ಡೈಲಾಗ್ ಮೇಲೆ ಕಣ್ಣು ಹಾಕಿದ ಭಟ್ಟರು!

ಕನ್ನಡ ಚಿತ್ರರಂಗದ ವಿಚಾರಕ್ಕೆ ಬಂದರೆ ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ವಿಪರೀತ ವೈರಲ್ ಆಗುತ್ತಿರುವಂಥ ಫೊಟೋ ಒಂದು ಇದೆ. ಅರೆ ಯೋಗರಾಜ್ ಭಟ್ಟರೇಕೆ ಬರವಣಿಗೆಯನ್ನು ಈ ರೀತಿ ನೋಡುತ್ತಿದ್ದಾರೆ ಎನ್ನುವ ಕುತೂಹಲ ಎಲ್ಲರಿಗೂ ಕಾಡುವಂಥದ್ದೇ. ಅದಕ್ಕೆ ಈ ಫೊಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದಂಥ ಯೋಗಿ ಗೌಡ ಅವರೇ ಕಾರಣವನ್ನು ಕೂಡ ಹೇಳಿದ್ದಾರೆ.

ಯೋಗಿ ಗೌಡ ಅವರು ನಿಮಗೆ ಗೊತ್ತಿರುತ್ತಾರೆ. ಮಿಮಿಕ್ರಿ, ಹಾಸ್ಯ, ಕಾರ್ಯಕ್ರಮಗಳ ಮೂಲಕ ಮನ ಸೆಳೆದವರು. ಅವರು ಕಳೆದ ಎರಡು ವರ್ಷಗಳಿಂದ ಯೋಗರಾಜ್ ಭಟ್ ಅವರ ಚಿತ್ರತಂಡದಲ್ಲಿ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಪಂಚತಂತ್ರ ಚಿತ್ರದ ಪ್ರಮೋಶನ್ ಗೆ ಎಂದು ಬಂದವರು, ಗಾಳಿಪಟದಲ್ಲಿ ಪೆನ್ನು ಹಿಡಿಯುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಇಲ್ಲಿನ ಫೊಟೋದಲ್ಲಿರುವುದು `ಗಾಳಿಪಟ ಭಾಗ 2’ ಚಿತ್ರದ ಸೆಕೆಂಡ್ ಹಾಫ್ ದೃಶ್ಯಗಳಿಗೆ ಯೋಗಿ ಬರೆದ ಸಂಭಾಷಣೆಯನ್ನು ಪರಿಶೀಲನಾತ್ಮಕವಾಗಿ ನೋಡುತ್ತಿರುವ ಭಟ್ಟರ ಫೊಟೋ. ನಿನ್ನ ಸಂಭಾಷಣೆಗಳನ್ನು ಫುಲ್ ಝೂಮ್ ಹಾಕಿಕೊಂಡು ನೋಡುತ್ತಿದ್ದೇನೆ ಎಂದರಂತೆ ಭಟ್ಟರು! ಆ ಸನ್ನಿವೇಶವನ್ನು ಖುದ್ದಾಗಿ ಕ್ಯಾಮೆರಾದಲ್ಲಿ ಸೆರೆ ಮಾಡಿದ್ದಾರೆ ಯೋಗಿ ಗೌಡ.

ಯೋಗಿಯವರು ಇದಕ್ಕೆ ಮುಂಚೆ ಅಂದರೆ ಒಂದು ವರ್ಷದ ಹಿಂದೆ, ಕೂಡ ಇಂಥದೇ ಒಂದು ಫೊಟೊ ತೆಗೆದಿದ್ದರು. ಅದರಲ್ಲಿ ಯೋಗರಾಜ್ ಭಟ್ಟರು ಪೆನ್ನು ಹಿಡಿದು ಕುಳಿತಿದ್ದರು. ಆಮೇಲೆ ಮಾಧ್ಯಮಗಳಲ್ಲಿ ಭಟ್ಟರು ಹಾಡು ಬರೆಯುತ್ತಿದ್ದಾರೆ, ಸ್ಕ್ರಿಪ್ಟ್ ರೆಡಿ ಮಾಡುತ್ತಿದ್ದಾರೆ ಅಂತ ಏನೇ ಲೇಖನಗಳು ಬಂದರೂ ಅದೇ ಫೊಟೋವನ್ನು ಬಳಸುತ್ತಿದ್ದರು ಎಂದು ಯೋಗಿ ಗೌಡ ನೆನಪಿಸಿಕೊಳ್ಳುತ್ತಾರೆ. ಆ ಎರಡನೇ ಫೊಟೋ ಕೂಡ ಇಲ್ಲಿ ನೀಡಲಾಗಿದೆ.

Recommended For You

Leave a Reply

error: Content is protected !!