ಎಲ್ಲರ ನಿಜ ಬದುಕು ಸಿನಿಮಾ ಆಗದು. ಆದರೆ ಅಂಥ ಸಿನಿಮೀಯ ಬದುಕು ಹೊಂದಿದವರು ಮುತ್ತಪ್ಪ ರೈ. ಒಮ್ಮೆ ಭೂಗತ ಲೋಕದ ಡಾನ್ ಎನಿಸಿಕೊಂಡು ಬಳಿಕ ಜಯಕರ್ನಾಟಕ ಸಂಘಟನೆಯ ಮೂಲಕ ಸಮಾಜ ಸೇವಕರಾಗಿ ಬದಲಾಗಿದ್ದು ಇತಿಹಾಸ. ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರು ‘ರೈ’ ಎನ್ನುವ ಚಿತ್ರ ಮಾಡಲು ಮುಂದಾಗಿದ್ದೇ ಅದಕ್ಕೆ ದೊಡ್ಡ ಸಾಕ್ಷಿ.
ರೈಯವರು ಸಿನಿಮಾದಲ್ಲಿ ದೊಡ್ಡ ಆಸಕ್ತಿಯೇನೂ ಇಲ್ಲ ಎಂದು ಅವರೇ ಹೇಳಿಕೊಂಡಿದ್ದರು. ಆದರೆ ತಮ್ಮ ಆತ್ಮೀಯನಿಗಾಗಿ ಕಾಲೇಜ್ ಕುಮಾರದಂಥ ಚಿತ್ರಗಳ ನಿರ್ಮಾಪಕರಾಗಿ ಗುರುತಿಸಿಕೊಂಡರು. ಅವರೊಂದಿಗೆ ನೇರವಾಗಿ ಸಂಪರ್ಕದಲ್ಲಿ ಇದ್ದವರಷ್ಟೇ ಅಲ್ಲದೆ, ಭೇಟಿಯೇ ಆಗದವರು, ಸಂಬಂಧವೇ ಇರದವರು ಅವರ ಸಹಾಯ ಪಡೆಸ ಘಟನೆಗಳಿವೆ. ಅಂಥದೊಂದು ಘಟನೆಯನ್ನು ಅವರದೇ ಊರಿನ ಸ್ನೇಹಿತರೊಬ್ಬರು ಹಂಚಿಕೊಂಡಿದ್ದಾರೆ. ಅವರ ಹೆಸರು ಸಾಹುಕಾರ್ ಅಚ್ಚು. ಸಾಮಾಜಿಕ ಜಾಲತಾಣದಲ್ಲಿ ಬರವಣಿಗೆಯ ಮೂಲಕ ಗಮನ ಸೆಳೆದಿರುವ ಅವರ ಅನುಭವ ಕಥನ ಆಸಕ್ತಿಕರವಾಗಿದೆ. ರೈಯವರ ನಿಧನಕ್ಕೆ ಸಂತಾಪ ಸೂಚಿಸುತ್ತಾ ಈ ಲೇಖನವನ್ನು ಸಿನಿಕನ್ನಡ.ಕಾಮ್ ನಿಮ್ಮ ಮುಂದಿರಿಸುತ್ತದೆ.
ಬೆಂಗಳೂರಿನ ಒಳಗಲ್ಲಿಗಳಲ್ಲಿ ಬದುಕುವವರಿಗೆ ಗೊತ್ತಿರಬಹುದು. ಒಂದಷ್ಟು ಪುಂಡ ಹುಡುಗರು ತಂಡ ಕಟ್ಟಿಕೊಂಡು ತಮ್ಮ ತಮ್ಮ ‘ಹವಾ’ ಕ್ರಿಯೇಟ್ ಮಾಡಿಕೊಂಡು ಬದುಕುತ್ತಿರುತ್ತಾರೆ. ರಾತ್ರಿಯಾದಂತೆ ಅಮಲೇರಿಸಿಕೊಂಡು ಬಂದು ದುಡ್ಡಿಗೆ ಡಿಮಾಂಡ್ ಮಾಡುವುದು, ಸಿಗರೇಟ್ ಕೇಳುವುದು ಹೀಗೇ ಸಣ್ಣ ಸಣ್ಣ ಅಂಗಡಿಗಳಿಗೆ ಕೊಡುವ ಉಪಟಳಗಳು ಕಡಿಮೆಯೇನಲ್ಲ. ಅಂಗಡಿಯವ ಇವರನ್ನು ಓಲೈಸಿ ಜತೆಗಿಟ್ಟುಕೊಳ್ಳದೇ ಹೋದರೆ ಅಂಗಡಿವಸ್ತುಗಳಿಗೆ ಹಾನಿ ಮಾಡುವುದು ಅಂಗಡಿ ಮುಂದೆ ತಲವಾರು ಹಿಡಿದುಕೊಂಡು ನಡೆಯುವುದು ಬರುವ ಗ್ರಾಹಕರನ್ನು ಬೆದರಿಸಿ ಕಳುಹಿಸುವುದು ಹೀಗೇ..
ಇದೆಲ್ಲ ಮಾಡುವುದು ಮೂಲ ಬೆಂಗಳೂರಿಗರಾ? ಖಂಡಿತಾ ಅಲ್ಲ, ಎಲ್ಲಿಂದಲೋ ಬಂದು ತಮ್ಮ ಬದುಕು ಕಟ್ಟಿಕೊಂಡವರು, ಅಥವಾ ಅವರ ಮಕ್ಕಳು. ಅದರಲ್ಲೂ ತಮಿಳು ತೆಲುಗು ಮಾತನಾಡುವ ಮಂದಿಯೇ ಹೆಚ್ಚು, ಮಲಯಾಳಿಗಳು ನಶೆ ಏರಿಸಿಕೊಂಡರೆ ಈ ತರ ರೌಡಿಸಮ್ ಗೆ ಇಳಿಯದೇ ಹೋದರೂ ಬೆಂಗಳೂರು ಇವರ ಅಪ್ಪನದೇನೋ ಅನ್ನುವ ರೀತಿ ಆಡ್ತಾರೆ. ಈಗೀಗ ಮಾರವಾಡಿಗಳೂ ತಾವು ಪ್ರಬಲರಾದಂತೆ ಶುರು ಹಚ್ಚಿಕೊಂಡಿದ್ದಾರೆ. ಗಾಂಜಾ, ಮದ್ಯದ ನಶೆಯಲ್ಲಿ ಯೌವನ ಹಾಳು ಮಾಡಿಕೊಳ್ಳುವುದರ ಮೂಲಕ ಮತ್ತು ಯಾವುದೋ ಸಿನೆಮಾದ ಡಾನ್ ನಂತೆ ತಾನೂ ಮೆರೆಯಬೇಕೆಂದುಕೊಂಡು ಇತರರನ್ನೂ ನೆಮ್ಮದಿಯಾಗಿರಲು ಬಿಡದ ಇಂಥಾ ಹುಡುಗರು ಹೆಚ್ಚಿನೆಲ್ಲ ಕಡೆ ಸಿಕ್ಕೇ ಸಿಗುತ್ತಾರೆ. ತಮಿಳು ಮಾತನಾಡುವ ಮಂದಿ ಇರುವ ಕಡೆ ಇಂಥಾ ಉಪಟಳಗಳು ಜಾಸ್ತಿನೇ ಇರುತ್ತದೆ.
ಈಗ ವಿಷಯಕ್ಕೆ ಬರೋಣ, ನಾಲ್ಕೈದು ವರ್ಷದ ಹಿಂದಿನ ಕಥೆ. ಹೊಟ್ಟೆಪಾಡಿಗೆ ಬೆಂಗಳೂರಿನಲ್ಲಿ ಸಣ್ಣದೊಂದು ಬೇಕರಿ ನಡೆಸಿಕೊಂಡು ಬರುತ್ತಿದ್ದೆ. ದಿನಾ ಸಂಜೆಯಾದಂತೆ ಗ್ಯಾಂಗ್ ಒಂದರಿಂದ ನಿರಂತರ ಕಿರುಕುಳ. ದುಡ್ಡು ಕೊಡದೇ ಸಿಗರೇಟ್ ಕೇಳುವುದು, ಬೇಕರಿ ಮುಂದೆ ಗುಂಪುಗೂಡಿ ಗ್ರಾಹಕರು ಬರದಂತೆ ತಡೆಯುವುದು. ಆಗಾಗ ಬೇಕರಿಯ ತಿಂಡಿ ಹಾಕಿಡುವ ಗಾಜಿನ ‘ಬರಣಿ’ಗಳನ್ನು ತೆಗೆದು ನೆಲಕ್ಕೆ ಹಾಕಿ ಒಡೆದು ಹಾಕುವುದು ಹೀಗೇ. ಪೋಲೀಸರಿಗೆ ಕಂಪ್ಲೇಂಟ್ ಕೊಟ್ಟರೆ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಇಲ್ಲ. ಹೀಗೇ ತಲೆಕೆಟ್ಟು ಕೂರುವಾಗೆಲ್ಲ ಒಮ್ಮೆಗೆ ಊರಿಗೆ ತೆರಳಿ ಅಲ್ಲೇ ಏನಾದರೂ ಸಣ್ಣಪುಟ್ಟ ಕೆಲಸ ಮಾಡಿಕೊಂಡು ನೆಮ್ಮದಿಯಾಗಿರೋಣ ಅನಿಸೋದು.
ಒಂದು ದಿನ ಹೀಗೇ ಬೇಕರಿ ಮುಂದೆ ಗುಂಪುಗೂಡಿ ಮಾತನಾಡುತ್ತಿದ್ದ ಆ ಪಡ್ಡೆ ಗ್ಯಾಂಗಿನ ಮಾತನ್ನು ಆಲಿಸುತ್ತಾ ಕೂತಿದ್ದೆ. ಅವರ ಮಾತುಗಳನ್ನು ಆಲಿಸುವಾಗ ಎಷ್ಟೊಂದು ಮುಗ್ಧರು ಪೆದ್ದರು ಅನಿಸದಿರಲಿಲ್ಲ. ರಕ್ಷಣಾ ವೇದಿಕೆ, ಜಯಕರ್ನಾಟಕ ಮುತ್ತಪ್ಪ ರೈ, ನಾರಾಯಣ ಗೌಡ ಹೀಗೇ ಪುಂಖಾನುಪುಂಖ ರಮ್ಯ ಕಥೆಗಳು. ಅವರು ಹಾಗಿದ್ರಂತೆ ಈಗ ಹೀಗಾದ್ರಂತೆ ಹೀಗೇ. ಅವತ್ತೇ ಗೊತ್ತಾಯಿತು. ಇವರ ಮುಂದೆ ಬದುಕಬೇಕೆಂದರೆ ಇರುವ ದಾರಿ ಒಂದೇ. ಮುತ್ತಪ್ಪ ರೈ ಯನ್ನೋ ಅಥವಾ ಇತರ ಯಾರನ್ನೋ ಹಿಡಿದುಕೊಂಡು ಆಟ ಆಡುವುದು. ಅಲ್ಲಿಂದ ಮುಂದಕ್ಕೆ ಮುತ್ತಪ್ಪ ರೈ ಜಯಕರ್ನಾಟಕ ಎಂದು ನಾಟಕ ಆಡಿದೆ. ಫೋಟೊಶಾಪಲ್ಲಿ ಮುತ್ತಪ್ಪ ರೈ ಜತೆ ನಿಂತಿರುವ ಪೋಟೋ ಸಿದ್ಧಪಡಿಸಿಕೊಂಡೆ. ಮೊಬೈಲ್ ವಾಲ್ ಪೇಪರಿಗೂ ಅದೇ ಬಂದು ಅಂಗಡಿಯ ಮೂಲೆಯಲ್ಲೂ ತೂಗು ಹಾಕಿದೆ. ಒಂದಷ್ಟು ದಿನಗಳಲ್ಲಿ ಇದನ್ನು ಗಮನಿಸಿದ ಪಡ್ಡೆ ಹುಡುಗರ ಗುಂಪು ನೀವು ಮುತ್ತಪ್ಪ ರೈ ಜನಾನಾ
ಎಂದು ಮೊದಲನೇ ಬಾರಿ ಗೌರವ ಕೊಟ್ಟು ಮಾತನಾಡಿಸಿದ್ರು. ಹೌದಪ್ಪ, ನಾನು ಬೆಳಗೆದ್ದು ಕಣ್ಬಿಟ್ರೆ ಎದುರ್ಗಡೆ ಕಾಣಿಸೋದೇ ಮುತ್ತಪ್ಪ ರೈ ಮನೆ. ಮತ್ತೆ ಅವರ ಜನ ಆಗದಿರೋಕೆ ಆಗುತ್ತಾ ಅಂತ ಬಳಾಂಗು ಬಿಟ್ಟೆ. ನಂತರ ಅದೇನು ರೆಸ್ಪೆಕ್ಟು, ಏನು ಸೌಮ್ಯ ವರ್ತನೆ? ಒಂದೇ ಒಂದು ಸಲ ನಮ್ಗೆ ಮುತ್ತಪ್ಪ ರೈ ನ ಮೀಟ್ ಮಾಡಿಸ್ಬಿಡು ಅಂತ ದುಂಬಾಲು ಬೀಳೋಕೆ ಶುರು ಮಾಡಿದ್ರು ಹುಡುಗ್ರು. ಏನೆಲ್ಲ ನೆಪ ಹೇಳಿಕೊಂಡು ಕಾಲದೂಡಿದೆ. ಬೇಕರಿ ನಡೆಸಲು ಅಸಾಧ್ಯ ಎನ್ನುವ ಸ್ಥಿತಿಯಲ್ಲಿದ್ದವನಿಗೆ ಕೊನೆಗೆ ಉಪಟಳ ಕೊಡುವವರೇ ಚಡ್ಡಿದೋಸ್ತಿಗಳಾದರು. ನೆಮ್ಮದಿಯಿಂದ ವ್ಯಾಪಾರ ನಡೆಸುತ್ತಿದ್ದೆ.
ನೋಟ್ ಬ್ಯಾನ್ ಒಂದು ಆಗದೇ ಹೋಗಿದ್ದರೆ ಇವತ್ತಿಗೂ ಬೆಂಗಳೂರಲ್ಲಿ ಆರಾಮ ಇರ್ತಿದ್ದೆ. ನೋಟ್ ಬ್ಯಾನ್ ನಂತರ ಜಿಎಸ್ಟಿ ಹೀಗೇ ಒಂದರ ಮೇಲೆ ಒಂದು ಬಂದು ನನ್ನ ಬೇಕರಿ ಸುತ್ತಮುತ್ತಲಿನ ಗ್ರಾಹಕರಿದ್ದ ಸಣ್ಣ ಸಣ್ಣ ಪ್ಯಾಕ್ಟರಿಗಳೆಲ್ಲ ಮುಚ್ಚಿಹೋದವು. ಹಾಗಾಗಿ ನನ್ನ ಗಳಿಕೆ ಬಾಡಿಗೆ ಕಟ್ಟಲೂ ಸಾಕಾಗದೇ ಒಲ್ಲದ ಮನಸ್ಸಿನಿಂದ ಬೆಂಗಳೂರು ಬಿಟ್ಟು ಬಂದೆ.
ಹೀಗೇ ನನ್ನ ಬದುಕು ಓತಪ್ರೋತ ಸಾಗುವಾಗ ನನ್ನೊಳಗೂ ಇಂತಿಪ್ಪ ಮುತ್ತಪ್ಪ ರೈಯನ್ನು ಭೇಟಿಯಾಗುವ ಆಸೆ ಮೊಳಕೆ ಒಡೆಯತೊಡಗಿತ್ತು. ಕೊನೆಗೆ ಗೆಳೆಯನೊಬ್ಬನ ಶಾಪ್ ಓಪನಿಂಗ್ ಗೆ ದೂರದಿಂದ ನೋಡಿ ಕಣ್ತುಂಬಿಕೊಂಡೆ ಕೂಡಾ.
ಹಲವಾರು ದಿನಗಳಿಂದ ಮುತ್ತಪ್ಪ ರೈ ಸಾವಿನ ಬಗ್ಗೆ ಹರಿದಾಡುತ್ತಿದ್ದ ಊಹಾಪೋಹಗಳು ಇಂದು ಅಧಿಕೃತವಾಗಿ ದೃಢಗೊಂಡಂತಿದೆ. ಪುತ್ತೂರಿನಂಥಾ ಒಳನಾಡಿನಿಂದ ಹೋಗಿ ಇಂಥಾದ್ದೊಂದು ಹವಾ ಸೃಷ್ಟಿಸೋದೆಂದರೆ ಸಣ್ಣ ಮಾತಲ್ಲ. ಒಳ್ಳೆಯದು ಕೆಟ್ಟದು ಎನ್ನುವುದರಾಚೆಗೆ ಪೋಲೀಸರಿಂದಲೂ ನ್ಯಾಯ ಸಿಗದೇ ಹೋದಾಗ ಪರೋಕ್ಷವಾಗಿ ನನಗೆ ಸಹಾಯ ಮಾಡಿದ ಮುತ್ತಪ್ಪ ರೈಯನ್ನು ಈ ದಿನ ನೆನೆಯದಿದ್ದರೆ ಹೇಗೆ?