
“ಈ ಪುಸ್ತಕದ ಶೀರ್ಷಿಕೆಯೇ ಹಾಡಿನ ಸಾಲು. ಅದನ್ನು ಪದಗಳೇ ನೆನಪಿಸುತ್ತವೆ ಎನ್ನುವುದಾದರೆ ಅದಕ್ಕೆ ಆ ಹಾಡಿಗೆ ಇರುವ ಪ್ರಭಾವವೇ ಕಾರಣ” ಎಂದರು ಶರಣ್. ಅವರು “ಮಧುರ ಮಧುರವೀ ಮಂಜುಳಗಾನ” ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

“ನಾನು ಬೆಂಗಳೂರಿಗೆ ಬಂದ ಆರಂಭದ ದಿನಗಳಲ್ಲಿ ಆರ್ಕೆಸ್ಟ್ರಾಗಳಲ್ಲಿ ಭಾಗವಹಿಸಿದ್ದೆ. ಗುರು ಸರ್ ಆಗಲೇ ಸಂಗೀತ ಕ್ಷೇತ್ರದಲ್ಲಿ ಹೆಸರು ವಾಸಿಯಾಗಿದ್ದವರು. ಅವರು ಪ್ರಥಮ ಸಂಚಿಕೆಯನ್ನು ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಂದ ಬಿಡುಗಡೆ ಮಾಡಿಸಿದ್ದರು. ಈಗ ಎರಡನೇ ಭಾಗ ನಾನು ಬಿಡುಗಡೆಗೊಳಿಸುತ್ತಿರುವುದು ನನಗೆ ದೊರಕಿರುವಂಥ ದೊಡ್ಡ ಗೌರವವಾಗಿ ಪರಿಗಣಿಸುತ್ತೇನೆ ಎಂದರು.

ಶರಣ್ ಪತ್ನಿಯೂ ಹಾಡತೊಡಗಿದ್ದಾರಂತೆ!
“ಇಂದು ಈ ಪುಸ್ತಕ ಗಾಯಕರಲ್ಲದವರನ್ನು ಕೂಡ ಹಾಡುವಂತೆ ಮಾಡುತ್ತದೆ. ಅದಕ್ಕೆ ಒಂದು ಒಳ್ಳೆಯ ಉದಾಹರಣೆ ನನ್ನ ಪತ್ನಿ. ಯಾಕೆಂದರೆ ಆಕೆ ಗಾಯಕಿಯಲ್ಲ. ಆದರೆ ಈ ಪುಸ್ತಕವನ್ನು ಗುರು ಸರ್ ನನಗೆ ಮೊದಲೇ ಕೊಟ್ಟಿದ್ದರು. ಎಂದೂ ಹಾಡಿರದ ನನ್ನ ಪತ್ನಿ ನಿನ್ನೆ ನೋಡಿದರೆ “ಮೌನವೂ ಚೆನ್ನ.. ಮಾತಲು ಚೆನ್ನ..” ಎಂದು ಹಾಡತೊಡಗಿದ್ದನ್ನು ನೋಡಿದೆ ಎಂದರು!
ಗುರು ಭರವಸೆ

“ಎಲ್ಲ ಡೀಟೇಲ್ಸ್ ಗಳಿಗಾಗಿ ಎಲೆಕ್ಟ್ರಾನಿಕ್ಸ್ ಮೀಡಿಯ ಇರುವಾಗ ಇಂಥ ಪುಸ್ತಕಗಳನ್ನು ಯಾರು ಕೊಳ್ಳುತ್ತಾರೆ ಎನ್ನುವ ಸಂದೇಹ ಸಹಜ. ಆದರೆ ಅದಕ್ಕೆ ಅಪವಾದ ಎನ್ನುವಂತೆ ಈ ಹಿಂದಿನ ಸಂಚಿಕೆ ಅಭೂತಪೂರ್ವವಾದ ಮಾರಾಟ ಕಂಡಿತ್ತು. ಅದರ ಯಶಸ್ಸೇ ಎರಡನೇ ಭಾಗವಾಗಿ ಹೀಗೊಂದು ಪುಸ್ತಕ ತರಲು ಪ್ರೇರಣೆಯಾಯಿತು ಎಂದು ಹಾಡುಗಳನ್ನು ಸಂಗ್ರಹಿಸಿರುವ ಗುರುರಾಜ್ ತಿಳಿಸಿದರು.
“ಇದರಲ್ಲಿ ಹಳೆಯ ಚಿತ್ರಗಳ ಜತೆಗೆ ಭಾವಗೀತೆ, ಭಕ್ತಿಗೀತೆಗಳನ್ನು ಕೂಡ ಸೇರಿಸಲಾಗಿದೆ. ಹಳೆಯ ಹಾಡುಗಳು ಮಾತ್ರವಲ್ಲ, ಹೊಸದಾಗಿ ಕೂಡ ಆಕರ್ಷಕ ಸಾಹಿತ್ಯದೊಂದಿಗೆ ಮೂಡಿ ಬಂದಿರುವ ಹಾಡುಗಳನ್ನು ಕೂಡ ಇಲ್ಲಿ ಸೇರಿಸಲಾಗಿದೆ” ಎಂದು ಅವರು ಹೇಳಿದರು. ತಮಗೆ ಕನ್ನಡ ಸಿನಿಮಾ ಹಾಡುಗಳ ಮೇಲಿರುವ ಅಭಿಮಾನದ ಬಗ್ಗೆ ಹೇಳುತ್ತಾ, “ಕನ್ನಡದಲ್ಲಿ ಕರೋಕೆ ಹಾಡುಗಳಿಲ್ಲ ಎನ್ನುವ ಸಂದರ್ಭದಲ್ಲಿ ನಾನೇ 30 ಲಕ್ಷ ವೆಚ್ಚಮಾಡಿ ಕರೋಕೆ ಟ್ರ್ಯಾಕ್ ಗಳನ್ನು ಸೃಷ್ಟಿಸಿದ್ದೇನೆ. ಅವುಗಳು ಈಗ ವ್ಯಾಪಕವಾಗಿ ಬಳಕೆಯಾಗುತ್ತಿರುವುದು ಖುಷಿಯಾಗಿದೆ” ಎಂದರು. ಅಂದಹಾಗೆ ಇಂಥದೊಂದು ಪುಸ್ತಕ ಹೊರತರುವಾಗ ಮಾಹಿತಿ ಸಂಗ್ರಹಣೆಯಲ್ಲಿ ಸಹಕಾರ ನೀಡಿದ ಬಿ ಎಸ್ ಯಶೋಧಾ ಮತ್ತು ಬಿ ಎಸ್ ಮಲ್ಲಿಕಾ ಅವರನ್ನು ಕೂಡ ಸ್ಮರಿಸಿಕೊಂಡರು. ಪುಸ್ತಕ ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿದ್ದು 600ರೂಪಾಯಿ ಕೊಟ್ಟು ಖರೀದಿಸಬಹುದಾಗಿದೆ.


Fantastic sir. Really it is an achievement sir. No one done this. You are sacrificing to artists. God bless you always.🙏🙏🙏🙏🙏🙏👏👏👏👏👏👏👏👏👏👏👏🌹🌹🌹🌹🌹👍👍👍👍❤️❤️❤️❤️❤️❤️❤️❤️❤️❤️