ಕೆ.ಜಿ.ಎಫ್ ಎನ್ನುವ ಒಂದು ಸಿನಿಮಾ ಕನ್ನಡದ ಯಶ್ ಅವರ ಅಂತಾರಾಷ್ಟ್ರೀಯ ಮಟ್ಟದ ತಾರೆಗಳೊಂದಿಗೆ ಹೋಲಿಸುವಂತೆ ಮಾಡಿದೆ. ಹಾಗಂತ ಹೇಳುವ ಮಾತಿನಲ್ಲಿ ಯಾವುದೇ ಸಿನಿಮೀಯ ಬಿಲ್ಡಪ್ ಗಳಿಲ್ಲ ಎನ್ನುವುದಕ್ಕೆ ಇತ್ತೀಚೆಗಷ್ಟೇ ಅವರನ್ನು ವಿದೇಶದಿಂದ ಹುಡುಕಿಕೊಂಡು ಬಂದು ಬೆಂಗಳೂರಿನ ತಾಜ್ ವೆಸ್ಟೆಂಡ್ ತಲುಪಿ ಕೈ ಕುಲುಕಿ ಹೋದವರೇ ಉದಾಹರಣೆ! ಇದೀಗ ಅಂಥದೊಂದು ಅಭಿಮಾನ ಶ್ರೀಲಂಕಾದಿಂದ ಕಮರ್ಷಿಯಲ್ ರೂಪದಲ್ಲಿ ಹೊರಗೆ ಬಂದಿದೆ! ಅಲ್ಲಿನ ರ‌್ಯಾಪ್ ಹಾಡುಗಾರನೊಬ್ಬ ಕೆ.ಜಿ. ಎಫ್ ಭಾಗ ಎರಡರ ಬಗ್ಗೆ ನಿರೀಕ್ಷೆ ವ್ಯಕ್ತಪಡಿಸಿ ಸಿಂಹಳ ತಮಿಳಲ್ಲಿ ಹಾಡು ತಯಾರು ಮಾಡಿದ್ದಾನೆ.
KGF Monster ಹೆಸರಲ್ಲಿ ಹಸ್ಟ್ಲರ್ ಭಾಯ್ ಮಾಡಿರುವ ಈ ಪ್ರಯತ್ನಕ್ಕೆ ಅದ್ಭುತ ಪ್ರತಿಕ್ರಿಯೆ ದೊರಕಿದೆ. ವಾಸ್ತವದಲ್ಲಿ ಶ್ರೀಲಂಕಾದಲ್ಲಿ ರ‌್ಯಾಪ್ ಹಾಡುಗಳಿಗೆ ನಮ್ಮಲ್ಲಿರುವಷ್ಟು ದೊಡ್ಡ ಮಟ್ಟದ ಪ್ರೇಕ್ಷಕರಿಲ್ಲ. ಆದರೆ ಆರಂಭ ಕಾಲದಲ್ಲಿ ನಮ್ಮಲ್ಲಿ ಕೂಡ ರ‌್ಯಾಪ್ ಹಾಡುಗಳಿಗೆ ಪ್ರೋತ್ಸಾಹ ಸಿಗುತ್ತಿರಲಿಲ್ಲ ಎನ್ನುವುದನ್ನು ನೆನಪಿಸಿಕೊಳ್ಳುವ ಹಸ್ಟ್ಲರ್ ಭಾಯ್, ಮುಂದಿನ ದಿನಗಳಲ್ಲಿ ನಮ್ಮಂತೆ ಅಲ್ಲಿಯೂ ರ‌್ಯಾಪ್ ಸಿಂಗರ್ಸ್ ಗಳಿಗೆ ಉತ್ತಮ ಮಾರುಕಟ್ಟೆ ಸೃಷ್ಟಿಯಾಗಬಹುದೆನ್ನುವ ನಿರೀಕ್ಷೆ ಹೊಂದಿದ್ದಾರೆ. ಕಳೆದ ಮೂರು ವರ್ಷಗಳಿಂದ ಸುದ್ದಿಯಲ್ಲಿರುವ ಹಸ್ಟ್ಲರ್ ಭಾಯ್, ಇದೀಗ ಭಾರತೀಯರ ಗಮನ ಸೆಳೆದಿರುವುದು ‘ಕೆಜಿಎಫ್ ಮನ್ಸ್ಟರ್’ ಹೆಸರಿನ ಹಾಡಿನ ಮೂಲಕ. ಹಾಡಿನಲ್ಲಿ ಕೆಜಿಎಫ್ ಚಿತ್ರದ ಪ್ರಮುಖ ದೃಶ್ಯಗಳ ಹಿನ್ನಲೆಯಲ್ಲಿ ಗಾಯಕನನ್ನು ತೋರಿಸಲಾಗಿದೆ. ಅದೇ ಲೊಕೇಶನ್ ಗಳಿಗೆ ಹೋಗಿ ಹಾಡಿರುವಂತೆ ಮಾಡಿರುವುದಲ್ಲದೆ ಕೆ.ಜಿ.ಎಫ್ ಚಾಪ್ಟರ್ ಸೆಕೆಂಡ್ ಬಗ್ಗೆ ನಿರೀಕ್ಷೆ ಹೆಚ್ಚಿಸುವ ಪ್ರಯತ್ನವೂ ನಡೆದಿದೆ. ಹಸ್ಟ್ಲರ್ ಭಾಯ್ ಈ ಹಾಡಿನಲ್ಲಿ ಒಂಥರಾ ನಮ್ಮ ರಾಕಿ ಭಾಯ್ ತರಹ ಕಾಣಿಸುವ ಪ್ರಯತ್ನ ನಡೆಸಿದ್ದಾರೆ.
ಹಸ್ಟ್ಲರ್ ಭಾಯ್ ಬಗ್ಗೆ
ಯೂ ಟ್ಯೂಬ್ ನಲ್ಲಿ ಹಸ್ಟ್ಲರ್ ಭಾಯ್ ಹೆಸರಿನಲ್ಲಿ ಜನಪ್ರಿಯನಾಗಿರುವ ಈತನ ನಿಜವಾದ ಹೆಸರು ಹಮ್ದಾನ್ ಹಸನ್. ಆತನ ಪ್ರಕಾರ ಶ್ರೀಲಂಕಾದ ಮಾಧ್ಯಮಗಳು ರ‌್ಯಾಪ್ ಸಂಗೀತಕ್ಕೆ ಪ್ರೋತ್ಸಾಹ ನೀಡುತ್ತಿಲ್ಲ ಎನ್ನುವ ನೋವು ಆತನಿಗೆ ಇದೆ. ಭಾರತದ ಹಾಗೆ ಚಿತ್ರೋದ್ಯಮದ ಮಂದಿ ರ‌್ಯಾಪ್ ಕಲಾವಿದರಿಗೆ ಅವಕಾಶ ನೀಡಿ ಮೇಲೆತ್ತಬೇಕಾಗಿದೆ ಎನ್ನುವುದು ಹಸ್ಟ್ಲರ್ ಅನಿಸಿಕೆ. ಸದ್ಯಕ ಬಿಬಿಸಿ ನೆಟ್ವರ್ಕ್ ತಮಗೆ ಬೆಂಬಲ ನೀಡಿರುವುದನ್ನು ಕೂಡ ಆತ ಸ್ಮರಿಸುತ್ತಾರೆ.
ಐದು ವರ್ಷಗಳ ಹಿಂದೆ ರ‌್ಯಾಪ್ ಕ್ಷೇತ್ರಕ್ಕೆ ಪ್ರವೇಶಿಸಿದ ಹಸ್ಟ್ಲರ್ ಭಾಯ್ ಗೆ ‘ಬ್ಕ್ಯಾಕ್ ಹಂಟರ್’ ಖ್ಯಾತಿಯ ’ಹರ್ಷ ಫೆರ್ನಾಂಡೊ’ ಸ್ಫೂರ್ತಿಯಂತೆ. ವಿದೇಶೀ ಕಲಾವಿದರ ಜತೆಗೆ ಕೂಡ ಸಹಯೋಗ ಹೊಂದಿಸಿರುವ ಈತನ ‘ರೌಡಿ’ ಹಾಡು ಯೂ ಟ್ಯೂಬ್ ನಲ್ಲಿ ಒಂದು ಮಿಲಿಯನ್ ವ್ಯೂವ್ಸ್ ದಾಟಿದೆ! ಪ್ರಸ್ತುತ ‘ಮನ್ಸ್ಟರ್ ಕೆ.ಜಿ.ಎಫ್’ ಬಿಡುಗಡೆಯಾದ ಒಂದೇ ವಾರದಲ್ಲಿ 68 ಸಾವಿರ ವ್ಯೂವ್ಸ್ ಪಡೆದುಕೊಂಡಿದೆ. ಇದು ಕರ್ನಾಟಕದ ಯಶ್ ಅಭಿಮಾನಿಗಳ ಗಮನ ಸೆಳೆಯುವುದರೊಂದಿಗ ಹೊಸ ದಾಖಲೆ ಸೃಷ್ಟಿಯಾಗುವುದೆಂದು ನಿರೀಕ್ಷಿಸಲಾಗಿದೆ.
ಯಶ್ ಎಂದರೇನೇ ಸ್ಫೂರ್ತಿ!
ಯಶ್ ಕನ್ನಡ ಚಿತ್ರೋದ್ಯಮದ ವಿಸ್ತಾರಕ್ಕೆ ಮತ್ತು ಭಾರತೀಯ ಯುವ ಸಿನಿಮಾ ಪ್ರತಿಭೆಗಳಿಗೆ ಮಾತ್ರವಲ್ಲ, ವಿದೇಶದ ಉದ್ಯಮವೊಂದರ ಕಲಾವಿದರಿಗೂ ಸ್ಫೂರ್ತಿಯಾಗುತ್ತಾರೆ ಎನ್ನುವಾಗ ಅದಕ್ಕಿಂತ ದೊಡ್ಡ ಸೌಭಾಗ್ಯ ಕನ್ನಡಿಗರಿಗೆ ಬೇರೇನಿದೆ?!