ದರಲ್ಲಿ ತಪ್ಪಿರಲಿಲ್ಲ. ಕೇಕ್ ಬದಲಿಗೆ ತಲ್ವಾರ್ ಬಳಸಿದ್ದೇ ತಪ್ಪಾಗಿ ಹೋಯಿತು.

ನಿನ್ನೆ ಮಧ್ಯರಾತ್ರಿಯಿಂದಲೇ ನಟ ದುನಿಯಾ ವಿಜಯ್ ಮನೆ ಮುಂದೆ ಅಭಿಮಾನಿಗಳ ಮಹಾಪೂರವೇ ನೆರೆದಿತ್ತು. ಅಭಿಮಾನಿಗಳ ಎಲ್ಲ ಮನವಿಗಳಿಗೆ ಸ್ಪಂದಿಸುವುದರಲ್ಲಿ ವಿಜಯ್ ಎತ್ತಿದ ಕೈ. ಹಾಗೆ ಮಹಾ ಅಭಿಮಾನಿಯೊಬ್ಬ ಕೇಕನ್ನು ಖಡ್ಗದಿಂದ ಕತ್ತರಿಸುವಂತೆ ವಿನಂತಿಸಿದ್ದಾನೆ. ‘ಸಲಗ’ದ ಕ್ರೇಜ್ ನಲ್ಲಿರುವ ವಿಜಯ್ ಅದೇ ಶೈಲಿಯಲ್ಲಿ ತಲ್ವಾರ್ ನಿಂದ ಕೇಕ್ ಕತ್ತರಿಸಿ ಹಂಚಿ ಸಂಭ್ರಮಿಸಿದ್ದಾರೆ. ಆದರೆ ವಿಜಯ್ ಅವರಿಗೆ ಆ ಕ್ಷಣಕ್ಕೆ ಹೊಳೆದಿರದ ಸತ್ಯವೊಂದಿತ್ತು. ಭಾರತೀಯ ಆರ್ಮ್ ಆ್ಯಕ್ಟ್ ಪ್ರಕಾರ ಖಡ್ಗವೇ ಮುಂತಾದ ಮಾರಕಾಯುಧಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವಂತಿಲ್ಲ. ಹಾಗಾಗಿ ವಿಜಯ್ ಅವರಿಗೆ ನೋಟೀಸು ಬಂದಿದೆ. ಆಮೇಲೆ ನಡೆದ ಪ್ರಮಾದದ ಬಗ್ಗೆ ಅರ್ಥಮಾಡಿಕೊಂಡ ವಿಜಯ್ ಅದಕ್ಕೆ ಮಾಹಿತಿಯ ಕೊರತೆಯಿಂದ ತಪ್ಪಾಗಿದೆಯೆಂದು ಸ್ಪಷ್ಟೀಕರಣ ನೀಡಲು ತಯಾರಿ ನಡೆಸಿದ್ದಾರೆ. ಅದಕ್ಕೂ ಮೊದಲು ಈ‌ ಬಗ್ಗೆ ಅವರ ಮುಂದಿನ ನಡೆಯನ್ನು ವಿಚಾರಿಸಿದ ಮಾಧ್ಯಮದವರಲ್ಲಿ ‘ತಾವು ಖಂಡಿತವಾಗಿ ಆ ಬಗ್ಗೆ ಕ್ಷಮೆ ಯಾಚಿಸುವುದಾಗಿ’ ತಿಳಿಸಿದರು.

ಯಾರಿಗೂ ಕೆಟ್ಟ ಸಂದೇಶಗಳನ್ನು ನೀಡುವಂಥ ಪ್ರಯತ್ನ ನನ್ನದಾಗಿರಲಿಲ್ಲ. ಇದು ಇಂಥ ಪ್ರಯತ್ನ ನಡೆಸುವವರಿಗೆ ಎಚ್ಚರಿಕೆಯಾದೀತು. ಉಳಿದಂತೆ ಜನ್ಮದಿನದ ಸಂಭ್ರಮಕ್ಕೆ ಕೊರತೆ ಏನೂ ಆಗಿಲ್ಲ. ನನಗೆ ಶುಭ ಹಾರೈಸಿರುವ ಎಲ್ಲ ಅಭಿಮಾನಿಗಳಿಗೂ ಮಾಧ್ಯಮದ ಮೂಲಕ ವಂದನೆಗಳನ್ನು ತಿಳಿಸುವುದಾಗಿ ದುನಿಯಾ ವಿಜಯ್ ಹೇಳಿದರು.

Recommended For You

Leave a Reply

error: Content is protected !!