ಚಿರಂಜೀವಿ ಸರ್ಜ ಅವರನ್ನು ಅಪೊಲೋ ಆಸ್ಪತ್ರೆಗೆ ದಾಖಲಿಸಿದ್ದು ಸಹೋದರ ಧ್ರುವ ಸರ್ಜಾ. ಅವರು ಬಸವನಗುಡಿಯ ಮನೆಯಿಂದ ಆಸ್ಪತ್ರೆ ಸೇರುತ್ತಿದ್ದಂತೆ, ಅವರ ಹಿಂದೆಯೇ ಕಾರಿನಲ್ಲಿ ಆಸ್ಪತ್ರೆಗೆ ಹೋದವರು ಮೇಘನಾ ರಾಜ್ ಮತ್ತು ಅವರ ತಂದೆ ತಾಯಿ. ನಟ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯ್ ಹೀಗೆ ಕುಟುಂಬದ ಆತ್ಯಾಪ್ತವರ್ಗ ಆಸ್ಪತ್ರೆಯಲ್ಲಿದ್ದರೂ ವೈದ್ಯರು ಸಾವಿನ ಸುದ್ದಿಯನ್ನು ಮೊದಲು ತಿಳಿಸಿದ್ದು ಹಿರಿಯ ಸಾಹಿತಿ, ಚಿತ್ರ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರಿಗೆ! ಅದು ಯಾಕೆ , ಹೇಗೆ ಎನ್ನುವುದನ್ನು ಖುದ್ದು ಬರಗೂರು ರಾಮಚಂದ್ರಪ್ಪನವರು ಸಿನಿಕನ್ನಡ.ಕಾಮ್ ಜತೆಗೆ ಹಂಚಿಕೊಂಡಿದ್ದಾರೆ. ಆ ಸಂದರ್ಭ ಹೇಗಿತ್ತು ಎನ್ನುವುದನ್ನು ಅವರ ಮಾತುಗಳಲ್ಲೇ ಓದಿ.
ನನಗೆ ಪ್ರಮೀಳಾ ಜೋಷಾಯ್ ಫೋನ್ ಮಾಡುವಾಗ ಮಧ್ಯಾಹ್ನ ಸುಮಾರು 2.25 ಆಗಿತ್ತು. “ನಾನು ಸುಂದರ್ ಆಸ್ಪತ್ರೆಗೆ ಹೋಗುತ್ತಿದ್ದೇವೆ. ಸುಂದರ್ ಕಾರ್ ಡ್ರೈವ್ ಮಾಡುತ್ತಿದ್ದಾರೆ. ವೈದ್ಯರ ಕಾಂಟಾಕ್ಟ್ ನಂಬರ್ ಇದ್ದರೆ ಕಳಿಸ್ತೀರ” ಎಂದು ಕೇಳಿದ್ದರು. ನಾನು ಪೋನ್ ನಂಬರ್ ಕೊಟ್ಟೆ. ಆದರೆ ಅವರಿಗೆ ಡಾಕ್ಟರ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ನನಗೆ ಅಲ್ಲಿನ ಎಲ್ಲ ವೈದ್ಯರು ಮತ್ತು ತಂಡದವರು ಚೆನ್ನಾಗಿ ಪರಿಚಯವಿದ್ದರು. ಹಾಗಾಗಿ ನಾನೇ ವೈದ್ಯರಿಗೆ ಫೋನ್ ಮಾಡಿದ್ದೆ. ಅಷ್ಟು ಹೊತ್ತಿಗೆ ಆಸ್ಪತ್ರೆಗೆ ತಲುಪಿದ್ದ ಸುಂದರ್ ರಾಜ್ ದಂಪತಿಯನ್ನು ಕೋವಿಡ್ ಕಾರಣದಿಂದಾಗಿ ಆಸ್ಪತ್ರೆ ಒಳಗೆ ಸೇರಿಸಿರಲಿಲ್ಲ. ನಾನು ವೈದ್ಯರಿಗೆ ಹೇಳಿ ಅವರನ್ನು ಒಳಗೆ ಸೇರಿಸಲು ಮನವಿ ಮಾಡಿಕೊಂಡೆ. ಇದೇ ಸಂದರ್ಭದಲ್ಲಿ ವೈದ್ಯರು ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ ಕಾರಣ ನಾನು ಕೂಡ ಹಾಸ್ಪಿಟಲ್ ಗೆ ಹೋಗುವವನಿದ್ದೆ. ಆದರೆ ಕೋವಿಡ್ 19 ಸಂದರ್ಭವಾಗಿರುವುದರಿಂದ ಸೀನಿಯರ್ ಸಿಟಿಜನ್ ಆದಂಥ ನಾನು ಆಸ್ಪತ್ರೆಗೆ ಬರದಿದರುವುದೇ ವಾಸಿ ಎಂದು ವೈದ್ಯರೇ ಸೂಚಿಸಿದ್ದರು. ಹಾಗಾಗಿ ನಾನು ಪದೇ ಪದೆ ವೈದ್ಯರ ತಂಡಕ್ಕೆ ಫೋನ್ ಮಾಡಿ ವಿಷಯ ತಿಳಿದುಕೊಂಡು ವಾಪಾಸು ಸುಂದರ್ ದಂಪತಿಗೆ ಫೋನ್ ಮಾಡುತ್ತಿದ್ದೆ. ಅಲ್ಲಿ ಡಾಕ್ಟರ್ ಮುರಳಿ, ನರ್ಸ್ ಸೂಪರಿಟೆಂಡೆಂಟ್ ಅಲ್ಫೀ ಮೊದಲಾದವರು ನನಗೆ ಪರಿಚಯವಿದ್ದರು. ಎರಡು ವರ್ಷಗಳ ಹಿಂದೆ ನನ್ನ ಪತ್ನಿಯನ್ನು ಅದೇ ಆಸ್ಪತ್ರೆಗೆ ದಾಖಲು ಮಾಡಿದ್ದೆ. ಸುಮಾರು ತಿಂಗಳು ಅಲ್ಲಿ ಚಿಕಿತ್ಸೆಯಲ್ಲಿದ್ದ ಕಾರಣ ನನಗೆ ಅಲ್ಲಿನ ಎಲ್ಲ ವೈದ್ಯರ ಪರಿಚಯವಿತ್ತು. ಅಲ್ಫೀ ಪಿಜಿಯಲ್ಲಿದ್ದರು. ಆದರೆ ಪಾಪ ನಾನು ಪೋನ್ ಮಾಡಿದ ತಕ್ಷಣ ಆಸ್ಪತ್ರೆಗೆ ಹೋಗಿ ಒಳಗಿನ ಮಾಹಿತಿ ನೀಡತೊಡಗಿದರು. ವೈದ್ಯರಾದ ಮುರಳಿಯವರ ಮೂಲಕ ಸುಂದರ್ ದಂಪತಿ ಆಸ್ಪತ್ರೆ ಒಳಗೆ ಹೋಗಲು ಸಾಧ್ಯವಾಯಿತು.
ಅಷ್ಟು ಹೊತ್ತಿಗೆ ಕಾರ್ಡಿಯಾಲಜಿ ಎಕ್ಸ್‌ಪರ್ಟ್ ಡಾಕ್ಟರ್ ವೆಂಕಟೇಶ್ ಅವರನ್ನು ಅಲ್ಲಿಗೆ ಕರೆಸಿಕೊಂಡಿದ್ದರು. ಹದಿನೈದೇ ನಿಮಿಷದಲ್ಲಿ ಪರಿಸ್ಥಿತಿ ತುಂಬ ಗಂಭೀರವಾಗಿದೆ ಎನ್ನುವುದನ್ನು ನನಗೆ ವೈದ್ಯರು ತಿಳಿಸಿದ್ದರು. ಅಂದರೆ ಇವರು ಆಸ್ಪತ್ರೆಗೆ ಬರುವಾಗಲೇ ಪಲ್ಸ್ ಪೂರಾ ನಿಂತೇ ಹೋದ ಹಾಗಿತ್ತು. ನನ್ನ ಶ್ರೀಮತಿಗೂ ಅದೇ ರೀತಿಯಾಗಿತ್ತು. ಆಸ್ಪತ್ರೆಯಲ್ಲಿದ್ದಾಗಲೇ ಕಾರ್ಡಿಯಾಕ್ ಅರೆಸ್ಟ್ ಆಗಿತ್ತು. ಸತತ 22 ನಿಮಿಷಗಳ ಪ್ರಯತ್ನದ ಬಳಿಕ ಆಕೆಯ ಹೃದಯ ಬಡಿತ ಮತ್ತೆ ಆರಂಭವಾಗಿತ್ತು. ಸಾಮಾನ್ಯವಾಗಿ ಒಂದು ಹತ್ತು ನಿಮಿಷಕ್ಕಿಂತ ಹೆಚ್ಚು ಹೊತ್ತು ಪ್ರಯತ್ನ ಮಾಡುವ ಅಗತ್ಯವಿಲ್ಲ ಎನ್ನುತ್ತಾರೆ. ಆದರೆ ವೈದ್ಯರು ನನಗೆ ಪತ್ನಿಯದೇ ಉದಾಹರಣೆ ಕೊಟ್ಟು ಅಂಥದೇ ಪ್ರಯತ್ನ ಮಾಡುತ್ತಿದ್ದೇವೆ, ಮತ್ತೆ ತಿಳಿಸುತ್ತೇವೆ ಎಂದರು. ಆಮೇಲೆ ಒಂದು ಹದಿನೈದು ನಿಮಿಷ ಬಿಟ್ಟು ಫೋನ್ ಮಾಡಿ “ಸರ್ ಕಷ್ಟವಾಗುತ್ತಿದೆ. ಇಲ್ಲಿಗೆ ತಲುಪುವಾಗಲೇ ತುಂಬ ತಡವಾಗಿಬಿಟ್ಟಿದೆ. ಜತೆಗೆ ಬ್ರೈನ್ ಗೂ ಏನೋ ತೊಂದರೆಯಾದ ಹಾಗಿದೆ. ಆದರೂ ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ” ಎಂದರು. ನಾನು ಇದನ್ನೆಲ್ಲ ಸುಂದರ್ ಪ್ರಮೀಳಾಗೆ ಹೇಳುತ್ತಿದ್ದೆ. ಆದರೆ ವೈದ್ಯರ ಕಡೆಯಿಂದ ಬರುತ್ತಿರುವ ಸುದ್ದಿ ನನ್ನನ್ನೇ ಕುಸಿದು ಹೋಗುವಂತೆ ಮಾಡುತ್ತಿತ್ತು. ಇನ್ನೇನು ಸಾವನ್ನು ಡಿಕ್ಲೇರ್ ಮಾಡಲಿದ್ದಾರೆ ಎನ್ನುವ ಹೊತ್ತಲ್ಲಿ, ಅವರ ಕುಟುಂಬಕ್ಕೆ ಒಂದು ಮಾತು ಹೇಳುತ್ತೀರ ಎಂದು ಡಾಕ್ಟರ್ ನನ್ನಲ್ಲೇ ಕೇಳಿದರು. ಆದರೆ ನಾನು ಹೇಳಿದೆ, “ನಾನು ಹೇಳುವ ಬದಲು ನೀವೇ ಹೇಳುವುದು ಉತ್ತಮ. ನಾನು ಪರೋಕ್ಷವಾಗಿ ಬೇಕಿದ್ದರೆ ಒಂದು ಸೂಚನೆ ನೀಡುತ್ತೇನೆ” ಎಂದೆ.
ಪ್ರಮೀಳಾ ಜೋಷಾಯ್ ನಿರಂತರವಾಗಿ ಅಳುತ್ತಿದ್ದರು!
ಪ್ರಮೀಳಾ ಮೊದಲೇ ಅಳುತ್ತಿದ್ದರು. ನಾನು ಸುಂದರ್ ಜತೆ ಮಾತನಾಡಿ ಹೇಳಿದೆ. “ಪರಿಸ್ಥಿತಿ ತುಂಬ ಕಷ್ಟವಿದೆಯಂತೆ. ಯಾವುದೇ ಸಂದರ್ಭಕ್ಕೂ ಸಿದ್ಧವಾಗಿರಿ” ಎಂದೆ. ಅದಕ್ಕೆ ಸುಂದರ್ ರಾಜ್,”ನಮ್ಮದೇನಿದೆ ಸರ್, ನೋಡೋಣ ಸರ್” ಎಂದರು. ಪ್ರಮೀಳಾ ಜೋಷಾಯ್ ಅವರ ಜೋರು ಅಳು ಕೇಳಿಸುತ್ತಿತ್ತು. ಬಹಳ ಕಷ್ಟವಾಯಿತು. ಡಾಕ್ಟರ್ ಅವರ ಬಳಿಗೆ ಹೋಗಿ ಮಾತನಾಡಿದ್ದಾರೆ. ಬದುಕಿಸುವುದು ಕಷ್ಟ ಇದೆ ಎಂದು ಕೂಡ ಹೇಳಿದ್ದಾರೆ. ಆಮೇಲೆ ನನ್ನಲ್ಲಿ ತಾವು ಆಸ್ಪತ್ರೆ ವತಿಯಿಂದ ಅಧಿಕೃತವಾಗಿ ಡಿಕ್ಲೇರ್ ಮಾಡುತ್ತಿರುವುದಾಗಿಯೂ ತಿಳಿಸಿದರು.
ನನ್ನಲ್ಲಿ ವೈದ್ಯರು ಹೇಳಿದ ಪ್ರಕಾರ, ಘಟನೆಯ ಹಿಂದಿನ ದಿನ ಅಂದರೆ ಶನಿವಾರವೇ ಚಿರಂಜೀವಿಗೆ ಫಿಟ್ಸ್ ಬಂದಿತ್ತು. ಆಗ ಬೇರೆ ಎಲ್ಲಿಗೋ ನ್ಯೂರಾಲಜಿಸ್ಟ್ ಬಳಿಗೆ ಕರೆದೊಯ್ದಿದ್ದಾರೆ. ಆದರೆ ಆಗಲೇ ನಮ್ಮಲ್ಲಿಗೆ ಬಂದಿದ್ದರೆ ಇಲ್ಲಿಯೂ ನ್ಯೂರಾಲಜಿಸ್ಟ್ ಇದ್ದರು. ಎಲ್ಲ ರೀತಿಯಲ್ಲಿ ಚೆಕ್ ಮಾಡಬಹುದಿತ್ತು. ಆಮೇಲೆ ಇವತ್ತು ಮಧ್ಯಾಹ್ನದ ಹೊತ್ತಿಗೆ ಅವರಿಗೆ ಬೆವರು ಬಂದು, ಎದೆ ನೋವು ಎಲ್ಲ ಶುರುವಾಗಿದೆ. ಇಲ್ಲಿಗೆ ಬರುವಾಗ ಕ್ರಿಟಿಕಲ್ ಆಗಿದೆ ಎಂದಿದ್ದರು. ಆದರೆ ನನ್ನ ಪ್ರಕಾರ ಸಾವು ಸರ್ವಾಧಿಕಾರಿ. ಜಗತ್ತಿನ ಯಾವ ಸರ್ವಾಧಿಕಾರಿಯನ್ನಾದರೂ ಮಣಿಸಬಹುದು. ಆದರೆ ಸಾವನ್ನು ಮಣಿಸುವುದು ಸಾಧ್ಯವೇ ಇಲ್ಲ. ನನಗೆ ಚಿರಂಜೀವಿಯ ತಾತ ಶಕ್ತಿ ಪ್ರಸಾದ್ ತುಂಬ ಚೆನ್ನಾಗಿ ಪರಿಚಯ. ಅವರು ನನ್ನ ತುಮಕೂರು ಜಿಲ್ಲೆಯವರು. ನನ್ನ ಪತ್ನಿಯ ಊರ ಪಕ್ಕದ ಜಕ್ಕೇನಹಳ್ಳಿಯವರು. ಮಾತ್ರವಲ್ಲ, ಸುಂದರ್ ರಾಜ್, ಪ್ರಮೀಳಾ ಜೋಷಾಯ್ ನನಗೆ ರಂಗಭೂಮಿ ದಿನಗಳಿಂದಲೇ ಆತ್ಮೀಯರು. ಮೇಘನಾ ಮೊದಲು ಬಾಲನಟಿಯಾಗಿ ಬಣ್ಣ ಹಚ್ಚಿದ್ದೇ ನನ್ನ’ಕರಡಿಪುರ’ ಸಿನಿಮಾದಲ್ಲಿ. ಹೀಗೆ ನಮ್ಮದು ತುಂಬ ಆತ್ಮೀಯವಾದ ಸಂಬಂಧವಾಗಿತ್ತು.
ಯಾರಿಗೇ ಆಗಲೀ 39ನೇ ವರ್ಷ ಸಾಯುವ ವಯಸ್ಸಲ್ಲ. ಅದರಲ್ಲಿಯೂ ಚಿರಂಜೀವಿ ಸರ್ಜ ಇತ್ತೀಚೆಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿದ್ದಂಥ ಕಲಾವಿದ. ಮದುವೆಯಾಗಿ ಎರಡು ವರ್ಷವಷ್ಟೇ ಪೂರ್ಣಗೊಂಡಿದೆ. ಪತ್ನಿ ಗರ್ಭಿಣಿ ಬೇರೆ. ಖಂಡಿತವಾಗಿ ಇದು ಅನ್ಯಾಯದ ಸಾವು.” ಎಂದು ನಿಟ್ಟುಸಿರು ಬಿಟ್ಟರು ಡಾ. ಬರಗೂರು ರಾಮಚಂದ್ರಪ್ಪ.