ನಟ ಚಿರಂಜೀವಿ ಸರ್ಜಾ ನಿಧನ

ಕನ್ನಡ ಚಿತ್ರರಂಗದ ಜನಪ್ರಿಯ ನಟ ಚಿರಂಜೀವಿ ಸರ್ಜ ಅವರು ನಿಧನರಾಗಿದ್ದಾರೆ. ಇಂದು ಮಧ್ಯಾಹ್ನ ತೀವ್ರ ಉಸಿರಾಟದ ತೊಂದರೆಯಿಂದ ಬೆಂಗಳೂರಿನ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದ ಅವರು ಅಲ್ಲಿ ಚಿಕಿತ್ಸೆಗೆ ಸರಿಯಾದ ಪ್ರತಿಕ್ರಿಯೆ ನೀಡಿರಲಿಲ್ಲ. ತೀವ್ರ ಹೃದಯಾಘಾತಕ್ಕೊಳಗಾದ ಚಿರಂಜೀವಿ ಸರ್ಜಾ ಅವರು ದುರಂತ ಸಾವಿಗೊಳಗಾಗಿದ್ದಾರೆ.

ಖ್ಯಾತ ನಟ ಅರ್ಜುನ್ ಸರ್ಜಾ ಅವರ ಸಹೋದರಿಯ ಪುತ್ರರಾದ ಚಿರಂಜೀವಿ ಸರ್ಜಾ ಚಿತ್ರರಂಗಕ್ಕೆ ಕಾಲಿಟ್ಟು ದಶಕವಷ್ಟೇ ಆಗಿದೆ. ಅದರೊಳಗೆ ಸುಮಾರು 20 ಚಿತ್ರಗಳಲ್ಲಿ ನಟಿಸಿದ್ದರು. ವಾಯುಪುತ್ರ ಚಿತ್ರದಲ್ಲಿ ನಾಯಕನಾಗಿ ಚಿತ್ರರಂಗ ಪ್ರವೇಶಿಸಿದ ಇವರ ವೃತ್ತಿ ಬದುಕಿನಲ್ಲಿ ಆಟಗಾರ, ವರದನಾಯಕ, ರುದ್ರ ತಾಂಡವ ಮೊದಲಾದವು ಜನಪ್ರಿಯ ಚಿತ್ರವಾಗಿತ್ತು. ಸಿಂಗಂ ಚಿತ್ರದಲ್ಲಿ ಅದಿತಿ ಪ್ರಭುದೇವ ಅವರೊಂದಿಗೆ ಹೆಜ್ಜೆ ಹಾಕಿದ ಹಾಡು ‘ಶಾನೇ ಟಾಪಗವ್ಳೆ’ ಕನ್ನಡದ ಟಾಪ್ ಹಾಡುಗಳಲ್ಲಿ ಸ್ಥಾನ ಪಡೆದುಕೊಂಡಿತ್ತು. ಲಾಕ್ಡೌನ್ ನಡೆಯುವ ಮೊದಲು ಬಿಡುಗಡೆಯಾಗಿದ್ದ ಶಿವಾರ್ಜುನ ಅವರ ನಾಯಕತ್ವದಲ್ಲಿ ತೆರೆಕಂಡ ಕೊನೆಯ ಚಿತ್ರವಾಗಿದೆ. ವಿಪರ್ಯಾಸ ಎನ್ನುವ ಹಾಗೆ ಚಿತ್ರ ಥಿಯೇಟರ್ ನಲ್ಲಿ ಇರುವಾಗಲೇ ಚಿತ್ರಮಂದಿರ ಮುಚ್ಚಲಾಗಿತ್ತು. ಹಾಗಾಗಿ ಈಗಲೂ ಕೂಡ ಅದೇ ಸಿನಿಮಾದ ಕಟೌಟ್ ಮುಚ್ಚಿದ ಥಿಯೇಟರ್ ಮುಂದೆ ಕಾಣಬಹುದಾಗಿದೆ. ಅರ್ಧಕ್ಕೆ ಶೋ ನಿಲ್ಲಿಸಿದ ಚಿತ್ರಮಂದಿರಗಳಂತೆ ಚಿರುಸರ್ಜಾ ಬದುಕು ಕೂಡ ಅರ್ಧದಲ್ಲೇ ಕೊನೆಯಾಗಿರುವುದು ವಿಪರ್ಯಾಸ.

ಚಿರಂಜೀವಿ ಸರ್ಜಾ ಅವರು ಕಳೆದ ತಿಂಗಳಷ್ಟೇ ಮೇಘನಾ ರಾಜ್ ಜತೆಗಿನ ತಮ್ಮ ಮದುವೆಯ ಎರಡನೇ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಸಹೋದರ ಧ್ರುವ ಸರ್ಜಾ, ಪತ್ನಿ ಮೇಘನಾ ರಾಜ್, ಮೇಘನಾ ತಂದೆ ಸುಂದರ್ ರಾಜ್, ಚಿರುಸರ್ಜಾ ಮಾವ ಅರ್ಜುನ್ ಸರ್ಜಾ, ಅವರ ತಂದೆ ಶಕ್ತಿ ಪ್ರಸಾದ್, ಅರ್ಜುನ್ ಅವರ ಪತ್ನಿ ಆಶಾ ರಾಣಿ, ಅವರ ತಂದೆ ಹಿರಿಯ ನಟ ರಾಜೇಶ್ ಸೇರಿದಂತೆ ಕಲಾವಿದರೇ ತುಂಬಿದ್ದ ಕುಟುಂಬ ಇವರದು. ಇದೀಗ 39 ವರ್ಷದೊಳಗೆ ಅಗಲಿ ಹೋದ ಚಿರಂಜೀವಿ ಸರ್ಜ ಅವರಿಗೆ ಚಿತ್ರರಂಗದ ಗಣ್ಯರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.

ಎಲ್ಲವೂ ಸರಿಯಾಗಿದ್ದರೆ ಈಗಾಗಲೇ ಚಿರಂಜೀವಿ ಸರ್ಜಾ ಮತ್ತು ರಚಿತಾ ರಾಮ್ ನಟನೆಯ “ಏಪ್ರಿಲ್” ಚಿತ್ರ ತೆರೆಕಂಡಿರಬೇಕಿತ್ತು. ಆದರೆ ಚಿತ್ರ ಬಿಡುಗಡೆಗೂ ಮೊದಲೇ ನಮ್ಮನ್ನೆಲ್ಲ ಫೂಲ್ ಮಾಡಿ ಅವರು ದೂರ ಹೋಗಿದ್ದಾರೆ.

ಯುವ ಕಲಾವಿದ ಸಹೋದರರನ್ನು ಜೋಡಿಯಾಗಿ ನೋಡುವ ಅದೃಷ್ಟವೇ ಕನ್ನಡಿಗರಿಗೆ ಇಲ್ಲ ಅನ್ಸುತ್ತೆ. ಹಿಂದೆ ಅನಂತನಾಗ್ ಜತೆಗಿದ್ದ ಶಂಕರನಾಗ್ ಹೋದರು. ಈಗ ಧ್ರುವನನ್ನು ಬಿಟ್ಟ ಚಿರಂಜೀವಿ ಸರ್ಜಾ!

Recommended For You

Leave a Reply

error: Content is protected !!