6-5 =2 ಚಿತ್ರದ ಮೂಲಕ ದೇಶದ ಗಮನ ಸೆಳೆದಂಥ ನಿರ್ದೇಶಕ ಅಶೋಕ್ ಮತ್ತೊಂದು ಮಾದರಿಯ ಸಿನಿಮಾದ ಮೂಲಕ ವಾಪಾಸಾಗಿದ್ದಾರೆ. ಈ ಬಾರಿ ಅವರು ಆಯ್ದುಕೊಂಡಿರುವುದು ಒಂದು ಲವ್ ಸಬ್ಜೆಕ್ಟ್ ಅನ್ನು. ಸದ್ದಿಲ್ಲದೆ ಬಿಡುಗಡೆಗೆ ತಯಾರಾಗಿರುವ ಚಿತ್ರದ ಮಾಧ್ಯಮಗೋಷ್ಠಿಯಲ್ಲಿ ಚಿತ್ರತಂಡ ಹಂಚಿಕೊಂಡ ಮಾಹಿತಿಗಳು ಇಲ್ಲಿವೆ.
ಇದು ಮೊದಲೇ ರೆಡಿಯಾಗಿದ್ದ ಕತೆ!
ನಿರ್ದೇಶಕರು ಸಿಕ್ಸ್ ಮೈನಸ್ ಫೈ ಈಸ್ ಈಕ್ವಲ್ ಟು ಟು ಚಿತ್ರದ ಯಶಸ್ಸಿನ ಬಳಿಕ ಯೋಚಿಸಿರುವಂಥ ಚಿತ್ರ ಇದು ಎನ್ನುವುದು ಬಹುತೇಕರ ಅನಿಸಿಕೆ. ಆದರೆ ಆ ಚಿತ್ರಕ್ಕೂ ಮೊದಲೇ ತಯಾರು ಮಾಡಿದ್ದಂಥ ಚಿತ್ರಕತೆ ಇದು. ಆದರೆ ಬಜೆಟ್ ಸಮಸ್ಯೆಯಿಂದಾಗಿ ಚಿತ್ರವನ್ನು ಮಾಡಿರಲಿಲ್ಲ ಎಂದು ಸ್ವತಃ ನಿರ್ದೇಶಕ ಅಶೋಕ್ ತಿಳಿಸಿದರು.
ಹೊಸತನ ನೀಡಲೆಂದೇ ನಿರ್ದೇಶಕನಾದೆ
ಅಶೋಕ್ ಅವರು ಮಾತು ಮುಂದುವರಿಸಿ, ತಾವು ನಿರ್ದೇಶಕನಾಗಿದ್ದೇ ಸಿನಿಮಾಗಳ ಹಳೆಯ ರೀತಿಗಳನ್ನು ಒಡೆಯುವುದಕ್ಕಾಗಿ. ಹಾಗಾಗಿ ಇದು ಕೂಡ ಸಾಮಾನ್ಯ ಪ್ರೇಮಕತೆಗಳಿಗಿಂತ ವಿಭಿನ್ನ ಎನಿಸಬಹುದು. ಪ್ರೇಮಕತೆಯಾದರೂ ಚಿತ್ರದಲ್ಲಿ ಯಾವುದೇ ಹಾಡುಗಳಿರುವುದಿಲ್ಲ. ಒಂದು ವೇಳೆ ಕತೆ ಸಾಮಾನ್ಯವೆನಿಸಿದರೂ, ನಿರೂಪಣೆಯಲ್ಲಿ ಮಾತ್ರ ವೈಶಿಷ್ಟ್ಯತೆ ಇರುತ್ತದೆ. ಸಾಮಾನ್ಯ ಪ್ರೇಕ್ಷಕರ ನಿರೀಕ್ಷೆಗಳನ್ನು ಸುಳ್ಳಾಗಿಸುವ ಪ್ರಯತ್ನ ಇರುತ್ತದೆ ಎಂದರು.
‘ಅಭಿನಯ ಕಲಿತೆ’ ಎಂದ ಪೃಥ್ವಿ ಅಂಬಾರ್!.
ಕನ್ನಡ ಕಿರುತೆರೆಯಲ್ಲಿ ದಶಕದ ಹಿಂದೆಯೇ ಸಹಜ ನಟನೆಯಿಂದ ಗಮನ ಸೆಳೆದ ಚೆಲುವನಿದ್ದರೆ ಅದು ಪೃಥ್ವಿ ಅಂಬಾರ್. ಡಾನ್ಸ್ ಶೋ ಮೂಲಕ ಜನಪ್ರಿಯತೆ ಪಡೆದ ಈ ಆರ್ ಜೆ ಮೂಲತಃ ಮಂಗಳೂರಿನವರಾಗಿದ್ದು, ಒಂದಷ್ಟು ತುಳು ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಇಷ್ಟೊಂದು ಅನುಭವಿಯಾದರೂ ಕೂಡ “ನನ್ನ ನಟನೆಯ ಕಾನ್ಸೆಪ್ಟನ್ನೇ ಬದಲಾಯಿಸಿದ ನಿರ್ದೇಶಕ ಇವರು” ಎನ್ನುವ ಕ್ರೆಡಿಟ್ ಅನ್ನು ಅವರು ನಿರ್ದೇಶಕರಿಗೆ ಸಲ್ಲಿಸುತ್ತಾರೆ. ಯಾಕೆಂದರೆ ಅಶೋಕ್ ಅವರ ನಿರ್ದೇಶನದ ಶೈಲಿ ಅಷ್ಟೊಂದು ಆಕರ್ಷಕವಾಗಿದ್ದು, ಇನ್ನು ಮುಂದೆ ತಮ್ಮ ಅಭಿನಯದಲ್ಲಿ ಅದರ ಛಾಯೆ ಉಳಿದುಕೊಳ್ಳಲಿದೆ ಎಂದು ಪೃಥ್ವಿ ಅಂಬಾರ್ ತಿಳಿಸಿದರು. “ಇದರಲ್ಲಿನ ಎಮೋಶನ್ಸ್ ಎಲ್ಲರಿಗೂ ಕನೆಕ್ಟ್ ಆಗಿ ಕಾಡುವಂಥ ಚಿತ್ರವಾಗಲಿದೆ” ಎಂದು ಅವರು ನಂಬಿಕೆ ವ್ಯಕ್ತಪಡಿಸಿದರು.
ನಾಯಕಿ ‘ಖುಷಿ’ಯ ಮಾತು
‘ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ’ ಎನ್ನುವ ಚಿತ್ರದ ಮೂಲಕ ಗುರುತಿಸಿಕೊಂಡಿರುವ ಖುಷಿ ದಿಯಾ ಚಿತ್ರದಲ್ಲಿ ಟೈಟಲ್ ರೋಲ್ ನಿರ್ವಹಿಸುತ್ತಿದ್ದಾರೆ. ಅವರು ಮಾತನಾಡುತ್ತಾ, “ಮೊದಲು ನಾನು ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಎಷ್ಟು ತ್ಯಾಂಕ್ಸ್ ಹೇಳಿದರೂ ಸಾಲದು. ಯಾಕೆಂದರೆ ಪಾತ್ರಕ್ಕೆ ಪ್ರಾಮುಖ್ಯತೆಯಿರುವ ಇಂಥ ಚಿತ್ರಗಳು ಸ್ಟಾರ್ ಗಳ ಪಾಲಾಗುವುದೇ ಹೆಚ್ಚು. ಆದರೆ ಇಲ್ಲಿ ಟೈಟಲ್ ರೋಲಲ್ಲೇ ನಟಿಸುವ ಅವಕಾಶವನ್ನು ನನ್ನಂಥ ಹೊಸಬಳಿಗೆ ನೀಡಿದ್ದಾರೆ. ಲವ್ ಫೆಯಿಲ್ಯೂರ್ ಆಗಿರುವ ಹುಡುಗಿಯೊಬ್ಬಳ ಮನಸ್ಥಿತಿ ಹೇಗಿರುತ್ತದೆ ಎನ್ನುವುದನ್ನು ತೋರಿಸುವ ಅವಕಾಶ ನನಗೆ ದೊರಕಿದೆ” ಎಂದರು. ಮತ್ತೋರ್ವ ನವನಟ ಕಿರುತೆರೆ ಖ್ಯಾತಿಯ ದೀಕ್ಷಿತ್ ತಮ್ಮದು ಲಾರ್ಜರ್ ದೆನ್ ಲೈಫ್ ಕ್ಯಾರೆಕ್ಟರ್ ಎಂದರು.
ನಿರ್ಮಾಪಕರ ಸಮಾಧಾನ
ನಿರ್ಮಾಪಕರಾದ ಕೃಷ್ಣ ಚೈತನ್ಯ ಮಾತನಾಡಿ, “ಚಿತ್ರವೇ ಒಂದು ಹಾಡಿನಂತೆ ಇರುವ ಕಾರಣ, ನಮಗೆ ಹಾಡು ಬೇಕಾಗಿಲ್ಲ. ಆದರೆ ಪ್ರಚಾರಕ್ಕೆ ಬೇಕಿತ್ತು ಅಂತ ಅನಿಸಿದ್ದು ಹೌದು. ಕೆ.ಆರ್.ಜಿ ಸ್ಟುಡಿಯೋನ ಕಾರ್ತಿಕ್ ಅವರು ಚಿತ್ರವನ್ನು ವಿತರಣೆಗೆ ತೆಗೆದುಕೊಂಡಿರುವುದೇ ನಮಗೆ ಸಿಕ್ಕ ಮೊದಲ ಯಶಸ್ಸು. ಯಾಕೆಂದರೆ ಅವರು ‘ಕೆಜಿಎಫ್’ನಂಥ ಚಿತ್ರವನ್ನು ವಿತರಿಸಿದವರು. ಅವರಿಗೆ ಭರವಸೆ ಮೂಡಿಸಿರುವ ಈ ಚಿತ್ರ ಪ್ರೇಕ್ಷಕರಿಗೂ ಮೆಚ್ಚುಗೆಯಾಗುವುದರಲ್ಲಿ ಸಂದೇಹವಿಲ್ಲ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಪ್ರೇಕ್ಷಕರು ಮೊದಲ ದಿನವೇ ದಯವಿಟ್ಟು ಥಿಯೇಟರ್ ಗೆ ಬಂದು ಚಿತ್ರ ನೋಡಬೇಕು. ಯಾಕೆಂದರೆ ಇತ್ತೀಚೆಗೆ ಸ್ಟಾರ್ ಸಿನಿಮಾಗಳನ್ನು ಬಿಟ್ಟರೆ ಉಳಿದ ಚಿತ್ರಗಳ ಮೊದಲ ಪ್ರದರ್ಶನಕ್ಕೆ ಕೂಡ ಜನರ ಬರುವಿಕೆ ಕಡಿಮೆಯಾಗುತ್ತಿದೆ. ಮೊದಲ ಒಂದು ಪ್ರದರ್ಶನ ನೋಡಿ ಹರಡುವ ಪ್ರೇಕ್ಷಕರ ಮಾತುಗಳೇ ನಮ್ಮನ್ನು ಕಾಪಾಡಲಿವೆ ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದು ಅವರು ಹೇಳಿದರು. ಚಿತ್ರಕ್ಕೆ ಹಿನ್ನೆಲೆ ಸಂಗೀತ ನಿರ್ದೇಶಕರಾಗಿ ಅಜನೀಶ್ ಲೋಕನಾಥ್, ಸಂಕಲನಕಾರರಾಗಿ ನವೀನ್ ರಾಜ್ ಮತ್ತು ಛಾಯಾಗ್ರಾಹಕರಾಗಿ ವಿಶಾಲ್ ವಿಠಲ್ ಕಾರ್ಯನಿರ್ವಹಿಸಿದ್ದಾರೆ.