ಕೋವಿಡ್ 19 ದಾಳಿ ಹಾಗೂ ಇದನ್ನು ತಡೆಯಲು ಜಾರಿಯಲ್ಲಿರುವ ಲಾಕ್ಡೌನ್ ನಿಂದಾಗಿ ಇತರ ಕ್ಷೇತ್ರಗಳಂತೆ ಕನ್ನಡ ಚಲನಚಿತ್ರರಂಗವೂ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಅಂತಹ ಕೆಲ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರಲು ನಟಿ, ರಾಜಕಾರಣಿ ತಾರಾ ಅವರು ಇಂದು ಮುಖ್ಯಮಂತ್ರಿಗಳಿಗೆ ಒಂದು ವರದಿಯನ್ನು ನೀಡಿ, ಪರಿಹರಿಸುವಂತೆ ಮನವಿ ಸಲ್ಲಿಸಿದ್ದಾರೆ.
ತಾರಾ ಅನುರಾಧ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಇಂದು ಸಂಜೆ ಮುಖ್ಯಮಂತ್ರಿಗಳ ಅಧಿಕೃತ ಸರ್ಕಾರಿ ನಿವಾಸ ಕಾವೇರಿಯಲ್ಲಿ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಶ್ರೀ ರುದ್ರೇಶ್, ಶ್ರೀ ಮರಿಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು. ತಾರಾ ಅವರು ನೀಡಿರುವ ವರದಿಯ ಪ್ರತಿಯನ್ನು ಇಲ್ಲಿ ನೀಡಲಾಗಿದೆ. ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಭರವಸೆ ನೀಡಿರುವುದಾಗಿ ತಾರಾ ಅವರು ಸಿನಿಕನ್ನಡ.ಕಾಮ್ ಜತೆಗೆ ಹೇಳಿದ್ದಾರೆ.
ಮಾನ್ಯ ಮುಖ್ಯಮಂತ್ರಿಗಳು
ವಾರ್ತಾ ಮತ್ತು ಪ್ರಚಾರ ಇಲಾಖೆ
ಕರ್ನಾಟಕ ಸರ್ಕಾರ
ಗೌರವಾನ್ವಿತ ಮುಖ್ಯಮಂತ್ರಿಗಳೇ,
ಕೋವಿಡ್-19 ದಾಳಿಯಿಂದಾಗಿ ಇಡೀ ಜಗತ್ತೇ ಅಕ್ಷರಶಃ ನಲುಗಿ ಹೋಗಿದೆ. ಹಾಗೆ ನೋಡಿದರೆ ನಮ್ಮ ದೇಶ ಪ್ರಪಂಚದ ಇತರ ದೇಶಗಳಿಗೆ ಹೋಲಿಸಿ ನೋಡಿದರೆ ಕೋವಿಡ್-19 ನಿಯಂತ್ರಣದಲ್ಲಿ ಎಷ್ಟೋ ವಾಸಿ ಎನ್ನಬಹುದು. ನಮ್ಮ ಭಾರತ ದೇಶದ ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ದಾಮೋದರ ದಾಸ್ ಮೋದಿಯವರು ಕೈಗೊಂಡ ಮುನ್ನೆಚ್ಚರಿಕೆಯ ಕ್ರಮಗಳು ಅದೇ ರೀತಿ ನಮ್ಮ ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿಗಳಾದ ತಾವು ಜನರ ಹಿತಕ್ಕಾಗಿ ಅತ್ಯಂತ ಸಮರ್ಪಕ ರೀತಿಯಲ್ಲಿ ಲಾಕ್ಡೌನ್ ಜಾರಿಗೊಳಿಸಿ, ರೈತರಿಗೆ, ಬಡವರಿಗೆ, ಕೂಲಿ ಕಾರ್ಮಿಕರಿಗೆ ಅಗತ್ಯ ನೆರವು ನೀಡಿ ವಹಿಸಿದ ಕಾಳಜಿಗೆ ಇಡೀ ರಾಜ್ಯ ನಿಮ್ಮನ್ನು ನೆನೆಯುತ್ತಿದೆ. ಇತರ ರಾಜ್ಯಗಳಿಗೆ ಮಾದರಿಯಾಗಿರುವ ನಿಮ್ಮ ನಡೆಗೆ ಎಷ್ಟೇ ಧನ್ಯವಾದ ಹೇಳಿದರೂ ಸಾಲದು. ಈ ನಿಟ್ಟಿನಲ್ಲಿ ಕನ್ನಡ ಚಲನಚಿತ್ರರಂಗವೂ ತಮ್ಮ ನೆರವಿನ ನಿರೀಕ್ಷೆಯಲ್ಲಿದ್ದು, ಈ ಬಗ್ಗೆ ವಿನಮ್ರತೆಯೊಂದಿಗೆ ತಮ್ಮ ಗಮನಸೆಳೆಯ ಬಯಸುತ್ತೇನೆ.
ಕನ್ನಡ ಚಲನಚಿತ್ರರಂಗ
೧) ನಿರ್ಮಾಪಕರು : ಕನ್ನಡ ಚಲನಚಿತ್ರರಂಗದ ಅನ್ನದಾತರು, ಯಜಮಾನರು ಎಂಬ ಗೌರವಕ್ಕೆ ಪಾತ್ರರಾದ ನಿರ್ಮಾಪಕರ ಸಮೂಹದ ಬಗ್ಗೆ ಮೊದಲು ತಮ್ಮ ಗಮನ ಸೆಳೆಯುತ್ತಿದ್ದೇನೆ. ತಮಗೆ ತಿಳಿದಿರುವಂತೆ ಕನ್ನಡ ಚಲನಚಿತ್ರರಂಗ ತನ್ನ ಮಾರುಕಟ್ಟೆ ವಿಸ್ತಾರ ಮಾಡಿಕೊಳ್ಳಲಾಗದೇ ತನ್ನ ಚೌಕಟ್ಟಿನ ಸೀಮಿತ ಮಾರುಕಟ್ಟೆಯಲ್ಲಿ ಪರಭಾಷ ಚಿತ್ರಗಳೊಂದಿಗೆ ಸ್ಪರ್ಧೆ ಮಾಡಿ, ಪೈಪೋಟಿ ನಡೆಸುವುದರ ಜೊತೆಗೆ ನಮ್ಮ ರಾಜ್ಯದಲ್ಲೇ ನಮ್ಮ ಕನ್ನಡ ಭಾಷೆಯ ಚಲನಚಿತ್ರ ಪ್ರದರ್ಶನಕ್ಕೆ ಚಿತ್ರಮಂದಿರಗಳ ಜತೆ ಸೆಣಸಾಡಿ ಅಕ್ಷರಶಃ ಹೋರಾಟ ನಡೆಸಿಯೇ ಚಿತ್ರದ ಗೆಲುವು ಕಾಣಬೇಕಾದ ಶೋಚನೀಯ ಸ್ಥಿತಿ ಇದೆ. ಇಂತಹ ಸ್ಥಿತಿಯ ನಡುವೆ ಈಗ ಕೋವಿಡ್-19 ವ್ಯಾಪಿಸುವುದನ್ನು ತಡೆಯಲು ಲಾಕ್ಡೌನ್ ಜಾರಿಯಲ್ಲಿರುವುದರಿಂದ ಹಲವು ಹೊಸ, ಉದಯೋನ್ಮುಖ ನಿರ್ಮಾಪಕರು, ಬಹುಕಷ್ಟದಿಂದ ಸಾಲ ಮಾಡಿ ಚಿತ್ರ ನಿರ್ಮಿಸಿದ ನಿರ್ಮಾಪಕರ ಹಲವಾರು ಸಿನಿಮಾಗಳ ದೊಡ್ಡ ಸಾಲೇ ಬಿಡುಗಡೆಯ ಯಾದಿಯಲ್ಲಿದೆ. ಬಡ್ಡಿಗೆ ಹಣ ತಂದು ಹೂಡಿಕೆ ಮಾಡಿ ಚಲನಚಿತ್ರ ನಿರ್ಮಿಸಿದ ನಿರ್ಮಾಪಕರ ಸ್ಥಿತಿ ಲಾಕ್ಡೌನ್ ನಿಂದಾಗಿ ಅತ್ಯಂತ ಸಂಕಷ್ಟದ ತುತ್ತತುದಿ ತಲುಪಿದೆ. ಈಗಾಗಲೇ ರಾಜ್ಯ ಸರ್ಕಾರ ನಿರ್ಮಾಪಕರ ಉಳಿಸುವ ಉದ್ದೇಶದಿಂದ ಸದಭಿರುಚಿಯ 100ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಿಗೆ ಸಬ್ಸಿಡಿ ರೂಪದಲ್ಲಿ ಹಾಗೂ ಪ್ರಶಸ್ತಿಯ ರೂಪದಲ್ಲಿ ಹಣ ಸಹಾಯ ಮಾಡುತ್ತಾ ಬಂದಿದೆ. ಅಷ್ಟೇ ಅಲ್ಲದೇ, ಕನ್ನಡ ಭಾಷೆಯ ಚಿತ್ರಗಳಿಗೆ ತೆರಿಗೆ ವಿನಾಯಿತಿಯನ್ನು ನೀಡಿದ ಇತಿಹಾಸವಿದೆ.
ಈಗಿನ ಪರಿಸ್ಥಿತಿಯಲ್ಲಿ ಒಂದು ವೇಳೆ ಕೆಲ ದಿನಗಳ ನಂತರ ಲಾಕ್ಡೌನ್ ತೆರವಾದರೂ ಕೂಡ ನಮ್ಮ ಕನ್ನಡ ಚಲನಚಿತ್ರರಂಗ ಸುಧಾರಿಸಿಕೊಳ್ಳುವುದಕ್ಕೇ ಕನಿಷ್ಠ ಆರು ತಿಂಗಳು ಬೇಕಾಗಬಹುದು. ಕೋವಿಡ್-19 ನ ಮಾರಕ ದಾಳಿಯಿಂದಾಗಿ ನಿರ್ಮಾಣದ ಹಂತದಲ್ಲಿರುವ ಚಿತ್ರಗಳ ನಿರ್ಮಾಪಕರು, ಲಾಕ್ಡೌನ್ ಜಾರಿಯ ಮುನ್ನವಷ್ಟೇ ತಮ್ಮ ಚಲನಚಿತ್ರ ಬಿಡುಗಡೆ ಮಾಡಿದ್ದ ನಿರ್ಮಾಪಕರು ಈಗಿನ ಪರಿಸ್ಥಿತಿಯಲ್ಲಿ ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಈ ನಿರ್ಮಾಪಕರಿಗೆ ಸರ್ಕಾರ ತನ್ನ ವ್ಯಾಪ್ತಿಯಲ್ಲಿ ನೀಡಬಹುದಾದ ನೆರವು ಹಾಗೂ ಯಾವುದೇ ನಿರ್ಮಾಪಕರಿಗೂ ನಷ್ಟವಾಗದಂತೆ ಚಿತ್ರ ಬಿಡುಗಡೆಗೆ ಮಾರ್ಗಸೂಚಿ ರೂಪಿಸುವ ನಿಟ್ಟಿನಲ್ಲಿ ಸರ್ಕಾರದ ನೆರವು ಅತ್ಯಂತ ಅಗತ್ಯವಾಗಿದೆ.
೨) ನಿರ್ದೇಶಕರು, ಛಾಯಾಗ್ರಾಹಕರು, ಸಂಕಲನಕಾರರು, ಪೋಷಕ ಕಲಾವಿದರು, ಒಕ್ಕೂಟದ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರಿಗೆ ನೆರವು : ಕನ್ನಡ ಚಲನಚಿತ್ರರಂಗದ ನರನಾಡಿಗಳಂತೆ ಜೀವತುಂಬಿ ಕೆಲಸ ಮಾಡುವ ಕನ್ನಡ ಚಲನಚಿತ್ರ ನಿರ್ದೇಶಕರು, ಛಾಯಾಗ್ರಾಹಕರು, ಸಂಕಲನಕಾರರು, ಪೋಷಕ ಕಲಾವಿದರು, ಒಕ್ಕೂಟದ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರ ಪೈಕಿ ಬಹುತೇಕರು ಬಹಳ ಕಷ್ಟದಿಂದ ಜೀವನ ಸಾಗಿಸುತ್ತಿದ್ದಾರೆ. ಲೈಟ್ ಬಾಯ್ ನಿಂದ ಹಿಡಿದು ತಂತ್ರಜ್ಞರವರೆಗೂ, ಪೋಷಕ ಕಲಾವಿದರು, ಉದಯೋನ್ಮುಖ ನಿರ್ದೇಶಕರು, ಸಹಾಯಕ ನಿರ್ದೇಶಕರು ಬಹಳ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಸಾಮಾನ್ಯ ದಿನಗಳಲ್ಲೇ ತಿಂಗಳಿಗೆ ಒಂದು ವಾರ ಕೆಲಸ ಸಿಕ್ಕರೇ ನಮ್ಮ ಪುಣ್ಯ ಅಂದುಕೊಂಡು ಆ ದುಡಿಮೆಯಲ್ಲೇ ಸಂಸಾರ ಸಾಗಿಸುವ ಜೀವಗಳೂ ಇಲ್ಲಿವೆ. ಲಾಕ್ಡೌನ್ ನ ಈ ಸಂಕಷ್ಟದ ಸಂಧರ್ಭದಲ್ಲಿ ಈ ವರ್ಗದ ಕಾರ್ಮಿಕರಿಗೆ ನಿತ್ಯದ ಬದುಕು ಸಾಗಿಸಲು ಬವಣೆ ಪಡುತ್ತಿರುವವರ ನೆರವಿಗೆ ಮುಂದಾಗಲೇಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ.
೩) ಚಲನಚಿತ್ರ ವಾಣಿಜ್ಯ ಮಂಡಳಿ ( ವಿತರಕರು/ ಪ್ರದರ್ಶಕರು/ ನಿರ್ಮಾಪಕರು )
ಇತ್ತೀಚಿನ ವರ್ಷಗಳಲ್ಲಿ ಚಿತ್ರಮಂದಿರಗಳನ್ನು ನಡೆಸುವುದೇ ಬಹುದೊಡ್ಡ ಸಾಹಸ ಎಂಬಂತಾಗಿದೆ. ಅದರಲ್ಲೂ ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳ ನಡೆಸುತ್ತಿರುವ ಪ್ರದರ್ಶನಕರ ನೆರವಿಗೆ ಮಾರ್ಗಸೂಚಿ ರೂಪಿಸ ಸರ್ಕಾರ ಅಗತ್ಯ ನೆರವು ನೀಡಬೇಕಾದ ಅನಿವಾರ್ಯ ಸ್ಥಿತಿ ಈಗ ಲಾಕ್ಡೌನ್ ನಿಂದಾಗಿ ಬಂದೊದಗಿದೆ.
ಕನ್ನಡ ಚಲನ ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ರಾಜ್ಯ ಸರ್ಕಾರ ನೀಡಬಹುದಾದ ನೆರವಿನ ಪಟ್ಟಿ
೧) ನಿರ್ಮಾಪಕರಿಗೆ ರಾಜ್ಯ ಸರ್ಕಾರ ನೀಡಬಹುದಾದ ನೆರವು :
ಅ) ಬಡ್ಡಿಗೆ ಸಾಲ ಮಾಡಿ ಹಣ ತಂದು ಚಲನಚಿತ್ರ ನಿರ್ಮಿಸಿ ಈಗ ಬಂದೊದಗಿರುವ ಲಾಕ್ಡೌನ್ ಸಂಕಷ್ಟದಿಂದಾಗಿ ಬಡ್ಡಿ ಕಟ್ಟಲೂ ಸಾಧ್ಯವಾಗದೇ ಸಂಕಷ್ಟದಲ್ಲಿರುವ ಈ ಸಮಯದಲ್ಲಿ ನಿರ್ಮಾಣ ಹಂತದಲ್ಲಿರುವ ಕನ್ನಡ ಚಲನಚಿತ್ರಗಳ ನಿರ್ಮಾಪಕರಿಗೆ ಸಾಲ ನೀಡಿರುವ ಫೈನ್ಯಾನ್ಶಿಯರ್ ಗಳು ಮಾನವೀಯತೆಯ ದೃಷ್ಟಿಯಿಂದ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬಹುದು ಅಥವಾ ಬಡ್ಡಿ ಕಡಿಮೆ ಮಾಡುವಂತೆ ಮನವೊಲಿಸಬಹುದು.
ಆ) ಲಾಕ್ಡೌನ್ ಜಾರಿಯ ಮುನ್ನವಷ್ಟೇ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಿಗೆ ಕಡ್ಡಾಯವಾಗಿ ರಾಜ್ಯ ಸರ್ಕಾರದ ಸಹಾಯಧನ (ಸಬ್ಸಿಡಿ) ದೊರೆಯುವಂತೆ ಮಾಡಬಹುದು.
ಇ) ಲಾಕ್ಡೌನ್ ತೆರವಾದ ನಂತರ ಕನ್ನಡ ಚಲನಚಿತ್ರಗಳ ನಿರ್ಮಾಪಕರಿಗೆ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸಿ ಅವುಗಳ ಪರಿಹಾರಕ್ಕೆ ಅಗತ್ಯ ರೋಡ್ ಮ್ಯಾಪ್ ಸಿದ್ದಪಡಿಸುವುದು.
೨) ಕನ್ನಡ ಚಲನಚಿತ್ರಗಳ ನಿರ್ದೇಶಕರು, ಛಾಯಾಗ್ರಹಕರು, ಸಂಕಲನಕಾರರು, ಕಲಾವಿದರು, ಪೋಷಕ ಕಲಾವಿದರು, ಒಕ್ಕೂಟ, ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರಿಗೆ ನೀಡಬಹುದಾದ ನೆರವು :
ಅ) ಲಾಕ್ಡೌನ್ ನಿಂದಾಗಿ ಎದುರಾಗಿರುವ ಸಮಸ್ಯೆಯಿಂದ ಬಹುದೊಡ್ಡ ಸಂಕಷ್ಟಕ್ಕೆ ಸಿಲುಕಿರುವುದೇ ಕನ್ನಡ ಚಲನಚಿತ್ರಗಳ ನಿರ್ದೇಶಕರು, ಛಾಯಾಗ್ರಹಕರು, ಸಂಕಲನಕಾರರು, ಕಲಾವಿದರು, ಪೋಷಕ ಕಲಾವಿದರು, ಒಕ್ಕೂಟ, ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರು. ಇವರಲ್ಲಿ ಬಹುತೇಕರು ಕಡುಬಡವರಾಗಿದ್ದು, ಅವರಿಗೆ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಬಿ.ಪಿ.ಎಲ್ ಕಾರ್ಡ್ ಹಾಗೂ ಎ.ಪಿ.ಎಲ್ ಕಾರ್ಡ್ ನೀಡಬಹುದಾಗಿದೆ.
ಆ) ಕನ್ನಡ ಚಲನಚಿತ್ರಗಳ ನಿರ್ದೇಶಕರು, ಛಾಯಾಗ್ರಹಕರು, ಸಂಕಲನಕಾರರು, ಕಲಾವಿದರು, ಪೋಷಕ ಕಲಾವಿದರು, ಒಕ್ಕೂಟ, ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರಿಗೆ ಆರೋಗ್ಯ ಭಾಗ್ಯ ಕಾರ್ಡ್ ಒದಗಿಸಿ ಉಚಿತ ಆರೋಗ್ಯ ಸೇವೆ ಲಭ್ಯವಾಗುವಂತೆ ಕಾಳಜಿ ವಹಿಸಬಹುದು.
ಇ) ತಕ್ಷಣ ಈ ವರ್ಗದವರು ಅಗತ್ಯ ದಿನಸಿ / ಔಷಧ ಕೊಳ್ಳಲು ಅನುಕೂಲವಾಗುವಂತೆ ಅಂದಾಜು 5000 (ಐದು ಸಾವಿರ ರೂಪಾಯಿ) ಮೊತ್ತದ ಕೂಪನ್ ಗಳನ್ನು ಒದಗಿಸುವುದು.
೩) ವಿತರಕರು/ ಪ್ರದರ್ಶಕರಿಗೆ ನೀಡಬಹುದಾದ ನೆರವು :
ಅ) ಚಿತ್ರಮಂದಿರದ ತೆರಿಗೆ ( ಕಟ್ಟಡದ ತೆರಿಗೆ ) ಹಾಗೂ ವಿದ್ಯುತ್ ದರ ಕಡಿಮೆ ಮಾಡುವ ಮೂಲಕ ನೆರವಾಗಬಹುದು
೪) ಕೋವಿಡ್-19 ವಿರುದ್ಧ ಹೋರಾಡುತ್ತಿರುವ ರಾಜ್ಯ ಸರ್ಕಾರಕ್ಕೆ ಸಮಗ್ರವಾಗಿ ಕನ್ನಡ ಚಲನಚಿತ್ರರಂಗ ಮಾಡಬಹುದಾದ ಸಹಾಯದ ಪಟ್ಟಿ
ಅ) ಕನ್ನಡ ಚಲನಚಿತ್ರರಂಗದ ಅನುಕೂಲಸ್ಥ ಕಲಾವಿದರು / ತಂತ್ರಜ್ಞರು ( ಒಂದು ಕೋಟಿ ರೂಪಾಯಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿರುವವರು) ಕೋವಿಡ್-19 ಸಂತ್ರಸ್ತರಿಗಾಗಿ ರೂಪಿಸಿರುವ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಧನ ಸಹಾಯ ಮಾಡುವುದು.
ಆ) ಕನ್ನಡ ಚಲನಚಿತ್ರರಂಗದ ಕಲಾವಿದರೆಲ್ಲ ಒಟ್ಟಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡೆಗಳನ್ನು ಆಯೋಜಿಸಿ, ಎಲ್ಲ ಕಲಾವಿದರು ಭಾಗವಹಿಸಿ ಅದರಿಂದ ಸಂಗ್ರಹವಾಗುವ ಹಣವನ್ನು ಕೋವಿಡ್-19 ಸಂತ್ರಸ್ತರಿಗಾಗಿ ರೂಪಿಸಿರುವ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವುದು.
ಇ) ಅನುಕೂಲಸ್ಥ ನಿರ್ಮಾಪಕರು ತಮ್ಮ ಚಲನಚಿತ್ರದ ಲಾಭಾಂಶದಲ್ಲಿ ಒಂದಷ್ಟು ಪ್ರಮಾಣದ ಮೊತ್ತವನ್ನು ಕೋವಿಡ್-19 ಸಂತ್ರಸ್ತರಿಗಾಗಿ ರೂಪಿಸಿರುವ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಧನ ಸಹಾಯ ಮಾಡುವುದು.
ಈ) ಅನುಕೂಲಸ್ಥ ನಿರ್ಮಾಪಕರು ಸರ್ಕಾರದಿಂದ ತಮ್ಮ ಚಿತ್ರಕ್ಕೆ ಬರುವ ಸಹಾಯಧನ ( ಸಬ್ಸಿಡಿ) ಹಾಗೂ ಪ್ರಶಸ್ತಿಯೊಂದಿಗೆ ಬರುವ ಗೌರವಧನದ ಮೊತ್ತವನ್ನು ಕೋವಿಡ್-19 ಸಂತ್ರಸ್ತರಿಗಾಗಿ ರೂಪಿಸಿರುವ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಧನ ಸಹಾಯ ಮಾಡುವುದು.
ಈ ಸಲಹೆಗಳನ್ನು ದಯಮಾಡಿ ಪರಿಶೀಲಿಸಬೇಕಾಗಿ ತಮ್ಮಲ್ಲಿ ಈ ಮೂಲಕ ಪ್ರಾರ್ಥಿಸುತ್ತಿದ್ದೇನೆ.
ಇಂತಿ ತಮ್ಮ ವಿಶ್ವಾಸಿ