ನಟರಂಗ ರಾಜೇಶ್ ನನಗೆ ಧಾರಾವಾಹಿ ದಿನಗಳಿಂದಲೂ ಆತ್ಮೀಯರು. ಫೋನ್ ಮಾಡಿ ಕೇಳಿದ್ರು, “ನೀನು ಬರಬಹುದಾ ಚಿನ್ನಾ..?” ಅಂತ. ಏನು ಎತ್ತ ಅಂತಾನೂ ವಿಚಾರಿಸದೇ ಒಪ್ಕೊಂಡೆ. ಈಗ ಸಭಾಂಗಣ ಪ್ರವೇಶಿಸಬೇಕಾದ್ರೆ ಕೇಳ್ದೆ ‘ಮುಹೂರ್ತನಾ? ಟೈಟಲ್ ಲಾಂಚ?’ ಅಂತ” ಎಂದು ನಕ್ಕರು ಯಶ್. ಅವರು ‘ಓಬಿರಾಯನ ಕಥೆ’ ಎನ್ನುವ ನೂತನ ಚಿತ್ರದ ಶೀರ್ಷಿಕೆ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.
“ಇವರು ಬೆಳಗ್ಗೆ ಚಿತ್ರದ ಮುಹೂರ್ತ ಮುಗಿಸಿದ್ದಾರೆ, ಆಗ ನಾನು ಹೈದರಾಬಾದ್ ನಲ್ಲಿದ್ದೆ. ಹಾಗಾಗಿ ನನಗಾಗಿ ಸಂಜೆ ಟೈಟಲ್ ಲಾಂಚ್ ಇಟ್ಕೊಂಡಿದ್ದಾರೆ. ಟೈಟಲ್ ಚೆನ್ನಾಗಿದೆ. ರಾಜೇಶ್ ಅವರು ಇಷ್ಟು ಸ್ಮಾರ್ಟ್ ಆಗಿದ್ದರೂ ಯಾಕೆ ಇನ್ನೂ ದೊಡ್ಡ ಹೀರೋ ಆಗಿಲ್ಲ ಅಂತ ತುಂಬ ಮಂದಿ ಕೇಳ್ತಾ ಇರ್ತಾರೆ. ನಾನು ನೋಡಿದ ಹಾಗೆ ಸೆಟ್ ನಲ್ಲೆಲ್ಲ ಅವರೇ ಹೀರೋ! ತುಂಬ ಡಿಮ್ಯಾಂಡ್ ಇದ್ದಂಥ ರೊಮ್ಯಾಂಟಿಕ್ ಹೀರೋ ಆಗಿದ್ರು ಅಂತ ಅಂದ್ರೆ ಯಾರೂ ತಪ್ಪು ತಿಳಿಯಬಾರದು” ಎಂದು ಯಶ್ ಹೇಳಿದಾಗ ವೇದಿಕೆಯಲ್ಲಿ ನಗು ಹೊಮ್ಮಿತು. ನಕ್ಕವರಿಗೆ ಕನ್ಫ್ಯೂಸ್ ಆಗಬೇಡಿ ಎಂದು ಗೊಂದಲ ದೂರಗೊಳಿಸಿದ ರಾಕಿಂಗ್ ಸ್ಟಾರ್, “ನಾ ಕಂಡಂಥ ಪ್ರಬುದ್ಧ ಕಲಾವಿದರಲ್ಲಿ ಇವರೂ ಒಬ್ಬರು. ಅವರನ್ನು ನಟರಾಗಿ ಮಾತ್ರವಲ್ಲ, ಉತ್ತಮ ಬರಹಗಾರರಾಗಿಯೂ ಕಂಡಿದ್ದೇನೆ. ಇವರೊಂದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಂಥ ರಘು ದೀಕ್ಷಿತ್ ಸಂಗೀತ ನಿರ್ದೇಶಕರಾಗಿ ಸೇರಿಕೊಂಡಿದ್ದಾರೆ. ಉದ್ಯಮದ ಒನ್ ಆಫ್ ದಿ ಫೈನೆಸ್ಟ್ ಆರ್ಟಿಸ್ಟ್ ಎನಿಸಿಕೊಂಡಿರುವ ದತ್ತಣ್ಣ ಕೂಡ ತಂಡದಲ್ಲಿದ್ದಾರೆ. ಒಟ್ಟಿನಲ್ಲಿ ಒಂದು ಸೆನ್ಸಿಬಲ್ ಟೀಮ್ ಎನ್ನುವುದು ಗೊತ್ತಾಗ್ತಿದೆ. ಟೈಟಲ್ ಹೇಳುವಂತೆ ಓಬಿರಾಯನ ಕಾಲದ ಆ್ಯಟಿಟ್ಯೂಡ್ ಗಳನ್ನು ಬದಿಗಿಟ್ಟು ನಾವೂ ಮುಂದೆ ಹೋದರೆ ಎಲ್ಲವೂ ಚೆನ್ನಾಗಿರುತ್ತದೆ” ಸಲಹೆ, ಮೆಚ್ಚುಗೆಗಳೊಂದಿಗೆ ಶುಭಕೋರಿದರು ಯಶ್.
ನಿರ್ದೇಶಕ ವಿನಯ್ ಶಾಸ್ತ್ರಿಗೆ ಇದು ಪ್ರಥಮ ಚಿತ್ರವಾಗಿದ್ದು ಚಿತ್ರಕ್ಕೆ ವೇಣು ಹೆಸ್ರಳ್ಳಿ ಸಂಭಾಷಣೆ ಬರೆದಿದ್ದಾರೆ. ಉಳಿದಂತೆ ಅವರು ಚಿತ್ರದ ಬಗ್ಗೆ ಯಾವುದೇ ನೀಡಲಿಲ್ಲ. ಮಾತ್ರವಲ್ಲ ಕಲಾವಿದರಲ್ಲಿಯೂ ಚಿತ್ರದ ಬಗ್ಗೆ ಮಾಹಿತಿ ನೀಡದಂತೆ ತಾಕೀತು ಮಾಡಿರುವುದು ಗೊತ್ತಾಯಿತು!
ನಾಯಕ ರಾಜೇಶ್ ಅವರ ಪ್ರಕಾರ ಕತೆಯೇ ಚಿತ್ರದ ನಾಯಕ. ಟೈಟಲ್ ಜತೆಗೆ ಕಾಣಿಸಿಕೊಂಡ ಫಸ್ಟ್ ಲುಕ್ ಪ್ರಕಾರ ನಾಯಕ ಹಳೇ ಕಾಲದ ಛಾಯಾಗ್ರಾಹಕ. ಪೋಸ್ಟರ್ ನಲ್ಲಿ ಕಾಣಿಸುವ ‘ಸಪ್ತಪದಿ’ ಎನ್ನುವ ಸ್ಟುಡಿಯೋ ಹೆಸರಿನಿಂದ ಹಿಡಿದು, ಪ್ರತಿಯೊಂದು ಪದಗಳಿಗೂ ಚಿತ್ರದಲ್ಲಿ ಅರ್ಥವಿದೆ, ಕತೆಯಿದೆ ಎಂದು ತಲೆಗೆ ಹುಳ ಬಿಡಲಾಯಿತು! ನಾಯಕಿ ಚೈತ್ರಾ ಆಚಾರ್, ನಿರ್ಮಾಪಕ ಶ್ಯಾಮ್ ಹನೂರು ಸೇರಿದಂತೆ ಚಿತ್ರತಂಡದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯಶ್ ಅವರನ್ನು ತಂಡದ ವತಿಯಿಂದ ಸನ್ಮಾನಿಸಲಾಯಿತು.