ಚಿತ್ರ: ಒಂದು ಶಿಕಾರಿಯ ಕಥೆ
ತಾರಾಗಣ: ಪ್ರಮೋದ್ ಶೆಟ್ಟಿ, ಪ್ರಸಾದ್ ಚೇರ್ಕಾಡಿ, ಅಭಿಮನ್ಯು, ಸಿರಿ ಪ್ರಹ್ಲಾದ್, ಮಠ ಕೊಪ್ಪಳ ಮೊದಲಾದವರು.
ನಿರ್ದೇಶನ: ಸಚಿನ್ ಶೆಟ್ಟಿ
ನಿರ್ಮಾಣ: ಸಚಿನ್ ಶೆಟ್ಟಿ, ರಾಜೀವ್ ಶೆಟ್ಟಿ
ಅದು ಕರಾವಳಿಯ ಗ್ರಾಮೀಣ ಭಾಗದಲ್ಲಿ ನಡೆಯುವ ಕತೆ. ಶಂಭು ಶೆಟ್ಟಿ ಎನ್ನುವ ಜೀವಪರ ಬರಹಗಾರ ಹೇಗೆ ಶಿಕಾರಿಯ ಬದುಕಿನ ನಂಟು ಹೊಂದಿದ್ದ ಮತ್ತು ಅದರಿಂದ ಹೇಗೆ ಹೊರಗೆ ಬರುತ್ತಾನೆ ಎನ್ನುವುದನ್ನು ಹಲವಾರು ಪಾತ್ರಗಳ ಮೂಲಕ ಹೇಳಿರುವಂಥ ಚಿತ್ರವೇ ಒಂದು ಶಿಕಾರಿಯ ಕಥೆ.
ಹರ್ಷ ಒಬ್ಬ ಯಕ್ಷಗಾನ ಕಲಾವಿದ. ಆತ ಪಾತ್ರವಾಗಿ ಕುಣಿಯುವುದನ್ನು ಕಂಡು ಅಭಿಮಾನಿಯಾಗುವವಳು ಆ ಊರಿನ ಚೆಲುವಾದ ಯುವತಿ. ಆ ಯುವತಿಯೆಂದರೆ ಹರ್ಷನಿಗೂ ಪ್ರೀತಿ. ಹರಿ ಮತ್ತು ಗುಲಾಬಿ ದಂಪತಿಯ ಮಗಳೇ ಆ ಯುವತಿ. ಒಬ್ಬಳೇ ಮಗಳಾದ ಕಾರಣ ಆಕೆಯ ಮೇಲೆ ಅವರಿಗೆ ವಿಪರೀತ ಅಕ್ಕರೆ. ಆದರೆ ಹರ್ಷ ಒಬ್ಬ ಬಡವನಷ್ಟೇ ಅಲ್ಲ ಅನಾಥನೂ ಹೌದು. ಹಾಗಾಗಿ ತಾನು ಕೇಳಿದೊಡನೆ ಮಗಳನ್ನು ಕೊಡಲಾರರೆನ್ನುವ ಸತ್ಯ ಹರ್ಷನಿಗೂ ಗೊತ್ತು. ಊರ ನದಿ ತೀರದ ಕಾಡಿನ ದಾರಿಯಲ್ಲಿ ಪ್ರೇಮಿಗಳ ಭೇಟಿಯಾಗುತ್ತಿತ್ತು. ಆದರೆ ಇದರ ನಡುವೆ ಅದೇ ಕಾಡಿನತ್ತ ಶಂಭು ಶೆಟ್ಟಿಯ ಶಿಕಾರಿಯ ಪಯಣವೂ ಸಾಗುತ್ತದೆ.
ಶಂಭುವಿನ ಮನೆಯ ಕೆಲಸದಾಳು ಹರಿ. ಶಂಭುವಿಗೆ ಪ್ರಾಣಿಗಳನ್ನು ಹೊಡೆಯುವುದೆಂದರೆ ಆಗದು. ಹಾಗಾಗಿ ಹರಿಗೆ ಹುಲಿವೇಷ ಹಾಕಿಸಿ ಬೇಟೆಯ ಆಟವಾಡುವುದು ಹವ್ಯಾಸ. ಈ ಬೇಟೆಯಲ್ಲಿ ಬಲಿಯಾಗುವುದು ಯಾರು? ಕೋವಿಗೆ ಹುಸಿ ಗುಂಡು ತುಂಬಿಸಿರುವಾಗ ಅಲ್ಲಿ ಬಲಿಯಾಗಲು ಹೇಗೆ ಸಾಧ್ಯ? ಹಾಗಾದರೆ ನಿಜಕ್ಕೂ ಸಾಯುವುದು ಯಾರು? ಬದುಕುವುದು ಯಾರು ? ಮೊದಲಾದ ಪ್ರಶ್ನೆಗಳ ನಡುವೆ ಪ್ರೇಕ್ಷಕ ಕುತೂಹಲದಿಂದ ಉಸಿರು ಮರೆಯುತ್ತಾನೆ. ಚಿತ್ರದೊಳಗೆ ಬೆರೆಯುತ್ತಾನೆ. ತನ್ನದೇ ಕಲ್ಪನೆಯ ಚಿತ್ರಕತೆ ಬರೆಯುತ್ತಾನೆ. ಆದರೆ ಅದೆಲ್ಲವನ್ನೂ ಮೀರಿದಂತೆ ನಿರ್ದೇಶಕ ನೀಡುವ ತಿರುವಿಗೆ ಅಚ್ಚರಿಯಲಿ ಕಣ್ಣು ತೆರೆಯುತ್ತಾನೆ.
ಚಿತ್ರ ನೋಡಿದ ಯಾರೂ ಕೂಡ ಇದು ನಿರ್ದೇಶಕನೋರ್ವನ ಚೊಚ್ಚಲ ಸಿನಿಮಾ ಎಂದು ಒಪ್ಪಿಕೊಳ್ಳುವುದು ಕಷ್ಟ. ಅದಕ್ಕೆ ಕುತೂಹಲಭರಿತವಾಗಿ ಬರೆಯಲಾದ ಚಿತ್ರಕತೆ, ಪಾತ್ರಗಳನ್ನು ಅಗತ್ಯವಿದ್ದಷ್ಟೇ ಮಾತನಾಡಿಸಿರುವ ಸಂಭಾಷಣೆ, ಕರಾವಳಿಯ ಸೊಬಗು ಸೆರೆಹಿಡಿದಿರುವ ಛಾಯಾಗ್ರಹಣ ಮೊದಲಾದವು ಕಾರಣವಾಗುತ್ತದೆ. ತಮ್ಮ ವಯಸ್ಸನ್ನು ಮೀರಿದ ವ್ಯಕ್ತಿಯ ಪಾತ್ರಗಳಲ್ಲಿ ಸದಾ ಮಾಗಿದ ಅಭಿನಯ ನೀಡಿ ಗಮನ ಸೆಳೆದಿರುವ ಪ್ರಮೋದ್ ಇಲ್ಲಿ ಆ ತೂಕವನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದಾರೆ. ಅದೇ ರೀತಿ ಸದಾ ಲಾರ್ಜರ್ ದೆನ್ ಲೈಫ್ ಎನ್ನುವಂಥ ಪಾತ್ರಗಳಿಂದಲೇ ಗಮನ ಸೆಳೆದಿರುವವರು ನಟ ಮಠ ಕೊಪ್ಪಳ. ಆದರೆ ಈ ಚಿತ್ರದಲ್ಲಿ ಯುವತಿಯ ತಂದೆಯಾದ ಹರಿಯಾಗಿ ಸೆಟಲ್ಡಾದ ಅಭಿನಯ ನೀಡಿದ್ದಾರೆ. ಅವರ ಪತ್ನಿ ಗುಲಾಬಿಯಾಗಿ ನಟಿಸಿರುವ ಕಲಾವಿದೆ ಕಾಣಿಸಿಕೊಂಡಿರುವುದು ಕೆಲವೇ ದೃಶ್ಯಗಳಲ್ಲಾದರೂ, ಚಿತ್ರ ಮುಗಿದ ಬಳಿಕವೂ ಕಾಡುವ ಪಾತ್ರವಾಗಿದ್ದಾರೆ.
ಯಕ್ಷಗಾನ ಕಲಾವಿದ ಹರ್ಷನಾಗಿ ಹರ್ಷಕ್ಕಿಂತ ಹೆಚ್ಚು ನೋವು, ಆತಂಕ ಅಸಾಹಯಕತೆಗಳನ್ನು ತೋರಿಸುವಲ್ಲಿ ಪ್ರಸಾದ್ ಚೇರ್ಕಾಡಿ ಗೆದ್ದಿದ್ದಾರೆ. ಹರ್ಷನ ಪ್ರೇಯಸಿಯಾಗಿ ಸಿರಿ ಪ್ರಹ್ಲಾದ್ ಕನ್ನಡಕ್ಕೆ ಮತ್ತೊಬ್ಬರು ಚೆಲುವೆ ನಾಯಕಿಯಾಗಿ ಬಂದಿರುವುದನ್ನು ಸಾರಿದ್ದಾರೆ. ಆದರೆ ಇಲ್ಲಿ ನಾವು ವಿವರಿಸದ ಪಾತ್ರವಾದ ಮೋಹನನಾಗಿ ನಟಿಸಿರುವ ಅಭಿಮನ್ಯು ಬಗ್ಗೆ ಹೇಳಲೇಬೇಕು. ವಾಲಿ ಸಿನಿಮಾದಲ್ಲಿ ಖಳ ಛಾಯೆಯ ಸಹೋದರನ ಪಾತ್ರವನ್ನು ನಿಭಾಯಿಸಿರುವ ಸುದೀಪ್ ಅವರ ನಟನೆಯನ್ನು ನೆನಪಿಸುವಂತೆ ಅಭಿಮನ್ಯು ಅವರ ಅಭಿನಯವಿದೆ. ಸುದೀಪ್ ರಂತೆ ಆರಡಿ ಕಟೌಟ್ ಅಲ್ಲವಾದರೂ ಮೂರ್ತಿಗಿಂತ ಕೀರ್ತಿ ದೊಡ್ಡದಿರುತ್ತದೆ ಎನ್ನುವುದಕ್ಕೆ ಇವರು ಕೂಡ ಉದಾಹರಣೆ ಎನ್ನಬಹುದು.
ಮಲೆನಾಡಿನಲ್ಲಿ ಕುಳಿತು ಒಂದೊಳ್ಳೆಯ ಪತ್ತೆದಾರಿ ಕಾದಂಬರಿ ಓದಿದ ಅನುಭವ ನೀಡುವ ಸಿನಿಮಾ ಇದು. ಹಾಗಾಗಿ ಚಿತ್ರದ ಗುಣಮಟ್ಟ ಎಲ್ಲರಿಗೂ ಅರ್ಥವಾಗಿರಬಹುದು. ಈ ಸಿನಿಮಾ ಒಂದು ಒಳ್ಳೆಯ ಕತೆಯನ್ನು ಮಾತ್ರ ಪ್ರೇಕ್ಷಕರಿಗೆ ನೀಡಿಲ್ಲ ಪ್ರತಿಭಾವಂತ ಕಲಾವಿದರು ಮತ್ತು ತಂತ್ರಜ್ಞರನ್ನು ಕೂಡ ಪರಿಚಯಿಸಿದೆ. ಹಾಗಾಗಿ ಸಿನಿಮಾ ಪ್ರಿಯರಿಗೆ ಇದೊಂದು ರಸದೌತಣ.
ಹೆಸರು ನೋಡಿ ಇದೊಂದು ಪ್ರಾಣಿ ಬೇಟೆಯ ಕತೆ ಎಂದುಕೊಳ್ಳದಿರಿ. ಆದರೆ ಇದು ಬದುಕಿನ ಬೇಟೆಯಲ್ಲಿ ನಮಗೆ ನಾವೇ ಮಿಕವಾಗುವ ಮತ್ತು ಅದರೊಳಗೆ ಸುಖವಾಗುವ ಅನುಭವ ನೀಡುತ್ತದೆ.