‘ಕನ್ನಡಿಯ ಮಾಯ’ ಹೇಳುತ್ತಾರೆ ಶ್ರೀ ಶ್ರೇಯ..!

ಕಲೆ ರಕ್ತದಲ್ಲೇ ಬರುತ್ತದೆ ಎನ್ನುತ್ತಾರೆ. ಅದು ನಿಜವಾದರೆ ಈ ಹುಡುಗಿಯ ರಕ್ತದ ಕಣಕಣದಲ್ಲಿಯೂ ಕಲೆಯಿದೆ ಎನ್ನಬಹುದು. ಯಾಕೆಂದರೆ ನಾಯಕಿಯಾಗಬೇಕು ಎನ್ನುವವರ ನಡುವೆ ಶ್ರೇಷ್ಠನಟಿಯಾಗಬೇಕು ಎನ್ನುವ ಗುರಿ ಇರಿಸಿಕೊಂಡು ಹೊರಟಂಥ ಪ್ರತಿಭೆ ಈಕೆ. ಹೆಸರು ಶ್ರೀ ಶ್ರೇಯ.

ಊರು ಉಡುಪಿ. ಹೇಳಿ ಕೇಳಿ ಕಲೆಗಳ ತವರು! ಶ್ರೀ ಶ್ರೇಯ ತಂದೆ ಶ್ರೀಕಾಂತ್ ರಾವ್ ಡ್ರಾಮ ಆರ್ಟಿಸ್ಟ್ ಆಗಿದ್ದವರು. ಶ್ರೇಯಾಳಿಗೆ ಬಾಲ್ಯದಿಂದಲೇ ಹಾಡು, ಕುಣಿತವೆಂದರೆ ಪ್ರಾಣ. ಶಾಲಾ ದಿನಗಳಲ್ಲೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯೆ. ಆದರೆ ಮಾಡುತ್ತಿರುವುದು ಮಾತ್ರ ಜರ್ನಲಿಸಂ ಕೋರ್ಸ್! ಅದರ ನಡುವೆಯೇ ಉಡುಪಿ ‘ಯು ನ್ಯೂಸ್’ ವಾಹಿನಿಯಲ್ಲಿ ವಾರ್ತಾ ವಾಚಕಿ ಮತ್ತು ನಿರೂಪಕಿ! ಇವಿಷ್ಟು ಸಾಲದೆನ್ನುವಂತೆ ಎರಡು ವರ್ಷಗಳಿಂದ ರಂಗಭೂಮಿ ಕಲಾವಿದೆಯಾಗಿ ಕೂಡ ಗುರುತಿಸಿಕೊಳ್ಳುತ್ತಿದ್ದಾರೆ.

ನಾಟಕಕ್ಕೆ ಬಂತು ರಾಷ್ಟ್ರೀಯ ಪ್ರಶಸ್ತಿ

ಶ್ರೀ ಶ್ರೇಯ ಸದ್ಯಕ್ಕೆ ನಟಿಸುತ್ತಿರುವ ನಾಟಕಗಳು ಎರಡು. ಅವುಗಳಲ್ಲಿ ‌ಒಂದರ ಹೆಸರು ‘ಪಂಚವಟಿ’. ಪ್ರಶಾಂತ್ ಉದ್ಯಾವರ ಅದರ ನಿರ್ದೇಶಕರು. ಮತ್ತೊಂದು ಎಂ.ಗಣೇಶ್ ಮಂದಾರ್ತಿಯವರ ‘ಕಾವ್ಯಕಲಾ ಪ್ರತಿಮೆ.’ ಎರಡೂ ನಾಟಕಗಳು ಉತ್ತಮ ವೇದಿಕೆಗಳಲ್ಲಿ ಪ್ರದರ್ಶನ ಕಂಡಿವೆ. ನಾಟಕಗಳ ಮೂಲಕ ಬೆಂಗಳೂರಿನ ರಂಗ ಶಂಕರ, ಮೈಸೂರಿನ ನಟನಾ, ರಂಗಾಯಣದ ಬಹುರೂಪಿ ನಾಟಕೋತ್ಸವ ಸೇರಿದಂತೆ, ನ್ಯಾಷನಲ್ ಲೆವೆಲ್ ನಾಟಕೋತ್ಸವದಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ. ‘ಪಂಚವಟಿ’ಗೆ ನೋಯ್ಡದಲ್ಲಿ ನಡೆದ ರಾಷ್ಟ್ರ ಮಟ್ಟದ ನಾಟಕ ಪ್ರದರ್ಶನದಲ್ಲಿ ಶ್ರೇಷ್ಠ ನಾಟಕ ಪ್ರಶಸ್ತಿ ದೊರಕಿದೆ.

ಬರಲಿದೆ ‘ಮಾಯಾ ಕನ್ನಡಿ!’

ಇವೆಲ್ಲದರ ನಡುವೆ ಮುಂದಿನ ವಾರ ಶ್ರೀ ಶ್ರೇಯ ನಟನೆಯ ಸಿನಿಮಾ ಒಂದು ತೆರೆಗೆ ಬರಲು ಸಿದ್ಧವಾಗಿದೆ. ಹೆಸರು ‘ಮಾಯಾ ಕನ್ನಡಿ’. ವಿನೋದ್ ಪೂಜಾರಿ ನಿರ್ದೇಶನದ ಈ ಚಿತ್ರದಲ್ಲಿ ಶ್ರೇಯಾರದ್ದು ಒಂದು ಪ್ರಧಾನ ಪಾತ್ರ. ಇದಲ್ಲದೆ ತುಳು ಚಿತ್ರ ‘ಮಲ್ಲ ದಾನ’ದಲ್ಲಿ ಇವರೇ ನಾಯಕಿ. ಅದು ಕೋಲ್ಕತ್ತಾ ಇಂಟರ್ ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಗೆ ಆಯ್ಕೆ ಆಗಿರುವ ಅದು ಒಂದು ಕಲಾತ್ಮಕ ಚಿತ್ರ ಎನ್ನುವುದು ಗಮನಾರ್ಹ.

ಪರಸ್ಪರ ಪ್ರೋತ್ಸಾಹವೇ ಬದುಕು

ಅಂದ ಹಾಗೆ ಶ್ರೀ ಶ್ರೇಯ ತಂದೆಯೇ ಸ್ವತಃ ಕಲಾವಿದರಾಗಿದ್ದ ಕಾರಣ ಮನೆಯ ಕಡೆಯಿಂದ ಪ್ರೋತ್ಸಾಹಕ್ಕೆ ಕೊರತೆ ಇಲ್ಲ. ಜತೆಗೆ ತಾಯಿ ಲಕ್ಷ್ಮೀ, ಅಕ್ಕ ಶ್ರೀಶೈಲ ಕೂಡ ಬೆನ್ನು ತಟ್ಟುವವರೇ. ಅಕ್ಕ ಎಂ.ಸಿ.ಎ ಕಂಪ್ಲೀಟ್ ಮಾಡಿ ಮಣಿಪಾಲದಲ್ಲಿ ವೃತ್ತಿಯಲ್ಲಿದ್ದಾರೆ. ದೂರದ ಸಂಬಂಧಿ ಪ್ರದೀಪ್ ಚಂದ್ರ ಕುತ್ಪಾಡಿ ಸಿನಿಮಾ‌ ಮತ್ತು ಸೀರಿಯಲ್ ಕಲಾವಿದರಾಗಿ ಗುರುತಿಸಿಕೊಂಡವರು. ಹಾಗಾಗಿ ಕುಟುಂಬದ ಕಡೆಯಿಂದ ಬೆಂಬಲದ ವಿಚಾರದಲ್ಲಿ ಯಾವುದೇ ಕೊರತೆಯಿಲ್ಲ. ಆದರೆ ಶ್ರೇಯಾ ವಾಸ್ತವದ ಅರಿವಿನಲ್ಲೇ ಇರುವಾಕೆ. ಹಾಗಾಗಿ ಸಿನಿಮಾ ಒಂದನ್ನೇ ನಂಬಿ ಕುಳಿತಿಲ್ಲ. ನಾಟಕದಲ್ಲಿಯೂ ಗಮನ ಕೇಂದ್ರೀಕರಿಸಿದ್ದಾರೆ. ಮಾತ್ರವಲ್ಲ ಜರ್ನಲಿಸಮ್ ಬದುಕಿಗೆ ಕೂಡ ಬ್ಯಾಕ್ ಅಪ್ ಆಗಿರಲಿ ಅಂತ ಶ್ರದ್ಧೆಯ ವಿದ್ಯಾರ್ಥಿನಿಯಾಗಿದ್ದಾರೆ. ಚಿತ್ರೋದ್ಯಮಲ್ಲಿ ಹೆಸರು ಮಾಡಬೇಕು ಎನ್ನುವ ಗುರಿಯೇನೋ ಇದೆ. ಆದರೆ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಬದುಕಬೇಕು ಎನ್ನುವುದಕ್ಕೆ ಪ್ರಥಮ ಆದ್ಯತೆ ಎನ್ನುತ್ತಾರೆ. ಇಂಥ ಭಾವನಾತ್ಮಕತೆಯೇ ಮಹಾನ್ ಕಲಾವಿದರನ್ನು ಸೃಷ್ಟಿಸುತ್ತದೆ. ಶ್ರೀ ಶ್ರೇಯ ಕೂಡ ಮುಂದೊಮ್ಮೆ ಮಹಾನ್ ಕಲಾವಿದೆಯಾಗಿ ಗುರುತಿಸುವಂತಾಗಲಿ.

Recommended For You

Leave a Reply

error: Content is protected !!
%d bloggers like this: