ಕೊರೊನಾದ ಕರಾಳತೆ ಅರಿಯುವಂತೆ ಕವಿರಾಜ್ ಕಳಕಳಿ

ಸಿನಿಮಾ ಗೀತರಚನೆಕಾರರಾಗಿ ಕವಿರಾಜ್ ಜನಪ್ರಿಯರು. ಆದರೆ ನಿರ್ದೇಶಕರಾಗಿ, ಕನ್ನಡ ಪರ ಹೋರಾಟಗಾರರಾಗಿ ಅವರ ಕೆಲಸ ಪ್ರಶಂಸಾರ್ಹ. ಇದೀಗ ಜನತೆ ಕೊರೊನ ವೈರಸ್ ಸಮಸ್ಯೆಯಿಂದ ಕಂಗಾಲಾಗಬೇಕಾದ ಸಂದರ್ಭದಲ್ಲಿ ಅವರು ಸಾಮಾಜಿಕ ಕಳಕಳಿಯಿಂದ ಒಂದೆರಡು ಉತ್ತಮ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವನ್ನು ಯಥಾವತ್ತಾಗಿ ‘ಸಿನಿಕನ್ನಡ.ಕಾಮ್’ ಓದುಗರಿಗೆ ನೀಡಲಾಗಿದೆ.

Please Be serious. ತುಂಬಾ ವಿಷಾದ ಮತ್ತು ಕಾಳಜಿಯಿಂದ ಇಷ್ಟು ದೀರ್ಘವಾಗಿ ಬರೆಯುತ್ತಿದ್ದೇನೆ. ನಮ್ಮ ದೇಶದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಜಾಸ್ತಿ ಆಗುತ್ತಿದೆ. ನಿನ್ನೆ ಒಂದೇ ದಿನಕ್ಕೆ 100ಕ್ಕೂ ಹೆಚ್ಚು ಜನ ಸೋಂಕಿತರು ಪತ್ತೆಯಾಗಿದ್ದಾರೆ. ಒಟ್ಟು ಸಂಖ್ಯೆ 427ಕ್ಕೆ ತಲುಪಿದೆ. ಗಮನಿಸಬೇಕಾದ ವಿಷಯ ಎಂದರೆ ಇದು ಅಧಿಕೃತವಾಗಿ ಲೆಕ್ಕಕ್ಕೆ ಸಿಕ್ಕಿರೊ ಸಂಖ್ಯೆ. ಇದರಾಚೆ ಖಂಡಿತಾ ನಮ್ಮ ನಿಮ್ಮ ನಡುವೆ, ಗೊತ್ತಿದ್ದೊ , ಗೊತ್ತಿಲ್ಲದೆಯೋ ನಿರ್ಲಕ್ಷ್ಯ ವಹಿಸಿ, ಕ್ವಾರಂಟೈನ್ ಆಗದೆ, ಆಸ್ಪತ್ರೆಗೆ ಹೋಗಲಿಚ್ಚಿಸದೆ ಕೊರೊನಾ ವೈರಾಣುವನ್ನು ಹೊತ್ತುಕೊಂಡು ಅಲ್ಲಲ್ಲಿ ಪಸರಿಸುತ್ತಾ ಓಡಾಡುತ್ತಿರುವವರ ಸಂಖ್ಯೆ ಖಂಡಿತಾ ಸಾವಿರಾರು ಇರುತ್ತದೆ. ಎಲ್ಲೋ ಅಂತವರು ನಿಮ್ಮ ಸಂಪರ್ಕಕ್ಕೂ ಬಂದಿರುವ, ಬರುವ ಸಾಧ್ಯತೆ ನಿಚ್ಚಳವಾಗಿದೆ. ಇಷ್ಟಕ್ಕೂ ಅವರು ನಿಮ್ಮನ್ನು ನೇರವಾಗಿ ಭೇಟಿ ಮಾಡಿರಬೇಕು ಅಂತಲೂ ಇಲ್ಲ. ಅವರು ಕೆಮ್ಮಿಯೋ, ಸೀನಿಯೋ ಹೋದ ಟೇಬಲ್, ಕಲ್ಲು ಮುಂತಾದ ವಸ್ತುಗಳನ್ನು , ನೀವು ಅವರು ಬಂದು ಹೋದ ಒಂದು ದಿನದ ನಂತರವೂ ಮುಟ್ಟಿದರು ಸಾಕು, ಕೊರೊನಾ ವೈರಸ್ ನಿಮ್ಮ ದೇಹ ಸೇರಲು. ಅಲ್ಲಿಗೆ ಸುಮ್ಮನೆ ಲೆಕ್ಕ ಹಾಕಿ ಒಬ್ಬನೇ ಒಬ್ಬ ಸೋಂಕಿರುವ ವ್ಯಕ್ತಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿದರೆ ಒಂದೇ ಒಂದು ದಿನದಲ್ಲಿ ಅದೆಷ್ಟೋ ಸಾವಿರ ಜನರಿಗೆ ಸೋಂಕನ್ನು ಹರಡಬಲ್ಲ ಸಾಮರ್ಥ್ಯ ಹೊಂದಿರುತ್ತಾನೆ ಎಂದಾಗ ಈ ಸೋಂಕಿನ ಭಯಾನಕತೆಯ ಅರಿವಾಗುತ್ತದೆ.

ನಮ್ಮಲ್ಲಿ ಸ್ಯಾನಿಟೈಸರ್ ಗೂ ಬರವಿದೆ!

ನಮ್ಮ ಪುಣ್ಯಕ್ಕೆ ಚೀನಾ, ಗಲ್ಫ್ ಯುರೋಪ್ಗಳಲ್ಲಿ ಮಾರಣಹೋಮ ನಡೆಸಿದ ನಂತರ ಈ ವೈರಾಣು ನಮ್ಮ ದೇಶವನ್ನು ಪ್ರವೇಶಿಸಿದೆ. ಅದನ್ನೇ ನಾವು ಅಡ್ವಾಂಟೇಜ್ ಆಗಿ ಬಳಸಿ ಈ ಸೋಂಕು ನಮ್ಮ ದೇಶಕ್ಕೆ ಕಾಲಿಡದಂತೆ ತಡೆಯಬೇಕಿತ್ತು.ತಿಂಗಳ ಹಿಂದೆ ಅಂತಾರಾಷ್ಟ್ರೀಯ ವಿಮಾನ ಸಂಪರ್ಕವನ್ನು ಸ್ಥಗಿತಗೊಳಿಸಿದ್ದರೆ ಅಥವಾ ಕನಿಷ್ಠ ಪಕ್ಷ ವಿದೇಶದಿಂದ ಬಂದವರನ್ನೆಲ್ಲಾ ಕಡ್ಡಾಯ ಕ್ವಾರಂಟೈನ್ಗೆ ಒಳಪಡಿಸಿದ್ದರೆ ಇವತ್ತು ಈ ಪರಿಸ್ಥಿತಿ ಬರುತ್ತಿರಲಿಲ್ಲ . ಹೋಗಲಿ ,ಅದೂ ಆಗಲಿಲ್ಲ ಈಗಲಾದರೂ ಅಲ್ಲಿನ ಕರಾಳ ಅನುಭವಗಳಿಂದ ಎಚ್ಚೆತ್ತು ಹೆಚ್ಚು ಜಾಗೃತರಾಗಬೇಕಿತ್ತು. ಅದೂ ಆಗುತ್ತಿಲ್ಲ ‌.ಚೀನಾ,ಇಟಲಿ ,ಸ್ಪೇನ್ ನಂತೆ ಆದರೆ ನಮ್ಮಲ್ಲಿ ಆ ಪರಿಸ್ಥಿತಿಯನ್ನು ಎದುರಿಸುವ ವ್ಯವಸ್ಥೆ, ಸೌಕರ್ಯಗಳು ಖಂಡಿತಾ ಇಲ್ಲಾ. ಒಂದು ಸ್ಯಾನಿಟೈಸರ್ ಗಾಗಿ ನಾನು ಎರಡು ವಾರದಿಂದ ಹತ್ತಾರು ಮೆಡಿಕಲ್ ಶಾಪ್ ಅಲೆದರು ಸಿಗಲಿಲ್ಲ‌. ವೈದ್ಯಕೀಯ ಸಿಬ್ಬಂದಿಗಳಿಗೇ ಮಾಸ್ಕ್ ಕೊರತೆಯಿದೆಯಂತೆ.ಈಗ ನಮ್ಮ ಸರ್ಕಾರಗಳು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿವೆ. ಆದರೆ ಅದೂ ಸಾಲದು. ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡದಿದ್ದರೆ ನಾವೆಲ್ಲ ಕನಸಿನಲ್ಲೂ ಊಹಿಸಲಾಗದ ದುರಂತ ಕಾದಿದೆ.

ಲಾಕ್ ಡೌನ್ ಮಾಡುವುದರಿಂದ ಕೊರೊನಾ ನಿಯಂತ್ರಣ ಸಾಧ್ಯವಿಲ್ಲ ಅಂತ ಇವತ್ತು ಸ್ವತಃ WHO ಹೇಳಿದೆ. ಎರಡು ವಾರಗಳ ಕಟ್ಟುನಿಟ್ಟಾದ ಕರ್ಫ್ಯೂ, ಜೊತೆಗೆ ಅದರಿಂದ ಜನಸಾಮಾನ್ಯರ ದೈನಂದಿನ ಬದುಕಿಗೆ ಉಂಟಾಗುವ ಸಮಸ್ಯೆಗಳ ನಿರ್ವಹಿಸುವ ವ್ಯವಸ್ಥೆ ಆಗಬೇಕಿದೆ. ವಾಸ್ತವವಾಗಿ ನಮ್ಮಲ್ಲಿ ಮಾರಿಹಬ್ಬ ಇನ್ನೂ ಶುರು ಅಷ್ಟೇ , ನಿಜವಾದ ಮಾರಿ ಹಬ್ಬ ಮುಂದೈತೆ.

ಸಂಭ್ರಮಕಿದು ಸಮಯವಲ್ಲ

ನಿನ್ನೆ ಹಗಲಿಡೀ ಜನತಾ ಕರ್ಫ್ಯೂ ಕಟ್ಟುನಿಟ್ಟಾಗಿ ಇಡೀ ದೇಶವೇ ಒಂದಾಗಿ ಆಚರಿಸುತ್ತಿದ್ದಾಗ “ಪರವಾಗಿಲ್ಲ ನಮ್ಮ ಜನ ಜಾಗೃತರಾಗಿದ್ದಾರೆ” ಅಂತ ಏನೋ ಒಂದು ಭರವಸೆ ಮೂಡಿತ್ತು. ಆಮೇಲೆ ಚಪ್ಪಾಳೆ ತಟ್ಟುವ ನೆಪದಲ್ಲಿ ತಟ್ಟೆ ಬಡಿದು ಕುಣಿಯುತ್ತಾ, ಸಂಭ್ರಮ ಪಡುತ್ತಾ ಗುಂಪು ಗುಂಪಾಗಿ ಹಲವಾರು ಕಡೆ ಮೆರವಣಿಗೆ ಮಾಡಿದೀರಲ್ಲಾ, ಅದೇನು ಸಾಧಿಸಿ ಬಿಟ್ವಿ ಅಂತಾ ಮಾಡಿದ್ರೋ, ನನಗಂತೂ ಅದು ಮುಂದೆ ನಮ್ಮಲ್ಲೇ ಯಾರದೋ ಶವಯಾತ್ರೆಯ ಅಣಕು ಪ್ರದರ್ಶನ ಅನ್ನಿಸಿ ಅಳಬೇಕೋ ನಗಬೇಕೋ ಗೊತ್ತಾಗಲಿಲ್ಲ.

ನಿಮ್ಮ ಮತ್ತು ನಿಮ್ಮವರ ಜೀವಕ್ಕೆ ನೀವೆ ಜವಾಬ್ದಾರರು . ನನಗೇನು ಆಗಿಲ್ಲಾ ,ಆಗಲ್ಲಾ ಎಂಬ ಉಡಾಫೆಯಲ್ಲಿ ಎಲ್ಲಾ ಕಡೆ ಓಡಾಡಿದರೆ ಸದ್ದಿಲ್ಲದಂತೆ ,(ಯಾವುದೇ ತಟ್ಟೆ, ಜಾಗಟೆ ಬಡಿಯದೆ )ವೈರಾಣು ನಿಮ್ಮ ಮೈ ಸೇರುತ್ತದೆ. ಗೊತ್ತೇ ಆಗದೇ ನೀವದನ್ನು ನಿಮ್ಮ ಕುಟುಂಬದವರು, ಆತ್ಮೀಯರಿಗೆ ಹಂಚಿಬಿಡುತ್ತೀರಿ. ಎಲ್ಲ ಗೊತ್ತಾಗುವ ಹೊತ್ತಿಗೆ ಸಮಯ ಮೀರಿರುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಬಾಯಿ ಬಡಿದುಕೊಂಡು ಸೋಂಕಿತರು ಒಮ್ಮೆಲೇ ಆಸ್ಪತ್ರೆಗಳಿಗೆ ನುಗ್ಗಿದರೆ, ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಸ್ಥಳ, ಸೌಕರ್ಯ ಒಂದೂ ಸಾಲುವುದಿಲ್ಲ . ಇದೆಲ್ಲಾ ಆರಾಮಾಗಿ ಮನೆಯಲ್ಲಿರೋ ಹೊತ್ತಲ್ಲಿ ನನ್ನ ಉತ್ಪ್ರೇಕ್ಷಿತ ನೆಗೆಟಿವ್ ಕಲ್ಪನೆಯಲ್ಲ . ಚೀನಾ, ಇಟಲಿ, ಸ್ಪೇನ್ ಅಂತಹ ಸುಸಜ್ಜಿತ ದೇಶಗಳಲ್ಲಿ ಈಗಾಗಲೇ ನಡೆಯುತ್ತಿರುವ ಕಟು ವಾಸ್ತವ.ಆಮೇಲೆ ಆ ದೇಶಗಳಲ್ಲಾಗುತ್ತಿರುವಂತೆ ನಿಮ್ಮ ಉಪಯುಕ್ತತೆ ಮೇರೆಗೆ ನಿಮ್ಮನ್ನು ಬದುಕಿಸುವ ಪ್ರಯತ್ನ ಮಾಡಬೇಕೋ ? ಬೇಡವೋ ? ಎಂದು ನಿರ್ಧರಿಸಲಾಗುತ್ತದೆ. ನೀವು ಕಾಪಾಡುತ್ತಾರೆ ಅಂತ ನಂಬಿದ್ದ ದೇವರುಗಳಿದ್ದ ಚರ್ಚು, ಮಸೀದಿ, ದೇವಾಲಯಗಳಿಗೆಲ್ಲ ಬೀಗ ಜಡಿದಾಗಿದೆ. ವೈದ್ಯಕೀಯ ವಿಜ್ಞಾನಕ್ಕೂ ಅದರದೇ ಆದ ಮಿತಿಗಳಿವೆ. ನಮ್ಮೊಳಗೆ ಜಾಗೃತಿ ಮೂಡದೇ ಹೋದರೆ ಯಾವ ಸರ್ಕಾರ, ಯಾವ ನಾಯಕರೂ ನಮ್ಮನ್ನು ಕಾಪಾಡಲಾರರು.

ಕೊರೊನ ಭೀತಿ ದೂರಾಗುವ ತನಕ ಅಂತರ ನಿರಂತರವಾಗಿರಲಿ

ಇದೀಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೊಂದೇ ನಮ್ಮ ಬಳಿಯಿರುವ ಒಂದೇ ಒಂದು ಪ್ರಬಲ ಅಸ್ತ್ರ. ‘ಇನ್ನೊಬ್ಬರಿಂದ ನಮಗೆ ಹಾಗೂ ನಮ್ಮಿಂದ ಇನ್ನೊಬ್ಬರಿಗೆ ಸೋಂಕು ಹರಡದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಶಪಥವಾಗಬೇಕು’ . ಸ್ವಲ್ಪ ಕಷ್ಟವಾಗಬಹುದು ಆದರೂ ದಯವಿಟ್ಟು ಅತ್ಯಂತ ಅವಶ್ಯಕ ಕಾರ್ಯದ ಹೊರತಾಗಿ ಯಾರೂ ಮನೆಯಿಂದ ಹೊರಬರಬೇಡಿ. ನೀವೇ ಯಮಕಿಂಕರರಾಗಬೇಡಿ.

  • ದೇಶಬಂಧುಗಳ ಹಿತೈಷಿ , ಕವಿರಾಜ್

ಇವಿಷ್ಟು ಕವಿರಾಜ್ ಅವರ ಅನಿಸಿಕೆ. ಖಂಡಿತವಾಗಿ ಇದು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾದ ಎಚ್ಚರಿಕೆಯ ಮಾತು ಎನ್ನುವುದು ಸತ್ಯ

Recommended For You

Leave a Reply

error: Content is protected !!
%d bloggers like this: