ಮುರಳೀಕೃಷ್ಣ ಅವರು ಕಳೆದ ವರ್ಷ ಬಿಗ್ ಬಾಸ್ ಖ್ಯಾತಿಯ ರೆಹಮಾನ್ ಅವರನ್ನು ನಾಯಕರನ್ನಾಗಿಸಿ ‘ಗರ’ ಎನ್ನುವ ಚಿತ್ರವನ್ನು ನಿರ್ದೇಶಿಸಿದ್ದರು. ಇತ್ತೀಚೆಗೆ ನೆರವೇರಿದ ‘ಚಂದನವನ ಕ್ರಿಟಿಕ್ಸ್ ಅಕಾಡೆಮಿ’ ಅವಾರ್ಡ್ ಕಾರ್ಯಕ್ರಮದ ಬಳಿಕ ಪೂರ್ತಿ ಕಾರ್ಯಕ್ರಮ ಮತ್ತು ವಿಮರ್ಶಕರ ಬಗ್ಗೆ ತಮ್ಮ ವಿಮರ್ಶಾತ್ಮಕ ಅಭಿಪ್ರಾಯಗಳನ್ನು ಸಿನಿಕನ್ನಡ ಡಾಟ್ ಕಾಮ್ ಜತೆಗೆ ಹಂಚಿಕೊಂಡಿದ್ದಾರೆ.
“ಇತ್ತೀಚೆಗಷ್ಟೇ ಜರಗಿದ ‘ಚಂದನವನ ಕ್ರಿಟಿಕ್ಸ್ ಅವಾರ್ಡ್ಸ್’ ಕಾರ್ಯಕ್ರಮ ಒಂದು ಉತ್ತಮ ಬೆಳವಣಿಗೆ. ಕನ್ನಡ ಚಿತ್ರಗಳನ್ನು ನೋಡಿ ಸಿನಿಮಾ ಮೇಕರ್ಸ್ ಮತ್ತು ಕ್ರಿಟಿಕ್ಸ್ ಇಬ್ಬರನ್ನು ಬೆರೆಸುವ ಈ ಪ್ರಯತ್ನ ನನಗೆ ತುಂಬ ಹಿಡಿಸಿತು. ಇದು ಇನ್ನೂ ಪ್ರಥಮ ವರ್ಷದ ಸಮಾರಂಭವಾಗಿರುವ ಕಾರಣ ಮತ್ತು ಸಿನಿಮಾಗಳಿಗೆ ಪ್ರಶಸ್ತಿ ನೀಡುವಷ್ಟು ಉತ್ಸಾಹ ತೋರಿಸಿರುವ ಕಾರಣ ಸಿನಿಮಾ ವಿಮರ್ಶಕರ ಕುರಿತಾದ ನನ್ನ ಅನಿಸಿಕೆ ಅಭಿಪ್ರಾಯಗಳನ್ನು ಇಲ್ಲಿ ಹಂಚಿಕೊಳ್ಳಬೇಕು ಅನಿಸಿದೆ.
ಕ್ರಿಟಿಕ್ಸ್ ಎನ್ನುವುದರ ಜತೆಯಲ್ಲೇ ಕಮೆಂಟ್ಸ್ ಮತ್ತು ಒಪಿನಿಯನ್ ಎನ್ನುವುದು ಕೂಡ ಇರುತ್ತದೆ. ಕಮೆಂಟ್ ಎನ್ನುವುದು ವೈಯಕ್ತಿಕವಾಗಿರುವುದಿಲ್ಲ. ಆದರೆ ಒಪಿನಿಯನ್ ವೈಯಕ್ತಿಕವಾಗಿರುತ್ತದೆ. ಆದರೆ ಕ್ರಿಟಿಕ್ಸ್ ಇವೆರಡನ್ನು ಕೂಡ ಮೀರಿದ್ದು. ಅಲ್ಲಿ ಕ್ರಿಟಿಕ್ ಆದವನು ತನ್ನ ವಿಮರ್ಶೆಯಿಂದ ಉಂಟಾಗಬಹುದಾದ ಪ್ರತಿಫಲಕ್ಕೆ ಕೂಡ ಜವಾಬ್ದಾರನಾಗಿರುತ್ತಾನೆ.
ನನಗೆ ತೋಚಿದ್ದು ಹೇಳುವುದು ಕಮೆಂಟ್ ಮಾತ್ರ ಆಗಿರುತ್ತದೆ. ಪ್ರಾಡಕ್ಟ್ ಬಗ್ಗೆ ಅರಿವು ಇರುವವರು ಮಾಡುವುದಷ್ಟೇ ಕ್ರಿಟಿಕ್ ಆಗುವುದು ಸಾಧ್ಯ. ನಾನು 85ರಿಂದ ಚಿತ್ರರಂಗದಲ್ಲಿ ಸಕ್ರಿಯನಾದೆ. ಹಿಂದೆ ವಿಮರ್ಶಕರು ವಿಮರ್ಶೆ ಮಾಡುತ್ತಿದ್ದ ಸಂದರ್ಭಕ್ಕೂ ಈಗಿನದಕ್ಕೂ ತುಂಬ ವ್ಯತ್ಯಾಸವಿದೆ. ಕಾಡು, ಸಂಕಲ್ಪ ಮೊದಲಾದ ಚಿತ್ರಗಳ ವಿಮರ್ಶೆಗಳನ್ನು ಓದುವ ಮೂಲಕ ನಾನು ಆ ಚಿತ್ರಗಳನ್ನು ಹೆಚ್ಚು ಅರ್ಥ ಮಾಡಿಕೊಳ್ಳಲು ಕಾರಣವಾಗಿತ್ತು. ಆ ರೀತಿಯ ವಿಮರ್ಶೆಗಳು ಪ್ರೇಕ್ಷಕರನ್ನು ಸೃಷ್ಟಿಸುವ ಕೆಲಸ ಮಾಡುತ್ತಿತ್ತು. ಉದಾಹರಣೆಗೆ ‘ಚೋಮನ ದುಡಿ’ ನೂರು ದಿನ ಪ್ರದರ್ಶನ ಕಾಣಲು, ಕಾಡು ಯಶಸ್ವಿ ಚಿತ್ರವೆನಿಸಿಕೊಳ್ಳಲು ಈ ವಿಮರ್ಶೆಗಳ ಪಾತ್ರವೂ ಪ್ರಮುಖವಾಗಿದೆ. ಹಾಗಾಗಿ ಅಂದು ಪತ್ರಕರ್ತರ ಪಾತ್ರ ಅಷ್ಟು ದೊಡ್ಡದಾಗಿತ್ತು.
ಪುಟ್ಟಣ್ಣ ಕಣಗಾಲ್, ಕೆ ಬಾಲಚಂದರ್, ಸಿದ್ದಲಿಂಗಯ್ಯನವರ ಚಿತ್ರಗಳು ಭಾವನೆಗಳನ್ನು ತಾಂತ್ರಿಕವಾಗಿ ತೋರಿಸುವಲ್ಲಿ ಗೆದ್ದಿವೆ. ಅಲ್ಲಿ ಕೋಟಿಗಟ್ಟಲೆ ಖರ್ಚು ಮಾಡಿ ಮಾಧ್ಯಮಗಳಿಗೆ ಪುಟಗಟ್ಟಲೆ ಜಾಹೀರಾತು ನೀಡಿ ಪ್ರಚಾರ ಮಾಡಿದವರ, ನೂರು ದಿನ ಓಡಿಸಿದವರ ಪರಿಸ್ಥಿತಿ ಕೂಡ ಅದೇ. ಈ ಸಂದರ್ಭದಲ್ಲಿ ನಿಜಕ್ಕೂ ಸಿನಿಮಾ ವಿಮರ್ಶಕರ ಸಹಾಯ ಚಿತ್ರರಂಗಕ್ಕೆ ಬೇಕಾಗಿತ್ತು ಅದಕ್ಕೆ ಸರಿಯಾಗಿ ಕ್ರಿಟಿಕ್ಸ್ ಅವಾರ್ಡ್ ಶುರುವಾಗಿರುವುದು ಖುಷಿಯ ವಿಚಾರ.
ನನ್ನ ಸಲಹೆ
ನಾನು ಸಿನಿಮಾ ನಿರ್ದೇಶಕ ಮಾತ್ರವಲ್ಲ. ಅದಕ್ಕೂ ಮೊದಲಿನಿಂದಲೂ ಸಿನಿಮಾಗಳ ಪ್ರೇಕ್ಷಕ. ಅದೇ ರೀತಿ ಓರ್ವ ನಿರ್ಮಾಪಕನಾಗಿ, ನಿರ್ದೇಶಕನಾಗಿ ಮಾತ್ರವಲ್ಲ ವಕೀಲನಾಗಿ ಕೂಡ ಕೆಲಸ ಮಾಡಿರುವ ಅನುಭವ ಪಡೆದಿದ್ದೇನೆ. ಹಾಗಾಗಿ ನಾನು ಒಂದು ಸಲಹೆ ನೀಡುವುದು ಸಿನಿಮಾ ವಿಮರ್ಶಕರು ಈ ಬಗ್ಗೆ ಯೋಚಿಸಬಹುದು ಎಂದುಕೊಂಡಿದ್ದೇನೆ.
ಒಂದು ಚಿತ್ರ ನೋಡಿದ ಬಳಿಕ ಒಂದು ಗಂಟೆಗಳ ಕಾಲ ಆ ಸಿನಿಮಾದ ಬಗ್ಗೆ ನಿರ್ದೇಶಕರ ಜತೆಗೆ ಚರ್ಚೆ ನಡೆಯುವಂತಾಗಲಿ. ಹಾಗಂತ ನಿರ್ದೇಶಕರು ಈಗೊ ಬಿಟ್ಟು ಬಂದು ಬಿಡುತ್ತಾರೆ ಎನ್ನುವ ನಂಬಿಕೆ ನನಗೆ ಇಲ್ಲ. ಇಂದು ವಿಜಯ್ ಸೇತುಪತಿ ಚಿತ್ರವೊಂದು ಬಂದರೆ ಅದರಲ್ಲಿ ತಿರುವು ಇದ್ದಾಗ ಗೊಂದಲಗಳಾಗುವುದು ಖಚಿತ.
ಚಿತ್ರದ ವಿಮರ್ಶೆ ಜನ ನೋಡಿ ಅರ್ಥ ಮಾಡಿಕೊಳ್ಳುವಂತೆ ಇರಬೇಕು. ಇಲ್ಲವಾದರೆ ನಾಲ್ಕು ಫೈಟು, ಹಾಡುಗಳಿರುವ ಫಾರ್ಮುಲ ಚಿತ್ರಗಳೇ ಬರುತ್ತಿರುತ್ತವೆ.
ಮುಖ್ಯವಾಗಿ ಡಬಲ್ ಮೀನಿಂಗ್ ಅನ್ನೇ ಹಾಸ್ಯ ಎಂದುಕೊಳ್ಳುವವರಿಗೆ ಕೊರತೆ ಇಲ್ಲ. ಒಂದೇ ಒಂದು ಡಬಲ್ ಮೀನಿಂಗ್ ಇರದ ಎರಡು ತೆಲುಗು ಸಿನಿಮಾಗಳು ಬೆಂಗಳೂರಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡವು. ಕನ್ನಡದಲ್ಲಿ ಅಂತ ಬರಹಗಾರರಿದ್ದಾರ ಎಂದು ಇತ್ತೀಚಿಗೆ ಪತ್ರಕರ್ತರೊಬ್ಬರು ಕೇಳುತ್ತಿದ್ದರು ಹೌದು. ನಾವು ಅಂಥ ಬರಹಗಾರರನ್ನು ಬೆಳೆಸಬೇಕಿದೆ. ಅಂಥ ಸಂಭಾಷಣೆಕಾರರಿದ್ದರೆ ಅವರನ್ನು ಸಂದರ್ಶಿಸಿ ಪ್ರೋತ್ಸಾಹಿಸಬೇಕಿದೆ.
ಇವೆಲ್ಲವನ್ನೂ ಹೇಳಲು ಕಾರಣವಾದ ಕ್ರಿಟಿಕ್ಸ್ ಅವಾರ್ಡ್ ಕಾರ್ಯಕ್ರಮಕ್ಕೆ ವಂದನೆಗಳು. ಈ ಬಾರಿ ನಾನು ಚೆನ್ನೈನಲ್ಲಿ ಇದ್ದ ಕಾರಣ, ಸಮಾರಂಭಕ್ಕೆ ಬರಲು ಸಾಧ್ಯವಾಗಲಿಲ್ಲ. ಆದರೆ ಮುಂದಿನ ವರ್ಷದಿಂದ ನನಗೆ ಆಹ್ವಾನ ಇದ್ದರೂ ಇರದೇ ಹೋದರೂ ಖಂಡಿತವಾಗಿ ನಾನು ಬಂದೇ ಬರುತ್ತೇನೆ! ಚಂದನವನ ಕ್ರಿಟಿಕ್ಸ್ ಅಕಾಡೆಮಿ ಸೃಷ್ಟಿಸಿರುವ ಇಂಥದೊಂದು ಅದ್ಭುತವಾದ ಸಂದರ್ಭಕ್ಕೆ ವಂದನೆಗಳು .