ಭೈರಪ್ಪ, ಭಗವಾನ್ ಮತ್ತು ಬಶೀರ್!

ಬ’ಕಾರದ ಹೋಲಿಕೆಯ ಹೊರತಾಗಿ ಇದು ಒಂದು ಸಂಬಂಧವೇ ಇರದ ಹೆಸರುಗಳ ಸಮುಚ್ಚಯ ಅನಿಸಿತೆ? ಖಂಡಿತವಾಗಿ ಅಲ್ಲ. ಕಳೆದ ಒಂದು ವಾರದಿಂದ ಫೇಸ್ಬುಕ್ ಎನ್ನುವ ಸಾಮಾಜಿಕ ಜಾಲತಾಣವನ್ನು ಗಮನಿಸಿಕೊಂಡು ಬಂದವರಿದ್ದರೆ ಇವರ ನಡುವಿನ ಸಂಬಂಧ ಏನು ಎನ್ನುವುದು ಸ್ಪಷ್ಟವಾಗಿ ತಿಳಿದಿರುತ್ತದೆ.

ಬಿ ಎಂ ಬಶೀರ್ ಸ್ಪಷ್ಟನೆ

ವಾರ್ತಾಭಾರತಿ ದೈನಿಕದ ಸುದ್ದಿ ಸಂಪಾದಕರು ಬಿ.ಎಂ ಬಶೀರ್. ಅವರು ನಾಡಿನ ಶ್ರೇಷ್ಠ ಕತೆಗಾರರಲ್ಲೊಬ್ಬರೂ ಹೌದು. ಅದರ ಹೊರತಾಗಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಜೀವಪರ ಹೇಳಿಕೆಗಳ ಮೂಲಕ ಗುರುತಿಸಿಕೊಂಡವರು ಕೂಡ ಹೌದು. ವ್ಯಕ್ತಿಯ ಧರ್ಮ, ಹಿನ್ನೆಲೆ ನೋಡದೆ ಭಾರತದ ಕಾನೂನು, ಧರ್ಮಗಳ ಮಾನವೀಯತೆ ಏನು ಸೂಚಿಸುತ್ತದೆ ಎನ್ನುವುದನ್ನು ಧೈರ್ಯದಿಂದ ಬರೆದು ಗಮನ ಸೆಳೆಯುತ್ತಾರೆ. ಆದರೆ ಈ ಬಾರಿ ಯಾರದೋ ತಪ್ಪು ಅವರ ಮೇಲೆ ದ್ವೇಷದ ಹೇರಿಕೆಗೆ ಕಾರಣವಾಗಿತ್ತು. ಎಲ್ಲವೂ ಶುರುವಾಗಿದ್ದು ನಿರ್ದೇಶಕ ಎಸ್ ಕೆ ಭಗವಾನ್ ಅವರ ಎರಡು ವರ್ಷಗಳ ಹಳೆಯ ಸಂದರ್ಶನವೊಂದು ಹೊರಬರುವ ಮೂಲಕ! ಅದರಲ್ಲಿ ಭಗವಾನ್ ಅವರು ತಾವು ಭೈರಪ್ಪನವರ ಬಳಿಗೆ ಅವರದೊಂದು ಕಾದಂಬರಿಯ ಹಕ್ಕಿಗೆಂದು ಹೋಗಿದ್ದಾಗ ಭೈರಪ್ಪನವರು ನೀಡಿದ ಪ್ರತಿಕ್ರಿಯೆಯ ಬಗ್ಗೆ ಪ್ರಸ್ತಾಪಿಸಿದ್ದರು. “ರಾಜ್ ಕುಮಾರ್ ಒಬ್ಬ ನಟನೇನ್ರಿ?” ಎಂದು ಭೈರಪ್ಪನವರು ಕೇಳಿದರೆನ್ನಲಾದ ಪ್ರಶ್ನೆ ಸಹಜವಾಗಿ ಡಾ.ರಾಜ್ ಅಭಿಮಾನಿಗಳಿಗೆ ನೋವು ಮೂಡಿಸಿತ್ತು. ಆದರೆ ಇದೇ ಸಂದರ್ಭದಲ್ಲಿ ಬಶೀರ್ ಅವರು ತಮಗೆ ರಾಜ್ ಇಷ್ಟವಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎನ್ನುವುದು ಅದಕ್ಕಿಂತಲೂ ದೊಡ್ಡ ಕೆಸರೆರಚಾಟಕ್ಕೆ ನಾಂದಿಯಾಯಿತು! ಪ್ರಸ್ತುತ ಈ ಎಲ್ಲ ವಿವಾದ ಒಂದು‌ಮಟ್ಟಿಗೆ ತಣ್ಣಗಾಗಿದ್ದು, ಇದೇ ಸಂದರ್ಭದಲ್ಲಿ ಅವರು ತಾವು ಡಾ.ರಾಜ್ ಕುಮಾರ್ ಅವರ ವಿರೋಧಿಯಲ್ಲ ಎನ್ನುವ ಬಗ್ಗೆ ಅವರು ಇಂದು ನೀಡಿರುವ ಸ್ಪಷ್ಟನೆ ಕೂಡ ವಿವಾದದಲ್ಲಿ ಉಳಿದವರಿಗೆ ಸಮಾಧಾನ ನೀಡುವಂತಿದೆ. ಅವರ ಸ್ಪಷ್ಟನೆ ಹೀಗಿದೆ.

ಒಂದು ಸ್ಪಷ್ಟೀಕರಣ

ನಾನು ಮೊತ್ತ ಮೊದಲು ನೋಡಿದ ಸಿನಿಮಾದ ಹೆಸರು ‘ಭಕ್ತ ಚೇತ’. ಆರನೆ ತರಗತಿಯಲ್ಲಿದ್ದಾಗ ನಮ್ಮ ಪ್ರಾಥಮಿಕ ಶಾಲೆಯ ಒಳ ಸಭಾಂಗಣದಲ್ಲೇ ಇದನ್ನು ವಿದ್ಯಾರ್ಥಿಗಳಿಗಾಗಿ ಪ್ರದರ್ಶಿಸಲಾಗಿತ್ತು. ಆಗಿನ ಆಕಸ್ಮಿಕಗಳನ್ನು ನೆನೆದರೆ ಈಗ ನಾನು ವಿಸ್ಮಯಗೊಳ್ಳುತ್ತೇನೆ. ನಾನು ಓದುತ್ತಿದ್ದ ಶಾಲೆ ‘ಕ್ರಿಶ್ಚಿಯನ್ ಒಡೆತನದ್ದು’. ಹೆಸರು ‘ಸಂತ ಫಿಲೋಮಿನಾ ಶಾಲೆ ಉಪ್ಪಿನಂಗಡಿ’. ಪ್ರದರ್ಶಿಸಿದ ಚಿತ್ರ ವೈದಿಕ ಭಕ್ತಿ ಪ್ರಧಾನವಾಗಿರುವುದು. ಚಮ್ಮಾರನೊಬ್ಬ ನ ಭಕ್ತಿಗೆ ದೇವರು ಒಲಿಯುವ ಕತೆಯದು.ನಾನೋ ಮುಸ್ಲಿಮ್. ನಾನು ನೋಡಿದ ಮೊತ್ತ ಮೊದಲ ಸಿನಿಮಾ ಅದು. ಅದರ ನಾಯಕ ರಾಜ್‌ಕುಮಾರ್. ಸ್ವತಃ ದೇವರೇ ಧರೆಗಿಳಿದು ಬಂದು ಭಕ್ತನಿಗೆ ಚಪ್ಪಲಿ ಹೊಲಿಯುವುದಕ್ಕೆ ಸಹಾಯ ಮಾಡುವ ಆ ಕತೆಯ ಗುಂಗು, ನನ್ನ ಬಾಲ್ಯವನ್ನು ಹಲವು ಕಾಲ ಹಿಡಿದಿಟ್ಟಿತ್ತು. ಸಿನಿಮಾ ಎನ್ನುವ ವಿಸ್ಮಯ ಲೋಕದಿಂದಿಳಿದ ರಾಜ್‌ಕುಮಾರ್ ಎನ್ನುವ ಹೆಸರು , ನನಗೆ ಗೊತ್ತಿಲ್ಲದಂತೆಯೇ ಕನ್ನಡ ನಾಡು ನುಡಿಯ ಹೆಬ್ಬಾಗಿಲನ್ನೂ ತೆರೆದುಕೊಟ್ಟಿತು. ಕವಿ ರತ್ನ ಕಾಳಿದಾಸ, ಭಕ್ತ ಕುಂಬಾರ, ಭಕ್ತ ಪ್ರಹ್ಲಾದ, ಮಯೂರ, ಶ್ರೀ ಕೃಷ್ಣದೇವರಾಯ, ಹುಲಿಯ ಹಾಲಿನ ಮೇವು, ಬಂಗಾರದ ಮನುಷ್ಯ ಮೊದಲಾದ ಚಿತ್ರಗಳು ನನ್ನ ಬಾಲ್ಯದ ಕಲ್ಪನಾ ವಿಲಾಸವನ್ನು ವಿಸ್ತರಿಸಿತು. ಬಾಲ್ಯದಲ್ಲಿ ಬಹಳಷ್ಟು ಕಾಲ ರಾಜ್‌ಕುಮಾರ್ ಎನ್ನುವ ನಟ, ಚಿನ್ನಾಭರಣ, ಕಿರೀಟ ಇತ್ಯಾದಿಗಳನ್ನು ನಿಜ ಜೀವನದಲ್ಲೂ ಧರಿಸಿಕೊಂಡೇ ಓಡಾಡುತ್ತಾರೆ ಎಂದು ಬಾವಿಸಿದ್ದೆ. ನಿಧಾನಕ್ಕೆ ಅವರ ಕಸ್ತೂರಿ ನಿವಾಸ, ಬಂಗಾರದ ಮನುಷ್ಯ, ಸನಾದಿ ಅಪ್ಪಣ್ಣ ಮೊದಲಾದ ಚಿತ್ರಗಳು ನನಗೆ ಬದುಕಿನ ಇನ್ನೊಂದು ಮಗ್ಗುಲನ್ನು ಪರಿಚಯಿಸಿತು.

ಇಂತಹ ರಾಜ್‌ಕುಮಾರ್‌ರನ್ನು ಮುಖತಃ ನೋಡಿದ್ದು ಮುಂಬಯಿಯಲ್ಲಿ. ದೂರದ ಮುಂಬಯಿಯ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಎಂ.ಎ. ಮಾಡುತ್ತಾ, ಅಲ್ಲಿನ ಕನ್ನಡ ಪತ್ರಿಕೆಯೊಂದರಲ್ಲಿ ಅರೆಕಾಲಿಕ ಪತ್ರಕರ್ತನಾಗಿ ದುಡಿಯುತ್ತಿದ್ದ ಸಂದರ್ಭದಲ್ಲಿ. ಮುಂಬಯಿ ಕರ್ನಾಟಕ ಸಂಘ (ವಿಶ್ವೇಶ್ವರಯ್ಯ ಹಾಲ್‌ನಲ್ಲಿ)ದ ಮೂಲಕ ಮುಂಬೈ ಕನ್ನಡಿಗರು ಅವರಿಗೆ ಬೃಹತ್ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಅವರನ್ನು ಹೇಗಾದರೂ ಭೇಟಿಯಾಗಿ, ಬೆರಳಿನಿಂದ ಸ್ಪರ್ಶಿಸಬೇಕು ಎನ್ನುವುದು ನನ್ನ ಮಹದಾಸೆಯಾಗಿತ್ತು. ಅಂದು ವೇದಿಕೆಯಲ್ಲಿ ‘ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು…’ ಹಾಡನ್ನು ಹಾಡಿ ಅವರು ಎಳೆ ಮಗುವಿನಂತೆ ಕುಣಿದಿದ್ದರು. ಸಮಾರಂಭ ಮುಗಿದ ಬಳಿಕ ಅದು ಹೇಗೋ ಗುಂಪಿನೊಳಗೆ ನುಗ್ಗಿ, ಅವರ ಸಮೀಪ ನಿಂತು ಅವರನ್ನೇ ಆಸ್ವಾದಿಸುತ್ತಿದ್ದೆ. ಅದೇನಾಯಿತೋ…ಸುಮ್ಮಗೆ ನನ್ನ ಹೆಗಲ ಮೇಲೆ ಕೈ ಇಟ್ಟು ನನ್ನ ನೋಡಿ ನಕ್ಕರು. ಅಷ್ಟೇ ಸಾಕಿತ್ತು ‘‘ಸಾರ್…ನಾನು ಮುಂಬಯಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ. ಎ. ಓದುತ್ತಿದ್ದೇನೆ….ಇಲ್ಲೇ ಕನ್ನಡ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ….’’ ಎಂದು ಒಮ್ಮೆಲೆ ಒದರಿ ಬಿಟ್ಟೆ. ಅವರು ಮಗುವಿನಂತೆ ಕಣ್ಣರಳಿಸಿ ‘‘ಈ ಹೊರನಾಡಿನಲ್ಲಿ ಕನ್ನಡಕ್ಕಾಗಿ ಎಷ್ಟೊಂದು ಕೆಲಸ ಮಾಡುತ್ತಿದ್ದೀರಿ….’’ ಎಂದಾಗ ವಿಸ್ಮಿತನಾಗಿದ್ದೆ. ಏನೇನೂ ಅಲ್ಲದ ಒಬ್ಬ ಅಪರಿಚಿತ ತರುಣನ ಜೊತೆಗೆ ಆ ಮೇರು ವ್ಯಕ್ತಿತ್ವ ಪ್ರತಿಕ್ರಿಯಿಸಿದ ರೀತಿ, ಒಂದು ಶಿಲ್ಪವಾಗಿ ನನ್ನೆದೆಯಲ್ಲಿ ಇಂದಿಗೂ ಅಚ್ಚಳಿಯದೆ ನಿಂತಿದೆ. ವಿನಯಕ್ಕೆ ಪ್ರತಿರೂಪವಾಗಿ ನಿಂತಿರುವ ಶಿಲ್ಪ ಅದು.

ಇದೆಲ್ಲ ಯಾಕೆ ನೆನಪಿಸುತ್ತಿದ್ದೇನೆ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಎಸ್. ಎಲ್. ಭೈರಪ್ಪ ಅವರು ಹಲವು ದಶಕಗಳ ಹಿಂದೆ ‘ರಾಜ್‌ಕುಮಾರ್ ಕುರಿತಂತೆ ಆಡಿದ್ದಾರೆ ಎನ್ನಲಾದ ಬೇಜವಾಬ್ದಾರಿಯ ಮಾತು’ ಇಂದು ವಿವಾದಕ್ಕೊಳಗಾಗಿದೆ. ಇದರ ವಿರುದ್ಧ ರಾಜ್‌ಕುಮಾರ್ ಅಭಿಮಾನಿಗಳು ತೀವ್ರ ಆಕ್ಷೇಪ ಎತ್ತಿರುವ ಸಂದರ್ಭದಲ್ಲಿ ಓರ್ವ ಲೇಖಕಿ, ‘ಭೈರಪ್ಪರ ಗೃಹಭಂಗ ಹೊರತು ಪಡಿಸಿದರೆ ಬೇರೆ ಕಾದಂಬರಿಗಳು ನನಗೆ ಅಷ್ಟೇನೂ ಇಷ್ಟವಿಲ್ಲ. ಹಾಗೆಯೇ, ಅದೇಕೋ ಗೊತ್ತಿಲ್ಲ ರಾಜ್‌ಕುಮಾರ್ ಅವರ ನಟನೆಯೂ ಕೂಡ ನನಗೆ ಇಷ್ಟವಾಗುವುದಿಲ್ಲ’ ಎಂಬ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ನೀಡಿದ್ದರು. ಆದರೆ ಅದಕ್ಕಾಗಿ ಯಾರೋ ಒಬ್ಬರು ಆಕೆಯನ್ನು ‘ಆರೆಸ್ಸೆಸ್ ನಾಯಿ’ ಎಂದು ನಿಂದಿಸಿ ಹೇಳಿಕೆ ಹಾಕಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ಕುರಿತಂತೆ ಮೂರನೇ ದರ್ಜೆಯ ಭಾಷೆಯಲ್ಲಿ ಹೀನಾಯವಾಗಿ ನಿಂದಿಸಿ ಅವರ ಚಾರಿತ್ರ ಹನನ ಮಾಡುವ ಮನಸ್ಥಿತಿಯನ್ನು ಈ ಹಿಂದಿನಿಂದಲೂ ವಿರೋಧಿಸುತ್ತಾ ಬಂದಿದ್ದ ನನಗೆ ಸಹಜವಾಗಿಯೇ ಇದರ ಬಗ್ಗೆ ಖೇದವಾಗಿ ‘‘ರಾಜ್‌ಕುಮಾರ್ ನಟನೆ ಇಷ್ಟ ಪಡದೇ ಇರುವುದು ಇಷ್ಟೊಂದು ಹೇಯವಾದ ನಿಂದನೆಗೆ ಕಾರಣವಾಗುತ್ತದೆಯಾದರೆ ನನಗೂ ರಾಜ್‌ಕುಮಾರ್ ನಟನೆ ಇಷ್ಟವಿಲ್ಲ’’ ಎಂದು ಬರೆದಿದ್ದೆ. ಆ ಬಳಿಕ ಏನು ನಡೆಯಿತು ಎನ್ನುವುದು ನಿಮಗೆ ಗೊತ್ತೇ ಇದೆ. ನಾನು ಬರೆದ ಆ ಸಾಲನ್ನಷ್ಟೇ ಮುಂದಿಟ್ಟು ನನ್ನ ಮೇಲೆ ವೈಯಕ್ತಿಕ ದಾಳಿ ನಡೆಯಿತು. ನಾನು ದುಡಿಯುತ್ತಿರುವ ವಾರ್ತಾಭಾರತಿ ಪತ್ರಿಕೆಯನ್ನೂ ಅನಗತ್ಯವಾಗಿ ಎಳೆದು ತರಲಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ‘ರಾಜ್‌ಕುಮಾರ್‌ನನ್ನು ನಾನು ನಿಂದಿಸಿದ್ದೇನೆ’ ಎಂದು ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರುಗಳನ್ನೂ ಸಲ್ಲಿಸಲಾಯಿತು. ಪತ್ರಿಕೆಯ ಕಚೇರಿಗೂ ನುಗ್ಗುವ ಬೆದರಿಕೆಯನ್ನು ಒಡ್ಡಲಾಯಿತು.

ದೂರು ಸಲ್ಲಿಸುವುದರ ಹಿಂದಿದ್ದ ಕನ್ನಡ ಪರ ಹೋರಾಟಗಾರರಾದ ಹರೀಶ್ ಕುಮಾರ್ ಬಿ. ಅವರ ಪರಿಚಯ ನನಗಿಲ್ಲ. ಹಾಗೆಯೇ ವಾರ್ತಾಭಾರತಿ ಎನ್ನುವ ದೊಡ್ಡ ಸಂಸ್ಥೆಯಲ್ಲಿ ಕಳೆದ 17 ವರ್ಷಗಳಿಂದ ಸುದ್ದಿ ಸಂಪಾದಕನೆನ್ನುವ ಸಣ್ಣ ಹುದ್ದೆಯೊಂದನ್ನು ನಿರ್ವಹಿಸುತ್ತಾ ಬರುತ್ತಿರುವ ನನ್ನ ಪರಿಚಯವೂ ಅವರಿಗೆ ಇರುವ ಸಾಧ್ಯತೆಗಳಿಲ್ಲ. ಆದರೆ ನಮ್ಮಿಬ್ಬರಿಗೂ ಸಮಾನ ಮನಸ್ಕ ಗೆಳೆಯರಿರುವುದು ತಡವಾಗಿ ನನಗೆ ಗೊತ್ತಾಯಿತು. ‘‘ನನ್ನ ಮಾತಿನ ಧ್ವನಿ’ ಹರೀಶ್ ಕುಮಾರ್ ಅವರಿಗೆ ಯಾಕೆ ಅರ್ಥವಾಗಲಿಲ್ಲ, ಅವರ ಹತ್ತಿರದ ಆತ್ಮೀಯರು ಅದನ್ನು ಅರ್ಥಮಾಡಿಸಿಕೊಡಲು ಹೇಗೆ ವಿಫಲವಾದರು?” ಎನ್ನುವ ಆಘಾತ, ಗೊಂದಲಗಳ ನಡುವೆ ಪ್ರಕರಣ ಮಾತ್ರ ಬೆಳೆಯುತ್ತಲೇ ಹೋಯಿತು. ಹರೀಶ್ ಕುಮಾರ್ ಬಿ. ಅವರ ಹೇಳಿಕೆಗಳಿಗೆ, ಪೊಲೀಸ್ ದೂರುಗಳಿಗೆ, ಬೆದರಿಕೆಗಳಿಗೆ, ಅವರ ಗೆಳೆಯರ ಟ್ರೋಲ್‌ಗಳಿಗೆ ಒಂದೇ ಒಂದು ಪ್ರತಿಕ್ರಿಯೆಯನ್ನು ನಾನು ನೀಡಿಲ್ಲದೇ ಇದ್ದರೂ, ಇತರ ಪ್ರಗತಿಪರ ಗೆಳೆಯರು, ಚಿಂತಕರು, ರಾಜ್‌ಕುಮಾರ್ ಅವರ ಅಭಿಮಾನಿ ಸ್ನೇಹಿತರು ಸತ್ಯಾಸತ್ಯತೆಗಳ ಕುರಿತಂತೆ ವಸ್ತು ನಿಷ್ಟವಾಗಿ ಚರ್ಚಿಸತೊಡಗಿದರು. ಇದೇ ಸಂದರ್ಭದಲ್ಲಿ ಕೆಲವು ಮುಸ್ಲಿಮ್ ಹುಡುಗರು ‘ಬಶೀರ್’ ಎನ್ನುವ ಹೆಸರಿನ ಕಾರಣಕ್ಕಾಗಿಯೇ, ತಪ್ಪೇ ಇಲ್ಲದಿದ್ದರೂ ಅವರನ್ನು ಮಾತ್ರ ಗುರಿ ಮಾಡಲಾಗಿದೆ ಎಂದು ಚರ್ಚೆಗಿಳಿದಿರುವುದು ಗಮನಕ್ಕೆ ಬಂತು.

ಮಹಿಳೆಯೊಬ್ಬಳ ಮೇಲೆ ರಾಜ್‌ಕುಮಾರ್‌ನ ಹೆಸರಲ್ಲಿ ಕೆಲವರು ಯಾವ ನಿಂದನೆಯ ಭಾಷೆಯನ್ನು ಬಳಸಿದರೋ, ಮತ್ತೆ ಅದೇ ಮೂರನೆಯ ದರ್ಜೆಯ ಭಾಷೆ ನಿಧಾನಕ್ಕೆ ಈ ಚರ್ಚೆಯಲ್ಲೂ ಬಳಕೆಯಾಗತೊಡಗಿದವು. ನಾವು ನಡೆಸುವ ಚರ್ಚೆ, ಅದಕ್ಕೆ ಬಳಸುವ ಭಾಷೆ ‘ನಮ್ಮ ಶತ್ರುವಿನಲ್ಲೂ ನಮ್ಮ ಕುರಿತಂತೆ ಗೌರವ’ ಹೆಚ್ಚಿಸುವಂತೆ ಇರಬೇಕು. ಹರೀಶ್ ಕುಮಾರ್ ಬಿ. ಅವರು ಬಳಸಿದ ಭಾಷೆಗೆ ಪ್ರತಿಯಾಗಿ ಅಷ್ಟೇ ನಿಕೃಷ್ಟವಾದ ಭಾಷೆಯನ್ನು ಕೆಲವು ಹುಡುಗರೂ ಬಳಸುತ್ತಾ ಬಂದರು. ಈ ಹುಡುಗರಲ್ಲಿ ಹಲವರು ರಾಜ್‌ಕುಮಾರ್‌ನ ಅಭಿಮಾನಿಗಳು, ವಾರ್ತಾಭಾರತಿಯ ಅಭಿಮಾನಿಗಳೂ ಇದ್ದರು. ಮುಸ್ಲಿಮ್ ಹೆಸರಿನ ಕಾರಣಕ್ಕೇ ವಿವಿಧೆಡೆ ನಡೆಯುತ್ತಿರುವ ಬೇರೆ ಬೇರೆ ಅಗೋಚರ ದಾಳಿಗಳ ಕಾರಣಗಳಿಂದ, ಆತಂಕ, ಅಭದ್ರತೆಯನ್ನು ಅನುಭವಿಸುತ್ತಿರುವ ಮುಸ್ಲಿಮ್ ಹುಡುಗರು, ಒಟ್ಟು ಬೆಳವಣಿಗೆಗಳ ಬಗ್ಗೆ ಅವಸರದ ನಿರ್ಧಾರವನ್ನು ತಳೆದಿರುವ ಸಾಧ್ಯತೆಗಳೂ ಇಲ್ಲಿವೆ. ಹರೀಶ್ ಕುಮಾರ್ ಅವರ ಜಾತ್ಯತೀತ ಹಿನ್ನೆಲೆಯ ಅರಿವಿಲ್ಲದ ಕಾರಣದಿಂದಲೂ ಅವರು ಈ ನಿಲುವಿಗೆ ಬಂದಿರಬಹುದು. ಅದನ್ನು ಪರಿಚಯ ಮಾಡಿಸಿಕೊಡುವ ಕೆಲಸವೂ ಯಾರಿಂದಲೂ ನಡೆಯದೇ ಇರುವುದೂ ಪ್ರಕರಣ ಬೆಳೆಯಲು ಬರಲು ಕಾರಣವಾಗಿರಬಹುದು. ಇದೀಗ ಹರೀಶ್ ಕುಮಾರ್ ಮತ್ತು ಅವರ ಬಳಗ ಈಗಾಗಲೇ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದೆ. ಹರೀಶ್ ಕುಮಾರ್ ತಂಡ ನಮ್ಮ ನಾಡು ನುಡಿಗಾಗಿ, ಜಾತ್ಯತೀತ ವೌಲ್ಯಗಳಿಗಾಗಿ, ಈಗಾಗಲೇ ಹತ್ತು ಹಲವು ಕೆಲಸಗಳನ್ನು ಮಾಡಿರುವುದನ್ನು ಅವರ ಗೆಳೆಯರು ಎಲ್ಲರ ಗಮನಕ್ಕೂ ತಂದಿದ್ದಾರೆ. ನಾನು ಮೊತ್ತ ಮೊದಲು ಸ್ಪಷ್ಟ ಪಡಿಸುವುದೆಂದರೆ, ನನ್ನ ಹೇಳಿಕೆಗೂ ವಾರ್ತಾಭಾರತಿ ಪತ್ರಿಕೆಗೂ ಯಾವ ಸಂಬಂಧವೂ ಇಲ್ಲ. ಅದು ಸಂಪೂರ್ಣ ವೈಯಕ್ತಿಕ. ಇದೇ ಸಂದರ್ಭದಲ್ಲಿ ರಾಜ್‌ಕುಮಾರ್ ಅವರ ನಟನೆಯನ್ನು ವಿಶ್ಲೇಷಿಸುವುದು ನನ್ನ ಉದ್ದೇಶವಾಗಿರಲಿಲ್ಲ, ರಾಜ್‌ಕುಮಾರ್ ಅವರನ್ನು ಮುಂದಿಟ್ಟು , ಒಂದು ಹೆಣ್ಣನ್ನು ವೈಯಕ್ತಿಕವಾಗಿ ನಿಂದಿಸುವುದು ತಪ್ಪು ಎಂದು ಎಚ್ಚರಿಸುವುದಷ್ಟೇ ನನ್ನ ಪ್ರತಿಕ್ರಿಯೆಯ ಗುರಿಯಾಗಿತ್ತು. ರಾಜ್‌ಕುಮಾರ್ ಹೆಸರಿನಲ್ಲಿ ಅಂತಹ ಭಾಷೆಯನ್ನು ಬಳಸುವುದು ಸ್ವತಃ ರಾಜಕುಮಾರ್‌ಗೆ ಮಾಡುವ ಅವಮಾನ ಎನ್ನುವುದು ನನ್ನ ಕಾಳಜಿಯಾಗಿತ್ತು. ನನ್ನ ಪ್ರತಿಕ್ರಿಯೆಯ ಉದ್ದೇಶ ಅರಿತು ಈ ಸಂದರ್ಭದಲ್ಲಿ ರಾಜ್‌ಕುಮಾರ್ ಮೌಲ್ಯಗಳ ಜೊತೆ ನಿಂತ ಸರ್ವ ಗೆಳೆಯರಿಗೂ ಆಭಾರಿಯಾಗಿದ್ದೇನೆ. ಇದೇ ಸಂದರ್ಭದಲ್ಲಿ, ನಾವು ಬಳಸುವ ಭಾಷೆ ನಮ್ಮ ವ್ಯಕ್ತಿತ್ವಕ್ಕೆ ಹಿಡಿಯುವ ಕನ್ನಡಿ ಎನ್ನುವ ಎಚ್ಚರಿಕೆಯನ್ನು ಎಲ್ಲರೂ ಹೊಂದಿರಬೇಕಾಗಿದೆ. ಹರೀಶ್ ಕುಮಾರ್ ಅವರು ತಾವು ಬಳಸಿದ ಭಾಷೆಗಾಗಿ ಈಗಾಗಲೇ ಖೇದ ವ್ಯಕ್ತಪಡಿಸಿದ್ದಾರೆ. ಆ ಹಿರಿಮೆಯನ್ನು ನಾವೆಲ್ಲರೂ ಪ್ರದರ್ಶಿಸಬೇಕಾಗಿದೆ. ಯಾರಿಗೂ ಯಾವ ರೀತಿಯಲ್ಲೂ ಪ್ರಯೋಜನವಿಲ್ಲದ ಈ ಅನಗತ್ಯ ತಿಕ್ಕಾಟ ಇಲ್ಲಿಗೇ ನಿಲ್ಲಲಿ. ಈ ನೆಲದ ಶೋಷಿತ ಸಮುದಾಯಗಳ ನಿಜವಾದ ಸಮಸ್ಯೆಗಳನ್ನು ಗುರುತಿಸಿ ಅವುಗಳ ವಿರುದ್ಧ ಹೋರಾಡಲು ಸಂಘಟಿತರಾಗೋಣ ಎಂದು ವಿನೀತವಾಗಿ ಮನವಿ ಮಾಡುತ್ತಿದ್ದೇನೆ.

ಬಶೀರ್ ಅವರ ಈ ಸ್ಪಷ್ಟನೆಯಲ್ಲಿ ಯಾವುದೇ ಕಪಟವಿಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಯಾಕೆಂದರೆ ಅವರು ರಾಜ್ ಕುಮಾರ್ ಅವರ ಬಗ್ಗೆ ಹೊಂದಿರುವ ಅಭಿಮಾನ ಎಷ್ಟು ಎನ್ನುವುದು ಅವರ ಪರಿಚಿತರಿಗೆಲ್ಲ ತಿಳಿದ ವಿಚಾರ. ಸಾಕ್ಷಿಗಾಗಿ ಕಷ್ಟಪಡಬೇಕಿಲ್ಲ. ಅವರದೇ ಒಂದಷ್ಟು ಹಳೆಯ ಫೇಸ್ಬುಕ್ ಪೋಸ್ಟ್ ಗಳನ್ನು ಗಮನಿಸಿದರೆ ಸಾಕು. ಕೆಲವೊಂದು ಉದಾಹರಣೆಗಳನ್ನು ಸಿನಿಕನ್ನಡ.ಕಾಮ್ ಇಲ್ಲಿ ನೀಡಿದೆ.

Recommended For You

Leave a Reply

error: Content is protected !!