ಕರ್ನಾಟಕಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ ತಂದುಕೊಟ್ಟ ತುಳು ಚಿತ್ರ ‘ಪಿಂಗಾರ’!

‘ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ 12ನೇ ವರ್ಷದ‌ ಸಂಭ್ರಮ ಮುಗಿಸಿದೆ. ಆರಂಭದಲ್ಲಿ ರಾಜ್ಯದೊಳಗಿನ ಪ್ರಾಂತೀಯ ಭಾಷೆಯ ಚಿತ್ರವಾಗಿ ಗುರುತಿಸಲ್ಪಡುತ್ತಿದ್ದ ತುಳು ಚಿತ್ರ ಈ ಬಾರಿ ಅಂತಾರಾಷ್ಟ್ರ ಮಟ್ಟದಲ್ಲಿ ತೀರ್ಪುಗಾರರ ವಿಶೇಷ ಮೆಚ್ಚುಗೆಯ ಪ್ರಶಸ್ತಿಗೆ ಭಾಜನವಾಗಿದೆ.

ಫೆಬ್ರವರಿ 26ರಂದು ಉದ್ಘಾಟನೆಯಾದ ’12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ದ ಸಮಾರೋಪ ಸಮಾರಂಭ ಇಂದು ಸಂಜೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನೆರವೇರಿತು. ಕನ್ನಡ ಸಿನಿಮಾಗಳ ಪ್ರಶಸ್ತಿಯ ಪಟ್ಟಿಯಲ್ಲಿ ಅಂತಾರಾಷ್ಟ್ರೀಯ ತೀರ್ಪುಗಾರರ ವಿಶೇಷ ಮನ್ನಣೆ ಪಡೆದ ಪ್ರಶಸ್ತಿಯ ಘೋಷಣೆಯಾದಾಗ ನಿಜಕ್ಕೂ ಅಲ್ಲಿ ವಿಶೇಷ ವಾತಾವರಣವೇ ನಿರ್ಮಾಣವಾಯಿತು. ತುಳು ಚಿತ್ರವಾದರೂ ಸಂದರ್ಭೋಚಿತವಾಗಿ, ಕರಾವಳಿಯ ಕನ್ನಡವನ್ನು ಸಾಕಷ್ಟು ಪ್ರಮಾಣದಲ್ಲಿ ಬಳಸಿರುವ ಚಿತ್ರವಾಗಿತ್ತು ಪಿಂಗಾರ. ಒಂದು ರೀತಿಯಲ್ಲಿ ತುಳು ಕನ್ನಡ ಚಿತ್ರವೆಂದೇ ರಾಜ್ಯವನ್ನು ಪ್ರತಿನಿಧಿಸಿದ್ದ ಪಿಂಗಾರಕ್ಕೆ ಪ್ರಶಸ್ತಿ ಸಂದಾಯವಾಗಿರುವುದು ಸರಿಯಾಗಿಯೇ ಇದೆ ಎಂದು ಚಿತ್ರ ನೋಡಿದವರೆಲ್ಲರೂ ಒಕ್ಕೊರಲಿನಿಂದ ಒಪ್ಪಿಕೊಳ್ಳುತ್ತಾರೆ.

‘ಪಿಂಗಾರ’ದ ಸ್ಪೆಷಾಲಿಟಿ

ತುಳು ಭಾಷೆಯಲ್ಲಿ ಪಿಂಗಾರ ಎಂದರೆ ಹಿಂಗಾರ ಎಂದು ಅರ್ಥ. ‘ಪಿಂಗಾರ’ ಎಂದರೆ ತುಳುವಿನಲ್ಲಿ ಹಿಂಗಾರಕ್ಕೆ ಇರುವ ಹೆಸರು. ಹಿಂಗಾರ ಎನ್ನುವ ಪದ ಕೂಡ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಮಾತ್ರ ಬಳಕೆಯಲ್ಲಿರುವ ಪದ. ಕಂಗು, ತೆಂಗುಗಳು ಇಲ್ಲೇ ಹೆಚ್ಚಾಗಿರುವ ಕಾರಣ ಅವುಗಳ ಹೂವಿಗೆ ಬಳಸುವ ಈ ಪದ ಇಲ್ಲಿಯವರೆಗೆ ಹೆಚ್ಚು ಸುಪರಿಚಿತ. ದೈವಸ್ಥಾನಗಳಲ್ಲಿ ಭೂತಾರಾಧನೆಯ ವೇಳೆ, ದೇವಸ್ಥಾನಗಳಲ್ಲಿ ನಾಗಾರಾಧನೆಯ ವೇಳೆ ಹಿಂಗಾರವನ್ನು ಯಥೇಚ್ಛವಾಗಿ ಬಳಸಲಾಗುತ್ತದೆ. ಭೂತ ವೇಷಧಾರಿಯು ಹಿಂಗಾರವನ್ನು ಕೈಯ್ಯಲ್ಲಿ ಹಿಡಿದು ಕುಣಿದು, ಭಕ್ತರಿಗೆ ಅದನ್ನೇ ಪ್ರಸಾದವಾಗಿ ನೀಡುತ್ತಾನೆ. ಹಾಗಾಗಿ ದೈವಾರಾಧನೆಯಲ್ಲಿ ಹಿಂಗಾರಕ್ಕೆ ಪ್ರಸಾದದ ಸ್ಥಾನವಿದೆ. ಅಂಥದೊಂದು ದೈವ ಪ್ರಸಾದದ ಕತೆಯೇ ಪಿಂಗಾರ.

ಚಿತ್ರದ ಕಥಾತಂತು

ಚಿತ್ರದಲ್ಲಿ ದೊಡ್ಡಮನೆಯ ಹೆಗ್ಡೆಯವರು ಮಾಡುವ ತಪ್ಪುಗಳು ಒಂದೆರಡಲ್ಲ. ಆದರೆ ಆ ಬಗ್ಗೆ ಅವರಿಗೆ ಎಚ್ಚರಿಸುವ ಶಕ್ತಿ ಆ ಹಳ್ಳಿಯಲ್ಲಿ ‌ಯಾರಿಗೂ ಇರುವುದಿಲ್ಲ. ಅಂಥ ಸಂದರ್ಭದಲ್ಲಿ ಅವರಿಂದ ಕೀಳು ಜಾತಿಯವನಾಗಿ ಗುರುತಿಸಲ್ಪಡುವ ತನಿಯ ಭೂತದ ಪಾತ್ರಿಯಾದ ವೇಳೆ ಸೂಚ್ಯವಾಗಿ ಊರಿನಲ್ಲಿ ನಡೆಯುತ್ತಿರುವ ಅನ್ಯಾಯದ ಬಗ್ಗೆ ಎಚ್ಚರಿಸುತ್ತಾನೆ. ಆದರೆ ಆ ಎಚ್ಚರಿಕೆ ತಮಗೇನೇ ಇರಬೇಕು ಎಂದುಕೊಳ್ಳುವ ಇನ್ನಿಬ್ಬರು ಕೂಡ ಹಳ್ಳಿಯೊಳಗೆ ಇರುತ್ತಾರೆ. ಒಬ್ಬಾತ ಮುಂಬೈನಿಂದ ಗಣೇಶೋತ್ಸವದ ಕಲೆಕ್ಷನ್ ದುಡ್ಡು ಕದ್ದು ಪರಾರಿಯಾದ ಮೋಹನ. ಮತ್ತೊಬ್ಬಾಕೆ ಚಿತ್ರದ ನಾಯಕಿ ಮಲ್ಲಿ. ಹಾಗಾದರೆ ಅವರಲ್ಲಿ ಭೂತ ಹೇಳಿದ ಅಪರಾಧಿ ಯಾರು? ಮಲ್ಲಿ ಮಾಡಿದ ಅಪರಾಧವೇನು? ನಿಜವಾದ ಅಪರಾಧಿಗೆ ದೈವ ನೀಡುವ ಶಿಕ್ಷೆ ಹೇಗಿರುತ್ತದೆ ಎನ್ನುವ ಎಲ್ಲ ಕುತೂಹಲಗಳಿಗೆ ಉತ್ತರ ನೀಡುವ ಚಿತ್ರ ಪಿಂಗಾರ.

ಕಲಾವಿದರ ಕರಾಮತ್ತು

ಚಿತ್ರದಲ್ಲಿ ಹೆಗ್ಡೆಯಾಗಿ ಗುರು ಹೆಗ್ಡೆ ಮತ್ತು ಅವರ ಪತ್ನಿ ಗುತ್ತಿನ ಮನೆ ಒಡತಿಯಾಗಿ ಉಷಾ ಭಂಡಾರಿ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಚಿತ್ರದ ನಾಯಕಿ ಮಲ್ಲಿಯಾಗಿ ನೀಮಾ ರೇ ಮತ್ತು ತನಿಯನಾಗಿ ಸುನೀಲ್ ನೆಲ್ಲಿಗುಡ್ಡೆ ನೀಡಿರುವ ಅಭಿನಯ ಪ್ರಶಂಸಾರ್ಹ.

ಪ್ರೀತಮ್ ಗೆ ಇದು ಪ್ರಥಮಾನುಭವ!

ನಿರ್ದೇಶಕರಾಗಿ ಪ್ರೀತಮ್ ಶೆಟ್ಟಿಯವರಿಗೆ ಇದು ಪ್ರಥಮ ಚಿತ್ರ. ಮೂಲತಃ ಮಂಗಳೂರಿನವರಾದ ಪ್ರೀತಮ್ ಕಿರುತೆರೆಯಲ್ಲಿ ಧಾರಾವಾಹಿಗಳನ್ನು ನಿರ್ದೇಶಿಸುವ ಮೂಲಕ ಜನಪ್ರಿಯರಾದವರು. ರಾಧಾ ಕಲ್ಯಾಣ, ಪವಿತ್ರ ಬಂಧನ, ಮೀರಾಮಾಧವ, ಖುಷಿ, ರಾಜಾರಾಣಿ, ಕಿನ್ನರಿ ಹೀಗೆ ಸಾಲು ಸಾಲು ಯಶಸ್ವಿ ಧಾರಾವಾಹಿಗಳನ್ನು ‌ನಿರ್ದೇಶಿಸಿರುವ ಪ್ರೀತಮ್ ಶೆಟ್ಟಿ ಪ್ರಸ್ತುತ ಕಲರ್ಸ್ ವಾಹಿನಿಗೆ ‘ಗಿಣಿರಾಮ’ ಧಾರಾವಾಹಿ ನಿರ್ದೇಶಿಸುತ್ತಿದ್ದಾರೆ. ಪ್ರಥಮ ಚಿತ್ರದಲ್ಲೇ ಪ್ರಶಸ್ತಿ ಬಾಚಿಕೊಂಡ ಖುಷಿ ಪ್ರೀತಮ್ ಅವರದ್ದು. ‘ಪಿಂಗಾರ’ ಚಿತ್ರದ ಮೂಲಕ ಅವರ ಪ್ರತಿಭೆಯು ಬೆಳ್ಳಿ ಪರದೆಯ ಮೇಲೆ ಅನಾವರಣಗೊಂಡಂತಾಗಿದೆ. ಅದಕ್ಕೆ ತಕ್ಕ ಹಾಗೆ ತಂತ್ರಜ್ಞರ ಸಹಕಾರವನ್ನು ಕೂಡ ಮರೆಯುವಂತಿಲ್ಲ. ಪವನ್ ಕುಮಾರ್ ಅವರ ಛಾಯಾಗ್ರಹಣ, ಜನಾರ್ದನ್ ಅವರ ಕಲಾನಿರ್ದೇಶನ ಸೇರಿದಂತೆ ಚಿತ್ರದ ತಂತ್ರಜ್ಞರ ಕೆಲಸ ಕೂಡ ಗಮನಾರ್ಹವೆನಿಸಿದೆ. ನಿರ್ದೇಶಕ ಪ್ರೀತಂ ಶೆಟ್ಟಿಯವರು ಸ್ವತಃ ಕತೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಶಶಿರಾಜ್ ಕಾವೂರು ಅವರ ಸಹಜ ಸಂಭಾಷಣೆ ಮತ್ತೊಂದು ಹೈಲೈಟ್ ಎಂದು ಹೇಳಲೇಬೇಕು.

ಶೆಟ್ಟರ ಬಗಲಲ್ಲಿದೆ ಪ್ರಶಸ್ತಿಗಳ ಬುಟ್ಟಿ!

ಪಿಂಗಾರ ಚಿತ್ರದ ನಿರ್ಮಾಪಕರು ಅವಿನಾಶ್ ಶೆಟ್ಟಿ. ಸಿನಿಮಾ ತಂತ್ರಜ್ಞರಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅವರು ಇಂದು ಪ್ರಶಸ್ತಿ ವಿಜೇತ ಚಿತ್ರಗಳ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಸಂಕಲನ, ಗ್ರಾಫಿಕ್ಸ್, ಅನಿಮೇಶನ್‌ ಗಳನ್ನು ಬಲ್ಲ ಅವಿನಾಶ್ ಅವರು ನಿರ್ಮಿಸಿದ ಮೊದಲ ಚಿತ್ರವಾದ ‘ಹರಿವು’ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪಡೆದುಕೊಂಡಿತ್ತು. ಅವರ ನಿರ್ಮಾಣದ ‘ಆ ಕರಾಳ ರಾತ್ರಿ’ ಸಿನಿಮಾ ಕೂಡ ರಾಜ್ಯ ಪ್ರಶಸ್ತಿಗೆ ಭಾಜನವಾಗಿದೆ. ಇವಲ್ಲದೆ ಆ್ಯಕ್ಟರ್, ಟಾಸ್, ಪುಟ 109, ಮೆಟಡೋರ್, ಮಹಾನವ್ಯ, ನಿರ್ಮಲ ಹೀಗೆ ಗಮನಾರ್ಹ ಚಿತ್ರಗಳಿಗೆ ನಿರ್ಮಾಪಕರಾದ ಕೀರ್ತಿ ಅವಿನಾಶ್ ಶೆಟ್ಟರದ್ದು. ಇದೀಗ ನಿರ್ಮಾಣದ ಪ್ರಥಮ ತುಳು ಚಿತ್ರದ ಮೂಲಕ ಅಂತಾರಾಷ್ಟ್ರೀಯ ಮಟ್ಟದ ತೀರ್ಪುಗಾರರ ಮನಸೆಳೆದು ರಾಜ್ಯದ ಶ್ರೇಷ್ಠ ಸಿನಿಮಾಕ್ಕಾಗಿ ನೀಡುವಂಥ ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಸಿಂಚನಾ ಕಣ್ಣಲ್ಲಿ ಆನಂದ ಭಾಷ್ಪದ ಸಿಂಚನ!

ಸಿಂಚನಾ ಚಂದ್ರಮೋಹನ್ ಮಾಧ್ಯಮ ಲೋಕದಿಂದ ಬಂದ ಬಹುಮುಖ‌ ಪ್ರತಿಭೆ. ಮೂಲತಃ ಕೊಡಗಿನವರಾದ ಸಿಂಚನಾ ಖಾಸಗಿ ವಾಹಿನಿಯಲ್ಲಿ ವಾರ್ತೆ ಓದುವ ಮೂಲಕ ವೃತ್ತಿ‌ಬದುಕು ಶುರು ಮಾಡಿದವರು. ಬಳಿಕ ವೃತ್ತ ಪತ್ರಿಕೆಗೆ ವರದಿಗಾರ್ತಿಯಾಗಿಯೂ ಕೆಲಸ ಮಾಡಿದರು. ಆದರೆ ಧಾರಾವಾಹಿಯಲ್ಲಿ‌ ಪೋಷಕ ನಟಿಯಾಗಿದ್ದ ಸಿಂಚನಾ ಪಿಂಗಾರ ಸಿನಿಮಾದೊಳಗೆ ತಮ್ಮದೇ ಚಿತ್ರವೆನ್ನುವ ಹಾಗೆ ತೊಡಗಿಸಿಕೊಂಡವರು. ಚಿತ್ರದಲ್ಲಿ ದ್ವಿತೀಯ ನಾಯಕಿ ಎನ್ನುವಂತೆ ಕಾಣಿಸಿಕೊಂಡಿರುವುದಷ್ಟೇ ಅಲ್ಲದೆ, ಕಾಸ್ಟ್ಯೂಮ್ ಡಿಸೈನರಾಗಿ, ಸಹಾಯಕ ನಿರ್ದೇಶಕಿಯಾಗಿಯೂ ದುಡಿದವರು. ಬಹುಶಃ ಇವೆಲ್ಲ ಕಾರಣದಿಂದಲೇ ಇರಬೇಕು, ಚಿತ್ರಕ್ಕೆ ಪ್ರಶಸ್ತಿಯ ಘೋಷಣೆಯಾದೊಡನೆ ಸಿಂಚನಾ ಎದ್ದು ನಿಂತು ಕಿರುಚಿಕೊಂಡರು. ರಾಜ್ಯಪಾಲ ವಜುಭಾಯಿ ವಾಲಾ ಪ್ರಶಸ್ತಿ ವಿತರಿಸುತ್ತಿದ್ದ ಹಾಗೆ ಸಭೆಯೊಳಗೆ ನಿಂತಿದ್ದ ಸಿಂಚನಾ ಉದ್ವೇಗದಿಂದ ಆನಂದಭಾಷ್ಪ ಹರಿಸಿದರು. ಚಿತ್ರತಂಡಕ್ಕೆ ಸಿನಿಕನ್ನಡದ ಶುಭಾಶಯಗಳು.

Recommended For You

Leave a Reply

error: Content is protected !!
%d bloggers like this: