ಚಿರಂಜೀವಿ ಸರ್ಜಾ 39ನೇ ವರ್ಷದಲ್ಲಿ ನಮ್ಮನ್ನು ಅಗಲಿದ್ದಾರೆ. ಇದು ಸಾಯುವ ವಯಸ್ಸಲ್ಲ; ಎನ್ನುವುದು ಎಲ್ಲರ ಮಾತು. ಆದರೆ ನಿಜಕ್ಕೆ ಅವರಿಗೆ ವಯಸ್ಸು 39 ಕೂಡ ಆಗಿರಲಿಲ್ಲ 35 ಆಗಿತ್ತಷ್ಟೇ ಎನ್ನುವುದು ವಾಸ್ತವ. ಇದನ್ನು ಅವರ ಸರ್ಟಿಫಿಕೇಟ್ ಮೂಲಕ ಕಣ್ಣಾರೆ ಕಂಡಿರುವ ನಿರ್ದೇಶಕ ಪನ್ನಗಾಭರಣ ಸಿನಿಕನ್ನಡ.ಕಾಮ್ ಜತೆಗೆ ಹಂಚಿಕೊಂಡಿದ್ದಾರೆ.
“ನಾನು ಅವನು ಸುಮಾರು 21 ವರ್ಷಗಳಿಂದ ಫ್ರೆಂಡ್ಸ್. ಹಾಗಾಗಿ ನನಗೆ ಅವನ ಡೇಟ್ ಆಫ್ ಬರ್ತ್ ಚೆನ್ನಾಗಿ ಗೊತ್ತು. ಆದರೆ ‘ವಿಕಿಪೀಡಿಯ’ದಲ್ಲಿ 1980ಯಲ್ಲಿ ಹುಟ್ಟಿರುವುದು ಅಂತ ಹಾಕಿದ್ದಾರೆ. ಆದರೆ ಅದು ಸುಳ್ಳು. ನನಗೂ ಕೂಡ ಅಲ್ಲಿ ತಪ್ಪು ಮಾಹಿತಿ ಇದೆ ಅಂತ ತಿಳಿದಿದ್ದೇ ಈಗ. ಅವನಿಗಂತೂ ಅದರಲ್ಲೆಲ್ಲ ಮೊದಲಿಂದಲೂ ಆಸಕ್ತಿ ಇಲ್ಲ. ಹಾಗಾಗಿ ಒಂದು ವೇಳೆ ಗೊತ್ತಿದ್ದರೂ ಕೇರ್ ಮಾಡಲ್ಲ. “ವಿಕಿ ಪೀಡಿಯ ಎಲ್ಲ ಯಾರು ನೋಡುತ್ತಾರೆ ಮಚ್ಚ” ಎನ್ನುವಂಥ ಸ್ವಭಾವ ಅವನದು!
ನಾವು ಬಾಲ್ಯದಿಂದಲೇ ಸ್ನೇಹಿತರು
ನಾನು, ಅವನು ಮತ್ತು ಪ್ರಜ್ವಲ್ ಮೂರು ಜನಾನೂ ಬಾಲ್ಯದಿಂದಲೇ ಫ್ರೆಂಡ್ಸ್ ಆಗಿದ್ವಿ. ಚಿರು ನಮಗೆ ಡ್ಯಾನ್ಸ್ ಸ್ಕೂಲಲ್ಲಿ ಸಿಗ್ತಾ ಇದ್ದ. ನಾವು ಮೂರು ಜನ ಬನಶಂಕರಿಯಲ್ಲಿದ್ದಂಥ ಒಂದು ಡ್ಯಾನ್ಸ್ ಸ್ಕೂಲ್ ಗೆ ಹೋಗುತ್ತಿದ್ವಿ. ಅಲ್ಲಿ ನಮಗೆ ಇಮ್ರಾನ್ ಸರ್ದಾರಿಯ ಡ್ಯಾನ್ಸ್ ಟೀಚರ್. ಆಗ ಅವರು ಸಿನಿಮಾ ಕೊರಿಯೋಗ್ರಾಫರ್ ಕೂಡ ಆಗಿರಲಿಲ್ಲ. ಚಿರುದು ಬೇರೆ ಕಾಲೇಜ್ ಆಗಿದ್ದರೂ ಕಾಲೇಜ್ ನಿಂದ ಹೊರಗೆ ನಾವು ತುಂಬ ಕ್ಲೋಸ್ ಆಗಿದ್ದೆವು. ನಮಗೆ ಮೂರು ಜನಕ್ಕೆ ಒಂದೊಂದು ವರ್ಷದ ವ್ಯತ್ಯಾಸ. ಅವನು 84ರಲ್ಲಿ ಹುಟ್ಟಿದ್ದರೆ, ನಾನು 85 ಬಾರ್ನ್. ಪ್ರಜ್ಜುದು 86. ಹಾಗಾಗಿ ಸರಿಯಾಗಿಯೇ ನೆನಪಿರುತ್ತಿತ್ತು.
ಸಿನಿಮಾಗೇ ಬಂದ ಮೇಲೆಯೂ ಅಷ್ಟೇ. ನಾವು ಶೂಟಿಂಗ್ ಅಥವಾ ಇನ್ನಿತರ ವಿಚಾರಗಳಲ್ಲಿ ಜತೆಯಾಗಿಯೇ ಫ್ಲೈಟಲ್ಲಿ ಹೋಗಿದ್ದೀವಿ. ನಾನೇ ಎಲ್ಲರ ಟ್ರಾವೆಲ್ ಅರೇಂಜ್ ಮಾಡುತ್ತಿದ್ದುದು. ಹಾಗಾಗಿ ಎಲ್ಲರ ಪಾಸ್‌ಪೋರ್ಟ್ ಕೂಡ ನೋಡಿದ್ದೇನೆ. ಚಿರುದಂತೂ 17 ನೇ ಅಕ್ಟೋಬರ್ 1984 ಅಂತ ಇದ್ದಿದ್ದು ಈಗಲೂ ಕಣ್ಮುಂದೆ ಇದೆ. ಅದೇ ಕಾರಣಕ್ಕೆ ಆಗಲೇ ಹೇಳಿದಂತೆ ಒಂದೇ ವರ್ಷ ದೊಡ್ಡೋನಾದರೂ, “ನೀನೇ ಕಣೋ ನಮ್ಮಲ್ಲಿ ಎಲ್ರಿಗಿಂತ ದೊಡ್ಡೋನು ಅಂತ ರೇಗಿಸ್ತಾ ಇದ್ದೆ.”
ಚಿರುಗೆ ಫಿಟ್ಸ್ ಇರಲಿಲ್ಲ..!.
ಚಿರುಗೆ ಫಿಟ್ಸ್ ಅಂತ ಯಾರು ಹೇಳಿದ್ದಾರೋ ಗೊತ್ತಿಲ್ಲ. ಅವನಿಗೆ ಈ ಮುಂಚೆ ಹಾಗಾಗಿದ್ದು ನನಗಂತೂ ಗೊತ್ತಿಲ್ಲ. ಆದರೆ ಹಿಂದಿನ ದಿನ ತಲೆ ತಿರುಗಿ ಬಿದ್ದಿರುವುದಂತೂ ನಿಜ.ಅದಕ್ಕೆ ಫ್ಯಾಮಿಲಿ ಡಾಕ್ಟರ್ ಹತ್ತಿರ ಹೋಗಿ ಚೆಕ್ ಮಾಡಿಸಿದ್ದಾರೆ. ಇಸಿಜಿ ಎಲ್ಲ ಮಾಡಿಸಿದ್ದಾರೆ. ಏನೂ ಇಲ್ಲ ಅಂತ ಹೇಳಿದ್ದಾರೆ. ಎಲ್ಲಾ ಹೃದಯಾಘಾತಗಳು ಕೂಡ 24 ಗಂಟೆ ಮೊದಲು ಒಂದು ಸೂಚನೆ ನೀಡುವುದಾಗಿ ವೈದ್ಯರು ಹೇಳುತ್ತಾರೆ. ಇಲ್ಲಿಯೂ ಕೂಡ ಹಿಂದಿನ ದಿನವೇ ಆ ಸೂಚನೆ ಲಭಿಸಿದೆ. ಆದರೆ ನಮಗೆ ಅದು ಅರ್ಥವಾಗಿಲ್ಲ. ಅಷ್ಟೇ!
2020ಕ್ಕೆ ಕರುಣೆಯೇ ಇಲ್ಲ
ಆದರೂ ಧ್ರುವ ಆ ರಿಪೋರ್ಟನ್ನು ಅಪೊಲೊ ಹಾಸ್ಪಿಟಲ್ ಗೆ ಕಳುಹಿಸಿದ್ದಾರೆ. ಅಲ್ಲಿಂದ ಕೂಡ “ಏನೂ ಇಲ್ಲ; ಹುಷಾರಾಗಿರಿ ಎಲ್ಲರೂ ಅವರ ಜತೆಗೇನೇ ಇರಿ; ಇದು ವಾಪಾಸು ಬಂದರೂ ಬರಬಹುದು. ಆಗ ಹಾಸ್ಪಿಟಲ್ ಗೆ ಕರೆದುಕೊಂಡು ಬನ್ನಿ” ಅಂತ ಹೇಳಿದ್ದಾರೆ. ಅದಕ್ಕೆ ತಕ್ಕಂತೆ ಮರುದಿನ ಕುಟುಂಬದ ಜತೆಯಲ್ಲೇ ಇದ್ದರು. ಆರಾಮವಾಗಿ ಮೊಬೈಲಲ್ಲಿ ಲುಡೊ ಆಡುತ್ತಿರಬೇಕಾದರೆ ಈ ಘಟನೆ ಸಂಭವಿಸಿದೆ.
ಇತ್ತೀಚೆಗೆ ಆಕಸ್ಮಿಕ ಸಾವು ಹೆಚ್ಚಾಗ್ತಿದೆ.ಈ 2020 ಇದೆಯಲ್ಲ? “ಇಷ್ಟು ಜನಾನ ಕರೆದುಕೊಂಡು ಹೋಗೇ ಹೋಗ್ತೀನಿ” ಅಂತ ಲಿಸ್ಟ್ ಮಾಡ್ಕೊಂಡ ಹಾಗಿದೆ. ಕೋವಿಡ್ ಇರಲಿ, ಬರಲಿ, ಹಾರ್ಟ್ ಅಟ್ಯಾಕ್ ಆಗಿರಲಿ.. ತನ್ನದೊಂದು ಲಿಸ್ಟ್ ಇದೆ ಅನ್ನೋ ತರಹ ಸಾವು ಆಗ್ತಾನೆ ಇದೆ. ಆದಷ್ಟು ಬೇಗ ಈ ಸಾವಿನ ಪಯಣ ನಿಲ್ಲಲಿ ಅಂತ ಪ್ರಾರ್ಥಿಸ್ತೀನಿ.”