“ನಾವು ಸುಮ್ಮನಿದ್ದರೆ ಇತಿಹಾಸ ಪುಸ್ತಕದಲ್ಲೇ ಇರುತ್ತದೆ. ಆದರೆ ಅದನ್ನು ಸಿನಿಮಾ ಮಾಡಿದರೆ ಮುಂದೆ ಅದೇ ಬೇರೆ ಇತಿಹಾಸ ಮಾಡುತ್ತದೆ. ಐತಿಹಾಸಿಕ ಚಿತ್ರದ ಕಾಸ್ಟ್ಯೂಮ್ ಗಳು, ಸಾಹಸ, ಸಂಗೀತ ಮೊದಲಾದವು ಎಲ್ಲ ಭಾಷೆಗಳಿಗೆ ಹೊಂದುತ್ತವೆ. ಹಾಗಾಗಿ ಐತಿಹಾಸಿಕ ಚಿತ್ರಗಳು ಪ್ಯಾನ್ ಇಂಡಿಯಾ ಚಿತ್ರವಾಗಿ ಜನರನ್ನು ಆಕರ್ಷಿಸಬಲ್ಲವು” ಎಂದು ಹಂಸಲೇಖಾ ಅಭಿಪ್ರಾಯಪಟ್ಟರು. ಅವರು `ಬಿಚ್ಚುಗತ್ತಿ’ ಚಿತ್ರದ ಬಿಡುಗಡೆ ಪೂರ್ವ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
“ಡಿಂಗ್ರಿ ನಾಗರಾಜ್ ಅದ್ಭುತ ಕಲಾವಿದರು. ಆದರೆ ತಮ್ಮ ಮಗನನ್ನು ಅವರು ತಮಗಿಂತ ಎತ್ತರಕ್ಕೆ ಬೆಳೆಸುವ ನಿರ್ಧಾರ ಮಾಡಿದ್ದಾರೆ. ಹಾಗಾಗಿ `ಬಿಚ್ಚುಗತ್ತಿ’ಯಂಥ ಚಿತ್ರಕ್ಕೆ ಅವರು ತಮ್ಮ ಮಗನನ್ನು ನಾಯಕನಾಗಿಸಲು ಮುಂದಾಗಿದ್ದಾರೆ. ನಮ್ಮ ನಾಯಕ ಕೂಡ ಪರದೆಯ ಮೇಲೆ ತುಂಬ ಚೆನ್ನಾಗಿ ಕಾಣಿಸಿಕೊಂಡಿದ್ದಾರೆ” ಎಂದು ಅವರು ರಾಜವರ್ಧನನ್ನು ಪ್ರಶಂಸಿಸಿದರು. ತಾವು ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರ ನಡುವಿನ ಕೊಂಡಿಯಾಗಿ ಚಿತ್ರಕ್ಕೆ ಆಪ್ತ ಸಲಹೆಗಾರನಾಗಿ ಕಾರ್ಯನಿರ್ವಹಿಸಿದ್ದೇನೆ ಎನ್ನುವುದನ್ನು ಹಂಸಲೇಖಾ ಸ್ಮರಿಸಿಕೊಂಡರು.
ಅತಿಥಿಯಾಗಿ ಆಗಮಿಸಿದ್ದ ನಟ ಡಾಲಿ ಧನಂಜಯ್, “ನಾನು ಶಾಲಾ ದಿನಗಳಿಂದಲೇ ಎಚ್ಚಮ ನಾಯಕ, ಸಂಗೊಳ್ಳಿ ರಾಯಣ್ಣನ ಪಾತ್ರಗಳನ್ನು ನಾಟಕಗಳಲ್ಲಿ ಮಾಡಿ, ನೋಡಿ ಬಂದವನು. ಐತಿಹಾಸಿಕ ಚಿತ್ರಗಳೆಂದರೆ ಆರಂಭದಿಂದಲೂ ಆಸಕ್ತಿ. ದುರ್ಗದ ಬಗ್ಗೆ ಬರೆದಂಥ ತ.ರಾ.ಸು, ಬಿ ಎಲ್ ವೇಣು ಅವರ ಕಾದಂಬರಿಗಳನ್ನು ಬೆಳೆದವನು. ರಾಜವರ್ಧನ ನನಗೆ ಹಿಂದಿನಿಂದಲೇ ಸ್ನೇಹಿತ. ನಿರ್ದೇಶಕರೊಬ್ಬರು ನಮ್ಮಿಬ್ಬರನ್ನು ನಾಯಕರನ್ನಾಗಿಸಿ ಚಿತ್ರ ಮಾಡುವುದಾಗಿ ಹೇಳಿ ಸಾಕಷ್ಟು ಅಲೆದಾಡುವಂತೆ ಮಾಡಿದ್ದರು. ಈಗ ರಾಜವರ್ಧನ್ ಗೆ ಕೂಡ ಒಳ್ಳೆಯ ಅವಕಾಶ ದೊರಕಿದೆ. ಈ ಎಲ್ಲ ಕಾರಣಗಳಿಂದಾಗಿ ಬಿಚ್ಚುಗತ್ತಿ ಸಿನಿಮಾದ ಬಗ್ಗೆ ವಿಶೇಷ ಆಸಕ್ತಿ ಇದೆ. ಚಿತ್ರಕ್ಕೆ ಶುಭವಾಗಲಿ” ಎಂದರು.
ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಮಹೇಶ್, ಸುನಿ, ಎ.ಪಿ ಅರ್ಜುನ್, ಸಹನಾ ಮೂರ್ತಿ, ವಾಸು, ನಟ ಕೆಂಡಸಂಪಿಗೆ ವಿಕ್ಕಿ, ನಟಿಯರಾದ ಅಪೂರ್ವ, ಶ್ರೀ ಲೀಲ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಉಪಸ್ಥಿತರಿದ್ದರು. ಬಿಚ್ಚುಗತ್ತಿ ನಿರ್ದೇಶಕ ಹರಿ ಸಂತೋಷ್ ಅವರ ಕೆಲಸದ ವೇಗ ಮತ್ತು ಜತೆಯಲ್ಲೇ ಪರ್ಫೆಕ್ಷನ್ ಬಗ್ಗೆ ಎಲ್ಲರೂ ಮಾತನಾಡಿ ಬೆನ್ನುತಟ್ಟಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಚಿತ್ರದ ಮೇಕಿಂಗ್, ಟ್ರೇಲರ್ ಮತ್ತು ಹಾಡುಗಳ ಪ್ರದರ್ಶನ ನಡಸಲಾಯಿತು.