
ಬೆಳಿಗ್ಗೆ ಮಂಗಳೂರಿನಿಂದ ಆರ್.ಜೆ ಎರಲ್ ಫೋನ್ ಮಾಡಿದ್ದರು. “ಕೊರೊನ ಇಂದು ನಮ್ಮನೆಲ್ಲ ದೂರ ದೂರ ಇರುವಂತೆ ಮಾಡಿದೆ. ಆದರೆ ಹೀಗೆ ಗ್ಯಾಪ್ ಮೈನ್ಟೇನ್ ಮಾಡ್ಕೊಂಡೇ ಇರಬೇಕು ಅಂತ ಬಹಳ ವರ್ಷ ಹಿಂದೇನೇ ಕನ್ನಡದ ಒಬ್ಬ ಸ್ಟಾರ್ ಹೇಳಿದ್ರು.. ನೆನಪಿದ್ಯಾ?” ಅಂತ ಕೇಳಿದ್ರು. ಕೊರೋನ ಬಂದಮೇಲೆ ಜಾಗೃತಿ ಹರಡ್ತಿರೋ ತಾರೆಗಳ ಬಗ್ಗೆ ನನಗೆ ಗೊತ್ತು. ಆದರೆ ಅಷ್ಟೊಂದು ವರ್ಷಗಳ ಮೊದಲೇ ಯಾರು ಹೇಳಿದ್ದಾರೆ ಅಂತ ಗೊತ್ತಿಲ್ಲ ಅಂದೆ. ಆಗ ಅವರು “ಏನ್ರಿ.. ರವಿಚಂದ್ರನ್ ಫ್ಯಾನ್ ಅಂತೀರ? ಅವರ ಏಕಾಂಗಿ ಸಿನಿಮಾ ನೋಡಿಲ್ವ ?” ಅಂದ್ರು.

ಬಿ ಎಲೋನ್ ಟು ಬಿ ಹ್ಯಾಪಿ ಓ… !
ಹೌದು! ಎರಲ್ ಹೇಳಿದ್ದು ನಿಜ. ‘ಏಕಾಂಗಿ’ ಎನ್ನುವ ಸಿನಿಮಾದಲ್ಲಿ ಚಿತ್ರದ ಹೆಸರೇ ಹೇಳುವಂತೆ ಏಕಾಂಗಿ ಬದುಕೇ ಒಳಿತು ಎನ್ನುವ ಸಂದೇಶ ನೀಡಿದ್ದರು. ಅದಕ್ಕೆ ಚಿತ್ರದಲ್ಲಿ ಅವರು ನೀಡಿದ ಕಾರಣ, ಜತೆಗಾತಿ-ಜತೆಗಾರರಾಗಿ ಬರುವವರೇ ವಂಚಿಸುವಾಗ, ಬೆನ್ನಿಗೆ ಚೂರಿ ಹಾಕುವಂಥ ಕೆಲಸ ಮಾಡುವಾಗ ನಾವು ಅಂಥವರಿಂದ ಚೂರು ದೂರವಿರುವುದೇ ಒಳಿತು ಎನ್ನುವುದಾಗಿತ್ತು. ಅದುವೇ ಚಿತ್ರದ ಸಾರಾಂಶ. ಜತೆಗೆ ಅದೇ ಭಾವವನ್ನು ಸಾರುವ ಚಿತ್ರದ ಹಾಡುಗಳು ಕೂಡ, ಚಿತ್ರ ತೆರೆಕಂಡ ಬಳಿಕ ಜನಪ್ರಿಯವಾಗಿತ್ತು. ವಿಶೇಷ ಏನೆಂದರೆ ಮಧು ಬಾಲಕೃಷ್ಣನ್ ಕಂಠದಲ್ಲಿ ಮೂಡಿ ಬಂದಂಥ “ನೀ..ಏಕಾಂಗಿಯಾಗಮ್ಮಾ.. ನಿನ್ನ ನೀನು ಪ್ರೀತಿಸದೇ ಕಾಣೋದು ಹೇಗೆ ಈ ಲೋಕಾನ..”; ಹರಿಹರನ್ ಅವರು ಹಾಡಿದಂಥ “ನನ್ನಾಣೆ ಕೇಳೇ ಪ್ರಾಣವೇ ನಂಗೆ ಬೇರೆ ಯಾರಿಲ್ಲವೇ.. ನಿನ್ನಾಣೆ ಕೇಳೇ ನನ್ನ ಪ್ರಾಣವೇ ಬೇರೆ ಯಾರು ಬೇಕಿಲ್ಲವೇ..” ಮಾತ್ರವಲ್ಲ, ಸೋನ್ ನಿಗಮ್ ಆಲಾಪಿಸಿದ ಹಾಡಿನ ಅನುಪಲ್ಲವಿಯಲ್ಲಿಯೂ “ಬಿ ಎಲೋನ್ ಟುಬಿ ಹ್ಯಾಪಿ ಓ.. ಬಿ ಹ್ಯಾಪಿ ಟು ಬಿ ಎಲೋನ್..” ಎಂದು ಏಕಾಂತ ಸಂದೇಶಗಳನ್ನು ಸಾರಲಾಗಿತ್ತು. ಅವಷ್ಟು ಹಾಡುಗಳಿಗೆ ಸ್ವತಃ ರವಿಚಂದ್ರನ್ ಸಂಗೀತ ನೀಡುವ ಜತೆಗೆ ಸಾಹಿತ್ಯ ರಚಿಸಿದ್ದರು ಎನ್ನುವುದು ಮತ್ತೊಂದು ವಿಶೇಷ. ಸದಾ ಹಾಡುಗಳ ಜತೆಯಲ್ಲೇ ಕಾಲಕಳೆಯುವ ಆರ್ ಜೆ ಎರಲ್ ಅವರಿಗೆ ಸಹಜವಾಗಿಯೇ ಈ ಹಾಡುಗಳು ಮನದಲ್ಲೇ ಕುಳಿತುಕೊಂಡಿವೆ. ಅದರಲ್ಲಿ ಕೂಡ ಕೊರೊನ ವೈರಸ್ ಕಾಟದಿಂದಾಗಿ ಜನಗಳು ಬೆರೆಯಬಾರದು ಎನ್ನುವ ಸಂದೇಶ ನೀಡಲು ಸೂಕ್ತ ಹಾಡಾಗಿ ಇವುಗಳೇ ಬಳಕೆಯಾಗುತ್ತಿವೆ! ಹಾಗಾಗಿ ಅವರ ಏಕಾಂಗಿತನದ ಬಗ್ಗೆ ಚಂದನವನದಲ್ಲಿ ಪ್ರಥಮ ಎಚ್ಚರಿಕೆ, ಜಾಗೃತಿಯನ್ನು ಮೂಡಿಸಿದಂಥ ತಾರೆ ಇದ್ದರೆ ಅದು ರವಿಚಂದ್ರನ್ ಎನ್ನುವುದು ಅವರದೂ ಸೇರಿದಂತೆ ನಮ್ಮ ಅಭಿಮತ. ಉಳಿದಂತೆ ನಿಮ್ಮ ಅಭಿಪ್ರಾಯಗಳಿಗೂ ಇಲ್ಲಿ ಮುಕ್ತ ಸ್ವಾಗತ.

ನಿಜ ಹೇಳಬೇಕೆಂದರೆ ಏಕಾಂಗಿ ಸಿನಿಮಾ ಅಂದು ಗಲ್ಲಾ ಪೆಟ್ಟಿಗೆಯಲ್ಲಿ ಗೆಲವು ಕಂಡಿರಲಿಲ್ಲ. ಆದರೆ ಚಿತ್ರ ಟಿವಿಯಲ್ಲಿ ಬಂದಾಗ ಮೆಚ್ಚಿಕೊಂಡವರು ತುಂಬ ಮಂದಿ ಇದ್ದರು. ಸಿನಿಮಾದಲ್ಲಿ ರವಿಚಂದ್ರನ್ ಬರೆಸಿದಂಥ ಏಕಾಂಗಿ ತನದ ಕೋಟ್ಸ್ ಗಳನ್ನು ತಮ್ಮ ತಮ್ಮ ವಾಹನಗಳ ಮೇಲೆ ಬರೆಸಿಕೊಂಡ ಅಭಿಮಾನಿಗಳು ಇಂದಿಗೂ ಕಾಣಸಿಗುತ್ತಾರೆ. ತಮ್ಮ ಚಿತ್ರಗಳಲ್ಲಿ ಏಕಾಂಗಿ ಆಪ್ತವಾದ ಸಿನಿಮಾ ಎನ್ನುವ ಮಾತನ್ನು ಹೇಳುವ ರವಿಚಂದ್ರನ್ ಅವರಿಗೆ ಚಿತ್ರವು ರಾಜ್ಯ ಪುರಸ್ಕಾರಗಳನ್ನು ಕೂಡ ತಂದುಕೊಟ್ಟಿತ್ತು. ಅಂದಹಾಗೆ ನಾಳೆ ಮಾರ್ಚ್ 21ಕ್ಕೆ ‘ಏಕಾಂಗಿ’ ಚಿತ್ರ ಬಿಡುಗಡೆಯಾಗಿ ಹದಿನೆಂಟು ವರ್ಷಗಳಾಗುತ್ತದೆ.


